ಹೆಲಿಕಾಪ್ಟರ್ ಪತನ: CCB ಇನ್ಸ್‌ಪೆಕ್ಟರ್ ಸೇರಿದಂತೆ ಬೆಂಗಳೂರಿನ ಐವರ ದುರ್ಮರಣ;  ಪೈಲಟ್‌ ಕೂಡಾ ಸಾವು
x

ಹೆಲಿಕಾಪ್ಟರ್ ಪತನ: CCB ಇನ್ಸ್‌ಪೆಕ್ಟರ್ ಸೇರಿದಂತೆ ಬೆಂಗಳೂರಿನ ಐವರ ದುರ್ಮರಣ; ಪೈಲಟ್‌ ಕೂಡಾ ಸಾವು

ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಮಧ್ಯಾಹ್ನ 1:14ಕ್ಕೆ ಟೇಕಾಫ್ ಆಗಿತ್ತು. ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ATC ಸಂಪರ್ಕ ಕಡಿತಗೊಂಡಿದೆ.


ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಖಾಸಗಿ ಸಂಸ್ಥೆಯ ಹೆಲಿಕಾಪ್ಟರ್ ಉತ್ತರಾಖಂಡದ ಜೋಶಿಮಠ ಕಣಿವೆಯಲ್ಲಿ ಪತನಗೊಂಡಿದೆ. ದುರಂತದಲ್ಲಿ ಸಿಸಿಬಿ ಪೊಲೀಸ್‌ ಇನ್ಸ್ ಪೆಕ್ಟರ್ ಅರುಣ್ ಸಾಳುಂಕೆ ಸೇರಿದಂತೆ ಒಟ್ಟು ಆರು ಜನರು ಮೃತಪಟ್ಟಿದ್ದಾರೆ.

ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಮಧ್ಯಾಹ್ನ 1:14ಕ್ಕೆ ಟೇಕಾಫ್ ಆಗಿತ್ತು. ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ಏರ್ ಟ್ರಾಫಿಕ್ ಕಂಟ್ರೋಲ್ (ATC) ಜೊತೆಗಿನ ಸಂಪರ್ಕ ಕಡಿತಗೊಂಡಿದೆ. ಹೆಲಿಕಾಪ್ಟರ್‌ನ ಜಿಪಿಎಸ್ ಹಾಗೂ ಟ್ರ್ಯಾಕಿಂಗ್ ಸಿಸ್ಟಮ್‌ನಿಂದಲೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.

ಮೃತರನ್ನು ಕ್ಯಾಪ್ಟನ್ ಹಿಮಾಂಶು (ಪೈಲಟ್), ಅರುಣ್ ಸಾಳುಂಕೆ (ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್), ಸುಧೀರ್ ಕೆ. (ವಕೀಲ), ಹೆಚ್.ಎಸ್. ನಟರಾಜ್, ಪ್ರತಾಪ್ ಮತ್ತು ಶಂಕರೇಗೌಡ ಎಂದು ಗುರುತಿಸಲಾಗಿದೆ. ದುರಂತದಲ್ಲಿ ಮೃತಪಟ್ಟ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಳುಂಕೆ ಅವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಚಾರ್ ಧಾಮ್ ಯಾತ್ರೆಗಾಗಿ ಇವರೆಲ್ಲರೂ ಜೊತೆಯಾಗಿ ತೆರಳಿದ್ದರು ಎಂದು ತಿಳಿದುಬಂದಿದೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ

ಘಟನೆ ನಡೆದ ಸ್ಥಳಕ್ಕೆ ಭಾರತೀಯ ಸೇನೆ, SDRF (ರಾಜ್ಯ ವಿಪತ್ತು ಸ್ಪಂದನಾ ಪಡೆ) ಹಾಗೂ ಚಮೋಲಿ ಜಿಲ್ಲಾಡಳಿತದ ರಕ್ಷಣಾ ತಂಡಗಳು ಧಾವಿಸಿದ್ದು, ಶೋಧ ಕಾರ್ಯಾಚರಣೆ ಪೂರ್ಣಗೊಳಿಸಿವೆ.

ಅಪಘಾತದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.


ಅರುಣ್‌ ಸಾಳುಂಕೆ ಯಾರು?

ಅರುಣ್‌ ಸಾಳುಂಕೆ ಅವರು ಮೂಲತಃ ಬೆಳಗಾವಿಯವರಾಗಿದ್ದು, ಬೆಂಗಳೂರಿನ ಪ್ರಸಿದ್ಧ ಎಂ. ಎಸ್. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ (MSRIT) ವ್ಯಾಸಂಗ ಮುಗಿಸಿ, ಪ್ರಸ್ತುತ ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರಿನ ಹಲಸೂರು ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹಾಗೂ ಅಪರಾಧ ತನಿಖಾ ಇಲಾಖೆಯಲ್ಲಿ (CID) ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸಿರುವ ಇವರು, ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ.


ಇಲಾಖೆಯ ಜವಾಬ್ದಾರಿಯ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ 'ಡಿಜಿಟಲ್ ಕ್ರಿಯೇಟರ್' ಆಗಿ ಸಕ್ರಿಯರಾಗಿದ್ದು, ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಪ್ರೊಫೈಲ್‌ಗಳ ಮೂಲಕ ಕನ್ನಡ ಸಾಹಿತ್ಯ, ಸ್ವಂತ ಕವನಗಳು ಹಾಗೂ ಹಿರಿಯ ಸಿನಿಮಾ ಗಣ್ಯರ ಬಗೆಗಿನ ಗೌರವದ ಬರಹಗಳನ್ನು ಹಂಚಿಕೊಳ್ಳುತ್ತಾ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.

Read More
Next Story