ಎತ್ತಿನಹೊಳೆ ಯೋಜನೆ: 272 ಎಕರೆ ಅರಣ್ಯ ಬಳಕೆಗೆ ತಾತ್ವಿಕ ಅನುಮೋದನೆ
x
ಎತ್ತಿನಹೊಳೆ ಯೋಜನೆ

ಎತ್ತಿನಹೊಳೆ ಯೋಜನೆ: 272 ಎಕರೆ ಅರಣ್ಯ ಬಳಕೆಗೆ ತಾತ್ವಿಕ ಅನುಮೋದನೆ

ಕಳೆದ ತಿಂಗಳು ನಡೆದ ಅರಣ್ಯ ಸಲಹಾ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಷರತ್ತುಬದ್ಧ ಒಪ್ಪಿಗೆ ನೀಡುವಂತೆ ಶಿಫಾರಸು ಮಾಡಲಾಗಿತ್ತು.ಅದರ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.


ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಎದುರಾಗಿದ್ದ ದೊಡ್ಡ ಆತಂಕ ದೂರವಾಗಿದೆ. ಹಾಸನ ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಗೆ ಬರುವ ಸುಮಾರು 272 ಎಕರೆ ಅರಣ್ಯ ಭೂಮಿಯನ್ನು ಯೋಜನೆಗೆ ಬಳಸಿಕೊಳ್ಳಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ತಾತ್ವಿಕ ಅನುಮೋದನೆ ನೀಡಿದೆ.

ಅರಣ್ಯ ಇಲಾಖೆಗೆ ಪತ್ರ ಬರೆದ ಸಚಿವಾಲಯ

ಕೇಂದ್ರ ಸಚಿವಾಲಯದ ಅರಣ್ಯ ಸಂರಕ್ಷಣಾ ವಿಭಾಗವು ಈ ಸಂಬಂಧ ರಾಜ್ಯ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬುಧವಾರ ಅಧಿಕೃತ ಪತ್ರ ರವಾನಿಸಿದೆ. ಕಳೆದ ತಿಂಗಳು ನಡೆದ ಅರಣ್ಯ ಸಲಹಾ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಷರತ್ತುಬದ್ಧ ಒಪ್ಪಿಗೆ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಅದರ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಯೋಜನೆಗೆ ಕಠಿಣ ಷರತ್ತು

ಯೋಜನೆಗೆ ಅನುಮೋದನೆ ನೀಡುವ ವೇಳೆ ಕೇಂದ್ರ ಸರ್ಕಾರವು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಒಟ್ಟು 28 ಸಾಮಾನ್ಯ ಹಾಗೂ 6 ವಿಶೇಷ ಷರತ್ತುಗಳನ್ನು ವಿಧಿಸಿದೆ. ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೆ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಮಾಡಲಾಗಿರುವ ಕಾಮಗಾರಿಗಳಿಗೆ ದಂಡ ವಿಧಿಸಲಾಗಿದೆ. ಅರಣ್ಯ ಭೂಮಿಯ ಪ್ರಸ್ತುತ ಮೌಲ್ಯದ ಐದು ಪಟ್ಟು ದಂಡದ ಮೊತ್ತವನ್ನು ಶೇ 12ರಷ್ಟು ಬಡ್ಡಿಯೊಂದಿಗೆ ಕಾಂಪಾ (CAMPA) ನಿಧಿಗೆ ಪಾವತಿಸಬೇಕು.

ಅರಣ್ಯ ನಾಶವಾಗುವ ಜಾಗಕ್ಕೆ ಪರ್ಯಾಯ ಭೂಮಿಯನ್ನು ಕಂದಾಯ ಇಲಾಖೆಯಿಂದ ಪಡೆದು ಅರಣ್ಯ ಬೆಳೆಸಲು ಕ್ರಮ ಕೈಗೊಳ್ಳಬೇಕು. ಯೋಜನಾ ಪ್ರದೇಶದಲ್ಲಿ ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಸಮಗ್ರ ವನ್ಯಜೀವಿ ನಿರ್ವಹಣಾ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು. ಅರಣ್ಯ ಇಲಾಖೆಯ ಅನುಮತಿ ಪಡೆಯುವ ಮುನ್ನವೇ ಕಾಮಗಾರಿ ನಡೆಸಲು ಬಿಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಸ್ಥಗಿತಗೊಂಡಿದ್ದ ಕಾಮಗಾರಿಗೆ ವೇಗ

ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ತುಮಕೂರಿನ ಕೆಲವು ಭಾಗಗಳಲ್ಲಿ ಅರಣ್ಯ ಭೂಮಿಯ ವಿವಾದದಿಂದ ಕಾಲುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಕೇಂದ್ರದಿಂದ ಹಸಿರು ನಿಶಾನೆಯಿಂದಾಗಿ ವಿಶ್ವೇಶ್ವರಯ್ಯ ಜಲ ನಿಗಮವು ಬಾಕಿ ಇರುವ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಲು ಸಿದ್ಧತೆ ಆರಂಭಿಸಿದೆ. ಆದರೆ, ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯವು ವಿಧಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿದರೆ ಮಾತ್ರ ಅಂತಿಮ ಅನುಮೋದನೆ ಸಿಗಲಿದೆ. ಆ ಬಳಿಕ ಪೂರ್ಣ ಪ್ರಮಾಣದ ಕೆಲಸಗಳನ್ನು ಆರಂಭಿಸಬಹುದಾಗಿದೆ.

ಬರಪೀಡಿತ ಜಿಲ್ಲೆಗಳಲ್ಲಿ ಮೂಡಿದ ಭರವಸೆ

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 6,657 ಹಳ್ಳಿಗಳು ಹಾಗೂ 38 ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಈ ಯೋಜನೆಗೆ ಸುಮಾರು 23,251 ಕೋಟಿ ರೂ. ವೆಚ್ಚವಾಗುತ್ತಿದೆ.

2027ರ ವೇಳೆಗೆ ಯೋಜನೆ ಪೂರ್ಣಗೊಳಿಸಿ ನೀರು ಪೂರೈಸುವ ಗುರಿಯನ್ನು ಸರ್ಕಾರ ಹೊಂದಿದೆ. ಸದ್ಯ ನೀಡಿರುವ ಅನುಮೋದನೆಯು ಕೇವಲ ತಾತ್ವಿಕವಾಗಿದ್ದು, ರಾಜ್ಯ ಸರ್ಕಾರವು ಕೇಂದ್ರವು ವಿಧಿಸಿರುವ ದಂಡ ಮತ್ತು ಪರಿಸರ ನಿಯಮಗಳನ್ನು ಪಾಲಿಸಿದ ವರದಿ ಸಲ್ಲಿಸಿದ ನಂತರವಷ್ಟೇ ಯೋಜನೆಗೆ ಅಂತಿಮ ಅನುಮೋದನೆ ದೊರೆತು, ಕಾಮಗಾರಿಗಳನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ.

Read More
Next Story