ಸ್ಪೀಕರ್‌ ಪೀಠ:  ಉತ್ತರ ಪ್ರದೇಶದಲ್ಲಿ ಕರ್ನಾಟಕದ ʼಕೈಸರ್‌ ಖಾನ್‌ʼ ಮಾಡಲ್‌!
x
ಸ್ಪೀಕರ್‌ ಯು.ಟಿ. ಖಾದರ್‌, ಕೈಸರ್‌ ಅಲಿಖಾನ್‌, ಯೋಗಿ ಆದಿತ್ಯನಾಥ್‌

ಸ್ಪೀಕರ್‌ ಪೀಠ: ಉತ್ತರ ಪ್ರದೇಶದಲ್ಲಿ ಕರ್ನಾಟಕದ ʼಕೈಸರ್‌ ಖಾನ್‌ʼ ಮಾಡಲ್‌!

ಮೈಸೂರಿನ ಕರಕುಶಲ ಶಿಲ್ಪಿ ಕೈಸರ್ ಅಲಿಖಾನ್ ಅವರ ಕೈಚಳಕದಲ್ಲಿಈ ಭವ್ಯ ಪೀಠ ಸಿದ್ದಪಡಿಸಲಾಗಿದೆ. ಮೂರು ದಿನದ ಹಿಂದಷ್ಟೆ ಉತ್ತರ ಪ್ರದೇಶಕ್ಕೆ ಪೀಠ ರವಾನಿಸಲಾಗಿದ್ದು, ಬುಧವಾರ ಪೀಠ ಜೋಡಣೆ ಕಾರ್ಯ ನಡೆಸಲಾಗಿದೆ.


Click the Play button to hear this message in audio format

ಉತ್ತರ ಪ್ರದೇಶ ಈಗ ʼಕರ್ನಾಟಕ ಮಾಡಲ್ʼ ಅನುಸರಿಸಲು ಸಜ್ಜಾಗಿದೆ! ಕರ್ನಾಟಕದ ವಿಧಾನಸಭಾಧ್ಯಕ್ಷರು (ಸ್ಪೀಕರ್) ಕುಳಿತುಕೊಳ್ಳುವ ಪೀಠದ ಮಾದರಿಯಲ್ಲಿಯೇ ಉತ್ತರ ಪ್ರದೇಶದ ವಿಧಾನಸಭೆಗೆ ಸ್ಪೀಕರ್‌ ಪೀಠವೂ ಸಿದ್ಧವಾಗಿದ್ದು, ಬುಧವಾರವಷ್ಟೇ ಅಳವಡಿಸಲಾಗಿದೆ.

ವಿಶೇಷವೆಂದರೆ ಕರ್ನಾಟಕ ವಿಧಾನಸಭೆಯ ಅಧ್ಯಕ್ಷೀಯ ಪೀಠದಲ್ಲಿ ಪ್ರಥಮ ಬಾರಿಗೆ ಮುಸ್ಲಿಂ ಸಮುದಾಯದ ಯು.ಟಿ. ಖಾದರ್‌ ಕುಳಿತು, ಪ್ರಜಾಸತ್ತಾತ್ಮಕ ಅಧಿಕಾರ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಅಧ್ಯಕ್ಷರ ಪೀಠದ ಮಾದರಿಯನ್ನು ಉತ್ತರಪ್ರದೇಶ ವಿಧಾನಸಭೆಗಾಗಿ ನಿರ್ಮಿಸಿದವರು ಮೈಸೂರಿನ ಕೈಸರ್‌ ಆಲಿ ಖಾನ್‌! ಇದು ಒಂದು ರೀತಿಯಲ್ಲಿ ಜಾತ್ಯತೀತ ನಿಲುವನ್ನು ಸಾರುವ ಕೆಲಸದಂತೆ ಭಾಸವಾಗಿದೆ!

ಜತೆಗೆ ಉತ್ತರ ಪ್ರದೇಶಕ್ಕೂ ಕರ್ನಾಟಕದ ಮೈಸೂರಿಗೂ ಇರುವ ನಂಟಿನ ಬಗ್ಗೆ ಆಗಾಗ ಉದಾಹರಣೆಗಳು ಘಟಿಸುತ್ತಲೇ ಇವೆ. ಈ ಹಿಂದೆ ಉತ್ತರ ಪ್ರದೇಶದಲ್ಲಿರುವ ಆಯೋಧ್ಯೆ ರಾಮಮಂದಿರಕ್ಕೆ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಬಾಲ ರಾಮನ ವಿಗ್ರಹದ ಕೆತ್ತನೆ ಕೆಲಸ ನಿರ್ವಹಿಸಿದ್ದರು. ಈಗ ಅಲ್ಲಿನ ಸ್ಪೀಕರ್ ಪೀಠಕ್ಕೂ ಮೈಸೂರಿನಿಂದಲೇ ಪೀಠ ಕಳುಹಿಸಲಾಗಿದೆ. ಇನ್ನೊಂದು ದಿನಗಳೊಗೆ ಕರ್ನಾಟಕ ಮಾಡಲ್ ನೂತನ ಪೀಠದಲ್ಲಿಉತ್ತರ ಪ್ರದೇಶದ ಸ್ಪೀಕರ್ ಸತೀಶ್ ಮಹಾನ ಅವರು ಆಸೀನರಾಗಲಿದ್ದಾರೆ.

ರಾಜ್ಯದ ಸ್ಪೀಕರ್ ಯು.ಟಿ.ಖಾದರ್ ಅವರ ಸೂಚನೆ ಮೇರಗೆ ಮೈಸೂರಿನ ಕರಕುಶಲ ಶಿಲ್ಪಿ ಕೈಸರ್ ಅಲಿಖಾನ್ ಅವರ ಕೈಚಳಕದಲ್ಲಿ ಭವ್ಯ ಪೀಠ ಸಿದ್ದಪಡಿಸಲಾಗಿದೆ. ಮೂರು ದಿನದ ಹಿಂದಷ್ಟೆ ಉತ್ತರ ಪ್ರದೇಶಕ್ಕೆ ಪೀಠ ರವಾನಿಸಿ, ಅಲ್ಲಿನ ಸ್ಪೀಕರ್‌ಗಾಗಿ ಅಳವಡಿಸಲಾಗುತ್ತಿದ್ದು, ಬುಧವಾರ ಪೀಠ ಜೋಡಣೆ ಕಾರ್ಯವನ್ನು ಖುದ್ದು ಕೈಸರ್‌ ಖಾನ್‌ ನಿರ್ವಹಿಸಿದ್ದಾರೆ.

ಮೈಸೂರಿನ ಕುಶಲಕರ್ಮಿ ಕೈಸರ್‌ ಅಲಿ ಖಾನ್‌ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಕ್ಷಣ

ಹೇಗಿದೆ ಪೀಠ…!

ಉತ್ತರ ಪ್ರದೇಶದ ಸ್ಪೀಕರ್ ಪೀಠಕ್ಕೆ ರಾಜ್ಯದ ಅರಣ್ಯ ಇಲಾಖೆಯಿಂದ ಖರೀದಿಸಿರುವ ರೋಸ್ ಹುಡ್ ಬಳಸಲಾಗಿದೆ. ಬರೊಬ್ಬರಿ ಮುರೂವರೆ ತಿಂಗಳಿನಿಂದ ಪೀಠದ ಕೆತ್ತನ ಕಾರ್ಯ ನಡೆಸಲಾಗಿದೆ. ಪೀಠದ ಎತ್ತರ ಏಳೂವರೆ ಅಡಿ ಹಾಗೂ ಅಗಲ 4 ಅಡಿಗಳಿದೆ. ಪೀಠದಲ್ಲಿ ಚರ್ಮದ ಹಾಸು ಇದ್ದು ಸೂರ್ಯ, ಚಂದ್ರ ಸೇರಿದಂತೆ ಎಲ್ಲ ರೀತಿಯ ಚಿತ್ರಣಗಳನ್ನು (ನಡವಳಿಕೆ, ನೈತಿಕ ಮೌಲ್ಯ, ಗುಣಲಕ್ಷಣ)ಗಳನ್ನು ಸೃಷ್ಟಿಸಿ ಕೆತ್ತಲಾಗಿದೆ.

ಗಮನ ಸೆಳೆದಿದ್ದ ಪೀಠ..

2025ರ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಕಾಮನ್ ವೆಲ್ತ್‌ ಸಂಸದೀಯ ಸಂಘದ (ಸಿಪಿಎ) ಭಾರತ ವಿಭಾಗದ 11ನೇ ಸಮ್ಮೇಳನದಲ್ಲಿ ಉತ್ತರ ಪ್ರದೇಶದ ಸ್ಪೀಕರ್ ಸತೀಶ್ ಮಹಾನ ಸಹ ಪಾಲ್ಗೊಂಡಿದ್ದರು. ಈ ವೇಳೆ, ರಾಜ್ಯದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕುಳಿತುಕೊಳ್ಳುವ ಪೀಠ ಹಾಗೂ ಅದರ ವಿನ್ಯಾಸವನ್ನು ನೋಡಿ ಅವರು ಆಕರ್ಷಿತರಾಗಿದ್ದರು.

ಅಲ್ಲದೇ, ಇಂತಹದ್ದೇ ಪೀಠ ತಮಗೂ ಬೇಕೆಂದಿದ್ದರು. ಕೂಡಲೇ ಯು.ಟಿ.ಖಾದರ್ ಅವರು ಮೈಸೂರಿನ ಕಲಾವಿದ ಕೈಸರ್ ಅವರನ್ನು ಸಂಪರ್ಕಿಸಿ, ಯುಪಿಗೆ ಕಳುಹಿಸಿದ್ದರು. ಅಲ್ಲಿನ ಸ್ಪೀಕರ್ ಸತೀಶ್ ಮಹಾನ ಅವರ ಸಮ್ಮುಖದಲ್ಲೇ ಚಿತ್ರ ಬಿಡಿಸಿ ಕೈಸರ್ ತೋರಿಸಿದ್ದರು. ಬಳಿಕ ಮೈಸೂರಿನಲ್ಲಿ ಪೀಠದ ಕೆತ್ತನೆ ಕಾರ್ಯ ಆರಂಭಿಸಲಾಗಿತ್ತು. ಇದೀಗ ಕರ್ನಾಟಕದ ಮಾಡೆಲ್ ನೊಂದಿಗೆ ಸಣ್ಣ - ಪುಟ್ಟ ವಿನ್ಯಾಸದ ಬದಲಾವಣೆಯೊಂದಿಗೆ ನೂತನ ಪೀಠ ಉತ್ತರ ಪ್ರದೇಶ ತಲುಪಿದೆ.

ಉತ್ತರ ಪ್ರದೇಶ ವಿಧಾನಸಭೆಯ ಸಭಾಧ್ಯಕ್ಷರ ಪೀಠದ ಚಿತ್ರ

ಕರ್ನಾಟಕದ ವಿಶೇಷತೆಗಳೇನು?

1956ರಲ್ಲಿಸಿದ್ದಪಡಿಸಿರುವ ಕರ್ನಾಟಕ ವಿಧಾನಸಭಾಧ್ಯಕ್ಷರ ಪೀಠವನ್ನು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಸೂಚನೆಯಂತೆ ಹುಣಸೂರು ಬೀಟಿಮರ ಹಾಗೂ ಶಿವಮೊಗ್ಗದ ಗುಡಿಕಾರದಿಂದ ಕೆತ್ತನೆಯಾಗಿದೆ. ಪೀಠದ ಮೇಲ್ತುದಿಯಲ್ಲಿ ಕೊಡೆ ಹಾಗೂ ರಾಷ್ಟ್ರ ಲಾಂಛನದ ಕೆತ್ತನೆಗಳಿವೆ. ಸಭಾಧ್ಯಕ್ಷರು ಕೈ ಇಟ್ಟು ಕೂರುವಲ್ಲಿ ಅರ್ಧ ಸಿಂಹ ಹಾಗೂ ಆನೆಯ ಕಲಾಕೃತಿ ಒಳಗೊಂಡಿದೆ.

ನಮಗೂ ಖುಷಿಯಾಗಿದೆ

"ಉತ್ತರಪ್ರದೇಶ ಸರ್ಕಾರವು, ಸಭಾಧ್ಯಕ್ಷರ ಪೀಠ ಸಿದ್ಧಪಡಿಸಿಕೊಡುವಂತೆ ಕೋರಿತ್ತು. ಅದರಂತೆ ಪೀಠ ಸಿದ್ಧಪಡಿಸುವ ಕಾರ್ಯ ಪೂರ್ಣಗೊಂಡಿದೆ. ಕರ್ನಾಟಕದ ಸಭಾಧ್ಯಕ್ಷರ ಪೀಠವನ್ನು ಹೋಲುವಂತೆ ಮಾಡಲು ಕೋರಿದ್ದರಿಂದ ನಮಗೂ ಖುಷಿಯಾಗಿದೆ" ಎಂದು ಮೈಸೂರು ಮೂಲದ ಕುಶಲಕರ್ಮಿ ಆರ್.ಎನ್.ಫೈನ್ ಆರ್ಟ್ಸ್‌ನ ಕೈಸರ್ ಅಲಿಖಾನ್‌ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

Read More
Next Story