ಮತಾಂತರವಾದರೆ ಎಸ್‌ಸಿ ಮೀಸಲಾತಿ ರದ್ದು: ರಾಜ್ಯದ ದಲಿತ ಕ್ರೈಸ್ತರಿಗೆ ತಪ್ಪಲಿದೆಯೇ ಸೌಲಭ್ಯ?
x

ಮತಾಂತರವಾದರೆ ಎಸ್‌ಸಿ ಮೀಸಲಾತಿ ರದ್ದು: ರಾಜ್ಯದ ದಲಿತ ಕ್ರೈಸ್ತರಿಗೆ ತಪ್ಪಲಿದೆಯೇ ಸೌಲಭ್ಯ?

ರಾಜ್ಯದಲ್ಲಿ ಎಸ್‌ಸಿಗೆ ಇರುವ ಮೀಸಲಾತಿ ಲಾಭ ಇನ್ನು ಮುಂದೆ ಮತಾಂತರಗೊಂಡವರಿಗೆ ಸಿಗುವುದಿಲ್ಲ. ಉದ್ಯೋಗದಲ್ಲಿ ಬಡ್ತಿ, ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಸಾಮಾನ್ಯ ವರ್ಗ ಅಥವಾ ಒಬಿಸಿ ಪಟ್ಟಿಗೆ ಸೇರಬೇಕಾಗುತ್ತದೆ.


Click the Play button to hear this message in audio format

ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿ ಅನ್ವಯಿಸುವುದಿಲ್ಲ ಎಂಬ ಸುಪ್ರೀಂಕೋರ್ಟ್‌ ತೀರ್ಪು ಕರ್ನಾಟಕದಲ್ಲೂ ಸಂಚಲನ ಮೂಡಿಸಿದೆ. ಧರ್ಮ ಮತ್ತು ಸಾಂವಿಧಾನಿಕ ಹಕ್ಕುಗಳ ನಡುವಿನ ಗೆರೆಯನ್ನು ಮತ್ತಷ್ಟು ಸ್ಪಷ್ಟಪಡಿಸಿರುವ ಈ ತೀರ್ಪು ರಾಜ್ಯದ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ವಲಯಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಿಗೆ ನಾಂದಿ ಹಾಡಲಿದೆ.

ಪರಿಶಿಷ್ಟ ಜಾತಿಯ ಸ್ಥಾನಮಾನವು ಕೇವಲ ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮವನ್ನು ಪಾಲಿಸುವವರಿಗೆ ಮಾತ್ರ ಸೀಮಿತವಾಗಿದೆ. ನ್ಯಾಯಾಲಯದ ಪ್ರಕಾರ, ಒಬ್ಬ ವ್ಯಕ್ತಿಯು ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಮರುಕ್ಷಣವೇ ಆತ ತನ್ನ ಪರಿಶಿಷ್ಟ ಜಾತಿ ಎಂಬ ಅಸ್ಮಿತೆಯನ್ನು ಕಳೆದುಕೊಳ್ಳುತ್ತಾನೆ. ಆತ ಎಷ್ಟೇ ಸಾಮಾಜಿಕವಾಗಿ ಹಿಂದುಳಿದಿದ್ದರೂ, ಶಾಸನಬದ್ಧವಾಗಿ ಎಸ್‌ಸಿ ಮೀಸಲಾತಿಯನ್ನು ಕೇಳಲು ಅರ್ಹನಾಗಿರುವುದಿಲ್ಲ. 2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ದಲಿತ ಕ್ರಿಶ್ಚಿಯನ್ನರಿದ್ದಾರೆ. ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದಾಗಿ ಈ ಸಮುದಾಯಕ್ಕೆ ಈಗ ದೊಡ್ಡ ಆಘಾತ ಎದುರಾಗಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸಿಗುವ ಮೀಸಲಾತಿಯ ಲಾಭ ಇನ್ನು ಮುಂದೆ ಮತಾಂತರಗೊಂಡವರಿಗೆ ಸಿಗುವುದಿಲ್ಲ. ಉದ್ಯೋಗದಲ್ಲಿ ಬಡ್ತಿ, ಹಿರಿತನ ಮತ್ತು ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಇವರು ಸಾಮಾನ್ಯ ವರ್ಗ ಅಥವಾ ಒಬಿಸಿ ಪಟ್ಟಿಗೆ ಸೇರಬೇಕಾಗುತ್ತದೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಸಿಗುತ್ತಿದ್ದ ಎಸ್‌ಸಿ ಕೋಟಾದ ಸೀಟುಗಳು ಮತ್ತು ವಿಶೇಷ ವಿದ್ಯಾರ್ಥಿವೇತನಗಳು ಈಗ ಕೈತಪ್ಪಲಿವೆ. ಇದು ವಿಶೇಷವಾಗಿ ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಬಡ ದಲಿತ ಕ್ರಿಶ್ಚಿಯನ್ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅಡ್ಡಿಯಾಗಬಹುದು ಎಂದು ಹೇಳಲಾಗಿದೆ.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ರಕ್ಷಣೆ ರದ್ದು

ನ್ಯಾಯಾಲಯದ ತೀರ್ಪಿನ ಅತ್ಯಂತ ಗಂಭೀರವಾದ ಅಂಶವೆಂದರೆ ಕಾನೂನು ರಕ್ಷಣೆ. ಮತಾಂತರಗೊಂಡ ವ್ಯಕ್ತಿಯು ಎಸ್‌ಸಿ ಸ್ಥಾನಮಾನ ಕಳೆದುಕೊಂಡರೆ, ಆತನ ಮೇಲೆ ನಡೆಯುವ ಸಾಮಾಜಿಕ ದೌರ್ಜನ್ಯಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-1989 ಅಡಿಯಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಾಗುವುದಿಲ್ಲ. ಇದು ಸಮುದಾಯದಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸಿದೆ. ಜಾತಿ ದೌರ್ಜನ್ಯಗಳು ನಡೆದಾಗ ಅವರಿಗೆ ಸಿಗುತ್ತಿದ್ದ ವಿಶೇಷ ಕಾನೂನು ರಕ್ಷಣೆ ಈಗ ಮರೀಚಿಕೆಯಾಗಲಿದೆ.

ಮತಾಂತರಕ್ಕೆ ಮೀಸಲಾತಿ ಏಕೆ ಅಡ್ಡಿ?

ಅಸ್ಪೃಶ್ಯತೆ ಎನ್ನುವುದು ಹಿಂದೂ ಧರ್ಮದ ಚೌಕಟ್ಟಿನಲ್ಲಿರುವ ಒಂದು ಪಿಡುಗು. ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಗಳು ಸಮಾನತೆಯನ್ನು ಪ್ರತಿಪಾದಿಸುತ್ತವೆ ಮತ್ತು ಅವುಗಳಲ್ಲಿ ಜಾತಿ ಪದ್ಧತಿ ಇಲ್ಲ ಎಂಬುದು ಮತಾಂತರಗೊಂಡ ಕೆಲವರ ವಾದ. ಒಬ್ಬ ವ್ಯಕ್ತಿ ಅಸ್ಪೃಶ್ಯತೆಯಿಂದ ಮುಕ್ತಿ ಪಡೆಯಲು ಬೇರೆ ಧರ್ಮಕ್ಕೆ ಹೋದ ಮೇಲೆ, ಮತ್ತೆ ಅದೇ ಅಸ್ಪೃಶ್ಯತೆಯ ಆಧಾರದ ಮೇಲೆ ಮೀಸಲಾತಿ ಕೇಳುವುದು ವಿರೋಧಾಭಾಸ ಎಂಬುದು ಸರ್ಕಾರದ ವಾದವಾಗಿದೆ. ಒಂದು ವೇಳೆ ಮತಾಂತರಗೊಂಡವರಿಗೂ ಎಸ್‌ಸಿ ಮೀಸಲಾತಿ ನೀಡಿದರೆ, ಹಿಂದೂ ದಲಿತರಿಗೆ ಸಿಗುವ ಸೀಮಿತ ಅವಕಾಶಗಳಲ್ಲಿ ಪಾಲು ಹಂಚಿಕೆಯಾಗುತ್ತದೆ. ಇದರಿಂದ ನಿಜವಾದ ಅಸ್ಪೃಶ್ಯತೆ ಅನುಭವಿಸುತ್ತಿರುವವರಿಗೆ ಅನ್ಯಾಯವಾಗುತ್ತದೆ ಎಂಬ ಆತಂಕವೂ ಇದೆ.

ರಾಜಕೀಯ ಸಂಚಲನ, ವೋಟ್ ಬ್ಯಾಂಕ್ ಲೆಕ್ಕಾಚಾರ

ರಾಜ್ಯದ ರಾಜಕೀಯದಲ್ಲಿ ಈ ತೀರ್ಪು ಹೊಸ ಧ್ರುವೀಕರಣಕ್ಕೆ ಕಾರಣವಾಗಲಿದೆ. ಮತಾಂತರವನ್ನು ಮತ್ತು ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸುವವರ ನಿಲುವಿಗೆ ಸುಪ್ರೀಂಕೋರ್ಟ್ ಪೂರಕವಾಗಿ ಸ್ಪಂದಿಸಿದಂತಾಗಿದೆ. ದಲಿತ ಮತ್ತು ಅಲ್ಪಸಂಖ್ಯಾತ ಮತಗಳನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್‌ಗೆ ಇದು ದೊಡ್ಡ ತಲೆನೋವಾಗಿದೆ. ಕ್ರಿಶ್ಚಿಯನ್ ಸಮುದಾಯವನ್ನು ಓಲೈಸಬೇಕೋ ಅಥವಾ ಹಿಂದೂ ದಲಿತ ಮತದಾರರ ಕೆಂಗಣ್ಣಿಗೆ ಗುರಿಯಾಗಬೇಕೋ ಎಂಬ ಇಕ್ಕಟ್ಟಿನಲ್ಲಿ ಸರ್ಕಾರ ಸಿಲುಕಿದೆ. ವಿಶೇಷವಾಗಿ ಕರಾವಳಿ ಕರ್ನಾಟಕ ಮತ್ತು ಮೈಸೂರು ಭಾಗದಲ್ಲಿ ಇದರ ರಾಜಕೀಯ ಪರಿಣಾಮಗಳು ಹೆಚ್ಚಿರಲಿವೆ ಎನ್ನಲಾಗಿದೆ.

'ಘರ್ ವಾಪಸಿ' ಹೆಚ್ಚಾಗುವ ಸಾಧ್ಯತೆ

ಮೀಸಲಾತಿ ಸೌಲಭ್ಯಗಳನ್ನು ಉಳಿಸಿಕೊಳ್ಳಲು ಮತಾಂತರಗೊಂಡವರು ಮತ್ತೆ ಮಾತೃ ಧರ್ಮಕ್ಕೆ ಮರಳುವ ಸಾಧ್ಯತೆ ಇದೆ. ಒಂದು ವೇಳೆ ವ್ಯಕ್ತಿ ಮರಳಿ ಬಂದು ಆ ಸಮುದಾಯ ಅವರನ್ನು ಒಪ್ಪಿಕೊಂಡರೆ ಅವರಿಗೆ ಮತ್ತೆ ಎಸ್‌ಸಿ ಸ್ಥಾನಮಾನ ಸಿಗಬಹುದು ಎಂದು ನ್ಯಾಯಾಲಯ ಸೂಚ್ಯವಾಗಿ ಹೇಳಿದೆ. ಜನರು ಅಧಿಕೃತವಾಗಿ ಮತಾಂತರಗೊಳ್ಳದೆ, ದಾಖಲೆಗಳಲ್ಲಿ ಹಿಂದೂಗಳಾಗಿಯೇ ಉಳಿದು ಆಚರಣೆಯಲ್ಲಿ ಕ್ರೈಸ್ತ ಅಥವಾ ಇಸ್ಲಾಂ ಧರ್ಮ ಪಾಲಿಸುವ 'ಗೌಪ್ಯ ಮತಾಂತರ' ಹೆಚ್ಚಾಗುವ ಅಪಾಯವಿದೆ. ಇದು ಜಾತಿ ಪ್ರಮಾಣ ಪತ್ರಗಳ ಪರಿಶೀಲನೆಯಲ್ಲಿ ಅಧಿಕಾರಿಗಳಿಗೆ ದೊಡ್ಡ ಸವಾಲಾಗಲಿದೆ.

2007ರಲ್ಲಿ ರಂಗನಾಥ್ ಮಿಶ್ರಾ ಆಯೋಗವು ಮತಾಂತರದ ಹೊರತಾಗಿಯೂ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ಅವೈಜ್ಞಾನಿಕ ಮತ್ತು ಪಕ್ಷಪಾತ ಎಂದು ತಿರಸ್ಕರಿಸಿತ್ತು. ಪ್ರಸ್ತುತ 2022ರಲ್ಲಿ ನೇಮಕಗೊಂಡಿರುವ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆಯೋಗವು ಈ ಬಗ್ಗೆ ಸಮಗ್ರ ಅಧ್ಯಯನ ನಡೆಸುತ್ತಿದೆ. ಈ ಆಯೋಗದ ವರದಿ ಬರುವವರೆಗೂ ಸುಪ್ರೀಂ ಕೋರ್ಟ್‌ನ ಈ ತೀರ್ಪೇ ಅಂತಿಮವಾಗಿದ್ದು, ಮತಾಂತರಿಗಳಿಗೆ ಎಸ್‌ಸಿ ಭಾಗ್ಯ ಸದ್ಯಕ್ಕಂತೂ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಆಡಳಿತಾತ್ಮಕ ಬಿಗಿಗೊಳಿಸುವಿಕೆ

ಇನ್ನು ಮುಂದೆ ರಾಜ್ಯ ಸರ್ಕಾರವು ಜಾತಿ ಪ್ರಮಾಣ ಪತ್ರ ನೀಡುವಾಗ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಜಾತಿ ಪ್ರಮಾಣ ಪತ್ರ ಪಡೆಯುವಾಗ ಅಥವಾ ಉದ್ಯೋಗಕ್ಕೆ ಸೇರುವಾಗ ವ್ಯಕ್ತಿಯ ಧರ್ಮದ ಬಗ್ಗೆ ಸೂಕ್ಷ್ಮ ತಪಾಸಣೆ ನಡೆಯಲಿದೆ. ಮೀಸಲಾತಿ ಹೆಚ್ಚಳದ ಕುರಿತಾದ ಹೈಕೋರ್ಟ್ ವಿಚಾರಣೆಯ ಮೇಲೂ ಈ ತೀರ್ಪು ಪರೋಕ್ಷ ಪ್ರಭಾವ ಬೀರಲಿದ್ದು, ಮೀಸಲಾತಿಯ ಹಂಚಿಕೆಯಲ್ಲಿ ದತ್ತಾಂಶಗಳ ನಿಖರತೆ ಈಗ ಅನಿವಾರ್ಯವಾಗಿದೆ.

ಈ ಕುರಿತು 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿದ ಡಾ. ಬಾಬಾಸಾಹೇಬ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಭೀಮಪ್ಪ ಎಂ., "ಸುಪ್ರೀಂಕೋರ್ಟ್ ಆದೇಶವು ಸ್ವಾಗತಾರ್ಹ. ಮತಾಂತರಗೊಂಡ ಬಹುತೇಕ ವ್ಯಕ್ತಿಗಳು ಎರಡೆರಡು ಕಡೆ ಸೌಲಭ್ಯ ಪಡೆದುಕೊಳ್ಳುತ್ತಾರೆ. ದಲಿತ ಸಮುದಾಯದಲ್ಲಿ ಗೌರವ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಬಹುತೇಕರು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಳ್ಳುತ್ತಾರೆ. ಅಲ್ಲಿ ಗೌರವದ ಜತೆಗೆ ಸೌಲಭ್ಯಗಳನ್ನೂ ಪಡೆದುಕೊಳ್ಳುತ್ತಾರೆ. ಹೀಗಿರುವಾಗ ದಲಿತ ಸಮುದಾಯದ ಸೌಲಭ್ಯಗಳನ್ನು ಪಡೆಯುವುದು ಎಷ್ಟು ಸರಿ? ಸುಪ್ರೀಂಕೋರ್ಟ್ ತೀರ್ಪಿನಿಂದ ನಿಜವಾದ ದಲಿತರಿಗೆ ಸೌಲಭ್ಯ ದೊರಕಲಿದೆ. ಎರಡೆರಡು ಕಡೆ ಸೌಲಭ್ಯಗಳನ್ನು ಪಡೆಯುವುದು ಸರಿಯಲ್ಲ," ಎಂದು ಹೇಳಿದರು.

ತೀರ್ಪಿಗೆ ಕಾರಣವೇನು?

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿಯಾದ ಆನಂದ್ ಅವರು ಮೂಲತಃ 'ಮಾದಿಗ' (ಪರಿಶಿಷ್ಟ ಜಾತಿ) ಸಮುದಾಯದಲ್ಲಿ ಜನಿಸಿದವರು. ಆದರೆ, ಸುಮಾರು ಹತ್ತು ವರ್ಷಗಳ ಹಿಂದೆ ಹಿಂದೂ ಧರ್ಮವನ್ನು ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಆನಂದ್ ಕೇವಲ ಧರ್ಮ ಪಾಲನೆಯಷ್ಟೇ ಅಲ್ಲದೆ, ಕ್ರಿಶ್ಚಿಯನ್ ಧರ್ಮದ ಧರ್ಮಗುರುವಾಗಿ (ಪಾಸ್ಟರ್) ಕೆಲಸ ಮಾಡುತ್ತಿದ್ದರು. ತಮ್ಮ ಹಳ್ಳಿಯಲ್ಲಿಯೇ ಪ್ರಾರ್ಥನಾ ಕೂಟಗಳನ್ನು ನಡೆಸುತ್ತಾ, ಧರ್ಮ ಪ್ರಚಾರದಲ್ಲಿ ತೊಡಗಿದ್ದರು. ಈ ನಡುವೆ, ಆನಂದ್ ಮತ್ತು ಅವರ ಗ್ರಾಮದ ಅಕ್ಕಲ ರಾಮಿರೆಡ್ಡಿ ಹಾಗೂ ಇತರ ಕೆಲವರ ನಡುವೆ ವಿವಾದವೊಂದು ಸಂಭವಿಸಿದ್ದು, ಈ ಸಂದರ್ಭದಲ್ಲಿ ರಾಮಿರೆಡ್ಡಿ ಮತ್ತು ತಂಡದವರು ಆನಂದ್ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ತಕ್ಷಣವೇ ಆನಂದ್ ಅವರು ಪೊಲೀಸ್ ಠಾಣೆಗೆ ತೆರಳಿ, ತಮ್ಮ ಮೇಲೆ ಹಲ್ಲೆ ನಡೆದಿದೆ ಮತ್ತು ತಾವು ದಲಿತರಾಗಿರುವುದರಿಂದ ಎದುರಾಳಿಗಳು ಜಾತಿ ನಿಂದನೆ ಮಾಡಿದ್ದಾರೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ದಾಖಲಿಸಿದ್ದರು. ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿದ್ದರು.

ಹೈಕೋರ್ಟ್‌ನಲ್ಲಿ ವಿಚಾರಣೆ

ತಮ್ಮ ವಿರುದ್ಧ ದಾಖಲಾದ ಎಸ್‌ಸಿ/ಎಸ್‌ಟಿ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಕ್ಕಲ ರಾಮಿರೆಡ್ಡಿ ಆಂಧ್ರಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅವರು ಮಂಡಿಸಿದ ವಾದವು ಅತ್ಯಂತ ತಾರ್ಕಿಕವಾಗಿತ್ತು. "ದೂರುದಾರ ಆನಂದ್ ಅವರು ಕಳೆದ 10 ವರ್ಷಗಳಿಂದ ಕ್ರಿಶ್ಚಿಯನ್ ಪಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ಪದ್ಧತಿ ಇಲ್ಲ. ಒಬ್ಬ ವ್ಯಕ್ತಿ ಮತಾಂತರಗೊಂಡ ಮರುಕ್ಷಣವೇ ಆತ ಹಿಂದೂ ಧರ್ಮದ ಜಾತಿ ಚೌಕಟ್ಟಿನಿಂದ ಹೊರಬರುತ್ತಾನೆ. ಹೀಗಾಗಿ, ಆತ ಇನ್ನು ಮುಂದೆ ಪರಿಶಿಷ್ಟ ಜಾತಿಯ ವ್ಯಕ್ತಿ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಆತನಿಗೆ ಎಸ್‌ಸಿ/ಎಸ್‌ಟಿ ಕಾಯ್ದೆಯ ರಕ್ಷಣೆ ಅನ್ವಯಿಸುವುದಿಲ್ಲ," ಎಂದು ವಾದಿಸಲಾಯಿತು. ಈ ವಾದವನ್ನು ಆಲಿಸಿದ ಆಂಧ್ರ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್. ಹರಿನಾಥ್ 2025ರ ಮೇ ತಿಂಗಳಲ್ಲಿ ಐತಿಹಾಸಿಕ ತೀರ್ಪು ನೀಡಿದರು. ಆನಂದ್ ಅವರು ಧರ್ಮಗುರುವಾಗಿರುವುದರಿಂದ ಅವರ ಎಸ್‌ಸಿ ಸ್ಥಾನಮಾನ ಈಗಾಗಲೇ ರದ್ದಾಗಿದೆ ಎಂದು ಹೇಳಿ, ಆರೋಪಿಗಳ ಮೇಲಿದ್ದ ಎಸ್‌ಸಿ/ಎಸ್‌ಟಿ ಪ್ರಕರಣದ ಎಫ್‌ಐಆರ್ ಅನ್ನು ರದ್ದುಗೊಳಿಸಿದರು.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪಾಸ್ಟರ್ ಆನಂದ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಈ ಅರ್ಜಿಯನ್ನು ವಜಾಗೊಳಿಸಿತು.

Read More
Next Story