x

ವೃಷಭಾವತಿ ಕಲುಷಿತ ನೀರು ಸೇರ್ಪಡೆ ನೆಪ, ರಾಜ್ಯದ ವಿರುದ್ಧ NGT ಮೆಟ್ಟಿಲೇರಿದ ತಮಿಳುನಾಡು

ವೃಷಭಾವತಿ ನದಿಯ ಕಲುಷಿತ ನೀರನ್ನು ಮುಂದಿಟ್ಟುಕೊಂಡು ಹೊಸ ತಗಾದೆ ತೆಗೆದಿದೆ. ಕೈಗಾರಿಕೆಗಳಿಂದ ಹೊರಬರುವ ವಿಷಪೂರಿತ ನೀರು ಕಾವೇರಿ ಮೂಲಕ ತಮಿಳುನಾಡಿಗೆ ಹರಿದು ಬರುತ್ತಿದೆ ಎಂದು ಎನ್‌ಜಿಟಿ ಮೊರೆ ಹೋಗಿದೆ.


Click the Play button to hear this message in audio format

ಕಾವೇರಿ ನದಿ ಎಂದಾಕ್ಷಣ ನೆನಪಿಗೆ ಬರೋದು ನೀರು ಹಂಚಿಕೆಯ ವಿವಾದ. ದಶಕಗಳಿಂದ ಕರ್ನಾಟಕ-ತಮಿಳುನಾಡು ನಡುವೆ ನೀರಿಗಾಗಿ ಕಿತ್ತಾಟ ನಡೀತಾನೇ ಇದೆ. ಆದ್ರೆ ಈಗ ಕೇವಲ ನೀರಿಗಾಗಿ ಮಾತ್ರವಲ್ಲ, ನೀರಿನ ಮಾಲಿನ್ಯದ ವಿಚಾರವಾಗಿಯೂ ಸಮರವೇ ಶುರುವಾಗಿದೆ. ಒಂದು ಕಾಲದಲ್ಲಿ ಬೆಂಗಳೂರಿನ ಜೀವನಾಡಿ ಅಂತಾನೇ ಕರೆಸಿಕೊಳ್ತಿದ್ದ ವೃಷಭಾವತಿ ನದಿ, ಇವತ್ತು ಒಂದು ಕೊಳಚೆ ಕಾಲುವೆಯಾಗಿ ಬದಲಾಗಿಬಿಟ್ಟಿದೆ..! ಅದೆಷ್ಟು ಮಲಿನವಾಗಿದೆ ಅಂದ್ರೆ, ಅದ್ರಲ್ಲಿ ಹರಿಯೋ ನೀರು ನೇರವಾಗಿ ಕಾವೇರಿಯನ್ನ ಸೇರ್ತಿದೆ. ಇದರಿಂದ ಕಾವೇರಿ ನದಿ ಸಂಪೂರ್ಣ ವಿಷಪೂರಿತ ಆಗ್ತಿದೆ ಅಂತ ತಮಿಳುನಾಡು ಈಗ ಗಂಭೀರ ಆರೋಪ ಮಾಡಿದೆ. ಅಷ್ಟೇ ಅಲ್ಲ, ಸುಮ್ಮನೆ ಕೂರದೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೆಟ್ಟಿಲೇರಿದೆ. ಆದರೆ ಅಸಲಿಗೆ ಕಾವೇರಿಯ ಒಡಲಿಗೆ ಈ ಕಲುಷಿತ ನೀರು ಹೇಗೆ ಸೇರ್ತಿದೆ? ಇದರ ಹಿಂದಿರೋ ವಾಸ್ತವ ಏನು? ಇದನ್ನೇ ಹುಡುಕುತ್ತಾ ‘ದ ಫೆಡರಲ್ ಕರ್ನಾಟಕ’ ತಂಡ ಒಂದು ಗ್ರೌಂಡ್ ರಿಪೋರ್ಟ್ ಸಿದ್ಧಪಡಿಸಿದೆ.

ಒಂದಾನೊಂದು ಕಾಲದಲ್ಲಿ, ಈ ನದಿ ಬೆಂಗಳೂರಿನ ಕೃಷಿ ಚಟುವಟಿಕೆಗಳಿಗೆ, ಕುಡಿಯುವ ನೀರಿನ ದಾಹ ತೀರಿಸಲು ಆಧಾರವಾಗಿತ್ತು. ಇವತ್ತು ಅದೇ ನದಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು, ಕೇವಲ ಹೆಸರಿಗೆ ಮಾತ್ರ ನದಿಯಾಗಿ ಉಳಿದಿದೆ. ಇವತ್ತು ವೃಷಭಾವತಿ ಅಂದ್ರೆ ನದಿ ಅಲ್ಲ, ಅದೊಂದು ಹರಿಯುವ ವಿಷದ ತೊರೆ..! ಅದಕ್ಕೆ ಈಗ ಎಲ್ಲರೂ 'ವಿಷಭಾವತಿ' ಅಂತಾನೇ ಕರೆಯೋದು.

ನೋಡಿ, ಪ್ರತಿದಿನ ಸುಮಾರು 1200 ಎಂಎಲ್‌ಡಿಗೂ ಹೆಚ್ಚು ಸಂಸ್ಕರಿಸದ ಕೊಳಚೆ ನೀರು, ರಾಸಾಯನಿಕ ತ್ಯಾಜ್ಯಗಳು ನೇರವಾಗಿ ಈ ನದಿಗೆ ಸೇರ್ತಾ ಇವೆ. ಯೋಚನೆ ಮಾಡಿ, ಒಂದು ಎಂಎಲ್‌ಡಿ ಅಂದರೆ ಪ್ರತಿದಿನ 10 ಲಕ್ಷ ಲೀಟರ್‌. 1200 ಎಂಎಲ್‌ಡಿ ಅಂದ್ರೆ 120 ಕೋಟಿ ಲೀಟರ್‌ಆಗಲಿದೆ. ಇದೇ ಕೊಳಚೆ ನೀರು ಮುಂದೆ ಹೋಗಿ ಕಾವೇರಿ ನದಿಯನ್ನು ಸೇರುತ್ತಿದೆ ಎನ್ನುವುದು ತಮಿಳುನಾಡಿನ ಆರೋಪ.

ಈ ವೃಷಭಾವತಿ ನದಿ ಎಲ್ಲಿಂದ ಎಲ್ಲಿಗೆ ಹರಿಯುತ್ತೆ ಅಂದರೆ, ಇದು ಬಸವನಗುಡಿಯ ಪುಟ್ಟ ಜಾಗದಲ್ಲಿ ಹುಟ್ಟಿ, ಕೆಂಗೇರಿ, ರಾಜರಾಜೇಶ್ವರಿ ನಗರ, ಕುಂಬಳಗೋಡು, ಬಿಡದಿ ದಾಟಿ ರಾಮನಗರದ ಕಡೆಗೆ ಸಾಗುತ್ತೆ. ಅಲ್ಲಿಂದ ಅರ್ಕಾವತಿ ನದಿಯನ್ನು ಸೇರಿಕೊಂಡು, ಕೊನೆಗೆ ಕನಕಪುರದ ಬಳಿ ಕಾವೇರಿಯನ್ನೇ ಸಂಗಮಿಸುತ್ತೆ. ಅಂದ್ರೆ, ಬೆಂಗಳೂರಿನಲ್ಲಿ ಹುಟ್ಟಿದ ನದಿ ರಾಜ್ಯದ ಬಹುದೊಡ್ಡ ಜಲಮೂಲವಾದ ಕಾವೇರಿಯನ್ನೇ ತಲುಪುತ್ತೆ. ಈ ನಡುವೆ, ಐಐಎಸ್‌ಸಿಯ ಅಧ್ಯಯನದ ಮತ್ತೊಂದು ಮಜಲನ್ನು ಗಮನಿಸಿದರೆ, ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಹುಟ್ಟಿ ಹರಿಯುತ್ತದೆ. ಅಲ್ಲದೇ, ಸ್ಯಾಂಕಿ ಕೆರೆಯು ಸಹ ಮೂಲ ಎಂದು ಹೇಳಲಾಗುತ್ತದೆ. ಅದೇನೇ ಇರಲಿ ವೃಷಭಾವತಿ ಒಂದು ಕಾಲದಲ್ಲಿ ಬೆಂಗಳೂರಿಗರ ಜೀವನಾಡಿಯಾಗಿತ್ತು.

ಆದರೆ, ಇವತ್ತು ಈ ನದಿಯ ಪಯಣ ಸುಂದರ ನದಿಯ ಪಯಣ ಆಗಿ ಉಳಿದಿಲ್ಲ. ಇದೊಂದು ಬೃಹತ್ 'ಕೊಳಚೆ ನೀರು ಸಾಗಿಸುವ ಚಾನಲ್' ಅಷ್ಟೇ..! ಒಂದು ನದಿ ತನ್ನ ಮೂಲದಿಂದ ಕೊನೆಯವರೆಗೂ ಬರೋಬ್ಬರಿ 70 ರಿಂದ 80 ಕಿಲೋಮೀಟರ್ ದೂರದವರೆಗೆ, ತಾವು ಹಾಯುವ ಪ್ರತಿಯೊಂದು ಪ್ರದೇಶದ ಕೆರೆ-ಕಟ್ಟೆಗಳನ್ನು, ಭೂಮಿಯನ್ನು, ಅಲ್ಲಿನ ಜೀವಜಾಲವನ್ನು ವಿಷಗೊಳಿಸುತ್ತಲೇ ಸಾಗಿದೆ. ನಾವು ನದಿಯನ್ನು ಪೂಜಿಸುವ ನಾಡಿನವರು, ಆದ್ರೆ ಇವತ್ತು ನದಿಯನ್ನೇ ಚರಂಡಿ ಮಾಡಿದ್ದೇವೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಅಂದ್ರೆ, ಈಗ ಈ ವಿಚಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಅಂದರೆ ಎನ್‌ಜಿಟಿ ಅಂಗಳಕ್ಕೆ ಹೋಗಿ ನಿಂತಿದೆ.

ವೃಷಭಾವತಿ ಯಾಕೆ ಇಷ್ಟೊಂದು ಭಯಾನಕವಾಗಿ ಬದಲಾಗಿದೆ ಅನ್ನೋದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ, ನಮ್ಮ ವ್ಯವಸ್ಥೆಯ ಒಳಗಿರುವ ಕರಾಳ ಮುಖಗಳು ಒಂದೊಂದಾಗಿ ಹೊರಬೀಳುತ್ತವೆ. ಮೊದಲನೆಯದಾಗಿ, ಪೀಣ್ಯ, ಯಶವಂತಪುರ ಮತ್ತು ಕುಂಬಳಗೋಡಿನ ಕೈಗಾರಿಕಾ ಪ್ರದೇಶಗಳನ್ನೇ ನೋಡಿ. ಅಲ್ಲಿ ನೂರಾರು ಸಣ್ಣ-ಮಧ್ಯಮ ಕೈಗಾರಿಕೆಗಳಿವೆ. ಇವು ತಮ್ಮ ಉತ್ಪಾದನೆಯಲ್ಲಿ ಬಳಸುವ ಕ್ಯಾಡ್ಮಿಯಂ, ಸೀಸ, ಮರ್ಕ್ಯುರಿಯಂತಹ ಅತ್ಯಂತ ಅಪಾಯಕಾರಿ ರಾಸಾಯನಿಕಗಳನ್ನು ಯಾವ ಸಂಸ್ಕರಣೆಯೂ ಮಾಡದೆ ನೇರವಾಗಿ ರಾಜಕಾಲುವೆಗಳಿಗೆ ಬಿಡುತ್ತಿವೆ.

ಇನ್ನು ನಮ್ಮ ನಗರದ ಹಳೆ ಬಡಾವಣೆಗಳ ಕಥೆ ಕೇಳಿ. ಅಲ್ಲಿರೋ ಒಳಚರಂಡಿ ಪೈಪ್‌ಲೈನ್‌ಗಳು ಹಳೆಯದಾಗಿವೆ, ಸೋರುತ್ತಿವೆ. ಅದಕ್ಕೆ ಜೊತೆಯಾಗಿ ಮಳೆನೀರು ಹರಿಯಬೇಕಾದ ರಾಜಕಾಲುವೆಗಳಿಗೆ ಅಕ್ರಮವಾಗಿ ಒಳಚರಂಡಿ ಪೈಪ್‌ಗಳ ಸಂಪರ್ಕ ಕೊಡಲಾಗಿದೆ. ಪರಿಣಾಮ ಮಳೆಗಾಲದಲ್ಲಿ ಸುರಿಯೋ ನೀರು ಹೋಗಬೇಕಾದ ಜಾಗದಲ್ಲಿ ಕಲ್ಮಶ ಹರಿತಿದೆ. ಅಷ್ಟೇ ಅಲ್ಲ, ಹೊಸದಾಗಿ ನಿರ್ಮಾಣವಾಗಿರೋ ಸಾವಿರಾರು ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು ಮತ್ತು ಮನೆಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸುವ ಘಟಕಗಳೇ ಇಲ್ಲ, ಅಥವಾ ಇದ್ರೂ ಅವುಗಳು ಸರಿಯಾಗಿ ಕೆಲಸ ಮಾಡ್ತಿಲ್ಲ. ಇದೆಲ್ಲವನ್ನೂ ನೋಡಿಕೊಳ್ಳಬೇಕಾದ ಬಿಬಿಎಂಪಿ, ಜಲಮಂಡಳಿ ಒಳಚರಂಡಿ ಮಾರ್ಗಗಳನ್ನು ರಾಜಕಾಲುವೆಗಳ ಜೊತೆ ಬೆರೆಸುವಲ್ಲಿ ಕಳಪೆ ನಿರ್ವಹಣೆ ತೋರಿದೆ.

Read More
Next Story