
ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಉದ್ಯಮಿ ವಿಜಯ್ ಮಲ್ಲ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾರಕಿಹೊಳಿ ಕುಟುಂಬದ ಮೇಲಿನ ಇಡಿ ದಾಳಿ: ವಿಜಯ್ ಮಲ್ಯ ಆಕ್ಷೇಪ
ಸೆಪ್ಟೆಂಬರ್ 9ರಂದು ಇಡಿ ಅಧಿಕಾರಿಗಳು ಸತೀಶ್ ಜಾರಕಿಹೊಳಿ, ಅವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ ಸುಮಾರು 18 ಸ್ಥಳಗಳಲ್ಲಿ ಶೋಧ ನಡೆಸಿದ್ದರು.
ಕರ್ನಾಟಕ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ಶೋಧ ಕಾರ್ಯಾಚರಣೆಗೆ ಉದ್ಯಮಿ ವಿಜಯ್ ಮಲ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾರಕಿಹೊಳಿ ವಿರುದ್ಧ ಇನ್ನೂ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ ಹಾಗೂ ವಿಚಾರಣೆಯೂ ಆರಂಭವಾಗಿಲ್ಲ. ಹೀಗಿರುವಾಗ ಇಡಿ ದಾಳಿ ನಡೆಸಿರುವುದು ವ್ಯಕ್ತಿಯ ‘ಚರಿತ್ರೆ ಹರಣ’ ಮಾಡುವ ಪ್ರಯತ್ನವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಮಲ್ಯ, ಆರೋಪಪಟ್ಟಿ ಅಥವಾ ವಿಚಾರಣೆ ಇಲ್ಲದಿದ್ದರೂ ದಾಳಿ ನಡೆಸಿ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರುವ ಕ್ರಮ ಅನುಸರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಡಿ ಕೈಗೊಂಡಿರುವ ಕ್ರಮದ ಉದ್ದೇಶವೇನು ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
18 ಸ್ಥಳಗಳಲ್ಲಿ ಇಡಿ ಶೋಧ
ಸೆಪ್ಟೆಂಬರ್ 9ರಂದು ಇಡಿ ಅಧಿಕಾರಿಗಳು ಸತೀಶ್ ಜಾರಕಿಹೊಳಿ, ಅವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ ಸುಮಾರು 18 ಸ್ಥಳಗಳಲ್ಲಿ ಶೋಧ ನಡೆಸಿದ್ದರು.
ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ನಿವಾಸವೂ ಶೋಧ ನಡೆದ ಸ್ಥಳಗಳಲ್ಲಿ ಸೇರಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ರಿಕಾ ವ್ಯವಹಾರಗಳತ್ತ ತನಿಖೆ
ಜಾರಕಿಹೊಳಿ ಕುಟುಂಬದ ಸಕ್ಕರೆ ಉದ್ಯಮ ಹಾಗೂ ಆಫ್ರಿಕಾ ದೇಶಗಳಲ್ಲಿನ ವ್ಯವಹಾರಗಳಿಗೆ ಸಂಬಂಧಿಸಿದ ಹಣಕಾಸು ವಹಿವಾಟುಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಇತ್ತೀಚಿನ ಶೋಧ ಕಾರ್ಯಾಚರಣೆ ವೇಳೆ ನಗದು ಹಾಗೂ ವಿದೇಶಿ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಈ ಹಣಕಾಸು ವಹಿವಾಟುಗಳು ಮತ್ತು ವಿದೇಶಿ ಹೂಡಿಕೆಗಳ ಸ್ವರೂಪದ ಕುರಿತು ತನಿಖಾ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಇಡಿ ಕ್ರಮದ ಕುರಿತು ರಾಜಕೀಯ ಚರ್ಚೆ
ಜಾರಕಿಹೊಳಿ ಕುಟುಂಬದ ಮೇಲಿನ ಶೋಧ ಕಾರ್ಯಾಚರಣೆ ರಾಜ್ಯ ರಾಜಕೀಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಈ ನಡುವೆ ವಿಜಯ್ ಮಲ್ಯ ಅವರ ಪ್ರತಿಕ್ರಿಯೆ ಇಡಿ ಕ್ರಮದ ಉದ್ದೇಶ ಮತ್ತು ತನಿಖಾ ಪ್ರಕ್ರಿಯೆಯ ಕುರಿತು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತನಿಖೆ ಮುಂದುವರಿದಿದ್ದು, ಶೋಧದ ವೇಳೆ ಸಂಗ್ರಹಿಸಲಾದ ದಾಖಲೆಗಳು ಮತ್ತು ಇತರ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

