ವಿಕಲಚೇತನರ ಸಬಲೀಕರಣದಲ್ಲಿ ರಾಜ್ಯದ ಸಾಧನೆ; ವಿಶ್ವಸಂಸ್ಥೆಯ ಹೆಬಾ ಹಗ್ರಾಸ್ ಮೆಚ್ಚುಗೆ
x

ವಿಕಲಚೇತನರ ಸಬಲೀಕರಣದಲ್ಲಿ ರಾಜ್ಯದ ಸಾಧನೆ; ವಿಶ್ವಸಂಸ್ಥೆಯ ಹೆಬಾ ಹಗ್ರಾಸ್ ಮೆಚ್ಚುಗೆ

ರಾಜ್ಯ ಸರ್ಕಾರದ ಕಾರ್ಯವೈಖರಿ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯವನ್ನು ವಿಶ್ವಸಂಸ್ಥೆಯ ವಿಕಲಚೇತನರ ಹಕ್ಕುಗಳ ವಿಶೇಷ ವರದಿಗಾರರಾದ ಹೆಬಾ ಹಗ್ರಾಸ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


Click the Play button to hear this message in audio format

ವಿಕಲಚೇತನರ ಹಕ್ಕುಗಳ ರಕ್ಷಣೆ ಮತ್ತು ಅವರ ಸಮಗ್ರ ಸಬಲೀಕರಣಕ್ಕಾಗಿ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ವಿನೂತನ ಯೋಜನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ರಾಜ್ಯ ಸರ್ಕಾರದ ಕಾರ್ಯವೈಖರಿ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯವನ್ನು ವಿಶ್ವಸಂಸ್ಥೆಯ ವಿಕಲಚೇತನರ ಹಕ್ಕುಗಳ ವಿಶೇಷ ವರದಿಗಾರರಾದ ಹೆಬಾ ಹಗ್ರಾಸ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಮನ್ವಯದಲ್ಲಿ ಭಾರತ ಪ್ರವಾಸ ಕೈಗೊಂಡಿರುವ ಹೆಬಾ ಹಗ್ರಾಸ್ ಅವರು, ಬೆಂಗಳೂರಿಗೆ ಭೇಟಿ ನೀಡಿದರು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್ ನೇತೃತ್ವದ ಉನ್ನತ ಅಧಿಕಾರಿಗಳ ತಂಡವು ರಾಜ್ಯದ ಸಾಧನೆಗಳ ವಿಸ್ತೃತ ವರದಿಯನ್ನು ಪ್ರಸ್ತುತಪಡಿಸಿತು. ಉದ್ಯೋಗ, ವಸತಿ, ಡಿಜಿಟಲ್ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ರಾಜ್ಯವು ಸಾಧಿಸಿರುವ ಪ್ರಗತಿಯನ್ನು ಸಭೆಯಲ್ಲಿ ಎಳೆಎಳೆಯಾಗಿ ವಿವರಿಸಲಾಯಿತು.

ಸರ್ಕಾರಿ ಉದ್ಯೋಗ ಮತ್ತು ವಸತಿ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ಕಲ್ಪಿಸಿರುವ ಮೀಸಲಾತಿ ಸೌಲಭ್ಯಗಳನ್ನು ಸಭೆಯಲ್ಲಿ ವಿವರಿಸಲಾಯಿತು. ಸರ್ಕಾರಿ ಉದ್ಯೋಗಗಳಲ್ಲಿ ಗ್ರೂಪ್ 'ಎ' ಮತ್ತು 'ಬಿ' ಹುದ್ದೆಗಳಿಗೆ ಶೇ. 4 ಹಾಗೂ ಗ್ರೂಪ್ 'ಸಿ' ಮತ್ತು 'ಡಿ' ಹುದ್ದೆಗಳಿಗೆ ಶೇ. 5ರಷ್ಟು ಮೀಸಲಾತಿ ನೀಡಲಾಗಿದ್ದು, ಸದ್ಯ 11,120 ವಿಕಲಚೇತನರು ಸರ್ಕಾರಿ ಸೇವೆಯಲ್ಲಿದ್ದಾರೆ. ಅಲ್ಲದೆ, ಬಿಡಿಎ ಮತ್ತು ಸರ್ಕಾರಿ ನಿವೇಶನ ಹಂಚಿಕೆಯಲ್ಲಿ ಶೇ. 5ರಷ್ಟು ಮೀಸಲಾತಿಯೊಂದಿಗೆ ದರದಲ್ಲಿ ಶೇ. 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಸೌಲಭ್ಯಗಳು ವಿಕಲಚೇತನರ ಆರ್ಥಿಕ ಹಾಗೂ ವಸತಿ ಸ್ವಾವಲಂಬನೆಗೆ ಪೂರಕವಾಗಿವೆ. ಇದೇ ವೇಳೆ, ವಿಶೇಷ ಅಗತ್ಯವುಳ್ಳ 172 ಮಕ್ಕಳನ್ನು ದತ್ತು ನೀಡುವ ಮೂಲಕ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಪೈಕಿ 137 ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದತ್ತು ಸ್ವೀಕಾರವಾಗಿರುವುದು ವಿಶೇಷ ಸಾಧನೆಯಾಗಿದೆ.

ತಂತ್ರಜ್ಞಾನ ಸ್ನೇಹಿ ಗ್ರಾಮೀಣ ಗ್ರಂಥಾಲಯ ಮತ್ತು ಸಾಮಾಜಿಕ ಭದ್ರತೆ

ಗ್ರಾಮೀಣ ಭಾಗದ ವಿಕಲಚೇತನರಿಗೂ ಡಿಜಿಟಲ್ ಸೌಲಭ್ಯ ಕಲ್ಪಿಸಲು ರಾಜ್ಯದ 5,888 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲ್ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ದೃಷ್ಟಿಹೀನರಿಗಾಗಿ 350 ಕೇಂದ್ರಗಳಲ್ಲಿ 'ಅಲೆಕ್ಸಾ' ಧ್ವನಿ ಸಹಾಯಕ ವ್ಯವಸ್ಥೆ ಹಾಗೂ 800 ಕೇಂದ್ರಗಳಲ್ಲಿ ಬೀಕನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಸಾಮಾಜಿಕ ಭದ್ರತೆ ಮತ್ತು ಆರೈಕೆ ಕ್ಷೇತ್ರದ ಪ್ರಗತಿಯನ್ನು ತೆರೆದಿಟ್ಟ ಅಧಿಕಾರಿಗಳು, ರಾಜ್ಯದಲ್ಲಿ 9.77 ಲಕ್ಷಕ್ಕೂ ಹೆಚ್ಚು ಮಂದಿಗೆ ಯುಡಿಐಡಿ ಕಾರ್ಡ್ ವಿತರಿಸಲಾಗಿದೆ ಎಂದು ತಿಳಿಸಿದರು. 5 ಲಕ್ಷಕ್ಕೂ ಹೆಚ್ಚು ವಿಕಲಚೇತನರಿಗೆ ಮಾಸಿಕ ರೂ. 1,400 ಹಾಗೂ ತೀವ್ರ ಬೌದ್ಧಿಕ ವಿಕಲಚೇತನರಿಗೆ ಮಾಸಿಕ ರೂ. 2,000 ಪಿಂಚಣಿ ನೀಡಲಾಗುತ್ತಿದೆ. ಜೊತೆಗೆ 10,835 ಆರೈಕೆದಾರರಿಗೆ ಮಾಸಿಕ ಭತ್ಯೆ, 1,620 ಅಂಧ ತಾಯಂದಿರಿಗೆ ಶಿಶುಪಾಲನಾ ಭತ್ಯೆ ಹಾಗೂ 11 ಲಕ್ಷಕ್ಕೂ ಹೆಚ್ಚು ವಿಕಲಚೇತನರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಿರುವುದಾಗಿ ವಿವರಿಸಲಾಯಿತು.

ಆರೋಗ್ಯ, ಶಿಕ್ಷಣ, ವಿಪತ್ತು ನಿರ್ವಹಣೆ ಹಾಗೂ ಪ್ರಮುಖ ಸಂಸ್ಥೆಗಳ ಸೇವೆ

ಆರೋಗ್ಯ ಮತ್ತು ಪುನರ್ವಸತಿ ವಿಭಾಗದಲ್ಲಿ, ರಾಜ್ಯದ 18 ಜಿಲ್ಲಾ ಆರಂಭಿಕ ಹಸ್ತಕ್ಷೇಪ ಕೇಂದ್ರಗಳ ಮೂಲಕ 20,601 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, 18 ಪುನರ್ವಸತಿ ಕೇಂದ್ರಗಳಿಂದ 2.77 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯೋಜನ ಪಡೆದಿದ್ದಾರೆ. ಮಾನಸಿಕ ಆರೋಗ್ಯಕ್ಕಾಗಿ 'ಟೆಲಿ-ಮಾನಸ್' ಸಹಾಯವಾಣಿ (14416) ಮೂಲಕ 1.2 ಲಕ್ಷ ಕರೆಗಳಿಗೆ ಸ್ಪಂದಿಸಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರು ತಮ್ಮ ಸಂಸ್ಥೆಗಳ ಮೂಲಕ ನೀಡಲಾಗುತ್ತಿರುವ ವಿಶೇಷ ಸೇವೆಗಳು ಮತ್ತು ಸಂಶೋಧನೆಗಳ ಕುರಿತು ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಶಿಕ್ಷಣ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ, ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿಕಲಚೇತನ ವಿದ್ಯಾರ್ಥಿನಿಯರಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಅಲ್ಲದೆ, ಪ್ರವಾಹ ಮತ್ತು ಭೂಕುಸಿತ ಪೀಡಿತ ಗ್ರಾಮಗಳಲ್ಲಿ ವಿಕಲಚೇತನರ ಮ್ಯಾಪಿಂಗ್ ಮಾಡಿ, ಆಶ್ರಯ ಕೇಂದ್ರಗಳಲ್ಲಿ ಮುಂಚಿತವಾಗಿಯೇ ರಾಂಪ್ ಹಾಗೂ ವಿಶೇಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಲಾಯಿತು.

ಸಭೆಯಲ್ಲಿ ಕೇವಲ ಸಾಧನೆಗಳನ್ನು ಮಾತ್ರವಲ್ಲದೆ, ಅನುಷ್ಠಾನದಲ್ಲಿರುವ ಸವಾಲುಗಳನ್ನೂ ಅಧಿಕಾರಿಗಳು ಪ್ರಾಮಾಣಿಕವಾಗಿ ತೆರೆದಿಟ್ಟರು. ಬಾಕಿ ಇರುವ 13 ಜಿಲ್ಲೆಗಳಲ್ಲಿ ಆರಂಭಿಕ ಹಸ್ತಕ್ಷೇಪ ಕೇಂದ್ರಗಳು ಮತ್ತು ಪುನರ್ವಸತಿ ಕೇಂದ್ರಗಳನ್ನು ಶೀಘ್ರ ಪ್ರಾರಂಭಿಸುವುದು ಹಾಗೂ ವಿಶೇಷ ಶಾಲೆಗಳನ್ನು ಉಪಗ್ರಹ ಸಂಪನ್ಮೂಲ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸುವುದು ಸೇರಿದಂತೆ 'ಆರು ಅಂಶಗಳ ಕ್ರಿಯಾ ಯೋಜನೆ'ಯನ್ನು ರೂಪಿಸಲಾಗಿದೆ ಎಂದು ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು.

Read More
Next Story