
ತಿರುಪತಿಯಲ್ಲಿ ಕನ್ನಡಿಗರಿಗೆ ಪಂಚತಾರಾ ವಸತಿ ಸೌಲಭ್ಯ; ಕರ್ನಾಟಕ ಭವನದ ಹೊಣೆ ಇನ್ನು ಕೆಎಸ್‌ಟಿಡಿಸಿಗೆ!
ಕರ್ನಾಟಕ ಧಾರ್ಮಿಕ ದತ್ತಿಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಪಂಚತಾರಾ ವಸತಿ ಸೌಲಭ್ಯ ನೀಡಲು ಸರ್ಕಾರ ನಿರ್ಧರಿಸಿದೆ.
ಆಂಧ್ರಪ್ರದೇಶದ ತಿರುಮಲದಲ್ಲಿರುವ ರಾಜ್ಯದ ಛತ್ರ ನಿರ್ವಹಣೆಯಲ್ಲಿನ ಲೋಪದೋಷಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕ ಧಾರ್ಮಿಕ ದತ್ತಿಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಪಂಚತಾರಾ ವಸತಿ ಸೌಲಭ್ಯ ನೀಡಲು ಸರ್ಕಾರ ನಿರ್ಧರಿಸಿದೆ.
ತಿರುಪತಿ ಭಕ್ತಾದಿಗಳಿಂದ ಕೇಳಿಬಂದ ಸಾಲು ಸಾಲು ದೂರುಗಳು ಹಾಗೂ ಸ್ವಚ್ಛತೆಯ ಕೊರತೆಯ ಹಿನ್ನೆಲೆಯಲ್ಲಿ, ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಖಾಸಗಿ ಸಂಸ್ಥೆಗೆ ಭಾರಿ ದಂಡ ವಿಧಿಸುವುದರ ಜೊತೆಗೆ, ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ.
ವಸತಿ ಗೃಹಗಳನ್ನು ಉತ್ಕೃಷ್ಟವಾಗಿ ನಿರ್ವಹಿಸುವ ಸಲುವಾಗಿ, ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಟಿಡಿಸಿ- Karnataka State Tourism Development Corporation) ಈ ಜವಾಬ್ದಾರಿಯನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಕೆ.ಎಸ್.ಟಿ.ಡಿ.ಸಿ. ಸಂಸ್ಥೆಯು ಉಸ್ತುವಾರಿ ವಹಿಸಿಕೊಳ್ಳುವುದರಿಂದ ತಿರುಮಲದಲ್ಲಿ ಕನ್ನಡಿಗರಿಗೆ ಪಂಚತಾರಾ ಮಟ್ಟದ ಸ್ವಚ್ಛತೆ ಮತ್ತು ವೃತ್ತಿಪರ ಸೇವೆ ದೊರೆಯಲಿದೆ ಎಂಬುದಾಗಿ ನಿರೀಕ್ಷಿಸಲಾಗಿದೆ.
ಕಳೆದ ತಿಂಗಳು (ಫೆಬ್ರವರಿ) ನಡೆದ ಉನ್ನತ ಮಟ್ಟದ ಸಭೆಯಲ್ಲಿ ಆಡಳಿತಾತ್ಮಕ ಬದಲಾವಣೆಗಳು, ಕೆ.ಎಸ್.ಟಿ.ಡಿ.ಸಿಗೆ ವಹಿಸಬೇಕಾದ ಜವಾಬ್ದಾರಿಗಳು ಮತ್ತು ಭಕ್ತಾದಿಗಳಿಗೆ ನೀಡಬೇಕಾದ ರಿಯಾಯಿತಿ ದರಗಳ ಕುರಿತು ಸಮಗ್ರವಾಗಿ ಚರ್ಚಿಸಲಾಗಿದೆ.
ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಮೂರು ತಿಂಗಳುಗಳ (ಆಗಸ್ಟ್-ಅಕ್ಟೋಬರ್ 2025) ನಿರ್ವಹಣಾ ವೆಚ್ಚದ ಬಿಲ್ಲಿನಲ್ಲಿ ಶೇ. 20 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಕಡಿತಗೊಳಿಸಲಾಗಿದೆ. ಸರ್ಕಾರದ ಹಣವನ್ನು ಪಡೆದು ಭಕ್ತಾದಿಗಳಿಗೆ ಸರಿಯಾದ ಸೇವೆ ನೀಡದ ಸಂಸ್ಥೆಗಳ ವಿರುದ್ಧ ಇದು ಕಠಿಣ ಎಚ್ಚರಿಕೆಯಾಗಿದೆ.
ತಿರುಮಲದ ಕರ್ನಾಟಕ ಭವನದಲ್ಲಿ ಕೊಠಡಿಗಳ ಸ್ವಚ್ಛತೆ, ಶೌಚಾಲಯಗಳ ನಿರ್ವಹಣೆ ಮತ್ತು ಭಕ್ತಾದಿಗಳಿಗೆ ನೀಡಬೇಕಾದ ಕನಿಷ್ಠ ಸೌಲಭ್ಯಗಳಲ್ಲಿ ಖಾಸಗಿ ಏಜೆನ್ಸಿಯು ತೀವ್ರ ನಿರ್ಲಕ್ಷ್ಯ ತೋರಿರುವುದು ಸರ್ಕಾರದ ಗಮನಕ್ಕೆ ಬಂದ ಬಳಿಕ ಈ ಕ್ರಮ ಕೈಗೊಂಡಿದೆ.
ವಿಧಾನ ಪರಿಷತ್ ಅಧಿವೇಶನದಲ್ಲಿ ಸದಸ್ಯ ಕೆ. ಗೋವಿಂದರಾಜು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಾರಿಗೆ ಹಾಗೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಲಿಖಿತ ಉತ್ತರ ನೀಡಿದರು. ತಿರುಪತಿಯಲ್ಲಿ ಕನ್ನಡಿಗರ ಹಿತರಕ್ಷಣೆ ಮತ್ತು ಅಲ್ಲಿನ ಕಟ್ಟಡಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ತಿರುಪತಿಗೆ ಭೇಟಿ ನೀಡುವ ಸಾವಿರಾರು ಕನ್ನಡಿಗರು ಕರ್ನಾಟಕ ಛತ್ರದ ವಸತಿ ಗೃಹಗಳ ಬಗ್ಗೆ ಹಲವಾರು ದೂರುಗಳನ್ನು ನೀಡಿದ್ದರು. ಕೊಠಡಿಗಳನ್ನು ಕಾಯ್ದಿರಿಸುವಿಕೆಯಲ್ಲಿ ಪಾರದರ್ಶಕತೆಯ ಕೊರತೆ, ಸಿಬ್ಬಂದಿಯ ಅಸಹಕಾರ ಮತ್ತು ಕಟ್ಟಡದ ಅಶುಚಿತ್ವದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳ ಲಾಭಕ್ಕೆ ಬಿಟ್ಟುಕೊಡುವ ಬದಲು, ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಮೂಲಕವೇ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರುಗಿಸಿದೆ.
ಭಕ್ತಾದಿಗಳಿಗಾಗುವ ಲಾಭಗಳು
ಕೆಎಸ್‌ಟಿಡಿಸಿಯ ವೃತ್ತಿಪರ ತಂಡವು ಛತ್ರದ ನಿರ್ವಹಣೆ ಮಾಡಲಿದೆ. ಆನ್‌ಲೈನ್ ಬುಕಿಂಗ್ ವ್ಯವಸ್ಥೆಯು ಮತ್ತಷ್ಟು ಸುಲಲಿತವಾಗಲಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಸತ್ರದಲ್ಲಿರುವ ಉಪಹಾರ ಮಂದಿರಗಳ ಗುಣಮಟ್ಟ ಸುಧಾರಿಸಲಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಸಿಬ್ಬಂದಿಗಳು ಭಕ್ತಾದಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತರಬೇತಿ ನೀಡಲಾಗುತ್ತದೆ.
ಐತಿಹಾಸಿಕ ಹೆಸರುಗಳು
ತಿರುಪತಿಯ ಕರ್ನಾಟಕ ಛತ್ರಗಳಿಗೆ ವಿವಿಧ ಐತಿಹಾಸಿಕ ಹೆಸರುಗಳನ್ನು ಇಡಲಾಗಿದೆ. ಹಂಪಿ ಬ್ಲಾಕ್‌ನಲ್ಲಿ 71 ಎಸಿ ಕೊಠಡಿಗಳು ಮತ್ತು 39 ಎಸಿ ಸೂಟ್ಸ್‌ಗಳಿವೆ. ಬಾದಾಮಿ ಬ್ಲಾಕ್‌ನಲ್ಲಿ 132 ಎಸಿ ಅಲ್ಲದ ಕೊಠಡಿಗಳು ಮತ್ತು 12 ಹಾಸಿಗೆಗಳ ಡಾರ್ಮಿಟರಿ ವ್ಯವಸ್ಥೆ ಇದೆ. ಶ್ರೀಕೃಷ್ಣರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪವು ದೊಡ್ಡ ಸಮಾರಂಭಗಳಿಗೆ ಲಭ್ಯವಿದೆ.
ಶ್ರೀ ಕೃಷ್ಣದೇವರಾಯ ಬ್ಲಾಕ್‌ನ ಕಟ್ಟಡದಲ್ಲಿ 36 ವಿವಿಐಪಿ ಕೊಠಡಿಗಳಿದ್ದು, ಪ್ರಸ್ತುತ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹಳೆಬೀಡು ಬ್ಲಾಕ್‌ನಲ್ಲಿ 86 ಕೊಠಡಿಗಳಿದ್ದು, ಪ್ರಸ್ತುತ ನವೀಕರಣಗೊಳ್ಳುತ್ತಿವೆ. ಸದ್ಯಕ್ಕೆ 30 ಕೊಠಡಿಗಳನ್ನು ಮಾತ್ರ ಯಾತ್ರಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಹಿಂದೆ ಕೊಠಡಿಗಳ ಹಂಚಿಕೆಯಲ್ಲಿ ಗೊಂದಲವಿತ್ತು ಎಂಬ ದೂರುಗಳ ಹಿನ್ನೆಲೆಯಲ್ಲಿ, ಸರ್ಕಾರವು ಈಗ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ ಎಂದು ವಿವರಿಸಿದರು.
ಆನ್‌ಲೈನ್ ಮೂಲಕ ಕಾಯ್ದಿರಿಸುವಿಕೆ
ಈ ಮೊದಲು ಕೊಠಡಿಗಳ ಹಂಚಿಕೆಯಲ್ಲಿ ಗೊಂದಲವಿತ್ತು ಎಂಬ ದೂರುಗಳ ಹಿನ್ನೆಲೆಯಲ್ಲಿ, ಸರ್ಕಾರವು ಈಗ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಒಟ್ಟು ಕೊಠಡಿಗಳ ಪೈಕಿ ಶೇ. 80 ರಷ್ಟು ಕೊಠಡಿಗಳನ್ನು ಪ್ರವಾಸಿಗರು ಮತ್ತು ಭಕ್ತಾದಿಗಳು ಅಧಿಕೃತ ವೆಬ್‌ಸೈಟ್ www.karnatakamptesaccommodation.com ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು.
ಉಳಿದ ಶೇ. 20 ರಷ್ಟು ಕೊಠಡಿಗಳನ್ನು ಸ್ಥಳದಲ್ಲೇ ಬರುವ ಭಕ್ತಾದಿಗಳಿಗೆ ಮತ್ತು ತುರ್ತು ಸಂದರ್ಭಗಳಿಗಾಗಿ ಮೀಸಲಿಡಲಾಗಿದೆ. ಛತ್ರದ ವಸತಿ ಗೃಹದ ಕೊಠಡಿಗಳನ್ನು ರಾಜ್ಯಪಾಲರು, ಮುಖ್ಯಮಂತ್ರಿಗಳು, ನ್ಯಾಯಾಧೀಶರು, ಕೇಂದ್ರ ಸಚಿವರು, ಸಂಸದರು, ವಿಧಾನಸಭಾ, ವಿಧಾನ ಪರಿಷತ್ತಿನ ಸದಸ್ಯರು, ಶಾಸಕರುಗಳ ಕಚೇರಿಗಳಿಂದ ನೀಡುವ ಶಿಫಾರಸ್ಸು ಪತ್ರಗಳಿಗೆ ಆದ್ಯತೆಯ ಮೇರೆಗೆ ಕೊಠಡಿಗಳ ಲಭ್ಯತೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

