ಬರಪೀಡಿತ ಜಿಲ್ಲೆಗಳಿಗೆ ನೀರು: ಎತ್ತಿನಹೊಳೆ ಯೋಜನೆಗೆ ಜಲಜೀವನ ಮಿಷನ್ ನೆರವಿಗೆ ಮನವಿ
x

ಬರಪೀಡಿತ ಜಿಲ್ಲೆಗಳಿಗೆ ನೀರು: ಎತ್ತಿನಹೊಳೆ ಯೋಜನೆಗೆ ಜಲಜೀವನ ಮಿಷನ್ ನೆರವಿಗೆ ಮನವಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.


Click the Play button to hear this message in audio format

ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಜಲ ಜೀವನ ಮಿಷನ್ ಅಡಿಯಲ್ಲಿ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಕೋರಿದೆ. ದೆಹಲಿಯಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಮತ್ತು ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳನ್ನು ಒಳಗೊಂಡ ಈ ಪ್ರದೇಶವು ತೀವ್ರ ನೀರಿನ ಅಭಾವ ಎದುರಿಸುತ್ತಿದೆ. ಇಲ್ಲಿನ ಸುಮಾರು 6,657 ಹಳ್ಳಿಗಳು ಮತ್ತು 38 ಪಟ್ಟಣಗಳ ಸುಮಾರು 75.59 ಲಕ್ಷ ಜನರಿಗೆ ಸುಸ್ಥಿರ ಕುಡಿಯುವ ನೀರು ಪೂರೈಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಮೂಲಕ ರಾಜ್ಯ ಸರ್ಕಾರವು ಈಗಾಗಲೇ ಈ ಯೋಜನೆಗೆ ಹೆಚ್ಚಿನ ಶ್ರಮ ವಹಿಸಿದ್ದು, ಉಳಿಕೆ ಕಾಮಗಾರಿಗಳಿಗಾಗಿ ಕೇಂದ್ರದ ನೆರವನ್ನು ಅಪೇಕ್ಷಿಸಿದೆ. ಎತ್ತಿನಹೊಳೆ ಯೋಜನೆಯ ಒಟ್ಟು ವೆಚ್ಚದ ಪೈಕಿ 4,708.14 ಕೋಟಿ ರೂ.ಗಳನ್ನು ಜಲ ಜೀವನ ಮಿಷನ್ ಅಡಿಯಲ್ಲಿ ಭರಿಸಬೇಕು. ಇನ್ನು ಬಾಕಿ ಉಳಿದಿರುವ 9,416.28 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಶೇ. 50ರಷ್ಟು ಪಾಲು ನೀಡಬೇಕು ಎಂದು ವಿನಂತಿಸಿದ್ದಾರೆ.

ಯೋಜನೆಯ ನೀಲನಕ್ಷೆ

ಪಶ್ಚಿಮ ಘಟ್ಟಗಳ ಮೇಲ್ಭಾಗದಿಂದ 24.01 ಟಿಎಂಸಿ ನೀರನ್ನು ಎತ್ತುವಳಿ ಮಾಡುವ ಈ ಯೋಜನೆ, ಜಲ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಒಟ್ಟು 14.056 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಇದರಲ್ಲಿ 8.393 ಟಿಎಂಸಿ ಗ್ರಾಮೀಣ ಪ್ರದೇಶಕ್ಕೆ ಮತ್ತು 5.538 ಟಿಎಂಸಿ ನೀರು ನಗರ ಪ್ರದೇಶಗಳಿಗೆ ಹಂಚಿಕೆಯಾಗಿದೆ. ಇದರೊಂದಿಗೆ 9.953 ಟಿಎಂಸಿ ನೀರನ್ನು ಅಂತರ್ಜಲ ಮರುಪೂರಣಕ್ಕಾಗಿ 527 ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಬಳಸಲಾಗುತ್ತದೆ. ಜಲ ಜೀವನ ಮಿಷನ್ ಅಡಿಯಲ್ಲಿ ರಾಜ್ಯವು ಪ್ರತಿ ಗ್ರಾಮೀಣ ಮನೆಗಳಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ಹೊಸ ನೀರು ಸರಬರಾಜು ಯೋಜನೆ

ಎತ್ತಿನಹೊಳೆ ಯೋಜನೆಯಲ್ಲದೆ, ಕಲ್ಯಾಣ ಕರ್ನಾಟಕದ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕುರಿತಾಗಿಯೂ ಸಚಿವ ಈಶ್ವರ ಖಂಡ್ರೆ ಅವರು ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದಾರೆ. ಉತ್ತರ ಕರ್ನಾಟಕದ ಈ ಎರಡು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಮುಂದಿನ 30 ವರ್ಷಗಳವರೆಗೆ ಶಾಶ್ವತ ಪರಿಹಾರ ಒದಗಿಸಲು ಮೇಲ್ಮೈ ನೀರು ಆಧಾರಿತ ಯೋಜನೆಯನ್ನು ರೂಪಿಸಲಾಗಿದೆ. ನಾರಾಯಣಪುರ ಜಲಾಶಯದಿಂದ ನೀರನ್ನು ಎತ್ತುವಳಿ ಮಾಡುವ ಈ ಯೋಜನೆಗೆ ಸುಮಾರು 7,200 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಯೋಜನೆಯ ವ್ಯಾಪ್ತಿ ಮತ್ತು ಫಲಾನುಭವಿಗಳು

ಈ ಯೋಜನೆಯು 18 ತಾಲ್ಲೂಕುಗಳು ಮತ್ತು 943 ಗ್ರಾಮಗಳನ್ನು ಒಳಗೊಂಡಿದೆ. ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಸುಮಾರು 28.09 ಲಕ್ಷ ಜನರಿಗೆ ಇದು ನೆರವಾಗಲಿದೆ. ದಿನಕ್ಕೆ 200 ಎಂಎಲ್.ಡಿ ನೀರಿನ ಅಗತ್ಯವನ್ನು ಪೂರೈಸುವ ಗುರಿಯನ್ನು ಹೊಂದಲಾಗಿದೆ. ಈ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ 6.76 ಲಕ್ಷ ಪರಿಶಿಷ್ಟ ಜಾತಿಯವರು ಮತ್ತು 1.84 ಲಕ್ಷ ಪರಿಶಿಷ್ಟ ಪಂಗಡದ ಜನರು ಇದ್ದಾರೆ ಎಂಬುದು ವಿಶೇಷ. ನೀರು ಜೀವಜಲ, ಗ್ರಾಮೀಣ ಜನರ ಕುಡಿಯುವ ನೀರಿನ ಹಿತದೃಷ್ಟಿಯಿಂದ ಈ ಎರಡೂ ಯೋಜನೆಗಳಿಗೆ ಕೇಂದ್ರ ಸರ್ಕಾರವು ಆದ್ಯತೆಯ ಮೇರೆಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರು ಈ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತಾಂತ್ರಿಕ ವರದಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಯೋಜನೆಗಳು ಅನುಷ್ಠಾನಗೊಂಡರೆ, ರಾಜ್ಯದ ಬರಪೀಡಿತ ಜಿಲ್ಲೆಗಳಾದ ಕೋಲಾರದಿಂದ ಹಿಡಿದು ಕಲಬುರಗಿವರೆಗೆ ಕುಡಿಯುವ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ದೊರಕಲಿದೆ. ದೆಹಲಿ ಮಟ್ಟದಲ್ಲಿ ಸಚಿವರು ನಡೆಸಿರುವ ಈ ಸಮನ್ವಯ ಪ್ರಯತ್ನಗಳು ರಾಜ್ಯದ ಜಲಸಂಪನ್ಮೂಲ ವಲಯದಲ್ಲಿ ದೊಡ್ಡ ಬದಲಾವಣೆಗೆ ದಾರಿ ಮಾಡಿಕೊಡಲಿವೆ.

Read More
Next Story