ಬಾಳೆಹಣ್ಣಿನ ಆಸೆ ತೋರಿಸಿ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ ಮುಖ್ಯಶಿಕ್ಷಕ
x

ಬಾಳೆಹಣ್ಣಿನ ಆಸೆ ತೋರಿಸಿ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ ಮುಖ್ಯಶಿಕ್ಷಕ

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.


Click the Play button to hear this message in audio format

ಶಾಲಾ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳಿದ್ದರೂ, ಬಾಳೆಹಣ್ಣಿನ ಆಸೆ ತೋರಿಸಿ ವಿದ್ಯಾರ್ಥಿಗಳಿಂದ ಶೌಚಾಲಯ ತೊಳಿಸಿದ ಅಮಾನವೀಯ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ತಮ್ಮ ತಪ್ಪನ್ನು ಪ್ರಶ್ನಿಸಿದ ಗ್ರಾಮದ ಯುವಕರ ವಿರುದ್ಧವೇ ಮುಖ್ಯಶಿಕ್ಷಕ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಜರುಗಿದೆ. ಶಾಲೆಯ ಮುಖ್ಯಶಿಕ್ಷಕರು ಮಕ್ಕಳಿಗೆ ಬಾಳೆಹಣ್ಣು ಕೊಡುವ ಆಮಿಷವೊಡ್ಡಿ, ಅವರಿಂದ ಶೌಚಾಲಯವನ್ನು ಕ್ಲೀನ್ ಮಾಡಿಸಿದ್ದಾರೆ. ಮಕ್ಕಳಿಂದ ಇಂತಹ ಕೆಲಸಗಳನ್ನು ಮಾಡಿಸಬಾರದು ಎಂಬ ಶಿಕ್ಷಣ ಇಲಾಖೆಯ ಸ್ಪಷ್ಟ ನಿಯಮಗಳಿದ್ದರೂ, ಅವೆಲ್ಲವನ್ನೂ ಈ ಶಿಕ್ಷಕ ಗಾಳಿಗೆ ತೂರಿದ್ದಾರೆ. ಶಿಕ್ಷಕರ ಈ ಅಮಾನವೀಯ ಕೃತ್ಯದ ಬಗ್ಗೆ ಗ್ರಾಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪ್ರಶ್ನಿಸಿದವರ ಮೇಲೆ 307 ಕೇಸ್, ಬೆದರಿಕೆ

ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ವಿಚಾರ ತಿಳಿದ ಗ್ರಾಮದ ಯುವಕರು, ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಮಕ್ಕಳ ಕೈಯಲ್ಲಿ ಯಾಕೆ ಈ ಕೆಲಸ ಮಾಡಿಸಿದ್ರಿ?" ಎಂದು ಪ್ರಶ್ನಿಸಿದ್ದಕ್ಕೆ, ಶಿಕ್ಷಕರು ಉದ್ಧಟತನದ ವರ್ತನೆ ತೋರಿದ್ದಾರೆ. ಅಷ್ಟೇ ಅಲ್ಲದೆ, ಪ್ರಶ್ನೆ ಮಾಡಿದ ಯುವಕರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಶಿಕ್ಷಕನ ಅಮಾನತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಮುಖ್ಯಶಿಕ್ಷಕರ ಈ ದರ್ಪದ ವರ್ತನೆಯಿಂದ ರೊಚ್ಚಿಗೆದ್ದಿರುವ ಹಂಪಾಪಟ್ಟಣ ಗ್ರಾಮಸ್ಥರು, ಶಾಲೆಯ ಮುಂಭಾಗದಲ್ಲಿ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಬೇಜವಾಬ್ದಾರಿ ಹಾಗೂ ದುರಹಂಕಾರಿ ಶಿಕ್ಷಕ ನಮ್ಮೂರಿಗೆ ಬೇಡವೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಕೂಡಲೇ ಈತನನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ (BEO) ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

Read More
Next Story