ನೀರಾನೆ ತುಳಿದು ವೈದ್ಯೆ ಸಮೀಕ್ಷಾ ಸಾವು: ಗೊಂದಲದ ಹೇಳಿಕೆ ನೀಡಿದ ವೈದ್ಯರು! ಹಲವರ ಅಸಮಾಧಾನ
x
ಪ್ರಾಣಿ ಪ್ರೇಮಿ ಸಮೀಕ್ಷಾ ರೆಡ್ಡಿ. (ಚಿತ್ರ ಕೃಪೆ- ಸಚಿವ ರಾಮಲಿಂಗಾರೆಡ್ಡಿ ಎಕ್ಸ್ ಪೋಸ್ಟ್​​)

ನೀರಾನೆ ತುಳಿದು ವೈದ್ಯೆ ಸಮೀಕ್ಷಾ ಸಾವು: 'ಗೊಂದಲ'ದ ಹೇಳಿಕೆ ನೀಡಿದ ವೈದ್ಯರು! ಹಲವರ ಅಸಮಾಧಾನ

ಡಾ. ಮುರುಳಿ ಅವರು ಪ್ರಸ್ತಾಪಿಸಿರುವ ಆಂತರಿಕ ಕಚ್ಚಾಟಗಳೇ ಈ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆಗಳಿದ್ದು, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ತನಿಖೆಯಿಂದ ಉತ್ತರ ಸಿಗಲಿದೆ.


Click the Play button to hear this message in audio format

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ನೀರಾನೆಯ ದಾಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿರುವ ಘಟನೆಯು ಇದೀಗ ತೀವ್ರ ಸ್ವರೂಪದ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ದುರಂತದ ಬೆನ್ನಲ್ಲೇ ಪ್ರಾಣಿಧಾಮದ ಹಿರಿಯ ಪಶುವೈದ್ಯ ಡಾ. ಮುರುಳಿ ಮನೋಹರ್ ಅವರು ನೀಡಿರುವ ಹೇಳಿಕೆಗಳು, ಅಲ್ಲಿನ ಆಡಳಿತ ವ್ಯವಸ್ಥೆ, ಸಿಬ್ಬಂದಿ ನಡುವಿನ ಸಂವಹನದ ಕೊರತೆ ಹಾಗೂ ಆಂತರಿಕ ರಾಜಕೀಯದ ಕಡೆಗೆ ಬೊಟ್ಟು ಮಾಡುತ್ತಿವೆ.

ಕೇವಲ ಕರ್ತವ್ಯಲೋಪವಷ್ಟೇ ಅಲ್ಲದೆ, ಪ್ರಾಣಿಧಾಮದ ಒಳಗಿನ ಸಂವಹನದ ಕೊರತೆಯು ಯುವ ವೈದ್ಯೆಯ ಜೀವ ಬಲಿ ಪಡೆದವೇ ಎಂಬ ಗಂಭೀರ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ. ವೈದ್ಯರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯೂ ಇದೀಗ ವೈರಲ್ ಆಗಿದ್ದು, ಘಟನೆಯ ಹಿಂದೆ ಇನ್ನೇನಾದರೂ ಬಲವಾದ ಕಾರಣಗಳಿವೆಯೇ ಎಂಬ ಅನುಮಾನಗಳು ವ್ಯಕ್ತಗೊಂಡಿವೆ.

ಕಾರ್ಯನಿರ್ವಾಹಕ ನಿರ್ದೇಶಕ (ED) ವಿ.ಎಂ. ಅಮರಾಕ್ಷರ್ ಹಾಗೂ ವೈದ್ಯ ಡಾ. ಮುರುಳಿ ಮನೋಹರ್.

ವೈದ್ಯರು ಹೇಳುವುದೇನು?

ತ್ಯಾವರೆಕೊಪ್ಪ ಪ್ರಾಣಿಧಾಮದಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಡಾ. ಮುರುಳಿ ಮನೋಹರ್ ಅವರು, ಅಲ್ಲಿನ ಸಿಬ್ಬಂದಿಯೊಂದಿಗಿನ ಭಿನ್ನಾಭಿಪ್ರಾಯ ಹಾಗೂ ಸಂವಹನ ಸಮಸ್ಯೆಯಿಂದ ಬೇಸತ್ತು ಕಳೆದ ನವೆಂಬರ್ ತಿಂಗಳಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮ್ಮ ಹೇಳಿಕೆಯಲ್ಲಿ ಅವರು ಈ 'ಆಂತರಿಕ ಕಚ್ಚಾಟ'ಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ರಾಜೀನಾಮೆ ನೀಡಿದ್ದರೂ, ಮೇಲಧಿಕಾರಿಗಳ ಸೂಚನೆಯ ಮೇರೆಗೆ ಡಾ. ಸಮೀಕ್ಷಾ ಸೇರಿದಂತೆ ಇಬ್ಬರು ಹೊಸ ವೈದ್ಯರಿಗೆ 'ಅಪ್ರೆಂಟಿಷಿಪ್' ಮಾದರಿಯಲ್ಲಿ ತರಬೇತಿ ನೀಡಲು ಮಾತ್ರ ಅವರು ಅಲ್ಲಿ ಮುಂದುವರಿದಿದ್ದರು. ಹಿರಿಯ ವೈದ್ಯರೇ ರಾಜೀನಾಮೆ ನೀಡುವ ಹಂತಕ್ಕೆ ತಲುಪಿದ್ದ ಅಲ್ಲಿನ ಬಿಗಡಾಯಿಸಿದ ವಾತಾವರಣದ ನಡುವೆ, ಹೊಸದಾಗಿ ಕರ್ತವ್ಯಕ್ಕೆ ಸೇರಿದ್ದ ಡಾ. ಸಮೀಕ್ಷಾ ಅವರು ಈ ಆಂತರಿಕ ರಾಜಕೀಯಕ್ಕೆ ಬಲಿಯಾದರೆ ಎಂಬ ಸಂಶಯವನ್ನು ಈ ಹೇಳಿಕೆಗಳು ದಟ್ಟವಾಗಿಸಿವೆ.

ರೈನ್​ ಲ್ಯಾಂಡ್​ ಎಂಬ ಫೇಸ್​ಬುಕ್ ಪೇಜ್​ನಲ್ಲಿರುವ ವಿಡಿಯೊ


ರಾತ್ರಿ ವೇಳೆ ಹಿಪ್ಪೋ ಬಳಿ ತೆರಳಲು ಸೂಚನೆ ನೀಡಿದ್ದವರು ಯಾರು?

ಘಟನೆಯ ದಿನ ನಡೆದ ಬೆಳವಣಿಗೆಗಳು ಮತ್ತಷ್ಟು ನಿಗೂಢವಾಗಿವೆ. ಡಾ. ಮುರುಳಿ ಅವರ ಮಾಹಿತಿ ಪ್ರಕಾರ, ಪ್ರಾಣಿಧಾಮದಲ್ಲಿದ್ದ ನೀರಾನೆಯು ಎಂಟು ತಿಂಗಳ ಗರ್ಭಿಣಿಯಾಗಿದ್ದು, ಮರಿ ಹಾಕುವ ಹಂತದಲ್ಲಿದ್ದ ಕಾರಣ ಕಳೆದ ಐದು ದಿನಗಳಿಂದ ಆಹಾರ ತ್ಯಜಿಸಿತ್ತು. ಇದು ಗರ್ಭಾವಸ್ಥೆಯ ಸಹಜ ಪ್ರಕ್ರಿಯೆ ಎಂದು ಅವರು ಸಮೀಕ್ಷಾ ಅವರಿಗೆ ಮೊದಲೇ ತಿಳಿಸಿದ್ದರು. ಅಂದು ರಾತ್ರಿ ಸುಮಾರು ಎಂಟು ಗಂಟೆಗೆ ಸಮೀಕ್ಷಾ ಅವರು ಪ್ರಾಣಿಧಾಮಕ್ಕೆ ಬಂದಿದ್ದು ಕೇವಲ 'ಸನ್‌ಕಾನಿಯೂರ್' ಎಂಬ ಪಕ್ಷಿಗೆ ಎರಡನೇ ಬಾರಿಯ ಆ್ಯಂಟಿಬಯೋಟಿಕ್ ಇಂಜೆಕ್ಷನ್ ನೀಡಲು ಮಾತ್ರ. ತಾವು ಕೇವಲ ಪಕ್ಷಿಗೆ ಚಿಕಿತ್ಸೆ ನೀಡುವ ಬಗ್ಗೆ ಮಾತ್ರ ಸೂಚನೆ ನೀಡಿದ್ದೆ, ಆದರೆ ಅತ್ಯಂತ ಆಕ್ರಮಣಕಾರಿಯಾಗಿರುವ (ಫೆರೋಷಿಯಸ್) ಗರ್ಭಿಣಿ ನೀರಾನೆಯ ಬಳಿ ತೆರಳಲು ತಾವು ಯಾವುದೇ ಸೂಚನೆ ನೀಡಿರಲಿಲ್ಲ ಎಂದು ಡಾ. ಮುರುಳಿ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ, ಯುವ ವೈದ್ಯೆ ತಾವಾಗಿಯೇ ಅಲ್ಲಿಗೆ ಹೋದರೆ ಅಥವಾ ಬೇರೆ ಯಾರಾದರೂ ಅವರಿಗೆ ತಪ್ಪು ನಿರ್ದೇಶನ ನೀಡಿದರೆ ಎಂಬುದು ತನಿಖೆಯಿಂದಷ್ಟೇ ಬಯಲಾಗಬೇಕಿದೆ.

ರೈನ್​ಲ್ಯಾಂಡ್ ಫೇಸ್​ಬುಕ್​ ಪೇಜ್​ನ ಮತ್ತೊಂದು ವಿಡಿಯೊ



ಸಮಗ್ರ ತನಿಖೆಯ ಅನಿವಾರ್ಯತೆ ಇದೆಯೇ?

ಹಬ್ಬದ ದಿನವಾಗಿದ್ದರಿಂದ ಡಾ. ಮುರುಳಿ ಅವರು ಸಂಜೆ ಐದು ಗಂಟೆಗೇ ತಮ್ಮ ಕೆಲಸ ಮುಗಿಸಿ ಊರಿಗೆ ತೆರಳಿದ್ದರು. ಪಿಜಿಯಲ್ಲಿದ್ದ ಸಮೀಕ್ಷಾ ಅವರನ್ನು ರಾತ್ರಿ ಪ್ರಾಣಿಧಾಮಕ್ಕೆ ಕರೆತರಲು ಸ್ವತಃ ಆಡಳಿತ ಮಂಡಳಿಯೇ ವಾಹನದ ವ್ಯವಸ್ಥೆ ಮಾಡಿತ್ತು. ಕೇವಲ ಪಕ್ಷಿಗೆ ಚಿಕಿತ್ಸೆ ನೀಡಲು ಬಂದಿದ್ದ ಯುವ ವೈದ್ಯೆ, ಥರ್ಮಲ್ ಇಮೇಜಿಂಗ್ ಕ್ಯಾಮೆರಾ ಹಿಡಿದುಕೊಂಡು ನೀರಾನೆಯ ಆವರಣದೊಳಗೆ ಇಳಿಯಲು ಕಾರಣವೇನು ಎಂಬುದು ಅತಿ ದೊಡ್ಡ ಪ್ರಶ್ನೆಯಾಗಿದೆ. ಪ್ರಾಣಿಧಾಮದ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ, ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಡಾ. ಮುರುಳಿ ಅವರು ಪ್ರಸ್ತಾಪಿಸಿರುವ ಆಂತರಿಕ ಕಚ್ಚಾಟಗಳೇ ಈ ಭೀಕರ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆಗಳಿದ್ದು, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ತನಿಖೆಯು ಈ ಎಲ್ಲಾ ಅನುಮಾನಗಳಿಗೆ ಸ್ಪಷ್ಟ ಉತ್ತರ ನೀಡಬೇಕಿದೆ.

ನಿರ್ದೇಶಕರು ಹೇಳುವುದೇನು?

ಕಾರ್ಯನಿರ್ವಾಹಕ ನಿರ್ದೇಶಕ (ED) ವಿ.ಎಂ. ಅಮರಾಕ್ಷರ್ ಮಾತನಾಡಿದ ವಿಡಿಯೊ ಕೂಡ ಫೇಸ್​​ಬುಕ್​ನಲ್ಲಿ ವೈರಲ್ ಆಗಿದೆ. ಅವರು ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ನೇರ ಉತ್ತರವನ್ನು ಕೊಟ್ಟಿಲ್ಲ ಎಂಬ ಅಸಮಾಧಾನಗಳೂ ವ್ಯಕ್ತಗೊಂಡಿವೆ. ಸುರಕ್ಷಿತ ಕಾರ್ಯವಿಧಾನವನ್ನು ಪಾಲಿಸದೇ ವೈದ್ಯೆಯನ್ನು ನೀರಾನೆಯ ಬಳಿಗೆ ಪರೀಕ್ಷೆ ಕಳುಹಿಸಿದವರು ಯಾರು ಎಂಬ ಪ್ರಶ್ನೆಗೆ ಅವರು ಉತ್ತರವನ್ನೇ ಕೊಟ್ಟಿಲ್ಲ. ಬದಲಾಗಿದೆ. ಅದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಡಾ. ಮುರಳಿ ಮನೋಹರ್ ಅವರು ಈ ಹಿಂದೆ ರಾಜೀನಾಮೆ ನೀಡಿದ್ದರು, ಆದರೆ ನಾವು ಅದನ್ನು ಅಂಗೀಕರಿಸಿರಲಿಲ್ಲ. ಫೆಬ್ರವರಿ ತಿಂಗಳವರೆಗೂ ಅವರು ವೇತನ ಪಡೆದಿದ್ದು, ಅವರೇ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ತರಬೇತಿ ಪಡೆಯುವವರಿಗೆ (Trainees) ನೀರಾನೆಗಳ ಪರಿಚಾರಕ ಕೆಲಸಕ್ಕೆ ನಾವು ಸೂಚಿಸಿರಲಿಲ್ಲ, ಈ ಎಲ್ಲಾ ವಿಷಯಗಳು ಡಾ. ಮುರಳಿಗೆ ತಿಳಿದಿತ್ತು. ನಮ್ಮ ಮೃಗಾಲಯದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕ್ಯಾಮೆರಾ ಇಲ್ಲ, ಆದರೆ ಸಮೀಕ್ಷಾ ಅವರಿಗೆ ಅದನ್ನು ಕೊಟ್ಟವರು ಯಾರು ಎಂಬ ಬಗ್ಗೆ ತನಿಖೆಯಾಗಬೇಕು. ಆ ಕ್ಯಾಮೆರಾ ಡಾ. ಮುರಳಿ ಅವರದ್ದೇ ಆಗಿತ್ತು ಎಂಬ ಮಾಹಿತಿಯಿದೆ. ಸಮೀಕ್ಷಾ ಅವರು ಅತಿಯಾದ ಕಾಳಜಿಯಿಂದ, ತಮ್ಮದಲ್ಲದ ಜವಾಬ್ದಾರಿಯನ್ನು ನಿರ್ವಹಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಇದೊಂದು ಅತ್ಯಂತ ದುರಾದೃಷ್ಟಕರ ಸಂಗತಿ ಎಂದೂ ಅವರು ಹೇಳಿದ್ದರು.

ವೈದ್ಯರುಗಳಿಬ್ಬರ ಹೇಳಿಕೆ ನೋಡಿದರೆ ಸಮೀಕ್ಷಾ ರೆಡ್ಡಿ ಅವರಿಗೆ ಇಂಥ ಕೆಲಸಗಳನ್ನು ಮಾಡಬೇಕು ಎಂದು ನಿರ್ದೇಶನ ಕೊಟ್ಟವರು ಯಾರು ಎಂಬುದೇ ಅಸ್ಪಷ್ಟ ಎನಿಸಿದೆ. ಅಲ್ಲದೆ ಅಲ್ಲಿ ನಡೆದಿರುವ ಘಟನೆ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲದಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ಪ್ರೇಮಿಗಳು ದೂರುತ್ತಿದ್ದಾರೆ.


Read More
Next Story