
ಜಲ ಇತಿಹಾಸದಲ್ಲಿ ಹೊಸ ಅಧ್ಯಾಯ: ಅನ್ನದಾತರ ಹಿತಕ್ಕಾಗಿ ಕೈಜೋಡಿಸಿದ ಮೂರು ರಾಜ್ಯಗಳು
ಸುಮಾರು 70 ವರ್ಷಗಳ ಇತಿಹಾಸವಿರುವ ಅಣೆಕಟ್ಟೆಯಲ್ಲಿ ಅಳವಡಿಸಿದ ಹಳೆಯ ಗೇಟ್‌ಗಳನ್ನು ಬದಲಿಸಿ, ಅತ್ಯಾಧುನಿಕ ತಂತ್ರಜ್ಞಾನದ 33 ನೂತನ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸಿ ಲೋಕಾರ್ಪಣೆಗೊಳಿಸಲಾಯಿತು.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರ ಪಾಲಿನ ಜೀವನಾಡಿ, ಕೃಷಿ ಚಟುವಟಿಕೆಗಳ ಬೆನ್ನೆಲುಬಾಗಿರುವ ತುಂಗಭದ್ರಾ ಅಣೆಕಟ್ಟೆಯು ಹೊಸ ಇತಿಹಾಸ ಸೃಷ್ಟಿಸಿದೆ. ಸುಮಾರು 70 ವರ್ಷಗಳ ಇತಿಹಾಸವಿರುವ ಈ ಅಣೆಕಟ್ಟೆಯಲ್ಲಿ ಅಳವಡಿಸಲಾಗಿದ್ದ ಹಳೆಯ ಗೇಟ್‌ಗಳನ್ನು ಬದಲಿಸಿ, ಅತ್ಯಾಧುನಿಕ ತಂತ್ರಜ್ಞಾನದ 33 ನೂತನ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸಿ ಲೋಕಾರ್ಪಣೆಗೊಳಿಸಲಾಯಿತು.
1860ರಲ್ಲಿ ಸರ್ ಆರ್ಥರ್ ಕಾಟನ್ ಅವರು ಕಂಡ ಕನಸು, 1949ರಲ್ಲಿ ಸಾಕಾರಗೊಂಡಿತ್ತು. ಕಾಲದ ಗರ್ಭದಲ್ಲಿ ಈ ಜಲಾಶಯದ ಗೇಟುಗಳು ಹಳೆಯದಾಗಿದ್ದವು. ಕಳೆದ ವರ್ಷ 19ನೇ ಗೇಟ್ ಮುರಿದುಬಿದ್ದಾಗ ಆತಂಕ ಉಂಟಾಯಿತು. ಇದು ಕೇವಲ ಒಂದು ಗೇಟ್ ಬದಲಾವಣೆಯಲ್ಲ, ಬದಲಿಗೆ ಇಡೀ 33 ಗೇಟುಗಳನ್ನು ಆಧುನೀಕರಿಸುವ ದೃಢ ನಿರ್ಧಾರಕ್ಕೆ ನಾಂದಿಯಾಯಿತು. ಕ್ರೆಸ್ಟ್‌ಗೇಟ್‌ಗಳ ಲೋಕಾರ್ಪಣೆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತುಂಗಭದ್ರಾ ನದಿ ಪಾತ್ರದ ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ 'ತುಂಗಭದ್ರಾ ಜಲಾಶಯದ ನೂತನ 33 ಸ್ಪಿಲ್‌ವೇ ಗೇಟುಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರೈತ ಸಂಘಟನೆಗಳು ಹಾಗೂ ವೇದಿಕೆಯವರು ನೀಡಿರುವ ಅರ್ಜಿ ಮತ್ತು ಪ್ರತಿಪಾದನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನವಲಿ ಡ್ಯಾಂ ನಿರ್ಮಾಣ ಇರಬಹುದು ಅಥವಾ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳನ್ನು ತೆಗೆದು ನೀರನ್ನು ಸಂರಕ್ಷಿಸುವ ವಿಚಾರವಾಗಿರಬಹುದು, ಇವೆಲ್ಲದರ ಬಗ್ಗೆ ಗಂಟೆಗಳ ಕಾಲ ಸುದೀರ್ಘವಾಗಿ ಹಾಗೂ ವ್ಯಾಪಕವಾಗಿ ಚರ್ಚೆ ನಡೆಸಲಾಗಿದೆ. ರೈತರ ಹಿತವನ್ನು ಕಾಯಲು ಮತ್ತು ಅವರ ರಕ್ಷಣೆ ಮಾಡಲು ನಾವೆಲ್ಲರೂ ಸೇರಿ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದೇವೆ. ಈ ಸಭೆಯಲ್ಲಿ ಕೈಗೊಳ್ಳಲಾದ ಅಂತಿಮ ನಿರ್ಧಾರಗಳನ್ನು ಕೇಂದ್ರ ಸಚಿವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ಜಲ ಇತಿಹಾಸದಲ್ಲಿ ಸುದೀರ್ಘ ಚರ್ಚೆ
ಇಂದು ಜಲಸಂಪನ್ಮೂಲ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ಪ್ರಮುಖವಾದ ದಿನವಾಗಿದೆ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಎತ್ತಿಹಿಡಿಯಲು, ನಮ್ಮ ಹಕ್ಕುಗಳನ್ನು ರಕ್ಷಿಸಲು ಹಾಗೂ ರೈತರನ್ನು ಬದುಕಿಸಲು "ನಮ್ಮ ನೀರು ನಮ್ಮ ಹಕ್ಕು" ಎಂಬ ಘೋಷಣೆಯಡಿ ಮೂರು ರಾಜ್ಯಗಳ (ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ) ರೈತರ ಹಿತ ಕಾಯುವ ನಿಟ್ಟಿನಲ್ಲಿ ಈ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ. ತುಂಗಭದ್ರಾ ನದಿಗೆ ಜಲಾಶಯ ನಿರ್ಮಿಸುವ ಆಲೋಚನೆಗೆ 1860 ರಲ್ಲೇ ಬ್ರಿಟಿಷ್ ಇಂಜಿನಿಯರ್ ಸರ್ ಆರ್ಥರ್ ಕಾಟನ್ ಅವರು ನಾಂದಿ ಹಾಡಿದ್ದರು. ತದನಂತರ 1949 ರಲ್ಲಿ ಇದರ ಕಾಮಗಾರಿ ಆರಂಭಗೊಂಡು ಪೂರ್ಣಗೊಳ್ಳುವ ಹೊತ್ತಿಗೆ ಅನೇಕ ಮಹನೀಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ರಾಯಲಸೀಮೆ, ಬಳ್ಳಾರಿ ಭಾಗದ ಜನರ ಹಿತದೃಷ್ಟಿಯಿಂದ ಹಾಗೂ ಕಾಮಾಕ್ಷಿ ಪೀಠದ ಮಾರ್ಗದರ್ಶನದಂತೆ ಈ ಯೋಜನೆಯನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆ ಇವತ್ತಿನದ್ದಾಗಿದೆ ಎಂದರು.
ಮೂರು ರಾಜ್ಯಗಳ ನೀರಾವರಿ ಸಮಸ್ಯೆಗಳನ್ನು ಒಟ್ಟಾಗಿ ಹೇಗೆ ಬಗೆಹರಿಸಿ ರೈತರನ್ನು ಬದುಕಿಸಬೇಕು ಎನ್ನುವುದಕ್ಕೆ ಇವತ್ತಿನ ದಿನ ಸಾಕ್ಷಿಯಾಗಿದೆ. "ದೇವರು ನಮಗೆ ಎರಡು ಆಯ್ಕೆಗಳನ್ನು ನೀಡಿದ್ದಾನೆ; ಒಂದು ಕೊಟ್ಟು ಹೋಗುವುದು, ಇಲ್ಲವೇ ಬಿಟ್ಟು ಹೋಗುವುದು. ದೇವರು ಯಾರಿಗೂ ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ, ಕೇವಲ ಅವಕಾಶವನ್ನು ಮಾತ್ರ ನೀಡುತ್ತಾನೆ. ಈ ಬದುಕಿನಲ್ಲಿ ನಮ್ಮ ಹೆಜ್ಜೆಯ ಗುರುತುಗಳನ್ನು ಉಳಿಸಿ ಹೋಗಲು, ಸಾಕ್ಷಿ ಗುಡ್ಡಗಳನ್ನು ನಿರ್ಮಾಣ ಮಾಡಲು ಸಿಕ್ಕಿರುವ ಈ ಅವಕಾಶದಲ್ಲಿ ಜನಸಾಮಾನ್ಯರ ಹಾಗೂ ರೈತರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭಾವುಕರಾಗಿ ನುಡಿದರು.
ಡ್ಯಾಂ ಸುರಕ್ಷತೆಗೆ ತ್ವರಿತ ಕ್ರಮ
ಕಳೆದ ವರ್ಷ ಜಲಾಶಯದ 19ನೇ ಗೇಟ್ ಮುರಿದುಬಿದ್ದಿತ್ತು. ಅಂದು ಮಧ್ಯರಾತ್ರಿ ಜಿಲ್ಲಾ ಸಚಿವರಾದ ತಂಗಡಗಿ ಹಾಗೂ ಅಧಿಕಾರಿಗಳು ಫೋನ್ ಮಾಡಿ ಡ್ಯಾಂ ಶೇಕ್ ಆಗುತ್ತಿರುವ ಪರಿಸ್ಥಿತಿಯನ್ನು ವಿವರಿಸಿದ್ದರು. ನಾನು ತಕ್ಷಣವೇ ಕಾರ್ಯಪ್ರವೃತ್ತನಾಗಿ ಬೆಳಗ್ಗೆ 6 ಗಂಟೆಗೆ ಹೆಲಿಕಾಪ್ಟರ್ ಮೂಲಕ ಹೊರಟು, 8:30ರ ಹೊತ್ತಿಗೆ ಡ್ಯಾಂ ಸ್ಥಳದಲ್ಲಿದ್ದೆ. ಕೇವಲ 10-15 ದಿನಗಳಲ್ಲಿ 19ನೇ ಗೇಟನ್ನು ಯಶಸ್ವಿಯಾಗಿ ಬದಲಾಯಿಸುವ ಮೂಲಕ ಈ ಭಾಗದ ರೈತರ ಕಣ್ಣೀರನ್ನು ಒರೆಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಗೇಟ್ ಮುರಿದಾಗ ವಿರೋಧ ಪಕ್ಷದವರು ಟೀಕೆ ಮಾಡಿದ್ದರು. ಶಾರದಾ ದೇವಿ, ಹುಲಿಗೆಮ್ಮ ಹಾಗೂ ಹುಚ್ಚರಾಯಸ್ವಾಮಿಯ ಆಶೀರ್ವಾದ, ಹಂಪಿ ವಿರೂಪಾಕ್ಷನ ಕೃಪೆ ಮತ್ತು ರಾಘವೇಂದ್ರ ಸ್ವಾಮಿಯ ಶಕ್ತಿಯಿಂದ ಇಂತಹ ಮಹತ್ವದ ಕಾರ್ಯವನ್ನು ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು. ಅಲ್ಲದೆ, ಮೂರೂ ರಾಜ್ಯಗಳ ರೈತರ ಹಿತದೃಷ್ಟಿಯಿಂದ ಜಲಾಶಯದ ಎಲ್ಲಾ 33 ಗೇಟುಗಳನ್ನು ಬದಲಾಯಿಸುವ ದಿಟ್ಟ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದು ವಿವರಿಸಿದರು.
ಇತಿಹಾಸ ಸೃಷ್ಟಿಸಿದ ಮೂವರು ಮುಖ್ಯಮಂತ್ರಿಗಳು
ನಾವು ಇತಿಹಾಸವನ್ನು ಮರೆಯುವವರಲ್ಲ, ಇತಿಹಾಸವನ್ನು ಓದುವವರಲ್ಲ, ಬದಲಿಗೆ ಇತಿಹಾಸವನ್ನು ಸೃಷ್ಟಿಸುವವರು ಎಂದು ಘೋಷಿಸಿದ ಡಿ.ಕೆ. ಶಿವಕುಮಾರ್ ಅವರು, ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ದಕ್ಷಿಣ ಭಾರತದ ಮೂವರು ಪ್ರಮುಖ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ) ಮತ್ತು ರೇವಂತ್ ರೆಡ್ಡಿ (ತೆಲಂಗಾಣ) ಅವರೊಂದಿಗೆ ತಾವೂ ಸೇರಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬ ತತ್ವದಡಿ ಮೂರೂ ರಾಜ್ಯಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಈ ಒಗ್ಗಟ್ಟಿನ ಮೂಲಕ 33 ಟಿಎಂಸಿ ನೀರನ್ನು ಉಳಿಸುವ ಹಾಗೂ ಮುಂದಿನ ದಿನಗಳಲ್ಲಿ ಡ್ಯಾಂ ಅನ್ನು ಸಂಪೂರ್ಣವಾಗಿ ರಕ್ಷಿಸುವ ಭರವಸೆಯನ್ನು ರೈತರಿಗೆ ನೀಡಿದರು. ತಾವು ಹಿಂದೆ ನೀರಾವರಿ ಸಚಿವರಾಗಿದ್ದಾಗ ಹಾಗೂ ಪ್ರಸ್ತುತ ಮುಖ್ಯಮಂತ್ರಿಯಾಗಿದ್ದರೂ ಸಹ, ಎಂದಿಗೂ ರೈತರ ಸೇವಕ ಮತ್ತು ಬಂಧುವಾಗಿ ಜವಾಬ್ದಾರಿಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

