
ಸಾಂದರ್ಭಿಕ ಚಿತ್ರ
ಮೂಕಾಂಬಿಕಾ ಸನ್ನಿಧಿಯಲ್ಲಿ ತಮಿಳುನಾಡು ಸಿಎಂ ವಿಜಯ್: ಬೆಳ್ಳಿ ಖಡ್ಗ ಸಮರ್ಪಿಸಿ ಶತ್ರು ಸಂಕಲ್ಪ ಪೂಜೆ!
ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ತಮ್ಮ ಆಡಳಿತಾವಧಿಯಲ್ಲಿ ಮೂಕಾಂಬಿಕಾ ದೇವಿಗೆ 1.5 ಕೆ.ಜಿ. ತೂಕದ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದರು.
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸಿ. ಜೋಸೆಫ್ ವಿಜಯ್ ಅವರು ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿಯಾದ ಬಳಿಕ ವಿಜಯ್ ಅವರು ಕೈಗೊಂಡ ಮೊದಲ ಕರ್ನಾಟಕ ಪ್ರವಾಸ ಇದಾಗಿದೆ.
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ನೇರವಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಪ್ರೀತಿಯಿಂದ ಬರಮಾಡಿಕೊಂಡರು. ನಂತರ ಬಿಗಿ ಝಡ್ ಪ್ಲಸ್ (Z+) ಭದ್ರತೆಯಲ್ಲಿ ಮಂಗಳೂರು ರಸ್ತೆಯ ಮೂಲಕ ಕೊಲ್ಲೂರಿಗೆ ಆಗಮಿಸಿದ ಸಿಎಂ ವಿಜಯ್ ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು 'ಶತ್ರು ಸಂಕಲ್ಪ' ನೆರವೇರಿಸಿ, 1.600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನು ನೀಡಿಸರು. ವಿಶೇಷವೆಂದರೆ, ದೇವಸ್ಥಾನದಿಂದ ವಾಪಸ್ ತೆರಳುವಾಗ ಸಿಎಂ ವಿಜಯ್ ಅವರೇ ಸ್ವತಃ ಕಾರು ಚಾಲನೆ ಮಾಡಿಕೊಂಡು ತೆರಳಿದರು.
ಕೊಲ್ಲೂರು ಮತ್ತು ತಮಿಳುನಾಡು ಅವಿನಾಭಾವ ಸಂಬಂಧ
ದಕ್ಷಿಣ ಭಾರತದ, ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನ ರಾಜಕಾರಣಿಗಳ ಪಾಲಿಗೆ ಕೊಲ್ಲೂರು ಶಕ್ತಿಪೀಠ ಅತ್ಯಂತ ಮಹತ್ವದ್ದಾಗಿದೆ. ರಾಜಕೀಯ ಶಕ್ತಿ ವೃದ್ಧಿ, ವಿರೋಧಿಗಳ ನಿಗ್ರಹ ಹಾಗೂ ರಾಜಯೋಗಕ್ಕಾಗಿ ಇಲ್ಲಿನ ಅರ್ಚಕರ ನೇತೃತ್ವದಲ್ಲಿ ಚಂಡಿಕಾಯಾಗದಂತಹ ಶಕ್ತಿಶಾಲಿ ಪೂಜೆಗಳನ್ನು ನೆರವೇರಿಸಲಾಗುತ್ತದೆ. ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ತಮ್ಮ ಆಡಳಿತಾವಧಿಯಲ್ಲಿ ಮೂಕಾಂಬಿಕಾ ದೇವಿಗೆ 1.5 ಕೆ.ಜಿ. ತೂಕದ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದರು. ಅವರ ಉತ್ತರಾಧಿಕಾರಿ ಜೆ. ಜಯಲಲಿತಾ ಕೂಡ 2004ರಲ್ಲಿ ಇಲ್ಲಿಗೆ ಭೇಟಿ ನೀಡಿ ಚಂಡಿಕಾಯಾಗ ನಡೆಸಿದ್ದರಲ್ಲದೆ, ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ ಸೌಕರ್ಯ ಹಾಗೂ ಅನ್ನದಾನಕ್ಕೆ ದೇಣಿಗೆ ನೀಡಿದ್ದರು. ಪ್ರಸ್ತುತ ತಮಿಳುನಾಡು ಮಾಜಿ ಸಿಎಂ ಸ್ಟಾಲಿನ್ ಪತ್ನಿ ದುರ್ಗಾ, ನಟರಾದ ಮೋಹನ್ ಲಾಲ್, ಜೂನಿಯರ್ ಎನ್‌ಟಿಆರ್ ಮತ್ತು ಗಾಯಕ ಕೆ.ಜೆ. ಯೇಸುದಾಸ್ ಅವರು ಈ ಕ್ಷೇತ್ರದ ಅಪ್ಪಟ ಭಕ್ತರಾಗಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖ
ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹೆಸರನ್ನು ಉಲ್ಲೇಖಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಕೆಲವು ವ್ಯಕ್ತಿಗಳ ಸೂಚನೆಯಂತೆ ಹೇಳಿಕೆ ನೀಡಲು ತನಗೆ ಒತ್ತಡ ಹೇರಲಾಗಿತ್ತು ಮತ್ತು ನಟ ಪ್ರಕಾಶ್ ರಾಜ್ ಅವರು ತಮ್ಮೊಂದಿಗೆ ತಮಿಳಿನಲ್ಲಿ ಮಾತನಾಡಿ ಪ್ರಚೋದಿಸಿದ್ದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ಆರೋಪಿಸಿದ್ದಾನೆ.
ನಟ ಪ್ರಕಾಶ್ ರಾಜ್ ಸ್ಪಷ್ಟನೆ
ಈ ಆರೋಪ ಕೇಳಿಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, "ಇದು ಅತ್ಯಂತ ಸೂಕ್ಷ್ಮ ವಿಷಯ ಹಾಗೂ ಕೋಟ್ಯಂತರ ಭಕ್ತರ ನಂಬಿಕೆಗೆ ಸಂಬಂಧಿಸಿದ್ದಾಗಿದೆ. ಸದ್ಯ ನಾನು ದೂರದ ಊರಿನಲ್ಲಿದ್ದು, ಇನ್ನೆರಡು ದಿನಗಳಲ್ಲಿ ಮರಳಿ ಮಾಧ್ಯಮಗಳ ಮುಂದೆ ಖುದ್ದಾಗಿ ಹಾಜರಾಗಿ ಎಲ್ಲ ಅನುಮಾನಗಳಿಗೆ ಸ್ಪಷ್ಟನೆ ನೀಡಲಿದ್ದೇನೆ. ಅಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಸಾರ್ವಜನಿಕರು ನಂಬಬಾರದು," ಎಂದು ಮನವಿ ಮಾಡಿದ್ದಾರೆ.
ಸತ್ಯಾಸತ್ಯತೆ ಪರಿಶೀಲನೆ; ಗೃಹ ಸಚಿವ ಖರ್ಗೆ
ಈ ಕುರಿತು ಪ್ರತಿಕ್ರಿಯಿಸಿರುವ ಗೃಹಸಚಿವ ಪ್ರಿಯಾಂಕ್ ಖರ್ಗೆ, "ಚಿನ್ನಯ್ಯ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಆತನ ಆರೋಪಗಳಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಕೇವಲ ಅರ್ಜಿಯಲ್ಲಿ ಹೆಸರಿದ್ದ ತಕ್ಷಣ ಯಾರೂ ಕ್ರಿಮಿನಲ್ ಆಗುವುದಿಲ್ಲ. ಮಾಧ್ಯಮಗಳ ಪ್ರಕಾರ ಇದರಲ್ಲಿ ಸುಮಾರು 200 ಕೋಟಿ ರೂ. ಷಡ್ಯಂತ್ರದ ಆರೋಪ ಕೇಳಿಬಂದಿದೆ, ಇದು ಸಣ್ಣ ಮೊತ್ತವಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಎಸ್‌ಐಟಿ ಮುಖ್ಯಸ್ಥರು ಕೋರ್ಟ್‌ಗೆ ನೇರವಾಗಿ ಉತ್ತರಿಸಲಿದ್ದಾರೆ," ಎಂದಿದ್ದಾರೆ. ಇನ್ನು ಎಸ್‌ಐಟಿ ತನಿಖಾ ವರದಿ ಕೋರಿ ಚಿನ್ನಯ್ಯ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರ ಮತ್ತು ಎಸ್‌ಐಟಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದೆ.
ಗ್ರಾಮೀಣ ಸೇವೆಗೆ ಬಾರದ ವೈದ್ಯರಿಗೆ ದಂಡಾಸ್ತ್ರ!
ಸರ್ಕಾರಿ ಕೋಟಾದಡಿ ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ, ನಿಯಮದಂತೆ ಕಡ್ಡಾಯ ಗ್ರಾಮೀಣ ಸೇವೆಗೆ ಹಾಜರಾಗದೆ ತಪ್ಪಿಸಿಕೊಳ್ಳಲು ಯತ್ನಿಸಿದ 450ಕ್ಕೂ ಹೆಚ್ಚು ವೈದ್ಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾರಿ ಶಾಕ್ ನೀಡಿದೆ. ಕಡ್ಡಾಯ ಸೇವೆಗೆ ಬೆನ್ನುತಿರುಗಿಸಿದ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿರುವ ಇಲಾಖೆಯು, ಪ್ರತಿಯೊಬ್ಬರಿಗೂ ತಲಾ 15 ಲಕ್ಷ ರೂ. ದಂಡ ವಿಧಿಸಿ ಲೀಗಲ್ ನೋಟಿಸ್ ಜಾರಿಗೊಳಿಸಿದೆ.
ಮುಂದಿನ ವರ್ಷದಿಂದ ದಂಡ ಏರಿಕೆ?
ಕರ್ನಾಟಕದ ಕಡ್ಡಾಯ ಸೇವಾ ನಿಯಮಾವಳಿ ಪ್ರಕಾರ, ಸರ್ಕಾರಿ ಕೋಟಾದಡಿ ಸೀಟು ಪಡೆದ ವೈದ್ಯರು ಪದವಿ ನಂತರ ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು. ಆದರೆ 2018-19ನೇ ಬ್ಯಾಚ್‌ನ 450ಕ್ಕೂ ಹೆಚ್ಚು ವೈದ್ಯರು ಇಲಾಖೆ ಎರಡು ಬಾರಿ ನೋಟಿಸ್ ನೀಡಿದ್ದರೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ ಪ್ರಸ್ತುತ 15 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಮುಂದಿನ ವರ್ಷದಿಂದ ಈ ದಂಡದ ಮೊತ್ತವನ್ನು ಬರೋಬ್ಬರಿ 25 ಲಕ್ಷ ರೂ.ಗಳಿಗೆ ಏರಿಕೆ ಮಾಡಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ಇನ್ಮುಂದೆ ಸಿಗಲ್ಲ ಪದವಿ ಸರ್ಟಿಫಿಕೇಟ್!
ದಂಡ ವಿಧಿಸಿದರೂ ವೈದ್ಯರು ಕಡ್ಡಾಯ ಸೇವೆಗೆ ಬಾರದೇ ಇದ್ದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಗ್ರಾಮೀಣ ಸೇವೆ ಸಲ್ಲಿಸದ ವೈದ್ಯರಿಗೆ ಇನ್ನು ಮುಂದೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ (RGUHS) ಮೂಲ ಪದವಿ ಪ್ರಮಾಣಪತ್ರ ನೀಡದಂತೆ ತಡೆಹಿಡಿಯುವ ಹೊಸ ಷರತ್ತನ್ನು ಜಾರಿಗೆ ತರಲು ಸಜ್ಜಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಮಾತನಾಡಿ, "ಸರ್ಕಾರಿ ನೇಮಕಾತಿಯಾಗಿಯೂ ಕರ್ತವ್ಯಕ್ಕೆ ಬಾರದವರ ವಿರುದ್ಧ ದಂಡ ವಿಧಿಸುವುದಷ್ಟೇ ಅಲ್ಲದೆ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗುವುದು," ಎಂದು ಎಚ್ಚರಿಸಿದ್ದಾರೆ. ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಯು.ಟಿ. ಖಾದರ್ ಅವರು ಆಸ್ಪತ್ರೆಗಳ ಮೂಲಸೌಕರ್ಯ ಪರಿಶೀಲನೆ ಹಾಗೂ ಆಯುಷ್ಮಾನ್ ಕಾರ್ಡ್‌ನಡಿ ಚಿಕಿತ್ಸಾ ಮಿತಿ ಹೆಚ್ಚಳದಂತಹ ಹಲವು ಸುಧಾರಣಾ ಕ್ರಮಗಳಿಗೆ ಕೈಹಾಕಿದ್ದಾರೆ.

