ಟಿ.ನರಸೀಪುರ ಗಣೇಶ ಮೆರವಣಿಗೆಗೆ ಯಾವುದೇ ಹೊಸ ನಿರ್ಬಂಧವಿಲ್ಲ; ಇನ್ಸ್‌ಪೆಕ್ಟರ್‌ ಹೇಳಿಕೆ ಬಗ್ಗೆ ಎಸ್‌ಪಿ ಸ್ಪಷ್ಟನೆ
x

ಟಿ.ನರಸೀಪುರ ಗಣೇಶ ಮೆರವಣಿಗೆಗೆ ಯಾವುದೇ ಹೊಸ ನಿರ್ಬಂಧವಿಲ್ಲ; ಇನ್ಸ್‌ಪೆಕ್ಟರ್‌ ಹೇಳಿಕೆ ಬಗ್ಗೆ ಎಸ್‌ಪಿ ಸ್ಪಷ್ಟನೆ


Click the Play button to hear this message in audio format

ಟಿ.ನರಸೀಪುರದಲ್ಲಿ ಗಣೇಶ ಮೆರವಣಿಗೆಗೆ ನಿರ್ಬಂಧ ವಿಧಿಸಲಾಗಿದೆ ಎಂಬ ಚರ್ಚೆ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ ಧನಂಜಯ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾದ ಬೆನ್ನಲ್ಲೇ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟನೆ ನೀಡಿದ್ದಾರೆ. ಗಣೇಶೋತ್ಸವ ಮತ್ತು ಮೆರವಣಿಗೆಗೆ ಯಾವುದೇ ಹೊಸ ನಿರ್ಬಂಧ ವಿಧಿಸಿಲ್ಲ. ಪ್ರತಿ ವರ್ಷ ಯಾವ ಮಾರ್ಗದಲ್ಲಿ ಮೆರವಣಿಗೆ ನಡೆಯುತ್ತಿತ್ತೋ, ಅದೇ ಮಾರ್ಗದಲ್ಲಿ ಈ ಬಾರಿಯೂ ಮೆರವಣಿಗೆ ನಡೆಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಗಣೇಶ ಮೂರ್ತಿಗಳನ್ನು ಎಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಹಾಗೂ ಮೆರವಣಿಗೆ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬ ಮಾಹಿತಿಯನ್ನು ಆಯೋಜಕರಿಂದ ಪಡೆಯಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಕಳೆದ ಬಾರಿ ಒಂದು ಗಣೇಶ ಮಂಡಳಿಯವರು ಪೊಲೀಸ್ ಇಲಾಖೆಯಿಂದ ಬಂದೋಬಸ್ತ್‌ಗಾಗಿ ಮನವಿ ಮಾಡದೆ ಏಕಾಏಕಿ ಮೆರವಣಿಗೆ ನಡೆಸಿದ್ದರು. ಇದರಿಂದ ಕೊನೆಯ ಕ್ಷಣದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡುವ ಸಂದರ್ಭದಲ್ಲಿ ಗೊಂದಲ ಉಂಟಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸಬಾರದು ಎಂಬ ಉದ್ದೇಶದಿಂದ ಮುಂಚಿತವಾಗಿ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು ಎಂದು ಬಾಲದಂಡಿ ವಿವರಿಸಿದ್ದಾರೆ.

‘ಪ್ರತಿ ವರ್ಷದಂತೆ ಮೆರವಣಿಗೆಗೆ ಅವಕಾಶ’

ಟಿ.ನರಸೀಪುರ ಪಟ್ಟಣದಲ್ಲಿ ಪ್ರತಿ ವರ್ಷ ಸುಮಾರು 15ರಿಂದ 20 ಕಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಬಳಿಕ ವಿವಿಧ ಗಣೇಶ ಮಂಡಳಿಗಳ ವತಿಯಿಂದ ಮೆರವಣಿಗೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಹಿಂದಿನಿಂದಲೂ ಬಳಕೆಯಾಗುತ್ತಿರುವ ಮೆರವಣಿಗೆ ಮಾರ್ಗಗಳಿಗೆ ಯಾವುದೇ ಹೊಸ ನಿರ್ಬಂಧ ಹೇರಿಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ನಡೆಸಲು ನಿಯಮಾನುಸಾರ ಅನುಮತಿ ಪಡೆಯಬಹುದು. ಹಳೆಯದಾಗಿ ಬಳಕೆಯಲ್ಲಿರುವ ಮಾರ್ಗಗಳಲ್ಲೇ ಮೆರವಣಿಗೆ ನಡೆಸಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಗಣೇಶೋತ್ಸವದ ಆಚರಣೆಗೆ ಪೊಲೀಸರು ಹೊಸದಾಗಿ ನಿರ್ಬಂಧ ವಿಧಿಸಿದ್ದಾರೆ ಎಂಬ ವದಂತಿಗಳಿಗೆ ಕಿವಿಗೊಡಬಾರದು ಎಂಬ ಸಂದೇಶವನ್ನು ಎಸ್‌ಪಿ ನೀಡಿದ್ದಾರೆ.

ಇನ್ಸ್‌ಪೆಕ್ಟರ್ ಹೇಳಿಕೆಗೆ ವ್ಯಾಪಕ ಟೀಕೆ

ಇದಕ್ಕೂ ಮುನ್ನ ಟಿ.ನರಸೀಪುರ ಠಾಣೆಯ ಇನ್ಸ್‌ಪೆಕ್ಟರ್‌ ಧನಂಜಯ ಅವರು ಶಾಂತಿ ಸಭೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಮಸೀದಿ ಇರುವ ರಸ್ತೆಯಲ್ಲಿ ಗಣೇಶ ಮೆರವಣಿಗೆ ತೆರಳಿದರೆ “ಗ್ರಹಚಾರ ಬಿಡಿಸುತ್ತೇನೆ” ಎಂಬ ರೀತಿಯ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿತ್ತು. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿತ್ತು.

ಈ ಬೆಳವಣಿಗೆಯ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಗಣೇಶೋತ್ಸವ ಆಯೋಜಕರಿಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಗೊಂದಲಕ್ಕೆ ತೆರೆ ಎಳೆಯಲು ಎಸ್‌ಪಿ ಸ್ಪಷ್ಟನೆ

ಈ ಎಲ್ಲಾ ಬೆಳವಣಿಗೆಗಳ ನಡುವೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ನೀಡಿರುವ ಸ್ಪಷ್ಟನೆ ಇದೀಗ ಪ್ರಮುಖವಾಗಿದ್ದು, ಟಿ.ನರಸೀಪುರದಲ್ಲಿ ಗಣೇಶ ಮೆರವಣಿಗೆಗೆ ಹೊಸದಾಗಿ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಪೊಲೀಸ್ ಇಲಾಖೆ ಮತ್ತು ಗಣೇಶೋತ್ಸವ ಆಯೋಜಕರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

Read More
Next Story