
ಸಾಂದರ್ಭಿಕ ಚಿತ್ರ
ಶರಾವತಿ ಕಣಿವೆಯಲ್ಲಿ ಅಣುಸ್ಥಾವರ, ಪಶ್ಚಿಮ ಘಟ್ಟಕ್ಕೆ ಗಂಡಾಂತರ!
ಪರ್ಯಾಯ ಪರಿಸರಸ್ನೇಹಿ ಇಂಧನ ಮೂಲಗಳು ಹಾಗೂ ಬ್ಯಾಟರಿ ತಂತ್ರಜ್ಞಾನಗಳು ಲಭ್ಯವಿದ್ದರೂ, ಹೆಕ್ಟೇರ್ ಗಟ್ಟಲೆ ನಿಬಿಡ ಅರಣ್ಯವನ್ನು ನಾಶಮಾಡಿ ಈ ಯೋಜನೆ ಮಾಡುವುದು ಅವೈಜ್ಞಾನಿಕ ಎಂಬುದು ತಜ್ಞರ ವಾದವಾಗಿದೆ.
ಪಶ್ಚಿಮ ಘಟ್ಟಗಳ ಸೂಕ್ಷ್ಮ ವಲಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೆತ್ತಿಕೊಳ್ಳಲು ಮುಂದಾಗಿರುವ ಬೃಹತ್ ಅಭಿವೃದ್ಧಿ ಯೋಜನೆಗಳ ವಿರುದ್ಧ ಮಲೆನಾಡು ಭಾಗದ ಸ್ಥಳೀಯರು, ಪರಿಸರವಾದಿಗಳು ಹಾಗೂ ಧಾರ್ಮಿಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ವನ್ಯಜೀವಿ ತಜ್ಞ ಜೋಸೆಫ್ ಹೂವರ್ ʼದ ಫೆಡರಲ್ ಕರ್ನಾಟಕʼದೊಂದಿಗೆ ಆತಂಕ ಹಂಚಿಕೊಂಡಿದ್ದು, "ಪಶ್ಚಿಮ ಘಟ್ಟಗಳು ದಕ್ಷಿಣ ಭಾರತದ ವಾಟರ್ ಟವರ್ ಇದ್ದಂತೆ. ಇವುಗಳನ್ನು ನಾಶಮಾಡಿದರೆ ಇಡೀ ದಕ್ಷಿಣ ಭಾರತವೇ ತೀವ್ರ ಜಲಕ್ಷಾಮ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಒಡಲಿಗೆ ಕೊಡಲಿ ಏಟು ನೀಡುತ್ತಿರುವ ಪ್ರಮುಖ ಯೋಜನೆಗಳು ಮತ್ತು ಅವುಗಳಿಂದ ಉಂಟಾಗುತ್ತಿರುವ ಆತಂಕಗಳ ಸಂಪೂರ್ಣ ವಿವರ ಇಲ್ಲಿದೆ.
ವನ್ಯಜೀವಿ ಧಾಮಗಳಲ್ಲಿ ರಸ್ತೆ ಅಗಲೀಕರಣ
ಶೆಟ್ಟಿಹಳ್ಳಿ ವನ್ಯಜೀವಿ ಧಾಮದ ಸುಮಾರು 300 ಚದರ ಕಿಲೋಮೀಟರ್ ಪ್ರದೇಶವನ್ನು ಡಿನೋಟಿಫೈ ಮಾಡಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಶೇ.33 ರಷ್ಟು ಅರಣ್ಯ ಇರಬೇಕಾಗಿದ್ದರೂ, ರಾಜ್ಯದಲ್ಲಿ ಕೇವಲ ಶೇ. 20 ರಷ್ಟು ಮಾತ್ರ ಕಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಡಿನ ವಿಸ್ತೀರ್ಣವನ್ನು ಕಡಿಮೆ ಮಾಡುತ್ತಿರುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸೋಮೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಅಗತ್ಯವಿಲ್ಲದಿದ್ದರೂ ರಸ್ತೆಗಳನ್ನು ಚತುಷ್ಪಥ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಇದು ಕಾಡನ್ನು ಇಬ್ಬಾಗಿಸಿ ವನ್ಯಜೀವಿಗಳ ಮುಕ್ತ ಓಡಾಟಕ್ಕೆ ಅಡ್ಡಿಪಡಿಸಲಿದೆ.
ಕೊಡಚಾದ್ರಿ ರೋಪ್‌ವೇ ಮತ್ತು ಶರಾವತಿ ಪಂಪ್ ಸ್ಟೋರೇಜ್ ಯೋಜನೆ
ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಕೊಡಚಾದ್ರಿಯಲ್ಲಿ ಕೇವಲ ಮನರಂಜನೆಗಾಗಿ ರೋಪ್‌ವೇ ಮಾಡಲು ಹೊರಟಿರುವುದು ಪರಿಸರ ಸಮತೋಲನಕ್ಕೆ ಧಕ್ಕೆ ತರಲಿದೆ. ಶರಾವತಿ ಲಯನ್ ಟೇಲ್ಡ್ ಮಕಾಕ್ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರೋಬ್ಬರಿ 10,240 ಕೋಟಿ ರೂ. ವೆಚ್ಚದಲ್ಲಿ ಪಂಪ್ ಸ್ಟೋರೇಜ್ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಪರ್ಯಾಯ ಪರಿಸರಸ್ನೇಹಿ ಇಂಧನ ಮೂಲಗಳು ಹಾಗೂ ಬ್ಯಾಟರಿ ತಂತ್ರಜ್ಞಾನಗಳು ಲಭ್ಯವಿದ್ದರೂ, ಹೆಕ್ಟೇರ್ ಗಟ್ಟಲೆ ನಿಬಿಡ ಅರಣ್ಯವನ್ನು ನಾಶಮಾಡಿ ಈ ಯೋಜನೆ ಮಾಡುವುದು ಅವೈಜ್ಞಾನಿಕ ಎಂಬುದು ತಜ್ಞರ ವಾದವಾಗಿದೆ.
ಆಗುಂಬೆ ಘಾಟ್ ಸುರಂಗ ಮಾರ್ಗ ಮತ್ತು ಅಣುಸ್ಥಾವರದ ಭೀತಿ
ಆಗುಂಬೆ ಘಾಟ್ ವ್ಯಾಪ್ತಿಯಲ್ಲಿ 17 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಹಲವು ಬಾರಿ ಭೂಕುಸಿತ ಕಂಡಿರುವ ಈ ಭಾಗದಲ್ಲಿ ಭಾರಿ ಪ್ರಮಾಣದ ಬ್ಲಾಸ್ಟಿಂಗ್ (ಸ್ಫೋಟ) ಮಾಡುವುದರಿಂದ ಪಶ್ಚಿಮ ಘಟ್ಟದ ಹೈಡ್ರಾಲಜಿ (ಜಲವ್ಯವಸ್ಥೆ) ಸಂಪೂರ್ಣ ಏರುಪೇರಾಗಲಿದೆ ಮತ್ತು ಲಕ್ಷಾಂತರ ಟನ್ ಡೆಬ್ರಿಸ್ ವಿಲೇವಾರಿ ದೊಡ್ಡ ಸಮಸ್ಯೆಯಾಗಲಿದೆ. ಉತ್ತರ ಕನ್ನಡದ ಕೈಗಾ ಬೆನ್ನಲ್ಲೇ ಸಾಗರ ತಾಲೂಕಿನ ಬೇಸೂರು ಬಳಿ ಮತ್ತೊಂದು ನ್ಯೂಕ್ಲಿಯರ್ ಪವರ್ ಪ್ಲಾಂಟ್ ಸ್ಥಾಪಿಸಲು ಸರ್ವೆ ನಡೆಸಲಾಗುತ್ತಿದೆ. ಕೈಗಾ ಸುತ್ತಮುತ್ತ ಆವರಿಸಿರುವ ಕ್ಯಾನ್ಸರ್ ನಂತಹ ಕಾಯಿಲೆಗಳು ಹಾಗೂ ಕಾಳಿ ನದಿ ಕಲುಷಿತಗೊಂಡಿರುವುದನ್ನು ಉಲ್ಲೇಖಿಸಿರುವ ಸ್ಥಳೀಯರು, ಮತ್ತೊಂದು ಅಣುಸ್ಥಾವರ ನಮಗೆ ಬೇಡವೇ ಬೇಡ ಎಂದು ಹೋರಾಟಕ್ಕೆ ಧುಮುಕಿದ್ದಾರೆ.
ಸ್ಥಳೀಯರ ಪ್ರಮುಖ ಬೇಡಿಕೆಗಳು ಹಾಗೂ ಆತಂಕಗಳು
ಹಿಂದೆ ಲಿಂಗನಮಕ್ಕಿ ಜಲಾಶಯ ಸೇರಿದಂತೆ ಶರಾವತಿ ಹಿನ್ನೀರಿನ ಯೋಜನೆಗಳಿಂದಾಗಿ ತಲೆಮಾರುಗಳ ಹಿಂದೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಇಂದಿಗೂ ಸೂಕ್ತ ಹಕ್ಕುಪತ್ರ ಅಥವಾ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಅಘನಾಶಿನಿ, ಬೇಡ್ತಿ ನದಿ ತಿರುವು ಯೋಜನೆಗಳ ಮಾತು ಕೇಳಿಬರುತ್ತಿದ್ದು, ಸ್ಥಳೀಯ ಸಮುದಾಯಗಳು ಮತ್ತೊಮ್ಮೆ ನಿರಾಶ್ರಿತರಾಗುವ ಭೀತಿಯಲ್ಲಿವೆ. ಕಾಡಿನ ನಾಶ ಹಾಗೂ ಲೀನಿಯರ್ ಪ್ರಾಜೆಕ್ಟ್‌ಗಳಿಂದಾಗಿ ವನ್ಯಜೀವಿಗಳು ಆಹಾರ-ನೀರಿಲ್ಲದೆ ನಾಡಿಗೆ ಲಗ್ಗೆ ಇಡುತ್ತಿವೆ. ಮಲೆನಾಡಿನಲ್ಲಿ ಕೋತಿ, ಕಾಡೆಮ್ಮೆಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ನಾಶ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಆನೆಗಳು ಬೆಂಗಳೂರಿನಂತಹ ಮಹಾನಗರಗಳ ವಿಧಾನಸೌಧದವರೆಗೂ ಬಂದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಹೋರಾಟಗಾರರು.
ಮೂಲಸೌಕರ್ಯಕ್ಕೆ ಆದ್ಯತೆ ನೀಡಿ
ಸುರಂಗ ಮಾರ್ಗ ಹಾಗೂ ರೋಪ್‌ವೇಗಳಿಗಾಗಿ ಸಾವಿರಾರು ಕೋಟಿ ರೂ. ಖರ್ಚು ಮಾಡುವ ಬದಲು ತೀರ್ಥಹಳ್ಳಿ, ಕೊಪ್ಪ, ಸಾಗರ, ಹೊನ್ನಾವರ ಭಾಗದ ಜನರಿಗೆ ತುರ್ತು ಚಿಕಿತ್ಸೆ ಸಿಗುವಂತೆ ಸ್ಥಳೀಯವಾಗಿಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಉತ್ತಮ ಶಾಲೆ-ಕಾಲೇಜುಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಿ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪರಿಸರವಾದಿಗಳ ಅಂತಿಮ ಎಚ್ಚರಿಕೆ
"ನಮ್ಮ ರಾಜ್ಯದಲ್ಲಿರುವುದು ಕೇವಲ ಶೇ. 20 ರಷ್ಟು ಕಾಡು, ಅದರಲ್ಲಿ ವನ್ಯಜೀವಿಗಳಿರುವುದು ಬರೀ ಶೇ. 4 ರಷ್ಟು ಜಾಗದಲ್ಲಿ ಮಾತ್ರ. ಆರ್ಥಿಕ ಜಿಡಿಪಿ ಮತ್ತು ಪರಿಸರ ಜಿಡಿಪಿ ಒಂದೇ ನಾಣ್ಯದ ಎರಡು ಮುಖಗಳು. ಪ್ರಕೃತಿಯನ್ನು ಸಂಪೂರ್ಣ ನಾಶಮಾಡಿ ಕೇವಲ ಕಮಿಷನ್ ಹಾಗೂ ಕಿಕ್‌ಬ್ಯಾಕ್‌ಗಳಿಗಾಗಿ ಯೋಜನೆಗಳನ್ನು ಜಾರಿಗೊಳಿಸಿದರೆ, ಮುಂದಿನ ತಲೆಮಾರು ಕುಡಿಯುವ ನೀರಿಲ್ಲದೆ ಸಾಯಬೇಕಾಗುತ್ತದೆ. ಜನರ ತಾಳ್ಮೆ ಮೀರಿದ್ದು, ಜೆನ್-ಜಿ ಯುವ ಪೀಳಿಗೆ ಹಾಗೂ ಸ್ವಾಮೀಜಿಗಳು ರಸ್ತೆಗಿಳಿದು ಹೋರಾಡುತ್ತಿದ್ದಾರೆ. ಸರ್ಕಾರ ಇನ್ನಾದರೂ ಈ ಮಾರಕ ಯೋಜನೆಗಳನ್ನು ಕೈಬಿಡಬೇಕು."

