Namma Metro| ಹೊಸೂರಿಗೆ ಹಳದಿ ಮಾರ್ಗ ವಿಸ್ತರಣೆ ಸಾಧ್ಯವೇ?ಗಡಿ ಭಾಗದ ಜನ ಏನಂತಾರೆ?
ಅತ್ತಿಬೆಲೆ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಕಡಿಮೆ ದೂರ ಕ್ರಮಿಸಲೂ ಹೆಚ್ಚಿನ ಸಮಯ ಬೇಕಾಗುತ್ತದೆ. ಮೆಟ್ರೋ ಸೇವೆ ಆರಂಭವಾದರೆ ಗ್ರಾಮೀಣ ಪ್ರದೇಶಗಳಿಂದ ಬೆಂಗಳೂರಿಗೆ ಬರುವವರಿಗೂ, ಈ ಭಾಗದ ವ್ಯಾಪಾರಿಗಳಿಗೂ ಪ್ರಯೋಜನವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಹಳದಿ ಮಾರ್ಗದ ಮೆಟ್ರೋ ರೈಲನ್ನು ತಮಿಳುನಾಡಿನ ಹೊಸೂರುವರೆಗೆ ವಿಸ್ತರಿಸುವ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಈ ಕುರಿತು ಪ್ರಸ್ತಾಪ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಈ ಯೋಜನೆ ಜಾರಿಯಾದರೆ ಬೆಂಗಳೂರು ಮತ್ತು ಹೊಸೂರು ನಡುವೆ ಸಂಚರಿಸುವ ಸಾವಿರಾರು ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.
ಆರ್ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಚರಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಹೊಸೂರುವರೆಗೆ ವಿಸ್ತರಿಸಬೇಕು ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ. ವಿಶೇಷವಾಗಿ ಬೊಮ್ಮಸಂದ್ರ, ಚಂದಾಪುರ ಮತ್ತು ಅತ್ತಿಬೆಲೆ ಸುತ್ತಮುತ್ತ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ. ಮೆಟ್ರೋ ವಿಸ್ತರಣೆಯಾದರೆ ಪ್ರಯಾಣದ ಸಮಯ ಉಳಿತಾಯವಾಗುವುದರ ಜೊತೆಗೆ ರಸ್ತೆ ಮೇಲಿನ ವಾಹನಗಳ ಒತ್ತಡವೂ ಕಡಿಮೆಯಾಗಬಹುದು ಎಂಬುದು ಜನರ ಅಭಿಪ್ರಾಯವಾಗಿದೆ.
ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಅನುಕೂಲ
ಹೊಸೂರಿನಿಂದ ಬೆಂಗಳೂರಿಗೆ ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರಕ್ಕಾಗಿ ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಇನ್ಫೋಸಿಸ್ ಉದ್ಯೋಗಿ ಮ್ಯಾಥ್ಯೂ ಅವರ ಪ್ರಕಾರ, ಮೆಟ್ರೋ ಮಾರ್ಗವನ್ನು ವಿಸ್ತರಿಸಿದರೆ ಚಂದಾಪುರದ ಆಚೆ ವಾಸಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರಸ್ತುತ ಸಂಚಾರ ದಟ್ಟಣೆಯಲ್ಲಿ ಸಿಲುಕಿ ತೊಂದರೆ ಅನುಭವಿಸುತ್ತಿರುವ ಜನರಿಗೆ ವೇಗವಾದ ಮತ್ತು ಅನುಕೂಲಕರ ಸಾರಿಗೆ ವ್ಯವಸ್ಥೆ ದೊರೆಯಲಿದೆ.
ವಿದ್ಯಾರ್ಥಿ ಚಿನ್ಮಯ ಅವರೂ ಮೆಟ್ರೋ ವಿಸ್ತರಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೊಸೂರಿನಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿದಿನ ಕೆಲಸಕ್ಕೆ ತೆರಳುವ ಉದ್ಯೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ. ಬಸ್ ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯೂ ಕಡಿಮೆಯಾಗಬಹುದು ಎಂಬುದು ಅವರ ಅಭಿಪ್ರಾಯ.
ಆಟೋ ಚಾಲಕರಿಂದಲೂ ಯೋಜನೆಗೆ ಬೆಂಬಲ
ಆಟೋ ಚಾಲಕ ಪ್ರಭು ಅವರು ಮೆಟ್ರೋ ವಿಸ್ತರಣೆಯಿಂದ ಸಾಮಾನ್ಯ ಜನರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಅತ್ತಿಬೆಲೆ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಕಡಿಮೆ ದೂರ ಕ್ರಮಿಸಲೂ ಹೆಚ್ಚಿನ ಸಮಯ ಬೇಕಾಗುತ್ತದೆ. ಮೆಟ್ರೋ ಸೇವೆ ಆರಂಭವಾದರೆ ಗ್ರಾಮೀಣ ಪ್ರದೇಶಗಳಿಂದ ಬೆಂಗಳೂರಿಗೆ ಬರುವವರಿಗೂ, ಈ ಭಾಗದ ವ್ಯಾಪಾರಿಗಳಿಗೂ ಪ್ರಯೋಜನವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯುತ್ ವ್ಯವಸ್ಥೆಯ ತಾಂತ್ರಿಕ ಸವಾಲು
ಆದರೆ, ಈ ಯೋಜನೆ ಕಾರ್ಯರೂಪಕ್ಕೆ ಬರಲು ತಾಂತ್ರಿಕ ಸವಾಲುಗಳನ್ನು ಪರಿಹರಿಸಬೇಕಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸುಮಾರು 750 ವೋಲ್ಟ್ ಡಿಸಿ ವಿದ್ಯುತ್ ವ್ಯವಸ್ಥೆ ಬಳಕೆಯಲ್ಲಿದ್ದರೆ, ತಮಿಳುನಾಡಿನ ಮೆಟ್ರೋ ವ್ಯವಸ್ಥೆಯಲ್ಲಿ 25 ಕೆವಿ ಎಸಿ ವಿದ್ಯುತ್ ವ್ಯವಸ್ಥೆ ಬಳಕೆಯಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಭಿನ್ನ ವಿದ್ಯುತ್ ವ್ಯವಸ್ಥೆಗಳನ್ನು ಹೊಂದಾಣಿಕೆ ಮಾಡುವುದು ಮತ್ತು ಎರಡೂ ಮಾರ್ಗಗಳನ್ನು ಸಂಪರ್ಕಿಸುವ ಸಾಧ್ಯತೆಯನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ಸರ್ಕಾರದ ನಿರ್ಧಾರದತ್ತ ಜನರ ಚಿತ್ತ
ಹೊಸೂರುವರೆಗೆ ಹಳದಿ ಮಾರ್ಗ ವಿಸ್ತರಣೆಯಾದರೆ ಬೆಂಗಳೂರು ಮತ್ತು ತಮಿಳುನಾಡಿನ ಗಡಿ ಭಾಗದ ನಡುವಿನ ಸಂಪರ್ಕ ಮತ್ತಷ್ಟು ಸುಧಾರಿಸಬಹುದು. ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಆದರೆ ತಾಂತ್ರಿಕ ಅಡೆತಡೆಗಳನ್ನು ಹೇಗೆ ನಿವಾರಿಸಲಾಗುತ್ತದೆ ಮತ್ತು ರಾಜ್ಯ ಸರ್ಕಾರ ಈ ಪ್ರಸ್ತಾಪವನ್ನು ಯಾವ ರೀತಿಯಲ್ಲಿ ಪರಿಗಣಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
