
Union Budget-2026| ಕರ್ನಾಟಕ: ಕೈಗಾರಿಕೆ, ಕೃಷಿ ಕ್ಷೇತ್ರದಲ್ಲಿ ನಿರೀಕ್ಷೆಯ ಮಹಾಪೂರ
"ಕಾಗದ ಮತ್ತು ಮುದ್ರಣ ಸೇವೆಗಳ ಮೇಲಿನ ಜಿಎಸ್‌ಟಿಯನ್ನು ಶೇ 12 ರಿಂದ 18ಕ್ಕೆ ಹೆಚ್ಚಿಸಿದ ಪರಿಣಾಮ ಪ್ರಕಾಶಕರ ಮೇಲೆ ಹೊರೆ ಬಿದ್ದಿದೆ. ಜಿಎಸ್‌ಟಿಯಲ್ಲಿನ ಈ ಅಸಮಾನತೆಯನ್ನು ಬಜೆಟ್‌ನಲ್ಲಿ ತೆಗೆದು ಹಾಕಬೇಕು.
ಫೆ.1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿರುವ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಕರ್ನಾಟಕದ ನಿರೀಕ್ಷೆಗಳು ಗರಿಗೆದರಿವೆ. ಕೃಷಿ, ನೀರಾವರಿ, ಕೈಗಾರಿಕೆ, ರೈಲ್ವೆ ಸೇರಿದಂತೆ ಹಲವು ವಲಯಗಳ ಬೇಡಿಕೆಗಳು ಮುನ್ನೆಲೆಗೆ ಬಂದಿವೆ.
ರೈತರು, ಕಾರ್ಮಿಕರು, ಕೈಗಾರಿಕಾ ಒಕ್ಕೂಟಗಳು ಈಗಾಗಲೇ ತಮ್ಮ ಬೇಡಿಕೆಗಳ ಪಟ್ಟಿಯನ್ನು ಕೇಂದ್ರದ ಮುಂದಿರಿಸಿದ್ದು, ಬಜೆಟ್‌ನಲ್ಲಿ ರಾಜ್ಯದ ಈ ಬೇಡಿಕೆಗಳಿಗೆ ಪುರಸ್ಕಾರ ಸಿಗುವುದೋ, ಇಲ್ಲವೋ ಎಂಬ ಕುತೂಹಲ ಮೂಡಿಸಿದೆ. ಕೃಷಿ ಕ್ಷೇತ್ರದ ಪ್ರಮುಖ ಬೇಡಿಕೆಯೆಂದರೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಖರೀದಿ ಕಾಯ್ದೆ ಜಾರಿಗೆ ತರುವುದಾಗಿದೆ. ಈ ಯೋಜನೆ ಜಾರಿಯಾದರೆ ಮಾರುಕಟ್ಟೆಯಲ್ಲಿ ರೈತರ ಶೋಷಣೆ ನಿಲ್ಲಲಿದೆ. ಜತೆಗೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ದೊರೆಯಲಿದೆ.
ರೈತರು ಲೇವಾದೇವಿದಾರರ ಕಪಿಮುಷ್ಠಿಯಿಂದ ಪಾರಾಗಲು ಬಡ್ಡಿರಹಿತವಾಗಿ 5 ಲಕ್ಷ ರೂ. ಕೃಷಿ ಸಾಲ ಯೋಜನೆ ಘೋಷಿಸಬೇಕೆಂಬ ಒತ್ತಾಯವೂ ರೈತ ಸಮುದಾಯದಿಂದ ಕೇಳಿ ಬಂದಿದೆ. ಕೇಂದ್ರ ಸರ್ಕಾರವು 2019 ರಿಂದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ 6 ಸಾವಿರ ರೂ. ಗಳನ್ನು ಮೂರು ಕಂತುಗಳಲ್ಲಿ ನೀಡುತ್ತಿದೆ. ಈ ಮೊತ್ತವನ್ನು 10 ಸಾವಿರಕ್ಕೆ ಏರಿಸಬೇಕೆಂಬುದು ರೈತರ ಆಗ್ರಹ.
ಇತ್ತೀಚೆಗೆ ರಾಜ್ಯ ಹಾಗೂ ಕೇಂದ್ರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ಕಬ್ಬಿನ ಎಫ್‌ಆರ್‌ಪಿ ಬೆಲೆ ಕುರಿತಂತೆಯೂ ಪ್ರಮುಖ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ. ಎಫ್‌ಆರ್‌ಪಿ ದರ ಪರಿಷ್ಕರಣೆ ಜತೆಗೆ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಬೇಕು. ಇದರಿಂದ ರೈತರಿಗೆ ಸಾಗಣೆ ವೆಚ್ಚ ಕಡಿಮೆಯಾಗಲಿದೆ.
ಅತಿವೃಷ್ಟಿ ಮತ್ತು ಬೆಳೆ ಹಾನಿ ಸಂದರ್ಭದಲ್ಲಿ ಪಾಲಿಸುವ ಎನ್‌ಡಿಆರ್‌ಎಫ್ ಮಾನದಂಡಗಳನ್ನು ಬದಲಿಸಬೇಕು. ರೈತರಿಗೆ ವೈಜ್ಞಾನಿಕವಾಗಿ ಹೆಚ್ಚಿನ ಪರಿಹಾರ ನೀಡಬೇಕು. ಕೃಷಿ ಭೂಮಿಯ ಮೌಲ್ಯದ ಆಧಾರದ ಮೇಲೆ ಸಾಲ ನೀಡಬೇಕು ಎಂದು ಆಗ್ರಹಿಸಲಾಗಿದೆ.
"ಸಾಲ ವಸೂಲಾತಿಗಾಗಿ ರೈತರ ಜಮೀನು ಮುಟ್ಟುಗೋಲು ಹಾಕಿ ಹರಾಜು ಹಾಕುವ ಸರ್ಪೈಸಿ ಕಾಯ್ದೆಯನ್ನು ರದ್ದುಗೊಳಿಸಿ ಅನ್ನದಾತನಿಗೆ ನೆಮ್ಮದಿ ನೀಡಬೇಕು. ರೈತರ ಎಲ್ಲ ಬೇಡಿಕೆಗಳ ಪಟ್ಟಿಯಲ್ಲಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವೆಲ್ಲಾ ಘೋಷಣೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು" ಎಂದು ರಾಜ್ಯ ರೈತ ಸಂಘಟನೆಗಳ ಅಧ್ಯಕ್ಷ ಕುರುಬೂರು ಶಾಂತಕುಮಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ನ್ಯಾಯಸಮ್ಮತ ತೆರಿಗೆ ಹಂಚಿಕೆಗೆ ಆಗ್ರಹ
ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಆದರೆ, ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರವು ಸರಿಯಾದ ತೆರಿಗೆಯ ಪಾಲು ನೀಡುತ್ತಿಲ್ಲ. ಇದರಿಂದ ರಾಜ್ಯದ ಯೋಜನೆಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಈ ಬಾರಿಯಾದರೂ ಸೂಕ್ತ ಅನುದಾನ ಹಂಚಿಕೆ ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಆಗ್ರಹವಾಗಿದೆ.
15ನೇ ಹಣಕಾಸು ಆಯೋಗ ಸೂಕ್ತ ಶಿಫಾರಸು ಮಾಡಿದ್ದರೂ ತನ್ನ ಪಾಲಿನ ಅನುದಾನ ನೀಡಿರಲಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲು ಹೆಚ್ಚಿಸುವ ಮೂಲಕ ಆರ್ಥಿಕ ಹೊರೆ ಹೇರಲಾಗುತ್ತಿದೆ. ಕರ್ನಾಟಕದಲ್ಲಿ ಹಣಕಾಸು ಸಮಸ್ಯೆಯಿಂದ ಪ್ರಮುಖ ಏಳು ರೈಲ್ವೆ ಯೋಜನೆಗಳು ನನೆಗುದಿಗೆ ಬಿದ್ದಿವೆ.
ದಶಕಗಳಿಂದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹಸಿರು ನಿಶಾನೆ ಸಿಕ್ಕಿಲ್ಲ. ಸುಮಾರು 17,146 ಕೋಟಿ ರೂ. ವೆಚ್ಚದ ಪರಿಷ್ಕೃತ ಯೋಜನಾ ವರದಿಗೆ ಈ ಬಾರಿಯಾದರೂ ಬಜೆಟ್‌ನಲ್ಲಿ ಅನುಮೋದನೆ ಸಿಗಲಿದೆಯೇ ಎಂಬ ನಿರೀಕ್ಷೆ ಉತ್ತರ ಕರ್ನಾಟಕದ ಜನರಲ್ಲಿದೆ.
ಇನ್ನು ಶಿವಮೊಗ್ಗ-ರಾಣೆಬೆನ್ನೂರು, ಧಾರವಾಡ-ಬೆಳಗಾವಿ, ಹಾಸನ-ಬೇಲೂರು, ಕುಡಚಿ-ಬಾಗಲಕೋಟೆ, ತುಮಕೂರು-ದಾವಣಗೆರೆ, ಗಿಣಿಗೇರಾ-ರಾಯಚೂರು, ವೈಟ್‌ಫೀಲ್ಡ್-ಕೋಲಾರ ರೈಲ್ವೆ ಮಾರ್ಗದ ಯೋಜನೆಗಳು ಹಣಕಾಸಿನ ಸಮಸ್ಯೆಯಿಂದ ಕುಂಠಿತವಾಗಿವೆ. ಈ ಯೋಜನೆಗಳಿಗೆ ಹಣಕಾಸು ಸೌಲಭ್ಯ ದೊರೆತರೆ ಕಾಮಗಾರಿಗಳು ತ್ವರಿತವಾಗಿ ಮುಗಿಯಲಿವೆ ಎನ್ನಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನದ ನಿರೀಕ್ಷೆ
2023-24 ರಲ್ಲಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಿಸಿದ್ದರೂ ಅನುದಾನ ಬಿಡುಗಡೆ ಮಾಡಿರಲಿಲ್ಲ. ಅಲ್ಲದೇ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂಬ ರಾಜ್ಯದ ಬೇಡಿಕೆ ಪರಿಗಣಿಸಿರಲಿಲ್ಲ. ಇದರಿಂದ ಯೋಜನೆ ಕುಂಟುತ್ತಾ ಸಾಗಿದ್ದು, ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಗಗನ ಕುಸುಮವಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ 2000 ನೇ ಸಾಲಿನಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ಸೂಕ್ತ ಅನುದಾನದ ಸಮಸ್ಯೆಯಿಂದ ಇಂದಿಗೂ ಯೋಜನೆ ಪೂರ್ಣವಾಗಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರೆ ಶೇ 60 ರಿಂದ 90 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಬೇಕಾಗಿದೆ. ಆಗ ತ್ವರಿತವಾಗಿ ಯೋಜನೆ ಪೂರ್ಣಗೊಳಿಸಬಹುದು ಎಂಬುದು ರಾಜ್ಯದ ವಾದವಾಗಿದೆ.
ಸಣ್ಣ ಕೈಗಾರಿಕೆಗಳಿಗೆ ಬೇಕಿದೆ ಉತ್ತೇಜನ
ರಾಜ್ಯದ ಬಹುತೇಕ ಸಣ್ಣ ಕೈಗಾರಿಕೆಗಳು ಅಮೆರಿಕಾಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದವು. ಆದರೆ, ಸುಂಕ ಹೇರಿಕೆ ನಂತರ ರಫ್ತು ನಿಂತು ಹೋಗಿತ್ತು. ಯುರೋಪಿಯನ್ ಒಕ್ಕೂಟದೊಂದಿಗೆ ಕೇಂದ್ರವು ಒಪ್ಪಂದ ಮಾಡಿಕೊಂಡಿದ್ದರಿಂದ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
"ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯವರ್ಧಿತವಾಗುತ್ತಿದೆ. ರೂಪಾಯಿ ಅಪಮೌಲ್ಯ ತಡೆಯಲು ಡಾಲರ್ ಬೆಲೆಯನ್ನು ಮರು ಮೌಲ್ಯಮಾಪನ ಮಾಡಬೇಕು. ಇಲ್ಲವಾದಲ್ಲಿ ರಫ್ತು ಕಷ್ಟವಾಗಲಿದೆ" ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ ಕೆ. ಜನಾರ್ದನ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಕಾಗದ ಮತ್ತು ಮುದ್ರಣ ಸೇವೆಗಳ ಮೇಲಿನ ಜಿಎಸ್‌ಟಿಯನ್ನು ಶೇ 12 ರಿಂದ 18ಕ್ಕೆ ಹೆಚ್ಚಿಸಿದ ಪರಿಣಾಮ ಪ್ರಕಾಶಕರ ಮೇಲೆ ಹೊರೆ ಬಿದ್ದಿದೆ. ಕಚ್ಚಾ ವಸ್ತುಗಳಿಗೆ ಪಾವತಿಸಿದ ತೆರಿಗೆಯನ್ನು ಮರುಪಡೆಯಲು ಸಾಧ್ಯವಾಗದೆ ಪ್ರಕಾಶಕರು ಸಮಸ್ಯೆ ಎದುರಿಸುತ್ತಿದ್ದಾರೆ. ಜಿಎಸ್‌ಟಿಯಲ್ಲಿನ ಈ ಅಸಮಾನತೆಯನ್ನು ಬಜೆಟ್‌ನಲ್ಲಿ ತೆಗೆದು ಹಾಕಬೇಕು. ಸಾಮಾನ್ಯ ಕಾಗದವನ್ನು ಶೇ 5 ರ ಜಿಎಸ್‌ಟಿ ಸ್ಲ್ಯಾಬ್‌ಗೆ ತರಬೇಕು" ಎಂದು ಒತ್ತಾಯಿಸಿದರು.
ಲಕ್ಷಾಂತರ ಕಾರ್ಮಿಕರಿಗೆ ಸಮಸ್ಯೆ
"ಮುದ್ರಣ ಹಾಗೂ ಪ್ರಿಂಟಿಂಗ್ ಪ್ರೆಸ್‌ಗಳ ಮೇಲೆ ಅಧಿಕ ಜಿಎಸ್‌ಟಿ ಏರಿಕೆಯಿಂದ ಸಣ್ಣ ಪುಟ್ಟ ಉದ್ಯಮಿಗಳು ಸೊರಗುವಂತಾಗಿದೆ. ಕರ್ನಾಟಕದಲ್ಲಿ ಸುಮಾರು 15 ಸಾವಿರ ಪ್ರಿಂಟಿಂಗ್ ಪ್ರೆಸ್‌ಗಳಿವೆ. 12 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಂದು ಕೋಟಿ ಜನರಿಗೆ ಪ್ರಿಂಟಿಂಗ್ ಪ್ರೆಸ್‌ಗಳು ನೆರವಾಗುತ್ತಿವೆ. ಹಾಗಾಗಿ ಜಿಎಸ್‌ಟಿ ಪ್ರಮಾಣವನ್ನು ಇಳಿಸಬೇಕು" ಎಂದು ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಜನಾರ್ದನ ಆಗ್ರಹಿಸಿದರು.

