
ಪೀಠಾಧ್ಯಕ್ಷರಾದ ವಚನಾನಂದ ಶ್ರೀಗಳನ್ನು ಮಠದಿಂದ ಉಚ್ಚಾಟನೆ ಮಾಡಲಾಗಿದೆ.
Vachanananda Swamiji| ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಚಾಟನೆ
ಹರಿಹರ ಪಂಚಮಸಾಲಿ ಮಠದಿಂದ ವಚನಾನಂದ ಶ್ರೀಗಳ ಉಚ್ಚಾಟನೆ: ಹಣಕಾಸು ಅವ್ಯವಹಾರ ಆರೋಪ ಹಿನ್ನೆಲೆ ಧರ್ಮದರ್ಶಿಗಳ ಸಭೆಯಲ್ಲಿ ತೀರ್ಮಾನ. ಮಠದ ಮುಂದೆ ಭಕ್ತರ ಆಕ್ರೋಶ, ಬಿಗಿ ಪೊಲೀಸ್ ಬಂದೋಬಸ್ತ್ ಜಾರಿ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಪೀಠಾಧ್ಯಕ್ಷ ವಚನಾನಂದ ಶ್ರೀಯನ್ನು ಮಠದಿಂದ ಉಚ್ಚಾಟನೆ ಮಾಡಲಾಗಿದೆ. ಮಠದ ಆಸ್ತಿ ಮತ್ತು ಆಡಳಿತ ಮಂಡಳಿಯ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲ ಹಾಗೂ ಬೃಹತ್ ಮಟ್ಟದ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಧರ್ಮದರ್ಶಿ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ಸೋಮವಾರ ಮಠದ ಆವರಣದಲ್ಲಿ ನಡೆದ 15 ಸದಸ್ಯರ ಧರ್ಮದರ್ಶಿಗಳ ಮಹತ್ವದ ಸಭೆಯಲ್ಲಿ ಶ್ರೀಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಮಠದ ಹಣದ ಲೆಕ್ಕಪತ್ರಗಳನ್ನು ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶ್ರೀಗಳಿಂದ ಸೂಕ್ತ ಸ್ಪಂದನೆ ಅಥವಾ ಉತ್ತರ ಸಿಗದ ಕಾರಣ ಸಭೆಯಲ್ಲಿದ್ದ ಧರ್ಮದರ್ಶಿಗಳು ಸರ್ವಾನುಮತದಿಂದ ಅವರನ್ನು ಪೀಠದಿಂದ ಉಚ್ಚಾಟಿಸಲು ತೀರ್ಮಾನಿಸಿದ್ದಾರೆ. ಮಠದ ಆಡಳಿತದಲ್ಲಿ ಕುಟುಂಬ ರಾಜಕಾರಣ ಮತ್ತು ಹಣಕಾಸು ದುರ್ಬಳಕೆಯ ಆರೋಪಗಳು ಕೇಳಿಬಂದ ಬೆನ್ನಲ್ಲೇ ಭಕ್ತ ವಲಯದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಮಠದ ಮುಂದೆ ನೂರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು, 'ಲೆಕ್ಕ ಕೊಡಿ' ಅಭಿಯಾನವನ್ನು ತೀವ್ರಗೊಳಿಸಿದ್ದಾರೆ. ಮಠದ ಗೇಟ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಧರ್ಮದರ್ಶಿ ಮಂಡಳಿ ಮತ್ತು ಶ್ರೀಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ, ಅರುಣಕುಮಾರ್ ಹಾಗೂ ಹೂವಿನ ಹಡಗಲಿಯ ಹಾಲಪ್ಪ ಸೇರಿದಂತೆ ಹಲವು ಗಣ್ಯರು ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಮಠದ ಗೌರವ ಕಾಪಾಡಲು ಪಾರದರ್ಶಕ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಂತೋಷ್ ಕುಮಾರ್ ಪರಿಸ್ಥಿತಿಯನ್ನು ನಿಯಂತ್ರಿಸಲು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪ್ರತಿಭಟನಾ ನಿರತ ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಏನಿದು ಪ್ರಕರಣ
ವಚನಾನಂದ ಶ್ರೀಗಳು ಮಠದ ಆಸ್ತಿ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಸ್ವತಃ ಮಠದ ಟ್ರಸ್ಟಿಗಳೇ ಮಾಡಿದ್ದಾರೆ. ಮಠದ ಪ್ರಮುಖ ಟ್ರಸ್ಟಿ ಬಿ.ಸಿ. ಉಮಾಪತಿ ಅವರು ಶ್ರೀಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೇ ಪೀಠವನ್ನು ತ್ಯಜಿಸುವಂತೆ ಒತ್ತಾಯಿಸಿದ್ದಾರೆ. ಶ್ರೀಗಳ ವೈಯಕ್ತಿಕ ಸಂಸ್ಥೆಯಾದ 'ಶ್ವಾಸ ಯೋಗ ಸಂಸ್ಥೆ'ಯ ಚಟುವಟಿಕೆಗಳು ಮಠದ ಆವರಣದಲ್ಲಿ ನಡೆಯುತ್ತಿರುವುದು ಈ ಎಲ್ಲ ಭಿನ್ನಾಭಿಪ್ರಾಯಗಳಿಗೆ ಮೂಲ ಕಾರಣವಾಗಿದೆ ಎನ್ನಲಾಗುತ್ತಿದೆ.
ಮಠದ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಇಲ್ಲ ಹಾಗೂ ಭಕ್ತರ ದೇಣಿಗೆಯನ್ನು ವೈಯಕ್ತಿಕ ಪ್ರಚಾರಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದಂತೆಯೇ, ಭಕ್ತರ ಒಂದು ವರ್ಗ 'ಮಠ ಉಳಿಸಿ' ಅಭಿಯಾನವನ್ನು ಆರಂಭಿಸಿದೆ.
ಯಾರಿವರು ವಚನಾನಂದ ಶ್ರೀ?
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತನ್ವಶಿ ಗ್ರಾಮದಲ್ಲಿ ಜನಿಸಿದ ವಚನಾನಂದ ಸ್ವಾಮೀಜಿಯವರು ಬಾಲ್ಯದಿಂದಲೇ ಆಧ್ಯಾತ್ಮದ ಹಿನ್ನೆಲೆ ಹೊಂದಿದ್ದರು ಎನ್ನಲಾಗಿದೆ. ಎಂಟು ವರ್ಷದಲ್ಲಿಯೇ ಶ್ರೀ ಮರುಳಶಂಕರ ಶಿವಯೋಗಿಗಳ ಮಠಕ್ಕೆ ಸೇರಿ ಯೋಗ, ಸಂಸ್ಕೃತ ಹಾಗೂ ವೇದಾಂತವನ್ನು ಅಭ್ಯಾಸ ಮಾಡಿದ್ದಾರೆ. ನಂತರ ಹಿಮಾಲಯದಲ್ಲಿ ಕಠಿಣ ಯೋಗಾಭ್ಯಾಸ ನಡೆಸಿದ್ದಾರೆ. ಉಸಿರಾಟದ ಮಹತ್ವವನ್ನು ಸಾರುವ ಉದ್ದೇಶದಿಂದ ಇವರು 'ಶ್ವಾಸ' ಎಂಬ ಸಂಸ್ಥೆ ಸ್ಥಾಪಿಸಿ, ಜಗತ್ತಿನಾದ್ಯಂತ ಯೋಗ ಶಿಬಿರಗಳನ್ನು ನಡೆಸುತ್ತಾ 'ಶ್ವಾಸ ಗುರು' ಎಂದೇ ಜನಪ್ರಿಯ. 2012ಲ್ಲಿ ಶ್ವಾಸ ಯೋಗ ಕೇಂದ್ರವನ್ನು ಆರಂಭಿಸಿದ ಇವರು, ಟಿವಿ ವಾಹಿನಿಯ 'ಯೋಗ ಯೋಗ' ಕಾರ್ಯಕ್ರಮದ ಮೂಲಕ ಮನೆಮಾತಾಗಿದ್ದಾರೆ.
ಹರಿಹರ ಪಂಚಮಸಾಲಿ ಪೀಠದ ಜಗದ್ಗುರುಗಳಾಗಿ ಪಟ್ಟಾಭಿಷೇಕ
ಹರಿಹರ-ದಾವಣಗೆರೆ ಭಾಗದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಮೊದಲ ಪೀಠಾಧಿಪತಿಗಳಾಗಿದ್ದ ಶ್ರೀ ಡಾ. ಮಹಾಂತ ಸ್ವಾಮೀಜಿಗಳ ಅಕಾಲಿಕ ನಿಧನದ ಬಳಿಕ 2018ರ ಏಪ್ರಿಲ್ 20ರಂದು ವಚನಾನಂದ ಸ್ವಾಮೀಜಿಯವರಿಗೆ ವೀರಶೈವ ಸಂಪ್ರದಾಯದಂತೆ ದೀಕ್ಷೆ ನೀಡಿ, ಪೀಠದ ನೂತನ ಜಗದ್ಗುರುಗಳಾಗಿ ಪಟ್ಟಾಭಿಷೇಕ ಮಾಡಲಾಗಿತ್ತು.
ರಾಜಕೀಯ ಸಂಘರ್ಷ
ಹರಿಹರದಲ್ಲಿ ನಡೆದ ಸಮಾವೇಶವೊಂದರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿಯೇ ವಚನಾನಂದ ಸ್ವಾಮೀಜಿ ನೀಡಿದ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಶಾಸಕ ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸುವ ಸಂದರ್ಭದಲ್ಲಿ, "ನಿರಾಣಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಪಂಚಮಸಾಲಿ ಸಮುದಾಯದ ಬೆಂಬಲವನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದರು. ಈ ಮಾತುಗಳಿಂದ ಅಸಮಾಧಾನಗೊಂಡ ಯಡಿಯೂರಪ್ಪ ಅವರು ವೇದಿಕೆಯಲ್ಲೇ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿ, ಬೆದರಿಕೆಗೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ನಂತರ, ಸ್ವಾಮೀಜಿಯವರು ತಮ್ಮ ಮಾತುಗಳ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಕ್ಷಮೆಯಾಚಿಸಿದ್ದರು.
ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ಹಾಗೂ ಧರ್ಮಸ್ಥಳದ ಕುರಿತಾದ ವಿವಾದಗಳ ಬಗ್ಗೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಮೀಕ್ಷಾ ಪಟ್ಟಿಯಲ್ಲಿ ಜಾತಿಗಳ ಸಂಖ್ಯೆ ಏರಿಕೆ ಮಾಡಿರುವುದು ಮತ್ತು ವಿಚಿತ್ರ ವರ್ಗೀಕರಣಗಳನ್ನು (ಉದಾಹರಣೆಗೆ ಕ್ರಿಶ್ಚಿಯನ್ ಲಿಂಗಾಯತ) ಸೇರಿಸಿರುವುದು ಸಮಾಜದಲ್ಲಿ ಅನಗತ್ಯ ಗೊಂದಲಗಳಿಗೆ ಕಾರಣವಾಗಿದೆ ಎಂದು ಅವರು ಆಕ್ಷೇಪಿಸಿದ್ದರು.

