
ರಾಜ್ಯ ಸರಕಾರ ನೀಡಿರುವ ಜಾಹಿರಾತು
ಕಲ್ಯಾಣಕ್ಕಿಲ್ಲದ ಹಣ, ಜಾಹಿರಾತಿಗೆ ?
ರಾಜ್ಯ ಸರಕಾರದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೆ ಇದೆ. ಫಲಾನುಭವಿಗಳಿಗೆ ನ್ಯಾಯಯುತವಾಗಿ ನೀಡಬೇಕಿರುವ ಅನುದಾನ ನೀಡಲು ಸರಕಾರದ ಬಳಿ ಹಣ ಇಲ್ಲ. ಆದರೆ, ಪತ್ರಿಕೆಗಳಿಗೆ ಜಾಹಿರಾತು ನೀಡಲು ಮಾತ್ರ ಕೋಟಿಗಟ್ಟಲೇ ಹಣ ಖಜಾನೆಯಲಿದೆ!
ರಾಜ್ಯ ಸರಕಾರದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೆ ಇದೆ. ಫಲಾನುಭವಿಗಳಿಗೆ ನ್ಯಾಯಯುತವಾಗಿ ನೀಡಬೇಕಿರುವ ಅನುದಾನ ನೀಡಲು ಸರಕಾರದ ಬಳಿ ಹಣ ಇಲ್ಲ. ಆದರೆ, ಪತ್ರಿಕೆಗಳಿಗೆ ಜಾಹಿರಾತು ನೀಡಲು ಮಾತ್ರ ಕೋಟಿಗಟ್ಟಲೇ ಹಣ ಖಜಾನೆಯಲಿದೆ !
ಇದು, ವಿಚಿತ್ರವಾದರೂ ಸತ್ಯ. 2026 ರ ಮಾರ್ಚ್ ತಿಂಗಳ ಅಂತ್ಯದೊಳಗೆ ರಾಜ್ಯ ಸರಕಾರದ ಸಾಲದ ಮೊತ್ತ 7.64 ಲಕ್ಷ ಕೋಟಿ ತಲುಪುವ ಸಾಧ್ಯತೆಗಳಿವೆ. ಈ ಬಾರಿಯ ರಾಜ್ಯ ಬಜೆಟ್‌ಗಾಗಿ 1.16 ಲಕ್ಷ ಕೋಟಿ ರೂ., ಹೊಸ ಸಾಲ ಪಡೆದುಕೊಳ್ಳಲು ಮುಂದಾಗಿದೆ. ಆದರೆ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ʼವಿಬಿ-ಜಿ ರಾಮ್ ಜಿʼ ಯೋಜನೆ ಕುರಿತಾದ ಪರ-ವಿರೋಧದ ಚರ್ಚೆಗಳಿಗಾಗಿ ಪತ್ರಿಕೆಗಳ ಜಾಹಿರಾತಿಗೆ ಸರಾಸರಿ 2 ಕೋಟಿ ರೂ., ಖರ್ಚು ಮಾಡಿದೆ. ಸರಕಾರಿ ಹಣವನ್ನು ಹೇಗೆಲ್ಲ ಪೋಲು ಮಾಡಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ʼವಿಬಿ-ಜಿ ರಾಮ್ ಜಿʼ ಯೋಜನೆಯನ್ನು ಟೀಕಿಸುವ ಉದ್ದೇಶದಿಂದ ಫೆ.3 ರಂದು ಕಾಂಗ್ರೆಸ್ ಸರಕಾರವು ರಾಜ್ಯದ ಕನ್ನಡ, ಇಂಗ್ಲಿಷ್ ಸೇರಿದಂತೆ ಬಹುತೇಕ ಎಲ್ಲ ಪತ್ರಿಕೆಗಳಿಗೂ ಮುಖಪುಟದ ಜಾಹಿರಾತು ನೀಡಿತ್ತು. ಅದರಲ್ಲಿ ಬಿಜೆಪಿಯವನ್ನು ಪರೋಕ್ಷವಾಗಿ ʼಸಂಘಪ್ಪʼ ಎಂದು ಮೂದಲಿಸಿತ್ತು. (ಆರ್ ಎಸ್ ಎಸ್- ಸಂಘ ಪರಿವಾರ). ಇದಕ್ಕೆ ಪ್ರತಿಯಾಗಿ ಶುಕ್ರವಾರ(ಫೆ.6) ಬಿಜೆಪಿ ನೀಡಿದ ಜಾಹಿರಾತಿನಲ್ಲಿ ಕಾಂಗ್ರೆಸ್ ನಾಯಕರನ್ನು ಗಾಂಧೀಜಿಯವರು ಕೋಲಿನಿಂದ ಹೊಡೆಯುವಂತೆ ತೋರಿಸಿ ಗಾಂಧೀಜಿಯವರನ್ನು ಅವಮಾನಿಸುವ ವಿಷಯದಲ್ಲಿ ಕಾಂಗ್ರೆಸ್‌ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದೆ.
ಆದರೆ, ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಕೇಂದ್ರ ಸರಕಾರದ ʼವಿಬಿ-ಜಿ ರಾಮ್ ಜಿʼ ಯೋಜನೆಯೊಂದಿಗೆ ಬಿಜೆಪಿಯನ್ನು ಟೀಕಿಸುತ್ತಿರುವ ರಾಜ್ಯ ಸರಕಾರದ ಬಳಿ, ಜನಸಮಾನ್ಯರಿಗಾಗಿ ಹಣ ಖರ್ಚು ಮಾಡಲು ಹಣ ಇಲ್ಲ. ಮೆಟ್ರೊ, ನೀರಿನ ದರ ಸೇರಿದಂತೆ ಬಹುತೇಕ ಎಲ್ಲದರಲ್ಲಿಯು ದರ ಹೆಚ್ಚಿಸಿ, ಆ ಮೂಲಕ ಜಾಹಿರಾತು ನೀಡುತ್ತಿದೆ ಎಂದು ಸಾರ್ವಜನಿಕರು ಸಿಟ್ಟಾಗಿದ್ದಾರೆ.
ಎಷ್ಟಿದೆ ಜಾಹಿರಾತು ದರ
ಪತ್ರಿಕೆಗಳ ಬ್ರ್ಯಾಂಡ್ ಹಾಗೂ ಪ್ರಸರಣ ಸಂಖ್ಯೆಯ ಆಧಾರದ ಮೇಲೆ ಜಾಹಿರಾತು ದರ ನಿಗದಿಯಾಗಲಿದೆ. ಅದರಲ್ಲೂ ಸರಕಾರಿ ದರವು ಸಾಮಾನ್ಯ ದರದ ಜಾಹಿರಾತಿಗಿಂತ ಹೆಚ್ಚಾಗಿಯೇ ಇರಲಿದೆ. ಕನ್ನಡದ ರಾಜ್ಯಮಟ್ಟದ ಪತ್ರಿಕೆಯಲ್ಲಿ ಪೂರ್ಣಪುಟದ ಜಾಹಿರಾತಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ದರ ಪಟ್ಟಿಯಂತೆ ಅಂದಾಜು10 ಲಕ್ಷ ನೀಡಬೇಕು. ಇಂಗ್ಲಿಷ್ ಪತ್ರಿಕೆಗೆ ಕನಿಷ್ಟ 13 ರಿಂದ 14 ಲಕ್ಷ ಹಣ ಪಾವತಿಸಬೇಕು. ಇನ್ನುಳಿದಂತೆ ಪ್ರಾದೇಶಿಕ, ಜಿಲ್ಲಾ ಮಟ್ಟದ ಪತ್ರಿಕೆಗಳನ್ನು ಲೆಕ್ಕಹಾಕಿದರೆ ಒಂದು ದಿನದ ಜಾಹಿರಾತಿಗೆ ರಾಜ್ಯ ಸರಕಾರ ಕನಿಷ್ಟ 2 ಕೋಟಿಗೂ ಅಧಿಕ ಹಣ ವ್ಯಹಿಸಿದೆ. ರಾಜ್ಯ, ಪ್ರಾದೇಶಿಕ, ಜಿಲ್ಲಾ ಮಟ್ಟದ ಪತ್ರಿಕೆಗಳು ಸೇರಿ ವಾರ್ತಾ ಇಲಾಖೆಯ ಮಾನ್ಯತೆ ಪಡೆದ 1 ಸಾವಿರಕ್ಕೂ ಹೆಚ್ಚಿನ ಪತ್ರಿಕೆಗಳಿವೆ ಎಂದು ಅಂದಾಜಿಸಬಹುದು. ಈ ಎಲ್ಲ ಪತ್ರಿಕೆಗಳಿಗೂ ಸೇರಿ ರಾಜ್ಯ ಸರಕಾರ ಕೋಟಿಗಟ್ಟಲೆ ಹಣ ಸುರಿದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸರಕಾರಿ ಯೋಜನೆಗಳ ಪ್ರಚಾರ, ಸಾರ್ವಜನಿಕರ ಮಾಹಿತಿಗಾಗಿ ಜಾಹಿರಾತು ನೀಡಲಿ. ಅದಕ್ಕಾಗಿ ಹಣ ಖರ್ಚು ಮಾಡಿದರೆ ಯಾವುದೆ ಸಮಸ್ಯೆ ಇಲ್ಲ. ಆದರೆ, ಕೇಂದ್ರ ಸರಕಾರ ತನ್ನ ಕ್ಯಾಬಿನೆಟ್‌ನಲ್ಲಿ ಅಂಗೀಕರಿಸಿರುವ ʼವಿಬಿ-ಜಿ ರಾಮ್ ಜಿʼ ಯೋಜನೆಯನ್ನು ರಾಜ್ಯ ಸರಕಾರ ಬದಲಿಸುವುದು ಸುಲಭದ ಮಾತಲ್ಲ. ಹೀಗಿದ್ದರೂ, ಸುಖಾಸುಮ್ಮನೆ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿರುವುದು ಏಕೆ? ಇದಕ್ಕೆ ಪ್ರತಿಯಾಗಿ ಬಿಜೆಪಿ ಸಹ ಅಷ್ಟೆ ಪ್ರಮಾಣದ ಹಣ ಖರ್ಚು ಮಾಡಿ, ಇಂದು ತಿರುಗೇಟು ನೀಡಲು ಜಾಹಿರಾತು ನೀಡಿದೆ. ಇದೇ ಪರಿ ಮುಂದುವರಿದು ರಾಜ್ಯ ಸರಕಾರ ನಮ್ಮಗಳ ಹಣದಲ್ಲಿ ಜಾಹಿರಾತು ನೀಡಿದರೆ ಏನು ಮಾಡಬೇಕು ಎಂದು "ದ ಫೆಡರಲ್ ಕರ್ನಾಟಕ"ಜತೆ ಮಾತನಾಡಿದ ಸಾರ್ವಜನಿಕರೊಬ್ಬರು ಹೇಳಿದ್ದಾರೆ.
ಯಾವುದಕ್ಕೆ ಹಣ ಇಲ್ಲ...
ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳ ಶೈಕ್ಷಣಿಕ ವೆಚ್ಚ ಪಾವತಿ ಪರಿಹಾರ ಯೋಜನೆಗೆ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಪೋಷಕರನ್ನು ಕಳೆದುಕೊಂಡ ರೈತ ಮಕ್ಕಳಿಗೆ ಶಿಕ್ಷಣವೆ ಕಬ್ಬಿಣದ ಕಡಲೆಯಾಗಿದೆ. ಜತಗೆ ಕಳೆದ 2 ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ 223 ರೈತರಿಗೆ ತಲಾ 5 ಲಕ್ಷ ಪರಿಹಾರವನ್ನು ಬಿಡುಗಡೆ ಮಾಡಿಲ್ಲ. ಪ್ರಸಕ್ತ ಸಾಲಿನಲ್ಲಿ ಆತ್ಮಹತ್ಯೆಗೆ ಶರಣಾದ 86 ಪ್ರಕರಣಗಳನ್ನು ಇನ್ನೂ ಪರಿಶೀಲನೆ ಹಂತದಲ್ಲೇ ಇಟ್ಟಿದೆ.
ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವ ಹಂತ ತಲುಪಿದರೂ, ಸರಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸುವಲ್ಲಿ ಸರಕಾರ ಸಂಪೂರ್ಣ ವಿಫಲಗೊಂಡಿದೆ. ವಸತಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ. ಶಾಲಾ ಮಕ್ಕಳಿಗೆ ವಿತರಿಸುತ್ತಿದ್ದ ಸೈಕಲ್ ಗೆ ಸಂಪೂರ್ಣ ಕೋಕ್ ನೀಡಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಸಮಪರ್ಕ ಔಷಧಗಳಿಲ್ಲ ಎಂದು "ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ"ವು ಮೂರು ದಿನದ ಹಿಂದಷ್ಟೆ ಸರಕಾರಕ್ಕೆ ಪತ್ರ ಬರೆದಿತ್ತು. ಇದೇ ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ವೈದ್ಯರು, ನರ್ಸ್‌ಗಳು, ನುರಿತ ತಂತ್ರಜ್ಞರುಗಳ ಕೊರತೆ ಇರುವುದನ್ನು ಆರೋಗ್ಯ ಇಲಾಖೆಯೆ ಪ್ಪಿಕೊಂಡಿತ್ತು.

