ಮುಂದಿನ ಸರದಿ ಕರ್ನಾಟಕದ್ದಾ? ವಯನಾಡ್ ದುರಂತದ ಬೆನ್ನಲ್ಲೇ ನಡುಗುತ್ತಿದೆ ಪಶ್ಚಿಮ ಘಟ್ಟ!
ಕೇರಳದ ವಯನಾಡ್ ಭೀಕರ ಭೂಕುಸಿತದ ಬೆನ್ನಲ್ಲೇ ಕರ್ನಾಟಕದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಆತಂಕ ಮೂಡಿದೆ. ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ಬೃಹತ್ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ.
ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಆ ಭೀಕರ ಭೂಕುಸಿತ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಇಡೀ ಹಳ್ಳಿಗಳೇ ನಕ್ಷೆಯಿಂದ ಅಳಿಸಿಹೋಗಿ, ನೂರಾರು ಜೀವಗಳು ಮಣ್ಣಿನ ಪಾಲಾದವು. ಮೇಲ್ನೋಟಕ್ಕೆ ಈ ಘಟನೆ ಕೇವಲ ಕೇರಳಕ್ಕೆ ಸೀಮಿತ ಅನಿಸಬಹುದು. ಆದರೆ, ಇದು ಪಶ್ಚಿಮ ಘಟ್ಟಕ್ಕೆ ಬೆಸೆದುಕೊಂಡಿರುವ ನಮ್ಮ ಕರ್ನಾಟಕದ ಪರಿಸರ ಸುರಕ್ಷತೆಗೆ ಪ್ರಕೃತಿ ಕೊಟ್ಟಿರುವ ಕೊನೆಯ ಎಚ್ಚರಿಕೆಯೇ? ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ವಯನಾಡ್ ನಮ್ಮ ಆಗುಂಬೆಯಾ? ಕೊಡಗಾ? ಚಿಕ್ಕಮಗಳೂರಾ? ಅಥವಾ ಉತ್ತರ ಕನ್ನಡವಾ?
ಆ ದುರಂತಕ್ಕೆ ಮಾನವನ ಅತಿಯಾದ ಹಸ್ತಕ್ಷೇಪವೇ ಕಾರಣ ಅಂತ ತನಿಖೆಗಳಿಂದಲೂ ಗೊತ್ತಾಗಿತ್ತು. ಆದರೂ ನಾವು ಪಾಠ ಕಲಿತಿದ್ದೇವಾ? ಖಂಡಿತ ಇಲ್ಲ! ಇತ್ತೀಚೆಗಷ್ಟೇ ಅದೇ ಮಾದರಿಯ ಮಾನವನಿರ್ಮಿತ ಲೋಪದಿಂದಾಗಿ ಮತ್ತೊಮ್ಮೆ ಭೂಮಿ ಕುಸಿದು ಐವರು ಕಣ್ಮರೆಯಾದರು. ಈ ಘಟನೆಗಳು ಇಡೀ ಘಟ್ಟ ಪ್ರದೇಶದ ಜನರಲ್ಲಿ ಆತಂಕದ ಛಾಯೆ ಮೂಡಿಸಿದೆ.
ಪರಿಸರ ಅಧ್ಯಯನಗಳು ಬಿಚ್ಚಿಟ್ಟ ಬೆಚ್ಚಿಬೀಳಿಸುವ ಸತ್ಯಗಳು!
ಕರ್ನಾಟಕದ ಪಶ್ಚಿಮ ಘಟ್ಟಗಳ ಇಂದಿನ ವಾಸ್ತವ ಪರಿಸ್ಥಿತಿ ಏನಿದೆ ಎಂಬುದನ್ನು ಇತ್ತೀಚಿನ ಪರಿಸರ ಅಧ್ಯಯನ ಮತ್ತು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ:
ಹೈ-ರಿಸ್ಕ್ ಜೋನ್: ನಮ್ಮ ರಾಜ್ಯದ 7 ಪ್ರಮುಖ ಜಿಲ್ಲೆಗಳ, ಬರೋಬ್ಬರಿ 43 ತಾಲೂಕುಗಳ ವ್ಯಾಪ್ತಿಯ 895 ಗ್ರಾಮ ಪಂಚಾಯಿತಿಗಳು ಇವತ್ತು ಮಣ್ಣು ಕುಸಿತದ ಭೀಕರ ಅಪಾಯವನ್ನು ಎದುರಿಸುತ್ತಿವೆ! ಈಗಾಗಲೇ ಘಟ್ಟ ಪ್ರದೇಶದ 1,351 ಹಳ್ಳಿಗಳು ಈ ಪ್ರಕೃತಿ ವಿಕೋಪದ ದವಡೆಗೆ ಸಿಲುಕಿವೆ. ಸುಮಾರು 31,261 ಚದರ ಕಿಲೋಮೀಟರ್‌ಗೂ ಹೆಚ್ಚು ಪ್ರದೇಶ ಇವತ್ತು ಹೈ-ರಿಸ್ಕ್ ಜೋನ್‌ನಲ್ಲಿದೆ.
ಅಪಾಯದ ಮುಂಚೂಣಿಯಲ್ಲಿ ಉತ್ತರ ಕನ್ನಡ!
ಈ ಇಡೀ ಪಟ್ಟಿಯಲ್ಲಿ ಅತಿ ಹೆಚ್ಚು ಹಾನಿ ಮತ್ತು ಸೂಕ್ಷ್ಮತೆ ಇರುವುದು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ! ಅಧ್ಯಯನ ವರದಿಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಶೇಕಡಾ 34 ರಷ್ಟು ಭೂಪ್ರದೇಶ ಅತ್ಯಂತ ಸಡಿಲಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಮಣ್ಣು ಕುಸಿಯುವ ಹಂತ ತಲುಪಿದೆ. ಇದರ ಜೊತೆಗೆ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಹಾಸನ ಜಿಲ್ಲೆಗಳು ಕೂಡ ಇವತ್ತು ತೀವ್ರ ಸೂಕ್ಷ್ಮ ಪ್ರದೇಶಗಳಾಗಿವೆ. ಪರಿಸ್ಥಿತಿ ಎಷ್ಟು ಭೀಕರವಾಗಿದೆ ಅಂದರೆ, ಈ ಜಿಲ್ಲೆಗಳ ಯಾವ ಸ್ಥಳದಲ್ಲಿ, ಯಾವ ಕ್ಷಣದಲ್ಲಿ ಮಣ್ಣು ಕುಸಿಯುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವೇ ಇಲ್ಲ.
ಪಶ್ಚಿಮ ಘಟ್ಟವನ್ನು ನಡುಗಿಸುತ್ತಿರುವ ಆ ಮೂರು ಬೃಹತ್ ಯೋಜನೆಗಳು!
ವಯನಾಡ್ ದುರಂತ ಕಣ್ಣೆದುರಿಗಿದ್ದರೂ ನಮ್ಮ ಆಡಳಿತಶಾಹಿಯ ಉದಾಸೀನತೆಯಿಂದಾಗಿ ಪರಿಸರ ಸೂಕ್ಷ್ಮ ವಲಯಗಳಲ್ಲಿ ಇಂದಿಗೂ ಬೃಹತ್ ಯೋಜನೆಗಳ ಸಿದ್ಧತೆಗಳು ನಡೆಯುತ್ತಲೇ ಇವೆ.
1. ಶೃಂಗೇರಿ-ಉಡುಪಿ ರೈಲು ಮಾರ್ಗ
ಅತ್ಯಂತ ಸೂಕ್ಷ್ಮ ಪರಿಸರವಿರುವ ಆಗುಂಬೆ ಮತ್ತು ಶೃಂಗೇರಿ ಅರಣ್ಯದ ಮಧ್ಯೆ ಈ ರೈಲು ಮಾರ್ಗದ ಪ್ರಸ್ತಾಪವಿದೆ. ಇದಕ್ಕಾಗಿ ಬರೋಬ್ಬರಿ 57 ಸುರಂಗಗಳನ್ನು ಕೊರೆಯುವ ಯೋಜನೆಯಿದೆ! ಘಟ್ಟದ ಒಳಭಾಗವನ್ನು ಹೀಗೆ ಜರಡಿಯಂತೆ ಕೊರೆಯುತ್ತಾ ಹೋದರೆ ಭೂಗರ್ಭದ ಸ್ಥಿರತೆ ಸಂಪೂರ್ಣ ನಾಶವಾಗಿ ಭೂಕುಸಿತ ಹೆಚ್ಚಾಗದೇ ಇನ್ನೇನಾಗುತ್ತೆ?
2. ಆಗುಂಬೆ ರಸ್ತೆ ಸುರಂಗ ಯೋಜನೆ
ರಾಷ್ಟ್ರೀಯ ಹೆದ್ದಾರಿ 169A ನಲ್ಲಿರುವ ಪ್ರಸಿದ್ಧ 14 ಹೇರ್ ಪಿನ್ ತಿರುವುಗಳ ಪ್ರಯಾಣ ಸಲೀಸು ಮಾಡುವುದಕ್ಕೆ ಕೇಂದ್ರ ಸರ್ಕಾರ ಸುರಂಗ ಮಾರ್ಗದ ಅಧ್ಯಯನ ಆರಂಭಿಸಿದೆ. ದಟ್ಟ ಕಾಡಿನ ನಡುವೆ ಸುರಂಗ ಕೊರೆದಾಗ ಹೊರಬರುವ ಕೋಟ್ಯಂತರ ಟನ್ ಮಣ್ಣು ಮತ್ತು ಕಲ್ಲುಗಳನ್ನು ಸ್ಥಳಾಂತರಿಸುವುದರಿಂದ ಇಡೀ ಬೆಟ್ಟದ ಶ್ರೇಣಿಯೇ ಅಸ್ಥಿರವಾಗಲಿದೆ.
3. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ
ಸುಮಾರು 8,500 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗಾಗಿ ಐದು ಬೃಹತ್ ಸುರಂಗಗಳು ಮತ್ತು ಎಂಟು ಪಂಪಿಂಗ್ ಸ್ಟೇಷನ್ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಇದಕ್ಕೆ ಬಲಿಯಾಗಬೇಕಾಗಿದ್ದು 133.81 ಎಕರೆ ಅರಣ್ಯ ಭೂಮಿ ಮತ್ತು 16 ಸಾವಿರಕ್ಕೂ ಹೆಚ್ಚು ಮರಗಳು! ಈಗಾಗಲೇ ಶರಾವತಿ ಕಣಿವೆಯಲ್ಲಿ 7ಕ್ಕೂ ಹೆಚ್ಚು ಅಣೆಕಟ್ಟುಗಳಿವೆ. ಮಲೆನಾಡಿಗರ ತೀವ್ರ ಹೋರಾಟ ಮತ್ತು ಕೇಂದ್ರ ಪರಿಸರ ಸಚಿವಾಲಯದ ತಜ್ಞರ ಸಮಿತಿ 'ರೆಡ್ ಸಿಗ್ನಲ್' ಕೊಟ್ಟಿದ್ದರಿಂದ ಈ ಯೋಜನೆ ಸದ್ಯಕ್ಕೆ ನಿಂತಿದೆ. ಆದರೆ ಈಗ ಬೇಸೂರಿನಲ್ಲಿ ಅಣುಸ್ಥಾವರ ನಿರ್ಮಿಸುವ ಚರ್ಚೆ ಜೋರಾಗಿದ್ದು, ಅದಕ್ಕೂ ವಿರೋಧ ವ್ಯಕ್ತವಾಗ್ತಿದೆ.

