ನಿವೇಶನ ವಿವಾದ| ಜಿಪಿಎ ಹೋಲ್ಡರ್‌ ಜೊತೆ ನಟ ಯಶ್‌ ತಾಯಿ ಕಿರಿಕ್‌; ಪರಸ್ಪರ ಪ್ರಕರಣ ದಾಖಲು
x

ನಿವೇಶನ ವಿವಾದ| ಜಿಪಿಎ ಹೋಲ್ಡರ್‌ ಜೊತೆ ನಟ ಯಶ್‌ ತಾಯಿ ಕಿರಿಕ್‌; ಪರಸ್ಪರ ಪ್ರಕರಣ ದಾಖಲು

ನಟ ಯಶ್‌ ತಾಯಿ ಈ ಹಿಂದೆ ಕೂಡ ವಿವಾದಗಳಲ್ಲಿ ಸಿಲುಕಿದ್ದರು. ಬೆಂಗಳೂರಿನಲ್ಲಿ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಪುಷ್ಪಾ ಅವರ ಗಲಾಟೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.


ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಹಾಸನದ ವಿದ್ಯಾನಗರದಲ್ಲಿರುವ ತಮ್ಮ ಮನೆಯ ಪಕ್ಕದ ನಿವೇಶನಕ್ಕೆ ಸಂಬಂಧಿಸಿದಂತೆ ಶನಿವಾರ ಜಿಪಿಎ ಹೋಲ್ಡರ್ ದೇವರಾಜು ಜೊತೆ ಜಗಳ ಮಾಡಿಕೊಂಡಿದ್ದಾರೆ.

ನಿವೇಶನದಲ್ಲಿ ಈ ಹಿಂದೆ ನ್ಯಾಯಾಲಯದ ಆದೇಶದಂತೆ ತೆರವು ಮಾಡಿದ್ದ ಕಾಂಪೌಂಡ್ ಅನ್ನು ಪುಷ್ಪಾ ಅವರು ಮತ್ತೆ ನಿರ್ಮಿಸಲು ಮುಂದಾದಾಗ ಇಬ್ಬರ ಮಧ್ಯೆ ಜಗಳ ನಡೆದಿದೆ.

ದೇವರಾಜು ಹಾಕಿದ್ದ ತಂತಿಬೇಲಿ ಮತ್ತು ನ್ಯಾಯಾಲಯದ ಆದೇಶದ ಫಲಕವನ್ನು ಪುಷ್ಪಾ ಅವರು ಕಿತ್ತುಹಾಕಿದ್ದಾರೆ. ಇದನ್ನು ಪ್ರಶ್ನಿಸಿ ದೇವರಾಜು ವಿರುದ್ಧ ಪುಷ್ಪಾ ಆಕ್ರೋಶ ಹೊರಹಾಕಿದ್ದು, "ನಾನು ಕೂಡ ಈ ಊರ ಮಗಳು, ನನ್ನ ಮುಂದೆ ರೌಡಿಸಂ ತೋರಿಸಬೇಡ. ದಾಖಲೆ ಇದ್ದರೆ ತೆಗೆದುಕೊಂಡು ಬಂದು ಮಾತನಾಡುʼ ಎಂದು ಹವಾಜ್‌ ಹಾಕಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ದೇವರಾಜು ಮೊದಲು ಈ ಜಾಗ ನಿಮ್ಮದು ಎನ್ನಲು ಯಾವ ಸಾಕ್ಷಿ, ದಾಖಲೆಗಳಿವೆ ತೋರಿಸಿ ಎಂದು ಸವಾಲು ಹಾಕಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಇಡೀ ಬಡಾವಣೆಯ ಜನರು ನೋಡುವಂತೆ ಬೈದಾಡಿಕೊಂಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಇಬ್ಬರೂ ಕೂಡ ಪರಸ್ಪರ ದೂರು ದಾಖಲಿಸಿದ್ದಾರೆ.

ನಟ ಯಶ್‌ ತಾಯಿ ಈ ಹಿಂದೆ ಕೂಡ ವಿವಾದಗಳಲ್ಲಿ ಸಿಲುಕಿದ್ದರು. ಬೆಂಗಳೂರಿನಲ್ಲಿ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಪುಷ್ಪಾ ಅವರ ಗಲಾಟೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಬನಶಂಕರಿ ಮೂರನೇ ಹಂತದಲ್ಲಿರುವ ಡಾ. ಮುನಿಪ್ರಸಾದ್‌ ಎಂಬುವರ ಮನೆಯಲ್ಲಿ ಪುಷ್ಪಾ ಅವರು 2015 ರಿಂದ 2019 ರವರೆಗೆ ಬಾಡಿಗೆಗೆ ವಾಸವಿದ್ದರು. ಸುಮಾರು 23 ಲಕ್ಷ ರೂ. ಬಾಡಿಗೆ ಬಾಕಿ ಹಣ ಕೇಳಿದ್ದರಿಂದ ಮನೆ ಮಾಲೀಕರ ಮೇಲೆ ಜಗಳ ಮಾಡಿದ್ದರು. ಬಾಕಿ ಬಾಡಿಗೆ ಹಣ ಕೊಡಿಸಿಕೊಡುವಂತೆ ಕೋರಿ ಮನೆ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಹಲವು ವರ್ಷಗಳ ಕಾನೂನು ಹೋರಾಟದ ನಂತರ ಹೈಕೋರ್ಟ್ ಆದೇಶದಂತೆ ಮನೆ ಖಾಲಿ ಮಾಡುವಾಗ ಎಲೆಕ್ಟ್ರಿಕಲ್ ಸಾಮಗ್ರಿ, ಕಮೋಡ್ ಮತ್ತು ಸ್ವಿಚ್ ಬೋರ್ಡ್ಗಳನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಲಾಗಿದೆ ಎಂಬ ಗಂಭೀರ ಆರೋಪವೂ ಪುಷ್ಪಾ ಅವರ ಮೇಲೆ ಕೇಳಿಬಂದಿತ್ತು.ಗಿರಿನಗರ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು.

ಇನ್ನು ನಟ ಯಶ್ ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ಪುಷ್ಪಾ ಅವರು ಹಾಸನದಲ್ಲಿ ನಡೆಸುತ್ತಿದ್ದ ಚೀಟಿ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ಹಾಸನದಲ್ಲಿ ನಿವೇಶನಕ್ಕೆ ಸಂಬಂಧಿಸಿದ ಗಲಾಟೆಯು ನಟ ಯಶ್ಗೆ ಇರಿಸುಮುರಿದು ತಂದಿದ್ದು, ಅಭಿಮಾನಿಗಳಲ್ಲೂ ಬೇಸರ ಮೂಡಿಸಿದೆ.

Read More
Next Story