
SIR-Digital Mapping| ಡಿಜಿಟಲ್ ಮ್ಯಾಪಿಂಗ್: ಮತದಾರರನ್ನು ಹೊರಗಿಡುವ ಯತ್ನ ಆರೋಪ
ರಾಜ್ಯ ಸರ್ಕಾರವು ಬಜೆಟ್ ಅಧಿವೇಶನದಲ್ಲಿ ಮತದಾನದ ಹಕ್ಕು ಹಾಗೂ ಪೌರತ್ವದ ಹಕ್ಕುಗಳನ್ನು ರಕ್ಷಿಸಲು ನಿರ್ಣಯ ಅಂಗೀಕರಿಸಬೇಕಾಗಿದೆ ಎಂಬ ಒತ್ತಾಯಗಳು ಕೇಳಿಬಂದಿವೆ.
ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಬಳಸಲಾಗುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ಮತ್ತು ಡಿಜಿಟಲ್ ಮ್ಯಾಪಿಂಗ್ ಪ್ರಕ್ರಿಯೆಗಳು ತಾಂತ್ರಿಕ ಸಬಲೀಕರಣಕ್ಕಿಂತ ಹೆಚ್ಚಾಗಿ ಮತದಾರರ ಹೊರಗಿಡುವಿಕೆಯ ಸಾಧನಗಳಾಗುತ್ತಿವೆಯೇ ಎಂಬ ಸಂಶಯ ಮೂಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬಜೆಟ್ ಅಧಿವೇಶನದಲ್ಲಿ ಮತದಾನದ ಹಕ್ಕು ಹಾಗೂ ಪೌರತ್ವದ ಹಕ್ಕುಗಳನ್ನು ರಕ್ಷಿಸಲು ನಿರ್ಣಯ ಅಂಗೀಕರಿಸಬೇಕಾಗಿದೆ ಎಂಬ ಒತ್ತಾಯಗಳು ಕೇಳಿಬಂದಿವೆ.
ಮತದಾರರ ಹೆಸರು ಅನಗತ್ಯವಾಗಿ ಮತದಾರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಕ್ರಮ ಕೈಗೊಳ್ಳುವುದು, ಸಂಘಟನೆಗಳಿಗೆ, ರಾಜಕೀಯ ಪಕ್ಷಗಳ ಏಜೆಂಟ್‌ಗಳಿಗೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ನನ್ನ ಮತ, ನನ್ನ ಹಕ್ಕು ಸಂಘಟನೆ ಆಗ್ರಹಿಸಿದೆ. ಐಸಿಸಿಟಿಯು ಮುಖಂಡ ಕ್ಲಿಫ್ಟನ್ ರೊಝಾರಿಯೋ, ಶಿಕ್ಷಣ ತಜ್ಞ ಶ್ರೀಪಾದ್ ಭಟ್, ದಲಿತ ಮುಖಂಡ ಮಾವಳ್ಳಿ ಶಂಕರ್, ಪಿಯುಸಿಎಲ್‌ನ ಐಶ್ವರ್ಯ ಸೇರಿದಂತೆ ಇತರರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಒತ್ತಾಯ ಮಾಡಲಾಯಿತು.
ರಾಜ್ಯದಲ್ಲಿ ಈಗಾಗಲೇ ಶೇ. 67.2 ರಷ್ಟು ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯ ಮುಗಿದಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಹೇಳುತ್ತಿದೆ. ಆದರೆ, ಇಷ್ಟು ದೊಡ್ಡ ಮಟ್ಟದ ಪ್ರಕ್ರಿಯೆ ನಡೆಯುತ್ತಿದ್ದರೂ ಸಾಮಾನ್ಯ ಮತದಾರನಿಗೆ ಇದರ ಅರಿವಿಲ್ಲದಿರುವುದು ಆಡಳಿತಾತ್ಮಕ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಚುನಾವಣಾ ಆಯೋಗವು ತಾಂತ್ರಿಕ ಪ್ರಕ್ರಿಯೆಗಳನ್ನು ನಡೆಸುವಾಗ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸಂಶಯಾಸ್ಪದವಾಗಿದೆ. ಬಿಎಲ್‌ಒ ಮತ್ತು ಇಆರ್‌ಒಗಳಿಗೆ ನೀಡಲಾದ ತರಬೇತಿಯ ಸ್ವರೂಪವೇನು? ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಅನುಸರಿಸಲಾದ ಮಾನದಂಡಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲದಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಿತವಲ್ಲ ಎಂದು ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆಯು ಸಮಾಜದ ಕೆಳಸ್ತರದ ಜನರನ್ನು ಅತಿ ಹೆಚ್ಚಾಗಿ ಸಮಸ್ಯೆಗೀಡು ಮಾಡುತ್ತದೆ. ದಲಿತರು, ಆದಿವಾಸಿಗಳು, ಅಲೆಮಾರಿ ಕಾರ್ಮಿಕರು ಮತ್ತು ಅಲ್ಪಸಂಖ್ಯಾತರು ಅಲೆಮಾರಿ ಜೀವನ ಮತ್ತು ದಾಖಲೆಗಳ ಕೊರತೆಯಿಂದಾಗಿ ಆಗಾಗ ವಾಸಸ್ಥಳ ಬದಲಾಯಿಸುತ್ತಾರೆ. ಡಿಜಿಟಲ್ ಮ್ಯಾಪಿಂಗ್ ಸಂದರ್ಭದಲ್ಲಿ ಇವರ ಹೆಸರುಗಳು ತಾಂತ್ರಿಕ ಕಾರಣಗಳಿಂದ ಕೈಬಿಟ್ಟು ಹೋಗುವ ಸಾಧ್ಯತೆ ಹೆಚ್ಚು ಎಂದು ಆರೋಪಿಸಲಾಗಿದೆ.
ಮತದಾನದ ಹಕ್ಕನ್ನು ಕಳೆದುಕೊಳ್ಳುವುದು ಎಂದರೆ ಆ ವ್ಯಕ್ತಿ ಈ ದೇಶದ ನಾಗರಿಕನಾಗಿ ಪಡೆಯುವ ಸಾಂವಿಧಾನಿಕ ಮಾನ್ಯತೆಯನ್ನೇ ಕಳೆದುಕೊಂಡಂತೆ. ಇದು ಪೌರತ್ವದ ಹಕ್ಕಿನ ಮೇಲಿನ ಪರೋಕ್ಷ ದಾಳಿಯಾಗಿದೆ. ಇತರ ಕೆಲವು ರಾಜ್ಯಗಳು ತಮ್ಮ ಮತದಾರರ ಹಿತರಕ್ಷಣೆಗಾಗಿ ಕೇಂದ್ರದ ಇಂತಹ ಕಠಿಣ ಪ್ರಕ್ರಿಯೆಗಳ ವಿರುದ್ಧ ನಿಂತಿವೆ. ರಾಜ್ಯ ಸರ್ಕಾರವೂ ಸಹ ಮುಂಬರುವ ಬಜೆಟ್ ಅಧಿವೇಶನದಲ್ಲಿ ಒಂದು ವಿಶೇಷ ನಿರ್ಣಯವನ್ನು ಅಂಗೀಕರಿಸುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇವಲ ತಾಂತ್ರಿಕ ಅಪ್‌ಡೇಟ್ ಎಂದು ಇದನ್ನು ನಿರ್ಲಕ್ಷಿಸದೆ, ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರಕ್ಕೆ 'ವಿಶೇಷ ತೀವ್ರ ಪರಿಷ್ಕರಣೆ'ಯನ್ನು ಮರುಪರಿಶೀಲಿಸುವ ಅಧಿಕಾರವಿದೆ ಎಂದು ಹೇಳಿದರು.
ತಂತ್ರಜ್ಞಾನವು ಆಡಳಿತವನ್ನು ಸುಲಭಗೊಳಿಸಬೇಕೇ ಹೊರತು ಹಕ್ಕುಗಳನ್ನು ಕಸಿಯಬಾರದು. ಮತದಾರರ ಪಟ್ಟಿ ಮ್ಯಾಪಿಂಗ್ ಹೆಸರಿನಲ್ಲಿ ನಡೆಯುವ ಯಾವುದೇ ಪ್ರಕ್ರಿಯೆಯು ಪಾರದರ್ಶಕವಾಗಿರದಿದ್ದರೆ, ಅದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಆಶಯಕ್ಕೆ ಧಕ್ಕೆ ತರುತ್ತದೆ. ರಾಜ್ಯ ಸರ್ಕಾರವು ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಪ್ರತಿ ಮತದಾರನಿಗೂ ತನ್ನ ಹಕ್ಕಿನ ರಕ್ಷಣೆಯ ಭರವಸೆ ನೀಡಬೇಕಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರು ತಮ್ಮ ಅಸ್ತಿತ್ವದ ಗುರುತಾದ ಮತದಾನದ ಚೀಟಿಯನ್ನು ಕಳೆದುಕೊಂಡು ಪ್ರಜಾಪ್ರಭುತ್ವದ ಹೊರಗಿನವರಾಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದರು.

