The countrys largest railway terminal will rise in Yelahanka; 16-platform project launched
x

ಯಲಹಂಕ ರೈಲ್ವೆ ನಿಲ್ದಾಣ

ಯಲಹಂಕದಲ್ಲಿ ತಲೆ ಎತ್ತಲಿದೆ ದೇಶದ ಅತಿದೊಡ್ಡ ರೈಲ್ವೆ ಟರ್ಮಿನಲ್; ಏನಿದರ ವಿಶೇಷ?

ನೈರುತ್ಯ ರೈಲ್ವೆ ವಲಯದ (SWR) ಈ ಮಹತ್ವಾಕಾಂಕ್ಷಿ ಯೋಜನೆಯು 16 ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿರಲಿದ್ದು, ಇದು ಹೌರಾ ಅಥವಾ ಚೆನ್ನೈ ಸೆಂಟ್ರಲ್ ಅನ್ನು ಮೀರಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.


Click the Play button to hear this message in audio format

ಸಿಲಿಕಾನ್ ಸಿಟಿಯ ರೈಲ್ವೆ ಸಂಪರ್ಕ ಜಾಲಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಯಲಹಂಕದಲ್ಲಿ ಭಾರತದ ಅತಿದೊಡ್ಡ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದ್ದು, 5,754 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆಗೆ ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ ದೊರೆತಿದೆ.

ನೈರುತ್ಯ ರೈಲ್ವೆ ವಲಯದ (SWR) ಈ ಮಹತ್ವಾಕಾಂಕ್ಷಿ ಯೋಜನೆಯು 16 ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿರಲಿದ್ದು, ಇದು ಹೌರಾ ಅಥವಾ ಚೆನ್ನೈ ಸೆಂಟ್ರಲ್ ಅನ್ನು ಮೀರಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಬೃಹತ್ ಪ್ರಮಾಣದ ಸ್ಟೇಬ್ಲಿಂಗ್ ಲೈನ್‌ಗಳು (ರೈಲು ನಿಲುಗಡೆ ವ್ಯವಸ್ಥೆ) ಇಲ್ಲಿರಲಿವೆ. ಸಮೀಕ್ಷೆಯ ನಂತರ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯ ಆರಂಭವಾಗಲಿದೆ.

ಮೆಜೆಸ್ಟಿಕ್ ನಿಲ್ದಾಣಕ್ಕೂ ಕಾಯಕಲ್ಪ

ಕೇವಲ ಯಲಹಂಕ ಮಾತ್ರವಲ್ಲದೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗೂ ನೀಲನಕ್ಷೆ ಸಿದ್ಧವಾಗಿದೆ. 1,370 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್‌ಪ್ಲಾನ್ ಅಡಿ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲು ಸಿದ್ಧತೆ ನಡೆಸಲಾಗಿದೆ.

ಇತರೆ ಪ್ರಮುಖ ಯೋಜನೆಗಳು

ಬೆಂಗಳೂರು-ತುಮಕೂರು ಚತುಷ್ಪಥ ಮಾರ್ಗ ನಿರ್ಮಾಣವಾಗಲಿದ್ದು, ಈ ಮಾರ್ಗದಲ್ಲಿ ರೈಲು ಸಂಚಾರ ದಟ್ಟಣೆ ಕಡಿಮೆ ಮಾಡಲು ನಾಲ್ಕು ಲೈನ್‌ಗಳ ನಿರ್ಮಾಣಕ್ಕೆ ಡಿಪಿಆರ್ (DPR) ಪೂರ್ಣಗೊಂಡಿದೆ. ವೈಟ್‌ಫೀಲ್ಡ್-ಕೋಲಾರ ನಡುವೆ ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ಕಾರ್ಯ ಆರಂಭವಾಗಿದೆ.

ಪ್ರಯಾಣಿಕರ ಅಸಮಾಧಾನವೇಕೆ?

ಯೋಜನೆಗಳು ಕಾಗದದ ಮೇಲೆ ಅದ್ಭುತವಾಗಿ ಕಂಡರೂ, ಅನುಷ್ಠಾನದ ವೇಗದ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಯಲಹಂಕದಂತಹ ಹೊರವಲಯದ ಟರ್ಮಿನಲ್‌ಗಳಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲ. ಮೆಟ್ರೋ ಅಥವಾ ಬಿಎಂಟಿಸಿ ಬಸ್ ಸೌಲಭ್ಯ ಸಮರ್ಪಕವಾಗಿಲ್ಲದಿದ್ದರೆ ಈ ಟರ್ಮಿನಲ್ ಪ್ರಯಾಣಿಕರಿಗೆ ಹೊರೆಯಾಗಲಿದೆ," ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಅನುಭವಗಳಂತೆ ಈ ಯೋಜನೆಗಳೂ ವಿಳಂಬವಾಗಬಾರದು ಎಂಬುದು ನಾಗರಿಕರ ಒತ್ತಾಯವಾಗಿದೆ.

Read More
Next Story