
ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಪೆಟಾ ಮೇಲ್ಮನವಿ ವಜಾ
ಕಂಬಳ ಕ್ರೀಡೆಯನ್ನು ಕೇವಲ ಕರಾವಳಿಗೆ ಮಾತ್ರ ಏಕೆ ಸೀಮಿತಗೊಳಿಸಬೇಕು ಎಂದು ಪ್ರಶ್ನಿಸಿದ ಸರ್ವೋಚ್ಚ ನ್ಯಾಯಾಲಯ ಪೇಟಾ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ಕರ್ನಾಟಕದ ಇತರ ಭಾಗಗಳಲ್ಲಿ 'ಕಂಬಳ' ಆಯೋಜಿಸುವುದನ್ನು ವಿರೋಧಿಸಿ ಪ್ರಾಣಿದಯಾ ಸಂಘಟನೆ 'ಪೆಟಾ' ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಈ ಮೂಲಕ ರಾಜ್ಯದೆಲ್ಲೆಡೆ ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ನಡೆಸಲು ಹಾದಿ ಸುಗಮವಾಗಿದೆ.
ಕರ್ನಾಟಕ ಹೈಕೋರ್ಟ್ ನವೆಂಬರ್ 14ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪೆಟಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ನಡೆಸಿತು. ವಿಚಾರಣೆ ವೇಳೆ ಪೀಠವು, "ಕಂಬಳ ಕ್ರೀಡೆಯನ್ನು ರಾಜ್ಯದ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಏಕೆ ಸೀಮಿತಗೊಳಿಸಬೇಕು? ಸಮಿತಿಯವರು ರಾಜ್ಯದ ವಿವಿಧ ಭಾಗಗಳಲ್ಲಿ ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸಲು ಬಯಸಿದರೆ ಅದರಲ್ಲಿ ತಪ್ಪೇನಿದೆ? ರಾಜ್ಯದ ಇತರ ಭಾಗಗಳ ಜನರೂ ಈ ವಿಶಿಷ್ಟ ಸಂಸ್ಕೃತಿಯ ಪರಿಚಯವನ್ನು ಹೊಂದಲಿ" ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.
ಪೆಟಾ ವಾದವೇನಿತ್ತು?
ಸುಪ್ರೀಂ ಕೋರ್ಟ್ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ ಪೆಟಾ ಪರ ವಕೀಲರು, "ನಿರ್ದಿಷ್ಟ ಪ್ರದೇಶವನ್ನು ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿ ಕಂಬಳ ಆಯೋಜಿಸುವುದು ಒಪ್ಪುವಂತಹುದಲ್ಲ. ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರ್ಕಾರ ಈ ಹಿಂದೆ ಸಲ್ಲಿಸಿರುವ ಪ್ರಮಾಣಪತ್ರದ ಅನುಸಾರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾತ್ರವೇ ಕಂಬಳವನ್ನು ಆಯೋಜಿಸಬೇಕಿದೆ" ಎಂದು ವಾದಿಸಿದರು.
ಬೆಂಗಳೂರು ಕಂಬಳಕ್ಕೆ ವಿರೋಧವೇಕೆ?
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿ ನೀಡಬಾರದು ಎಂದು ಕೋರಿ ಪೆಟಾ ಸಂಸ್ಥೆಯು ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಹಿನ್ನಡೆಯಾದ ಬಳಿಕ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು.
"ಕರಾವಳಿಯಿಂದ ಸುಮಾರು 300 ಕಿ.ಮೀ ದೂರದಿಂದ ದಣಿದ ಕೋಣಗಳನ್ನು ಟ್ರಕ್‌ಗಳಲ್ಲಿ ತಂದು ಸ್ಪರ್ಧೆಗೆ ಇಳಿಸಲಾಗುತ್ತದೆ. ಇದು ಸ್ಪಷ್ಟವಾಗಿ ಪ್ರಾಣಿ ಹಿಂಸೆಯಾಗುತ್ತದೆ. ಅರಮನೆ ಮೈದಾನದಲ್ಲಿ ನಡೆಯುವ ಕಂಬಳಕ್ಕೆ ಲಕ್ಷಾಂತರ ಜನ ಬರುತ್ತಾರೆ, ವಿಐಪಿ ಪಾಸ್‌ಗಳನ್ನು ವಿತರಿಸಲಾಗುತ್ತಿದೆ ಹಾಗೂ ದೊಡ್ಡ ದೊಡ್ಡ ಉದ್ಯಮಿಗಳು ಇದರ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಇದಲ್ಲದೆ, ಶಿವಮೊಗ್ಗದಲ್ಲೂ ಈ ಕ್ರೀಡೆ ನಡೆಸುವ ಚಿಂತನೆಯನ್ನು ಕಂಬಳ ಆಯೋಜನಾ ಸಮಿತಿ ಹೊಂದಿದೆ. ಹೀಗಾಗಿ ಬೇರೆ ಜಿಲ್ಲೆಗಳಲ್ಲಿ ಕಂಬಳ ಆಯೋಜನೆಗೆ ತಡೆ ನೀಡಬೇಕು" ಎಂದು ಪೆಟಾ ತನ್ನ ಅರ್ಜಿಯಲ್ಲಿ ದೂರಲಾಗಿತ್ತು. ಆದರೆ, ನ್ಯಾಯಾಲಯವು ಪೆಟಾದ ಈ ಎಲ್ಲ ವಾದಗಳನ್ನು ತಳ್ಳಿಹಾಕಿದೆ.

