
Union Budget-2026| ರೈತರ ಆದಾಯ ದ್ವಿಗುಣಕ್ಕೆ ದಿಟ್ಟ ಹೆಜ್ಜೆ; ತೆಂಗು ಉತ್ತೇಜನ ಯೋಜನೆ ಘೋಷಣೆ
ಕರ್ನಾಟಕದಲ್ಲಿ ತುಮಕೂರು, ದಕ್ಷಿಣ ಕನ್ನಡ, ಮಂಡ್ಯ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ. ಕೇಂದ್ರದ ಈ ಉಪಕ್ರಮದಿಂದ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈತರ ಆದಾಯ ದ್ವಿಗುಣಗೊಳಿಸುವತ್ತ ಮಹತ್ವದ ಘೋಷಣೆಗಳೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ಮೂಲಕ ಮೀನುಗಾರರ ಆದಾಯ ದ್ವಿಗುಣಗೊಳಿಸಲು ಯೋಜಿಸಲಾಗಿದೆ. ಮೀನು ಉತ್ಪಾದಕ ಸಂಸ್ಥೆಗಳು ನವೋದ್ಯಮ ಮತ್ತು ಮಹಿಳಾ ನೇತೃತ್ವದ ಗುಂಪುಗಳನ್ನು ರಚಿಸಿಕೊಂಡು ಮಾರುಕಟ್ಟೆ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಉದ್ದೇಶಿಸಿದ್ದಾರೆ. ಕರಾವಳಿಯಲ್ಲಿ 500 ಜಲಾಶಯ ಹಾಗೂ ಅಮೃತ ಸರೋವರಗಳನ್ನು ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಹಾಗೂ ಮಾರುಕಟ್ಟೆ ಸಂಪರ್ಕ ಹೊಂದಿರುವಂತೆ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ.
ಪಶುಸಂಗೋಪನಾ ವಲಯದಲ್ಲಿ ಉದ್ಯಮಶೀಲತೆ ಅಭಿವೃದ್ಧಿಪಡಿಸಲು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಕಾರ್ಯಕ್ರಮ, ಜಾನುವಾರು ಉದ್ಯಮಗಳ ವಿಸ್ತರಣೆ ಮತ್ತು ಆಧುನೀಕರಣ, ಜಾನುವಾರು, ಡೈರಿ ಮತ್ತು ಕೋಳಿ ಕೇಂದ್ರಿತ ಸಮಗ್ರ ಮೌಲ್ಯ ಸರಪಳಿಗಳ ಸೃಷ್ಟಿ ಹಾಗೂ ಜಾನುವಾರು ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆಗೆ ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ.
ತೆಂಗು ಉತ್ತೇಜನ ಯೋಜನೆ ಪ್ರಸ್ತಾಪ
ಭಾರತವು ವಿಶ್ವದ ಅತಿದೊಡ್ಡ ತೆಂಗಿನಕಾಯಿ ಉತ್ಪಾದಕ ರಾಷ್ಟ್ರವಾಗಿದೆ. ಸುಮಾರು 10 ಮಿಲಿಯನ್ ರೈತರು, 30 ಮಿಲಿಯನ್ ಜನರು ಜೀವನೋಪಾಯಕ್ಕಾಗಿ ತೆಂಗಿನಕಾಯಿ ಅವಲಂಬಿಸಿದ್ದಾರೆ. ತೆಂಗಿನಕಾಯಿ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆ, ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ತೆಂಗಿನಕಾಯಿ ಉತ್ತೇಜನ ಯೋಜನೆ ಪ್ರಸ್ತಾಪಿಸಲಾಗಿದೆ.
ಪ್ರಮುಖ ತೆಂಗು ಬೆಳೆಯುವ ರಾಜ್ಯಗಳಲ್ಲಿ ಹಳೆಯ ಮತ್ತು ಉತ್ಪಾದಕವಲ್ಲದ ಮರಗಳನ್ನು ಬದಲಾಯಿಸಿ ಹೊಸ ಸಸಿಗಳನ್ನು ನೆಡುವುದು ಯೋಜನೆಯ ಭಾಗವಾಗಿದೆ.
ಕೇಂದ್ರ ಸರ್ಕಾರದ ಈ ಉಪಕ್ರಮದಿಂದ ಕರ್ನಾಟಕ ಬಹುಪಾಲು ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ತುಮಕೂರು, ದಕ್ಷಿಣ ಕನ್ನಡ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ. ಬಜೆಟ್‌ನಲ್ಲಿ ತೆಂಗು ಉತ್ತೇಜನಾ ಯೋಜನೆ ಘೋಷಿಸುವುದರಿಂದ ಬೆಳೆಗಾರರಿಗೆ ಸಹಾಯಧನ, ಇನ್ನಿತರ ಸೌಲಭ್ಯಗಳು ಸಿಗುವ ನಿರೀಕ್ಷೆ ಇದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ತೆಂಗಿಗೆ ನುಸಿಪೀಡೆ ಹಾಗೂ ಬಿಳಿ ಹುಳದ ಕಾಯಿಲೆ ಕಾಡುತ್ತಿದೆ. ರೋಗ ನಿಯಂತ್ರಣಕ್ಕೂ ಸರ್ಕಾರ ನೀತಿ ವರವಾಗಲಿದೆ ಎನ್ನಲಾಗಿದೆ.
ಕೃಷಿ ಉತ್ಪನ್ನಗಳ ವೈವಿಧ್ಯತೆ ಹೆಚ್ಚಿಸಲು ತೀರ್ಮಾನ
ಉತ್ಪಾದಕತೆ, ರೈತರ ಆದಾಯ ಹೆಚ್ಚಳ ಮತ್ತು ಹೊಸ ಉದ್ಯೋಗಾವಕಾಶ ಸೃಷ್ಟಿಗೆ ಹೆಚ್ಚು ಬೆಂಬಲ ನೀಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ತೆಂಗಿನಕಾಯಿ, ಶ್ರೀಗಂಧ, ಕೋಕೋ ಮತ್ತು ಗೋಡಂಬಿ ಬೆಳೆಗಳಿಗೆ ಹೆಚ್ಚಿನ ಮೌಲ್ಯ ಒದಗಿಸಲು ತೀರ್ಮಾನಿಸಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಅಗರ್ ಮರಗಳು, ಬಾದಾಮಿ, ವಾಲ್ನಟ್ ಮತ್ತು ಪೈನ್ ಬೀಜಗಳ ಉತ್ಪಾದನೆಗೂ ಒತ್ತು ನೀಡಲಾಗಿದೆ.
2030 ರ ವೇಳೆಗೆ ಕಚ್ಚಾ ಗೋಡಂಬಿ, ಕೋಕೋ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು, ರಫ್ತು ಸ್ಪರ್ಧಾತ್ಮಕತೆ ಹೆಚ್ಚಿಸಲು ಮತ್ತು ಭಾರತೀಯ ಗೋಡಂಬಿ, ಭಾರತೀಯ ಕೋಕೋವನ್ನು ಪ್ರೀಮಿಯಂ ಜಾಗತಿಕ ಬ್ರ್ಯಾಂಡ್‌ಗಳನ್ನಾಗಿ ಪರಿವರ್ತಿಸಲು ಪ್ರತ್ಯೇಕ ಕಾರ್ಯಕ್ರಮ ಪ್ರಸ್ತಾಪಿಸಲಾಗಿದೆ.
ಶ್ರೀಗಂಧವು ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಭಾರತೀಯ ಶ್ರೀಗಂಧದ ಪರಿಸರ ವ್ಯವಸ್ಥೆಯ ವೈಭವವನ್ನು ಪುನಃಸ್ಥಾಪಿಸಲು ಕೇಂದ್ರೀಕೃತ ಕೃಷಿ ಮತ್ತು ಕೊಯ್ಲೋತ್ತರದ ಸಂಸ್ಕರಣೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಿರ್ಧರಿಸಿದೆ.
ಹಳೆಯ, ಕಡಿಮೆ ಇಳುವರಿ ನೀಡುವ ತೋಟಗಳನ್ನು ಪುನರುಜ್ಜೀವನಗೊಳಿಸಲು ಮತ್ತು ವಾಲ್ನಟ್, ಬಾದಾಮಿ ಮತ್ತು ಪೈನ್ ಬೀಜಗಳ ಹೆಚ್ಚಿನ ಸಾಂದ್ರತೆಯ ಕೃಷಿ ವಿಸ್ತರಿಸಿ ರೈತರ ಆದಾಯ ಹೆಚ್ಚಿಸಲು ಕಾರ್ಯಕ್ರಮ ರೂಪಿಸಲಾಗುವುದು.
ಕೃಷಿಯಲ್ಲಿ ಎಐ ತಂತ್ರಜ್ಞಾನಕ್ಕೆ ಒತ್ತು
ಕೃಷಿಯಲ್ಲಿ ಕೃತಕ ಬುದ್ದಿಮತ್ತೆ ಬಳಸಲು ಅನುವಾಗುವಂತೆ ಭಾರತ್-ವಿಸ್ತಾರ್ ಯೋಜನೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಅಗ್ರಿಸ್ಟ್ಯಾಕ್ ಪೋರ್ಟಲ್, ಕೃಷಿ ಪದ್ಧತಿಗಳ ಕುರಿತಾದ ಐಸಿಎಆರ್ ಪ್ಯಾಕೇಜ್ ಅನ್ನು ಕೃತಕ ಬುದ್ದಿಮತ್ತೆ ವ್ಯವಸ್ಥೆಗಳೊಂದಿಗೆ ಸಂಯೋಜಿಸಲು ಉದ್ದೇಶಿಸಲಾಗಿದೆ. ಇದರಿಂದ ಕೃಷಿ ಉತ್ಪಾದಕತೆ ಹೆಚ್ಚಲಿದೆ. ರೈತರು ಉತ್ತಮ ನಿರ್ಧಾರ ಕೈಗೊಳ್ಳಲು ನೆರವಾಗಲಿದೆ. ಕಸ್ಟಮೈಸ್ ಮಾಡಿದ ಸಲಹಾ ಬೆಂಬಲ ಒದಗಿಸುವ ಮೂಲಕ ಅಪಾಯ ಕಡಿಮೆ ಮಾಡಲು ಉದ್ದೇಶಿಸಲಾಗಿದೆ.

