ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಗೆ ಜಾಮೀನು ನೀಡದಂತೆ ಸಿಬಿಐ ವಾದ
x

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಗೆ ಜಾಮೀನು ನೀಡದಂತೆ ಸಿಬಿಐ ವಾದ

ಪ್ರಕರಣವು ಕೇವಲ ಒಂದು ಕೊಲೆಗೆ ಸೀಮಿತವಾಗಿಲ್ಲ, ಬದಲಿಗೆ ಸಾಕ್ಷ್ಯ ನಾಶ ಮತ್ತು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರುವ ದೊಡ್ಡ ಪಿತೂರಿಯಾಗಿದೆ ಎಂದು ಸಿಬಿಐ ನ್ಯಾಯಪೀಠಕ್ಕೆ ವಿವರಿಸಿದೆ.


Click the Play button to hear this message in audio format

ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿ, ಮಾಜಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಬಾರದು ಎಂದು ಸಿಬಿಐ ಪರ ವಕೀಲರು ಹೈಕೋರ್ಟ್‌ನಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ. ಈ ಪ್ರಕರಣವು ಕೇವಲ ಒಂದು ಕೊಲೆಗೆ ಸೀಮಿತವಾಗಿಲ್ಲ, ಬದಲಿಗೆ ಸಾಕ್ಷ್ಯ ನಾಶ ಮತ್ತು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರುವ ದೊಡ್ಡ ಪಿತೂರಿಯಾಗಿದೆ ಎಂದು ಸಿಬಿಐ ನ್ಯಾಯಪೀಠಕ್ಕೆ ವಿವರಿಸಿದೆ.

ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಕೇಳಿದ ಪ್ರಶ್ನೆಗಳು ಮತ್ತು ಉಂಟಾದ ರಾಜಕೀಯ ಭಿನ್ನಾಭಿಪ್ರಾಯಗಳೇ ಅವರ ಕೊಲೆಗೆ ಮೂಲ ಕಾರಣ ಎನ್ನಲಾಗಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರು ಪಿತೂರಿ ನಡೆಸಿ ಯೋಗೇಶ್ ಗೌಡರನ್ನು ಕೊಲೆ ಮಾಡಿಸಿದ್ದಾರೆ ಎಂಬುದು ಆರೋಪ. ಈ ಪ್ರಕರಣದಲ್ಲಿ ತಳಮಟ್ಟದಿಂದ ತನಿಖೆ ನಡೆಸಿದ ಸಿಬಿಐ, ಸಾಕ್ಷ್ಯಾಧಾರಗಳನ್ನು ಕಲೆಹಾಕಿತ್ತು. ಪರಿಣಾಮವಾಗಿ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿ ಮತ್ತು ಜಾಮೀನು ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಸಿಬಿಐ ಪರ ವಕೀಲರ ವಾದ

ನ್ಯಾ. ಮೊಹಮ್ಮದ್ ನವಾಜ್ ಮತ್ತು ನ್ಯಾ. ಜಿ. ಬಸವರಾಜ ಅವರಿದ್ದ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್. ವಿ. ರಾಜು, ಆರೋಪಿ ವಿನಯ್ ಕುಲಕರ್ಣಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದರು. ವಿನಯ್ ಕುಲಕರ್ಣಿ ಅವರು ತಮ್ಮ ರಾಜಕೀಯ ಹುದ್ದೆ ಮತ್ತು ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡು ಯೋಗೇಶ್ ಗೌಡರ ಹತ್ಯೆಗೆ ಸಂಚು ರೂಪಿಸಿದ್ದರು. ಈ ಪಿತೂರಿಯ ವ್ಯಾಪ್ತಿ ಕೇವಲ ಕೊಲೆಗಷ್ಟೇ ಸೀಮಿತವಾಗಿರಲಿಲ್ಲ. ಕೊಲೆ ನಡೆದ ನಂತರ, ನಿಜವಾದ ಹಂತಕರನ್ನು ರಕ್ಷಿಸಲು ವ್ಯವಸ್ಥಿತ ಪಿತೂರಿ ನಡೆಸಲಾಯಿತು. ನಕಲಿ ವ್ಯಕ್ತಿಗಳನ್ನು ಪೊಲೀಸ್ ಠಾಣೆಗೆ ಶರಣಾಗುವಂತೆ ಮಾಡಿ, ತದನಂತರ ನ್ಯಾಯಾಲಯದಲ್ಲಿ ಅವರು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗುವಂತೆ ಮಾಡುವ ಮಟ್ಟಕ್ಕೆ ಕಾನೂನು ವ್ಯವಸ್ಥೆಯನ್ನು ಹಾದಿ ತಪ್ಪಿಸಲಾಯಿತು ಎಂದು ಸಿಬಿಐ ವಕೀಲರು ವಿವರಿಸಿದರು. ಇಂತಹ ಗಂಭೀರ ಆರೋಪ ಹೊತ್ತಿರುವವರಿಗೆ ಜಾಮೀನು ನೀಡಿದರೆ ಅದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ವಾದಿಸಿದರು.

ನ್ಯಾಯಪೀಠದ ಅಭಿಪ್ರಾಯ

ವಾದದ ನಡುವೆ ನ್ಯಾಯಪೀಠವು ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳು ಅಥವಾ ರಾಜಕೀಯ ಮುಖಂಡರು ಇಂತಹ ಹೇಯ ಅಪರಾಧಗಳಲ್ಲಿ ಭಾಗಿಯಾಗುವ ಪ್ರಮಾಣ ತೀರಾ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟಿತು. ಈ ಕುರಿತು ಪ್ರತಿಕ್ರಿಯಿಸಿದ ಸಿಬಿಐ ವಕೀಲರು, ಹೌದು, ಕರ್ನಾಟಕದಲ್ಲಿ ಈ ಪ್ರಮಾಣ ಕಡಿಮೆಯಿರಬಹುದು. ಆದರೆ, ರಾಜಕಾರಣಿಗಳು ಮತ್ತು ಅಧಿಕಾರಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಂತಹ ಕೆಟ್ಟ ಪರಂಪರೆಯನ್ನು ಆರಂಭದಲ್ಲೇ ಚಿವುಟಿ ಹಾಕಬೇಕು ಎಂದು ಒತ್ತಾಯಿಸಿದರು. ಸಿಬಿಐ ಪರ ವಕೀಲರು ರಾಜಕೀಯ ಪ್ರಭಾವದ ಬಗ್ಗೆ ಮಂಡಿಸಿದ ವಾದವು ನ್ಯಾಯಾಲಯದ ಗಮನ ಸೆಳೆಯಿತು. ದೇಶದಲ್ಲಿ ಅನೇಕ ಕಡೆ ಭ್ರಷ್ಟ ರಾಜಕಾರಣಿಗಳನ್ನು ಆಯಾ ಸರ್ಕಾರಗಳೇ ರಕ್ಷಿಸಿರುವ ನಿದರ್ಶನಗಳಿವೆ. ಸರ್ಕಾರ ಬದಲಾದ ತಕ್ಷಣ ಪ್ರಾಸಿಕ್ಯೂಷನ್‌ಗೆ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆದಿರುವ ಇತಿಹಾಸವೂ ಇದೆ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು, ಪ್ರಭಾವಿ ವ್ಯಕ್ತಿಗಳಿಗಾಗಿ ಬಾಗಬಾರದು ಎಂದು ಅವರು ವಾದ ಮಂಡಿಸಿದರು.

ಸಿಬಿಐ ಪರ ವಾದಗಳನ್ನು ಆಲಿಸಿದ ನ್ಯಾಯಪೀಠ, ಈ ಪ್ರಕರಣದ ಮಹತ್ವ ಮತ್ತು ಗಂಭೀರತೆಯನ್ನು ಪರಿಗಣಿಸಿ ವಿಚಾರಣೆಯನ್ನು ಮುಂದೂಡಿತು. ವಿನಯ್ ಕುಲಕರ್ಣಿ ಅವರ ಕಡೆಯ ವಕೀಲರು ಮುಂದಿನ ದಿನಗಳಲ್ಲಿ ತಮ್ಮ ವಾದ ಮಂಡಿಸಲಿದ್ದಾರೆ. ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಈ ಪ್ರಕರಣವು, ಪ್ರಭಾವಿ ರಾಜಕಾರಣಿಗಳ ವಿರುದ್ಧದ ತನಿಖೆಯಲ್ಲಿ ಕಾನೂನು ಎಷ್ಟು ಬಲಿಷ್ಠವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸುವ ಪರೀಕ್ಷೆಯಾಗಿದೆ.

Read More
Next Story