
ಲಂಚ ಕೊಡಲು ಹಣವಿಲ್ಲ, ಮೂಲಂಗಿ ತಗೊಳ್ಳಿ! ಭ್ರಷ್ಟ ಅಧಿಕಾರಿಗೆ ರೈತನಿಂದ ತಕ್ಕ ಶಾಸ್ತಿ
ತನ್ನ ಜಮೀನಿಗೆ ರಸ್ತೆ ಮಾಡಿಕೊಡಲು ಲಂಚ ಕೇಳಿದ ಅಧಿಕಾರಿಗಳಿಗೆ ಮಧುಗಿರಿಯ ರೈತನೊಬ್ಬ ತಾನು ಬೆಳೆದ ಮೂಲಂಗಿಯನ್ನೇ ಹಂಚುವ ಮೂಲಕ ಪಾಠ ಕಲಿಸಿರುವ ಘಟನೆ ವರದಿಯಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸ ನಡೆಯುವುದಿಲ್ಲ ಎಂಬ ಕಹಿ ಸತ್ಯವನ್ನು ಮಧುಗಿರಿಯ ರೈತನೊಬ್ಬ ಸಾರ್ವಜನಿಕವಾಗಿ ಬಯಲಿಗೆಳೆದಿದ್ದಾನೆ. ತನ್ನ ಜಮೀನಿನ ರಸ್ತೆ ಸಮಸ್ಯೆಗಾಗಿ ಹತ್ತಾರು ಬಾರಿ ಕಚೇರಿಗೆ ಅಲೆದರೂ ಅಧಿಕಾರಿಗಳು ಸ್ಪಂದಿಸದಿದ್ದಾಗ, ಲಂಚ ನೀಡಲು ಹಣವಿಲ್ಲದೆ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಿ ವಿನೂತನವಾಗಿ ಪ್ರತಿಭಟಿಸಿದ್ದಾನೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಗುರುವಾರ(ಫೆ.5) ಮಧುಗಿರಿ ತಾಲೂಕು ಕಚೇರಿ ಬಳಿ ಬಂದ ರೈತ ಪ್ರಸನ್ನ ಕುಮಾರ್, "ನನ್ನ ಹತ್ತಿರ ಲಂಚ ಕೊಡಲು ಹಣವಿಲ್ಲ, ನಾನು ಬೆಳೆದಿರುವ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ ಬನ್ನಿ" ಎಂದು ಮೈಕ್ ಹಿಡಿದು ಕೂಗುತ್ತಾ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅಧಿಕಾರಿಗಳ ಲಂಚದ ಬಗ್ಗೆ ತಹಶಿಲ್ದಾರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಏನಿದು ಘಟನೆ ?
ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ತಮ್ಮ ಜಮೀನಿಗೆ ರಸ್ತೆ ಸೌಕರ್ಯ ಕಲ್ಪಿಸಿಕೊಡುವಂತೆ ಕಳೆದ ಎರಡು ವರ್ಷಗಳಿಂದ ತಾಲೂಕು ಕಚೇರಿಗೆ ಅಲೆಯುತ್ತಿದ್ದರು. ರಸ್ತೆ ಒತ್ತುವರಿ ತೆರವುಗೊಳಿಸಿ, ಹೊಸ ರಸ್ತೆ ನಿರ್ಮಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದ ಹಿನ್ನಲೆ ಅಧಿಕಾರಿಗಳ ವಿಳಂಬ ನೀತಿಯಿಂದ ಬೇಸತ್ತು ಲೋಕಾಯುಕ್ತ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಒಂದು ತಿಂಗಳೊಳಗೆ ಕಾನೂನುಬದ್ಧವಾಗಿ ರಸ್ತೆ ನಿರ್ಮಿಸಿಕೊಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಆದರೆ, ಆದೇಶ ಬಂದು ಎರಡು ತಿಂಗಳು ಕಳೆದರೂ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತಾಧಿಕಾರಿ ಸ್ಥಳ ಮಹಜರು ನಡೆಸಿಲ್ಲ ಎಂದು ಆರೋಪ ಮಾಡಿದ್ದಾರೆ.
ಆರೋಪಗಳೇನು ?
ಜಮೀನಿಗೆ ರಸ್ತೆ ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಗ್ರಾಮ ಆಡಳಿತಾಧಿಕಾರಿ ಮತ್ತು ಕಂದಾಯ ನಿರೀಕ್ಷಕರು ಕೆಲಸ ಮಾಡಿಕೊಡಲು ಹಣ ಕೇಳುತ್ತಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ರೈತ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

