
ದಳಪತಿ ವಿಜಯ್ ರಾಜಕೀಯ ಪ್ರವೇಶ: ತಮಿಳುನಾಡು ಚುನಾವಣೆಗೆ ಬೆಂಗಳೂರು ಬೆಂಬಲ
ಬೆಳ್ಳಿತೆರೆಯಿಂದ ರಾಜಕೀಯಕ್ಕೆ ಕಾಲಿಟ್ಟ ವಿಜಯ್ ಅವರ 'ಟಿವಿಕೆ' ಪಕ್ಷಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಬೆಂಬಲ ವ್ಯಕ್ತವಾಗಿದೆ.2026ರ ಚುನಾವಣೆ ಹಾಗೂ ವಿಜಯ್ ಪರವಾಗಿ ಅಭಿಮಾನಿಗಳು ವ್ಯಕ್ತಪಡಿಸಿರುವ ವಿಶ್ವಾಸದ ಸಂಪೂರ್ಣ ವಿವರ ಇಲ್ಲಿದೆ.
ತಮಿಳುನಾಡಿನ ರಾಜಕೀಯ ಇತಿಹಾಸಕ್ಕೂ ಬೆಳ್ಳಿತೆರೆಗೂ ದಶಕಗಳ ಅವಿನಾಭಾವ ಸಂಬಂಧವಿದೆ. ಕರುಣಾನಿಧಿ, ಎಂಜಿಆರ್ ಮತ್ತು ಜಯಲಲಿತಾರಂತಹ ಘಟಾನುಘಟಿಗಳು ಸಿನಿಮಾ ರಂಗವನ್ನೇ ಅಡಿಪಾಯವಾಗಿಸಿಕೊಂಡು ರಾಜಕೀಯ ಗದ್ದುಗೆ ಏರಿದವರು. ಈಗ ಅದೇ ಹಾದಿಯಲ್ಲಿ ದಳಪತಿ ವಿಜಯ್ ತಮ್ಮ 'ತಮಿಳಗ ವೆಟ್ರಿ ಕಳಗಂ' ಮೂಲಕ 2026ರ ಚುನಾವಣಾ ಕಣಕ್ಕೆ ಅಧಿಕೃತವಾಗಿ ಇಳಿದಿದ್ದಾರೆ. ಆದರೆ, ಈ ರಾಜಕೀಯ ಬದಲಾವಣೆಯ ಕಂಪನ ಕೇವಲ ತಮಿಳುನಾಡಿಗೆ ಸೀಮಿತವಾಗಿಲ್ಲ. ಗಡಿ ದಾಟಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಷಾಂತರ ತಮಿಳು ಭಾಷಿಕರು ಮತ್ತು ವಿಜಯ್ ಅಭಿಮಾನಿಗಳಲ್ಲಿ ಈಗ ಹೊಸ ಹುಮ್ಮಸ್ಸು ಮನೆಮಾಡಿದೆ. ದಶಕಗಳಿಂದ ಕೇವಲ ಸಮಾಜಮುಖಿ ಕಾರ್ಯಗಳಿಗೆ ಸೀಮಿತವಾಗಿದ್ದ 'ವಿಜಯ್ ಮಕ್ಕಳ ಇಯಕ್ಕಂ' ಈಗ ರಾಜಕೀಯ ಪಕ್ಷವಾಗಿ ರೂಪಾಂತರಗೊಂಡಿರುವುದು ತಮಿಳು ಭಾಷಿಕರಿಗೆ ವಿಶೇಷವಾಗಿ ವಿಜಯ್ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ತಂದಿದೆ.
ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಎಂ. ಶ್ರೀನಿವಾಸ್ ಎಂಬ ಅಭಿಮಾನಿ, ``ತಮಗೆ ಸದ್ಯ ತಮಿಳುನಾಡಿನಲ್ಲಿ ಮತದಾನದ ಹಕ್ಕು ಇಲ್ಲದಿದ್ದರೂ ತಮ್ಮ ಕುಟುಂಬ ಮತ್ತು ಸ್ನೇಹಿತರ ಮೇಲೆ ಪ್ರಭಾವ ಬೀರಿ ವಿಜಯ್ ಅವರಿಗೆ ಮತ ಹಾಕಿಸುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ವಿಜಯ್ ಅಧಿಕಾರಕ್ಕೆ ಬಂದರೆ ಖಂಡಿತ ಬದಲಾವಣೆ ಸಾಧ್ಯʼʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಅಭಿಮಾನಿ ರಾಜೇಂದ್ರನ್ ಅವರು ಮಾತನಾಡಿ, ʻʻತಮಿಳುನಾಡಿನಲ್ಲಿ ದಶಕಗಳಿಂದ ಕೇವಲ ಎರಡು ಪಕ್ಷಗಳು ಅಧಿಕಾರವನ್ನು ಹಂಚಿಕೊಳ್ಳುತ್ತಿವೆ. ಜನರಿಗೆ ಈಗ ಬದಲಾವಣೆಯ ಅವಶ್ಯಕತೆಯಿದೆ. ಒಬ್ಬ ಯುವ ನಾಯಕನ ಅಗತ್ಯವಿದೆ. ಬೆಂಗಳೂರಿನಲ್ಲಿ ನೆಲೆಸಿದ್ದರೂ ತಮಿಳುನಾಡಿನ ಮೂಲದವರಾಗಿರುವ ಇವರು, 2026ರಲ್ಲಿ ವಿಜಯ್ ಮುಖ್ಯಮಂತ್ರಿಯಾಗುವುದನ್ನು ನೋಡಲು ಕಾತರರಾಗಿದ್ದಾರೆ. ವಿಜಯ್ ಅವರು ಈ ಮೊದಲಿನಿಂದಲೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡುತ್ತಾ ಬಂದಿರುವ ಸಾಮಾಜಿಕ ಕಾರ್ಯಗಳು ಅವರನ್ನು ಜನಸಾಮಾನ್ಯರಿಗೆ ಹತ್ತಿರವಾಗಿಸಿವೆ. ಇದೇ ಅಭಿಪ್ರಾಯವನ್ನು ಹಂಚಿಕೊಂಡ ಪುಷ್ಪರಾಣಿ ಅವರು, ವಿಜಯ್ ಈವರೆಗೆ ಯಾರು ಮಾಡದಂತಹ ಸಹಾಯವನ್ನು ತಮಿಳು ಜನರಿಗೆ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
"ನಮ್ಮ ಇಡೀ ಕುಟುಂಬವೇ ವಿಜಯ್ ಅವರ ಅಭಿಮಾನಿಗಳು. ಹಿಂದೆ ನಮ್ಮ ತಂದೆ-ತಾಯಿ ಎಂಜಿಆರ್ (MGR) ಅವರ ಅಭಿಮಾನಿಗಳಾಗಿದ್ದರು, ಆದರೆ ಈಗ ಎಲ್ಲರೂ ವಿಜಯ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಸೋದರಿಯರು ಸೇರಿದಂತೆ ನಾವೆಲ್ಲರೂ ಈ ಬಾರಿ ವಿಜಯ್ ಅವರಿಗೇ ವೋಟ್ ಮಾಡುತ್ತೇವೆ" ಎಂದು ವೇಡಿಯಪ್ಪನ್, ವಿಜಯ್ ಅಭಿಮಾನಿ ಅವರು ತಿಳಿಸಿದರು.
ಆದರೆ, ರಾಜಕೀಯದ ಹಾದಿ ಸಿನಿಮಾದಷ್ಟು ಸುಲಭವಲ್ಲ. ಇಲ್ಲಿ ಎದುರಾಳಿಗಳಾಗಿ ದಶಕಗಳ ಕಾಲ ರಾಜಕೀಯದಲ್ಲಿ ಪಳಗಿರುವ ಘಟಾನುಘಟಿ ನಾಯಕರಿದ್ದಾರೆ. ಸಿನಿಮಾದಲ್ಲಿರುವಂತೆ ಇಲ್ಲಿ ಟೇಕ್ ಅಥವಾ ರಿಟೇಕ್ಗಳಿಗೆ ಅವಕಾಶವಿರುವುದಿಲ್ಲ. ಆದರೂ ವಿಜಯ್ ಅವರಿಗಿರುವ 'ಯೂತ್ ಐಕಾನ್' ಇಮೇಜ್ ಮತ್ತು ಜನಸಾಮಾನ್ಯರ ಜೊತೆಗಿನ ನೇರ ಒಡನಾಟ ಅವರಿಗೆ ಅತಿದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
ಬೆಂಗಳೂರಿನಿಂದ ಸಿಗುತ್ತಿರುವ ಈ ಅಭೂತಪೂರ್ವ ಬೆಂಬಲ ಮತ್ತು ಸಂಘಟಿತ ಶಕ್ತಿ 2026ರ ತಮಿಳುನಾಡು ಚುನಾವಣೆಯ ಸಮೀಕರಣವನ್ನೇ ಬದಲಿಸಿದರೂ ಅಚ್ಚರಿಯಿಲ್ಲ. ದ್ರಾವಿಡ ರಾಜಕಾರಣದ ಈ ಹೊಸ ಆಟದಲ್ಲಿ ಬೆಳ್ಳಿತೆರೆಯ ದಳಪತಿ ರಾಜಕೀಯದ ಗಣಪತಿಯಾಗಿ ಹೊರಹೊಮ್ಮುತ್ತಾರಾ ಮತ್ತು ತಮಿಳುನಾಡಿನ ಜನತೆ ಈ ಸ್ಟಾರ್ ನಟನನ್ನು ತಮ್ಮ ಜನನಾಯಕನಾಗಿ ಸ್ವೀಕರಿಸುತ್ತಾರಾ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

