ಬೆದರಿಕೆ ಕರೆಗಳಿಗೆ ಜಗ್ಗಲ್ಲ, ಆತ್ಮರಕ್ಷಣೆಗಾಗಿ ಪಿಸ್ತೂಲ್ :  ನ್ಯಾ. ಬಿ.ವೀರಪ್ಪ
x

ಬೆದರಿಕೆ ಕರೆಗಳಿಗೆ ಜಗ್ಗಲ್ಲ, ಆತ್ಮರಕ್ಷಣೆಗಾಗಿ ಪಿಸ್ತೂಲ್ : ನ್ಯಾ. ಬಿ.ವೀರಪ್ಪ

ರಾಯಚೂರಿಗೆ ಭೇಟಿ ನೀಡಿದ್ದಾಗ, ದುಷ್ಕರ್ಮಿಗಳ ಗುಂಪೊಂದು ರೌಡಿಸಂ ಮಾಡಲು ಯತ್ನಿಸಿತು. ಹೀಗಾಗಿ ಆತ್ಮರಕ್ಷಣೆಗಾಗಿ ಪಿಸ್ತೂಲ್ ಅನ್ನು ಜತೆಯಲ್ಲಿಟ್ಟುಕೊಂಡಿದ್ದೇನೆ ಎಂದು ನ್ಯಾ.ಬಿ.ವೀರಪ್ಪ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಭ್ರಷ್ಟಾಚಾರದ ಬೇರುಗಳು ಆಳವಾಗಿ ಹಬ್ಬಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ, ಕರ್ತವ್ಯದ ಹಾದಿಯಲ್ಲಿ ಎದುರಾಗುವ ಬೆದರಿಕೆಗಳಿಗೆ ತಾವು ಬಗ್ಗುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ತಮ್ಮ ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ತಾವು ಆತ್ಮರಕ್ಷಣಾ ಸಾಧನವಾಗಿ ಪಿಸ್ತೂಲ್ ಜತೆಗಿಟ್ಟುಕೊಳ್ಳುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.

ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು, ಭ್ರಷ್ಟಾಚಾರ ಎಂಬ ಪಿಡುಗಿನ ವಿರುದ್ಧ ಲೋಕಾಯುಕ್ತ ಸಂಸ್ಥೆ ನಡೆಸುತ್ತಿರುವ ಹೋರಾಟದ ಹಾದಿಯಲ್ಲಿನ ಕಠಿಣ ವಾಸ್ತವಗಳನ್ನು ತೆರೆದಿಟ್ಟರು.

ರಾಯಚೂರಿನಲ್ಲಿ ನಡೆದ ಘಟನೆ

ತಮ್ಮ ಮೇಲೆ ನಡೆದ ದೈಹಿಕ ಹಲ್ಲೆಯ ಯತ್ನ ಮತ್ತು ನಿರಂತರ ಬೆದರಿಕೆಗಳ ಕುರಿತು ಮಾತನಾಡಿದ ನ್ಯಾ. ವೀರಪ್ಪ, ಕೆಲವು ದಿನಗಳ ಹಿಂದೆ ರಾಯಚೂರಿಗೆ ಭೇಟಿ ನೀಡಿದ್ದಾಗ, ದುಷ್ಕರ್ಮಿಗಳ ಗುಂಪೊಂದು ನನ್ನ ಮೇಲೆ ರೌಡಿಸಂ ಮಾಡಲು ಯತ್ನಿಸಿತು. ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಈ ಭೀಕರ ಸನ್ನಿವೇಶದಲ್ಲಿ ನನ್ನ ಆತ್ಮರಕ್ಷಣೆಗಾಗಿ ಪಿಸ್ತೂಲ್ ಅನ್ನು ಸದಾ ಜತೆಯಲ್ಲಿಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.

ಧರ್ಮ ಸಂಸ್ಥಾಪನೆಗಾಗಿ, ದುಷ್ಟರನ್ನು ಶಿಕ್ಷಿಸಲು ಮತ್ತು ಶಿಷ್ಟರನ್ನು ರಕ್ಷಿಸಲು ಭಗವಾನ್ ವಿಷ್ಣು ಹೇಗೆ ಸುದರ್ಶನ ಚಕ್ರವನ್ನು ಧರಿಸುತ್ತಾನೋ, ಅದೇ ರೀತಿ ಭ್ರಷ್ಟರ ವಿರುದ್ಧದ ಹೋರಾಟದಲ್ಲಿ ನಾನು ಪಿಸ್ತೂಲ್ ಅನ್ನು ಆಯುಧವಾಗಿ ಇಟ್ಟುಕೊಂಡಿದ್ದೇನೆ. ಇದು ಯಾವುದೇ ಹಲ್ಲೆ ನಡೆಸಲು ಅಲ್ಲ, ಬದಲಿಗೆ ನನ್ನ ಕರ್ತವ್ಯವನ್ನು ಅಡೆತಡೆಯಿಲ್ಲದೆ ನಿರ್ವಹಿಸಲು ಅಗತ್ಯವಾದ ಆತ್ಮರಕ್ಷಣೆಯ ಸಾಧನ ಎಂದು ಸ್ಪಷ್ಟಪಡಿಸಿದರು. ಲೋಕಾಯುಕ್ತ ಸಂಸ್ಥೆ ಯಾವುದೇ ಶಿಫಾರಸ್ಸುಗಳಿಗೆ ಮಣಿಯುವುದಿಲ್ಲ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ರಾಜಿಯಿಲ್ಲ ಎಂಬುದನ್ನು ಅವರು ಪುನರುಚ್ಚರಿಸಿದರು.

ಭ್ರಷ್ಟಾಚಾರದ ಪಟ್ಟಿಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ

ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕರ್ನಾಟಕವು ಭ್ರಷ್ಟಾಚಾರದ ರಾಷ್ಟ್ರೀಯ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರದ ವಾಸನೆ ಇದೆ. ಈ ಪಿಡುಗನ್ನು ಆರಂಭದಲ್ಲೇ ಚಿವುಟಿ ಹಾಕದಿದ್ದರೆ, ಭವಿಷ್ಯದಲ್ಲಿ ನಾವು ಭೀಕರ ಅಪಾಯವನ್ನು ಎದುರಿಸಬೇಕಾಗುತ್ತದೆ. ಬ್ರಿಟಿಷರ ಆಡಳಿತಾವಧಿಯ ಸ್ಥಿತಿ ಮರುಕಳಿಸುವ ಆತಂಕ ಉಂಟಾಗಿದೆ ಎಂದು ಎಚ್ಚರಿಸಿದರು. ವಿಶ್ವದ 140 ದೇಶಗಳ ಪೈಕಿ ಭಾರತವು ಭ್ರಷ್ಟಾಚಾರದ ಸೂಚ್ಯಂಕದಲ್ಲಿ 91ನೇ ಸ್ಥಾನದಲ್ಲಿದೆ. ಇದು ದೇಶ ಮತ್ತು ರಾಜ್ಯದ ಘನತೆಗೆ ಶೋಭೆ ತರುವಂತದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

16 ಜಿಲ್ಲೆಗಳಲ್ಲಿ 1,281 ಪ್ರಕರಣಗಳ ಪತ್ತೆ

ಲೋಕಾಯುಕ್ತ ಸಂಸ್ಥೆಯ ಕಾರ್ಯವೈಖರಿಯನ್ನು ವಿವರಿಸಿದ ಅವರು, ಕೇವಲ ಮಾತಿನ ಮೂಲಕ ಮಾತ್ರವಲ್ಲ, ಕೆಲಸದ ಮೂಲಕವೂ ನಾವು ಭ್ರಷ್ಟಾಚಾರದ ಬೇರನ್ನು ಕತ್ತರಿಸುತ್ತಿದ್ದೇವೆ. ಇತ್ತೀಚೆಗೆ ರಾಜ್ಯದ 16 ಜಿಲ್ಲೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1,281 ಅಕ್ರಮ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಅನೇಕ ಕಡೆಗಳಲ್ಲಿ ಅಕ್ರಮ ಆಸ್ತಿ ಗಳಿಕೆ ಮತ್ತು ಕರ್ತವ್ಯಲೋಪದ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು ಮುಂದೆಯೂ ಈ ತನಿಖೆ ತೀವ್ರಗೊಳ್ಳಲಿದೆ ಎಂದು ತಿಳಿಸಿದರು.

ಅಧಿಕಾರ ಎಂಬುದು ‘ಪರವಾನಗಿ’ ಅಲ್ಲ

ಅಧಿಕಾರಶಾಹಿಗೆ ನೇರ ಎಚ್ಚರಿಕೆ ನೀಡಿದ ನ್ಯಾ. ವೀರಪ್ಪ, ಅಧಿಕಾರ ಸಿಕ್ಕಿದೆ ಎಂದರೆ ಭ್ರಷ್ಟಾಚಾರ ನಡೆಸಲು ಲೈಸೆನ್ಸ್ ಸಿಕ್ಕಿದೆ ಎಂದು ಭಾವಿಸುವ ಕಾಲ ಮುಗಿದಿದೆ. ಸಾರ್ವಜನಿಕ ಸೇವಕರಾದವರು ಲಂಚದ ಆಮಿಷಕ್ಕೆ ಒಳಗಾಗುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ದ್ರೋಹ. ಇಂತಹ ಯಾವುದೇ ಚಟುವಟಿಕೆಗಳನ್ನು ಲೋಕಾಯುಕ್ತ ಸಂಸ್ಥೆ ಸಹಿಸುವುದಿಲ್ಲ. ಅದೆಷ್ಟು ಪ್ರಭಾವಶಾಲಿ ವ್ಯಕ್ತಿಗಳೇ ಆಗಿದ್ದರೂ, ಕಾನೂನು ತನ್ನ ಕೆಲಸವನ್ನು ಮಾಡೇ ಮಾಡುತ್ತದೆ ಎಂದು ಎಚ್ಚರಿಸಿದರು.

Read More
Next Story