
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
SIR ಅಕ್ರಮದ ವಿರುದ್ಧ ವಿಪಕ್ಷಗಳ ಹೋರಾಟ, ಫುಟ್‌ಪಾತ್ ನೀತಿಗೆ ಚಿಂತನೆ, BJP ತೆಕ್ಕೆಗೆ ಹು-ಧಾ ಪಾಲಿಕೆ
ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪ, ಬೆಂಗಳೂರಿನಲ್ಲಿ ಮುಂದುವರಿದ ಬೃಹತ್ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ.
ಕಳೆದ ಮೂರು-ನಾಲ್ಕು ದಿನಗಳಿಂದ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ತೀವ್ರ ರಾಜಕೀಯ ಸಂಚಲನ ಮತ್ತು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಬದಲಾಗಿ, ಕಲ್ಯಾಣ ಮಂಟಪಗಳು, ಮಸೀದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗುಂಪಾಗಿ ಕುಳಿತು ಅರ್ಜಿಗಳನ್ನು ಭರ್ತಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿಡಿಯೋ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಗಂಭೀರ ಅಕ್ರಮದ ಆರೋಪ ಹೊರಿಸಿದ್ದಾರೆ.
ಇದರ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಅವರು ಕೂಡ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ಲೋಪಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗವು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಅಷ್ಟೇ ಅಲ್ಲದೆ, ಸೋಮವಾರ ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗವನ್ನು ಜಂಟಿಯಾಗಿ ಭೇಟಿ ಮಾಡಿ ದೂರು ನೀಡಲು ಬಿಜೆಪಿ-ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ.
"ಈಗ ನಡೆದಿರತಕ್ಕಂತ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಅಂತಕಂತದ್ದು ನಮ್ಮ ದೊಡ್ಡ ಆಗ್ರಹ ಇದೆ. ನಾನು ಸಾಧ್ಯವಾದರೆ ನಾಡಿದ್ದು ಡೆಲ್ಲಿಗೆ ಹೋಗ್ತೀನಿ. ಹೋದಾಗ ನಮ್ಮ ಕೇಂದ್ರ ಚುನಾವಣೆ ಆಯುಕ್ತರನ್ನು ಭೇಟಿ ಮಾಡಿ ಇಲ್ಲಿ ನಡೆದಿರತಕ್ಕಂತ ಎಲ್ಲಾ ಘಟನೆಗಳನ್ನು ಅವರ ಮುಂದೆ ಇಟ್ಟು, ಈ ಅಕ್ರಮ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ, ಒಂದು ಪಾರದರ್ಶಕತೆಯಿಂದ ಹೊಸದಾಗಿ ಮತದಾರರ ಪರಿಷ್ಕರಣೆ ಆಗತಕ್ಕಂತದ್ದಕ್ಕೆ ನಾನು ಅವರಿಗೆ ಮನವಿ ಮಾಡುತ್ತೇನೆ, " ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.
"ಬಿಎಲ್‌ಒಗಳು ಅಂದರೆ ಸರ್ಕಾರಿ ಅಧಿಕಾರಿಗಳನ್ನು ಬಿಟ್ಟು ಬೇರೆ ಯಾರೂ ಎನರ್ಮೇಷನ್ ಫಾರಂ ವಿತರಿಸುವಂತಿಲ್ಲ, ಅದು ಕಾನೂನು ಬಾಹಿರ. ಆದರೆ ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಸಾಮೂಹಿಕವಾಗಿ ಫಾರಂಗಳನ್ನು ಹಂಚುತ್ತಿದ್ದಾರೆ. ಇದು ಸಾಮೂಹಿಕ ನಕಲು ಮಾಡಿದಂತೆ. ನಾವು ಕರ್ನಾಟಕದ ಸಿಇಒ ಅವರನ್ನು ಭೇಟಿಯಾಗಿ ಈ ಬಗ್ಗೆ ಸ್ಪಷ್ಟನೆ ಕೇಳಲಿದ್ದೇವೆ. ನೀವು ನಿಯಮಾನುಸಾರ ಸರಿಯಾಗಿ ಕೆಲಸ ಮಾಡುವುದು ನಿಮ್ಮ ಕರ್ತವ್ಯ, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ," ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ.
"ಈ ಚುನಾವಣಾ ಪ್ರಕ್ರಿಯೆಗಳಿಗೂ ಮತ್ತು ಕಾಂಗ್ರೆಸ್ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಅಧಿಕಾರಿಗಳು ನೇರವಾಗಿ ಭಾರತೀಯ ಚುನಾವಣಾ ಆಯೋಗದ (ECI) ನಿರ್ದೇಶನದಂತೆ ಮತ್ತು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಕೆಲಸ ಮಾಡುತ್ತಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ರಾಜಕೀಯ ಪ್ರೇರಿತವಾಗಿ ಸುಮ್ಮನೆ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ," ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಾದಚಾರಿಗಳ ಮುಕ್ತ ಸಂಚಾರಕ್ಕಾಗಿ ಬೃಹತ್ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಒಟ್ಟು 202 ಕಿಲೋಮೀಟರ್ ಉದ್ದದ ಫುಟ್‌ಪಾತ್ ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಒತ್ತುವರಿ ಕಾರ್ಯಾಚರಣೆ ಹಾಗೂ ನಗರದಲ್ಲಿನ ಫ್ಲೆಕ್ಸ್ ಹಾವಳಿಯ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ಒತ್ತುವರಿ ತೆರವುಗೊಳಿಸಿದ ಜಾಗವನ್ನು ಮತ್ತೆ ಅತಿಕ್ರಮಣ ಮಾಡಿದರೆ ಭಾರಿ ದಂಡ ವಿಧಿಸಲು ಕಠಿಣ ಎಚ್ಚರಿಕೆ ನೀಡಲಾಗಿದ್ದು, ಪಾದಚಾರಿ ಮಾರ್ಗಗಳ ಶಾಶ್ವತ ನಿರ್ವಹಣೆಗಾಗಿ ಪ್ರತ್ಯೇಕ ನೀತಿಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
"ಬೆಂಗಳೂರು ಸುಧಾರಣೆ ಆಗಬೇಕಾದರೆ ನೀವೇ ಮಾತನಾಡುತ್ತೀರಿ, ಪಾದಚಾರಿ ಮಾರ್ಗಗಳು ಹಂಗೆ ಆಗಿಬಿಟ್ಟಿದೆ ಹಿಂಗೆ ಆಗಿಬಿಟ್ಟಿದೆ ಎಂದು. ಆದರೆ ವಯಸ್ಸಾದವರ ಪರಿಸ್ಥಿತಿಯನ್ನು ಎಂದಾದರೂ ಯೋಚನೆ ಮಾಡಿದ್ದೀರಾ? ಅವರು ರೋಡಿಗೆ ಬಂದು ಯಾವುದಾದರೂ ಗಾಡಿ ತಗುಲಿದರೆ ಅವರ ಕಥೆ ಏನು? ಬೆಂಗಳೂರನ್ನು ಬೈಯಲಿಕ್ಕೆ ಎಲ್ಲರೂ ತಯಾರ ಇರುತ್ತಾರೆ, ಆದರೆ ಏನಾದರೂ ಸುಧಾರಣೆ ಮಾಡೋಣ ಎಂದರೆ ಅದಕ್ಕೂ ವಿರೋಧ ವ್ಯಕ್ತಪಡಿಸಿದರೆ ಹೇಗೆ ಸುಧಾರಣೆ ಮಾಡುವುದು?,ʼʼ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
"ನಾಗರಿಕರು ಫುಟ್‌ಪಾತ್‌ನಲ್ಲಿ ಓಡಾಡಲು ತೊಂದರೆಯಾಗುತ್ತಿರುವುದರಿಂದ ಪ್ರತ್ಯೇಕ ಪಾಲಿಸಿ ತರಬೇಕಾಗಿದೆ. ಸ್ಟ್ರೀಟ್ ವೆಂಡರ್ಸ್‌ಗೆ ವ್ಯಾಪಾರ ಮಾಡಲು ನಿಗದಿತ ಜಾಗಗಳನ್ನು ಫಿಕ್ಸ್ ಮಾಡಿಕೊಡಬೇಕು. ಇದರೊಂದಿಗೆ ನಗರದಲ್ಲಿ ಕಾನೂನು ಬಾಹಿರವಾಗಿ ಫ್ಲೆಕ್ಸ್ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಮ್ಮ ಪಕ್ಷದವರೇ ಇರಲಿ ಅಥವಾ ಬೇರೆ ಯಾರೇ ಇರಲಿ, ಫ್ಲೆಕ್ಸ್ ಕೆಳಗೆ ಯಾರ ಹೆಸರು ಇರುತ್ತದೆಯೋ ಅವರಿಗೆ ಪ್ರತಿ ಫ್ಲೆಕ್ಸ್‌ಗೆ 50 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಭಾರಿ ದಂಡ ಹಾಕಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ," ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ
ತೀವ್ರ ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ತನ್ನ ಪ್ರಾಬಲ್ಯವನ್ನು ಮೆರೆದು ಗೆಲುವಿನ ನಗೆ ಬೀರಿದೆ. ಪರಿಶಿಷ್ಟ ಜಾತಿ ಮೀಸಲಾತಿಯಡಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ವಾರ್ಡ್ ನಂಬರ್ 69 ರ ಬಿಜೆಪಿ ಸದಸ್ಯೆ ದುರ್ಗಮ್ಮ ಬಿಜವಾಡ ಅವರು ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಒಟ್ಟು 92 ಮತಗಳ ಬಲವಿರುವ ಪಾಲಿಕೆಯಲ್ಲಿ ಇಂದು ನಡೆದ ಚುನಾವಣೆಯಲ್ಲಿ 88 ಸದಸ್ಯರು ಹಾಜರಾಗಿದ್ದರು. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸಂಖ್ಯಾಬಲದ ಕೊರತೆಯಿದ್ದರೂ ಸ್ಪರ್ಧೆಗಿಳಿದಿತ್ತಾದರೂ, ಕೇವಲ 32 ಮತಗಳನ್ನು ಪಡೆಯಲಷ್ಟೇ ಶಕ್ತವಾಯಿತು. ಈ ಮೂಲಕ ಪಾಲಿಕೆಯಲ್ಲಿ ಬಿಜೆಪಿ ತನ್ನ ಪಟ್ಟವನ್ನು ಮತ್ತೊಮ್ಮೆ ಭದ್ರಪಡಿಸಿಕೊಂಡಿದೆ.

