
ತಂಪು ಪಾನೀಯಗಳಲ್ಲಿ ವಿಷಕಾರಿ ಅಂಶ: ಮಕ್ಕಳ ಹಕ್ಕುಗಳ ಆಯೋಗದ ಎಚ್ಚರಿಕೆ, ತನಿಖೆ
ತಂಪು ಪಾನೀಯಗಳಲ್ಲಿ ಕ್ಯಾನ್ಸರ್ ಕಾರಕ ಆಸ್ಪರ್ಟೇಮ್ ಮತ್ತು ಅಪಾಯಕಾರಿ ರಾಸಾಯನಿಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಮಕ್ಕಳ ಹಕ್ಕುಗಳ ಆಯೋಗವು ಔಷಧ ನಿಯಂತ್ರಣ ಇಲಾಖೆಗೆ ಸಮಗ್ರ ತನಿಖೆ ನಡೆಸಲು ಸೂಚಿಸಿದೆ.
ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಬಗೆಯ ತಂಪು ಪಾನೀಯಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಪತ್ತೆಯಾಗುತ್ತಲೇ ಇರುತ್ತವೆ.
ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಕೂಡಲೇ ಈ ಬಗ್ಗೆ ತನಿಖೆ ನಡೆಸುವಂತೆ ಔಷಧ ನಿಯಂತ್ರಣ ಇಲಾಖೆಗೆ ಮನವಿ ಸಲ್ಲಿಸಿದೆ. ಪಾನೀಯಗಳಲ್ಲಿರುವ ವಿಷಕಾರಿ ಅಂಶಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದರಿಂದ, ಮಾರುಕಟ್ಟೆಯಲ್ಲಿ ಲಭ್ಯವಿರುವ ತಂಪು ಪಾನೀಯಗಳ ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯೋಗವು ಇಲಾಖೆಗೆ ಸೂಚಿಸಿದೆ.
ವಿಷಕಾರಕ ಅಂಶಗಳು ಪತ್ತೆ
ಇತ್ತೀಚಿನ ವೈಜ್ಞಾನಿಕ ಪರೀಕ್ಷೆಗಳ ವರದಿ ಪ್ರಕಾರ, ನಾವು ನಿತ್ಯ ಬಳಸುವ ಹಲವು ಜನಪ್ರಿಯ ಬ್ರ್ಯಾಂಡ್‌ನ ತಂಪು ಪಾನೀಯಗಳಲ್ಲಿ ಆರೋಗ್ಯಕ್ಕೆ ಮಾರಕವಾಗಬಲ್ಲ ರಾಸಾಯನಿಕಗಳು ಮತ್ತು ಮಿತಿಮೀರಿದ ಸಕ್ಕರೆಯ ಅಂಶವಿರುವುದು ದೃಢಪಟ್ಟಿದೆ. ಮುಖ್ಯವಾಗಿ ಪಾನೀಯಗಳಲ್ಲಿ ಬಳಸಲಾಗುವ ಆಸ್ಪರ್ಟೇಮ್‌ನಂತಹ ಕೃತಕ ಸಿಹಿಕಾರಕಗಳು (Artificial Sweeteners) ದೀರ್ಘಕಾಲದ ಸೇವನೆಯಿಂದಾಗಿ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು ಎಂದು ಸಂಶೋಧನೆಗಳು ಎಚ್ಚರಿಸಿವೆ.
ಇದರೊಂದಿಗೆ, ಪಾನೀಯಗಳಿಗೆ ಗಾಢ ರುಚಿ ನೀಡಲು ಬಳಸುವ ಫಾಸ್ಪರಿಕ್ ಆಮ್ಲವು (Phosphoric Acid) ಹಲ್ಲುಗಳ ಸವೆತಕ್ಕೆ ಮತ್ತು ಮೂಳೆಗಳ ದೌರ್ಬಲ್ಯಕ್ಕೆ ಕಾರಣವಾಗುತ್ತಿದೆ. ಇನ್ನು ಪಾನೀಯಗಳಲ್ಲಿ ಕಂಡುಬರುವ ಅತಿಯಾದ ಕೆಫೀನ್ ಅಂಶವು ಮಕ್ಕಳಲ್ಲಿ ನಿದ್ರಾಹೀನತೆ, ಅತಿಯಾದ ಆತಂಕ ಮತ್ತು ಹೃದಯದ ಬಡಿತದಲ್ಲಿ ಏರುಪೇರು ಉಂಟುಮಾಡುತ್ತದೆ. ಪಾನೀಯಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳು ಮಕ್ಕಳಲ್ಲಿ ಅತಿಸೂಕ್ಷ್ಮತೆ ಮತ್ತು ಚರ್ಮದ ಅಲರ್ಜಿಯಂತಹ ಸಮಸ್ಯೆಗಳನ್ನು ತಂದೊಡ್ಡುತ್ತಿವೆ.
ಈ ಅಂಶಗಳ ಒಟ್ಟಾರೆ ಪರಿಣಾಮವಾಗಿ ಮಕ್ಕಳಲ್ಲಿ ಬೊಜ್ಜು (Obesity) ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ತಾಗಿ ಏರಿಕೆ ಕಂಡುಬಂದು ಟೈಪ್ 2 ಮಧುಮೇಹದ ಅಪಾಯ ಹೆಚ್ಚುತ್ತಿದೆ. ಅಲ್ಲದೆ, ಇವುಗಳಲ್ಲಿರುವ ಕಾರ್ಬನ್ ಡೈಆಕ್ಸೈಡ್ ಅನಿಲವು ಜೀರ್ಣಾಂಗವ್ಯೂಹದ ಮೇಲೆ ಒತ್ತಡ ಹೇರಿ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.
ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ತಂಪು ಪಾನೀಯಗಳ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಇಲಾಖೆಯ ಸುಪರ್ಧಿಯಲ್ಲಿ ಪರಿಶೀಲಿಸಲಾಗುತ್ತಿದೆ. ವರದಿ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಎಚ್ಚರ ವಹಿಸುವುದು ಉತ್ತಮ
ತಮ್ಮ ಮಕ್ಕಳಿಗೆ ಬಣ್ಣಬಣ್ಣದ ತಂಪುಪಾನೀಯಗಳನ್ನು ಕೊಡಿಸುವ ಮೊದಲು, ರ್ವಜನಿಕರು ಮತ್ತು ಪೋಷಕರು ಜಾಗೃತರಾಗಿರಬೇಕಿದೆ. ಯಾವುದೇ ತಂಪು ಪಾನೀಯಗಳನ್ನು ಖರೀದಿಸುವ ಮುನ್ನ ಬಾಟಲಿಗಳ ಮೇಲಿರುವ ಪದಾರ್ಥಗಳ ಪಟ್ಟಿಯನ್ನು ಕಡ್ಡಾಯವಾಗಿ ಓದಿ ನೋಡಿ, ಹಾನಿಕಾರಕ ರಾಸಾಯನಿಕಗಳ ಬಗ್ಗೆ ಗಮನಹರಿಸಬೇಕು. ಆರೋಗ್ಯದ ದೃಷ್ಟಿಯಿಂದ ಇಂತಹ ಕೃತಕ ಪಾನೀಯಗಳಿಗಿಂತ ನೈಸರ್ಗಿಕ ಹಣ್ಣಿನ ರಸಗಳು ಅಥವಾ ಎಳನೀರಿನಂತಹ ಪಾನೀಯಗಳಿಗೆ ಮೊದಲ ಆದ್ಯತೆ ನೀಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

