ಕಬ್ಬು ಬೆಳೆಗಾರರ ರಕ್ಷಣೆಗೆ ಸರ್ಕಾರದಿಂದ ಕೇಂದ್ರ ಸಮಿತಿಗೆ 8 ಪ್ರಮುಖ ಶಿಫಾರಸು
x

ಕಬ್ಬು ಬೆಳೆಗಾರರ ರಕ್ಷಣೆಗೆ ಸರ್ಕಾರದಿಂದ ಕೇಂದ್ರ ಸಮಿತಿಗೆ 8 ಪ್ರಮುಖ ಶಿಫಾರಸು

ವಾರ್ಷಿಕವಾಗಿ ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಸುಮಾರು 18 ರಿಂದ 20 ಲಕ್ಷ ರೈತ ಕುಟುಂಬಗಳು ಕಬ್ಬು ಕೃಷಿಯನ್ನೇ ನೇರವಾಗಿ ಅವಲಂಬಿಸಿವೆ.


Click the Play button to hear this message in audio format

ಪ್ರಸ್ತುತ ಕಬ್ಬು ಹಂಗಾಮಿನಲ್ಲಿ ರಾಜ್ಯ ಎದುರಿಸುತ್ತಿರುವ ತೀವ್ರ ಬರಗಾಲ, ಸಕ್ಕರೆ ಇಳುವರಿ ಕುಸಿತ, ಎಥೆನಾಲ್ ಉತ್ಪಾದನೆ ಮೇಲಿನ ಹಠಾತ್ ನಿರ್ಬಂಧಗಳು ಹಾಗೂ ಕಾರ್ಖಾನೆಗಳ ಆರ್ಥಿಕ ಮುಗ್ಗಟ್ಟಿನ ನಡುವೆ, ರೈತರಿಗೆ ನ್ಯಾಯಯುತ ಬೆಲೆ ಕೊಡಿಸುವ ಸಲುವಾಗಿ ರಾಜ್ಯ ಸರ್ಕಾರವು 8 ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸಮಿತಿಯ ಮುಂದಿಟ್ಟಿದೆ.

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕ್ಷೇತ್ರದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷ ಡಾ. ರಮೇಶ್ ಚಂದ್ ಅವರೊಂದಿಗೆ ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಸಭೆ ನಡೆಸಿ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಅಲ್ಲದೇ, ಪತ್ರವನ್ನು ಸಹ ಬರೆದಿದ್ದಾರೆ. ಇದರಲ್ಲಿ ಪ್ರಸಕ್ತ ಸಾಲಿಗೆ ತುರ್ತಾಗಿ ಜಾರಿಗೊಳಿಸಬೇಕಾದ 4 ಆಡಳಿತಾತ್ಮಕ ತೀರ್ಮಾನಗಳು ಹಾಗೂ ಸಕ್ಕರೆ ಕ್ಷೇತ್ರದ ದೀರ್ಘಾವಧಿಯ ಉಳಿವಿಗಾಗಿ ಅಗತ್ಯವಿರುವ 4 ರಚನಾತ್ಮಕ ಸುಧಾರಣೆಗಳು ಸೇರಿವೆ.

ಕರ್ನಾಟಕದಲ್ಲಿ ಕಬ್ಬು ಕೇವಲ ಒಂದು ವಾಣಿಜ್ಯ ಬೆಳೆಯಾಗಿರದೆ, ಗ್ರಾಮೀಣ ಆರ್ಥಿಕತೆಯ ಜೀವನಾಡಿಯಾಗಿದೆ. ರಾಜ್ಯದಲ್ಲಿ ವಾರ್ಷಿಕವಾಗಿ ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಸುಮಾರು 18 ರಿಂದ 20 ಲಕ್ಷ ರೈತ ಕುಟುಂಬಗಳು ಕಬ್ಬು ಕೃಷಿಯನ್ನೇ ನೇರವಾಗಿ ಅವಲಂಬಿಸಿವೆ. ಸಕ್ಕರೆ ಕಾರ್ಖಾನೆಗಳು ಮತ್ತು ಸಂಬಂಧಿತ ವಲಯಗಳು ರಾಜ್ಯದಲ್ಲಿ ಅಂದಾಜು 75 ಸಾವಿರದಿಂದ 80 ಜನರಿಗೆ ನೇರ ಉದ್ಯೋಗವನ್ನು ಒದಗಿಸಿವೆ. ರಾಜ್ಯದಲ್ಲಿ ಪ್ರಸ್ತುತ 81 ಕಾರ್ಯನಿರತ ಸಕ್ಕರೆ ಕಾರ್ಖಾನೆಗಳಿದ್ದು, ಇವುಗಳ ಒಟ್ಟು ಕಬ್ಬು ಅರೆಯುವ ಸಾಮರ್ಥ್ಯ ಪ್ರತಿದಿನಕ್ಕೆ 5.94 ಲಕ್ಷ ಟನ್‌ಗಳಷ್ಟಿದೆ. ಕಾರ್ಖಾನೆಗಳು 2,134 ಮೆಗಾವ್ಯಾಟ್ ಸಹ-ವಿದ್ಯುತ್ (ಕೋಜನೆರೇಷನ್) ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ 60 ಡಿಸ್ಟಿಲರಿಗಳು ಎಥೆನಾಲ್ ಉತ್ಪಾದನೆಯಲ್ಲಿ ನಿರತವಾಗಿವೆ. ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯಡಿ, ಕಬ್ಬಿನ ಹಾಲು, ಸಿರಪ್ ಹಾಗೂ ಬಿ-ಹೆವಿ ಮೊಲಾಸಸ್‌ನಿಂದ ಎಥೆನಾಲ್ ತಯಾರಿಸಲು ಕಾರ್ಖಾನೆಗಳು ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿವೆ. 2025-26ರ ಸಾಲಿನಲ್ಲಿ ಕರ್ನಾಟಕದಿಂದ ಸುಮಾರು 12 ಲಕ್ಷ ಟನ್ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ತಿರುಗಿಸಲಾಗಿತ್ತು.

ಪಾವತಿ ಪಾರದರ್ಶಕತೆ ಮತ್ತು ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು

ಡಾ. ಸಿ. ರಂಗರಾಜನ್ ಸಮಿತಿ (2012), ನೀತಿ ಆಯೋಗದ ಟಾಸ್ಕ್ ಫೋರ್ಸ್ (2020) ಹಾಗೂ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಅನ್ವಯ, ಕರ್ನಾಟಕ ಸರ್ಕಾರವು ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) (ತಿದ್ದುಪಡಿ) ಕಾಯ್ದೆ, 2014ರ ಅಡಿಯಲ್ಲಿ ಎಫ್‌ಆರ್‌ಪಿ ಮತ್ತು ಹಂಗಾಮಾನಂತರದ ಆದಾಯ ಹಂಚಿಕೆ (ಎರಡು ಹಂತದ ಪಾವತಿ) ಮಾದರಿಯನ್ನು ಶಾಸನಬದ್ಧವಾಗಿ ಜಾರಿಗೆ ತಂದಿದೆ. ಈ ವೈಜ್ಞಾನಿಕ ಚೌಕಟ್ಟಿನಿಂದಾಗಿ, 2025-26ರ ಸಾಲಿನಲ್ಲಿ ರಾಜ್ಯದ 81 ಕಾರ್ಖಾನೆಗಳು ಪಾವತಿಸಬೇಕಿದ್ದ 23,231.30 ಕೋಟಿ ರೂ. ಪೈಕಿ 23,236.83 ಕೋಟಿ ರೂ. (ಶೇ. 99.85) ಹಣವನ್ನು ರೈತರಿಗೆ ಪಾವತಿಸಲಾಗಿದೆ. 68 ಕಾರ್ಖಾನೆಗಳು ಶೇ.100 ರಷ್ಟು ಪಾವತಿ ಪೂರ್ಣಗೊಳಿಸಿವೆ. ಇದಲ್ಲದೆ, ರಾಜ್ಯ ಸರ್ಕಾರ ಮತ್ತು ಕಾರ್ಖಾನೆಗಳು ತಲಾ 50 ರಂತೆ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ನೀಡಿದ 100 ರೂ. ಪ್ರೋತ್ಸಾಹಧನಕ್ಕಾಗಿ ರಾಜ್ಯ ಸರ್ಕಾರವೊಂದೇ 290 ಕೋಟಿ ರೂ. ಭರಿಸಿದೆ. ತೂಕದಲ್ಲಿ ಮೋಸ ತಡೆಯಲು 2023ರ ನವೆಂಬರ್ 27 ರಂದು ಕಟ್ಟುನಿಟ್ಟಿನ ಎಸ್‌ಒಪಿ ಹೊರಡಿಸಲಾಗಿದ್ದು, ಎಲ್ಲಾ 81 ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಲಾಗಿದೆ. ರಾಜ್ಯದ 170 ತಾಲೂಕು ಎಪಿಎಂಸಿಗಳಲ್ಲಿ ಉಚಿತ ಕಬ್ಬು ತೂಕದ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿ ವಿಜ್ಞಾನಿಗಳು ಮತ್ತು ರೈತ ಮುಖಂಡರನ್ನೊಳಗೊಂಡ 3 ಸದಸ್ಯರ ಜಿಲ್ಲಾ ತಜ್ಞರ ತಂಡಗಳು ನಿರಂತರ ತಪಾಸಣೆ ನಡೆಸುತ್ತಿವೆ. ತೂಕದಲ್ಲಿ ವಂಚನೆ ಪತ್ತೆ ಹಚ್ಚಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಪರಿಣಾಮವಾಗಿ, ರಾಜ್ಯದ ಸರಾಸರಿ ಸಕ್ಕರೆ ಇಳುವರಿ (ರಿಕವರಿ) ಶೇ. 10.50 ರಿಂದ ಶೇ. 11.09 ಕ್ಕೆ ಏರಿಕೆಯಾಗಿದೆ.

ಕೇಂದ್ರ ಸಮಿತಿಗೆ ರಾಜ್ಯ ಸರ್ಕಾರದ 8 ಪ್ರಮುಖ ಶಿಫಾರಸುಗಳು

ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ಹಿತದೃಷ್ಟಿಯಿಂದ 8 ನಿರ್ಣಾಯಕ ವಿಷಯಗಳನ್ನು ಮಂಡಿಸಿದೆ. ರಾಜ್ಯವಾರು ಎಫ್‌ಆರ್‌ಪಿ ನಿಗದಿ ಮತ್ತು ಸ್ವಾಮಿನಾಥನ್ ಸಿ2 ವೆಚ್ಚ ಸೂತ್ರ ಅಳವಡಿಕೆ ಮಾಡಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರವು ದೇಶಾದ್ಯಂತ ಒಂದೇ ಏಕರೂಪದ ಎಫ್‌ಆರ್‌ಪಿ ಘೋಷಿಸುತ್ತಿದೆ. ಆದರೆ, ಪ್ರತಿಯೊಂದು ರಾಜ್ಯದಲ್ಲಿ ಕಬ್ಬಿನ ಬೆಳೆ ಅವಧಿ (12 ರಿಂದ 18 ತಿಂಗಳು), ಹವಾಮಾನ, ಕೂಲಿ ವೆಚ್ಚ, ರಸಗೊಬ್ಬರ ಮತ್ತು ನೀರಾವರಿ ವೆಚ್ಚಗಳು ಭಿನ್ನವಾಗಿರುತ್ತವೆ. ಹೀಗಾಗಿ ಏಕರೂಪದ ಎಫ್‌ಆರ್‌ಪಿ ಕರ್ನಾಟಕದಂತಹ ರಾಜ್ಯಗಳ ನೈಜ ವೆಚ್ಚವನ್ನು ಪ್ರತಿಬಿಂಬಿಸುವುದಿಲ್ಲ. ಪ್ರಸ್ತುತ ಎಫ್‌ಆರ್‌ಪಿಯನ್ನು ಕೇವಲ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿದೆ. ಆದರೆ, ಡಾ. ಎಂ. ಎಸ್. ಸ್ವಾಮಿನಾಥನ್ ಆಯೋಗವು ಸಮಗ್ರ ವೆಚ್ಚವಾದ ಆಧಾರದ ಮೇಲೆ ಕನಿಷ್ಠ ಶೇ. 50 ರಷ್ಟು ಲಾಭಾಂಶ ನೀಡಬೇಕೆಂದು ಶಿಫಾರಸು ಮಾಡಿದೆ. 2026-27ರ ಸಾಲಿಗೆ ಕ್ವಿಂಟಾಲ್‌ಗೆ 182 ರೂ. ಇದ್ದು, ಹಾಲಿ ಎಫ್‌ಆರ್‌ಪಿ 365 ರೂ.ನಂತೆ ಶೇ. 100.5 ರಷ್ಟು ಲಾಭಾಂಶ ಕಾಣಿಸಬಹುದು. ಆದರೆ ವೆಚ್ಚವನ್ನು ಪರಿಗಣಿಸಿದರೆ ರೈತರಿಗೆ ಸಿಗುವ ಲಾಭ ಅತ್ಯಲ್ಪ. ಕರ್ನಾಟಕದ ಕೃಷಿ ವೆಚ್ಚವನ್ನು ಪರಿಗಣಿಸಿ ಶೇ. 9.5ರ ರಿಕವರಿಗೆ ಪ್ರತಿ ಟನ್‌ಗೆ 4,440 ರೂ. ಎಫ್‌ಆರ್‌ಪಿ ನಿಗದಿಪಡಿಸಬೇಕು ಎಂದು ರಾಜ್ಯ ಸರ್ಕಾರ ಕೋರಿದೆ.

ಸಂಕಷ್ಟದಲ್ಲಿ ಕಬ್ಬು ಬೆಳೆಗಾರರು

ಮಳೆಯ ಕೊರತೆಯಿಂದಾಗಿ ಕಬ್ಬಿನ ಇಳುವರಿ ಕುಸಿದಿದೆ. ಜೊತೆಗೆ ಸಕ್ಕರೆ ರಿಕವರಿಯೂ ಗಣನೀಯವಾಗಿ ಇಳಿಕೆಯಾಗುವ ಆತಂಕವಿದೆ. ಕಬ್ಬು ಕಟಾವು ಮತ್ತು ಅರೆಯುವ ಹಂಗಾಮು ಈಗಾಗಲೇ ತಡವಾಗಿದ್ದು, ಕೇಂದ್ರ ಸರ್ಕಾರದ ತೀರ್ಮಾನಗಳಿಗಾಗಿ ರೈತರು ಮತ್ತು ಕಾರ್ಖಾನೆಗಳು ಚಾತಕ ಪಕ್ಷಿಯಂತೆ ಕಾಯುತ್ತಿವೆ. ಎಥೆನಾಲ್ ನೀತಿಯಲ್ಲಿನ ಗೊಂದಲಗಳಿಂದಾಗಿ ಕಾರ್ಖಾನೆಗಳು ರೈತರಿಗೆ ಮುಂಗಡ ನೀಡಲು ಅಥವಾ ಕಬ್ಬು ಖರೀದಿಸಲು ಹಿಂದೇಟು ಹಾಕುತ್ತಿವೆ. ಗ್ರಾಹಕರ ಹಿತದೃಷ್ಟಿ , ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸದೃಢತೆ ಹಾಗೂ ಅನ್ನದಾತ ರೈತರ ಬದುಕು - ಈ ಮೂರರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಕರ್ನಾಟಕ ಸರ್ಕಾರವು ಮಂಡಿಸಿರುವ ೪ ತಕ್ಷಣದ ನಿರ್ಧಾರಗಳು ಜಾರಿಯಾದರೆ ಮಾತ್ರ ಪ್ರಸಕ್ತ ಹಂಗಾಮಿನಲ್ಲಿ ರೈತರಿಗೆ ಸಕಾಲದಲ್ಲಿ ನ್ಯಾಯಯುತ ಬೆಲೆ ಸಿಗಲು ಸಾಧ್ಯ. ದೀರ್ಘಾವಧಿಯ 4 ರಚನಾತ್ಮಕ ಸುಧಾರಣೆಗಳು ಜಾರಿಯಾದರೆ ಭವಿಷ್ಯದಲ್ಲಿ ಪದೇಪದೇ ಇಂತಹ ಬಿಕ್ಕಟ್ಟುಗಳು ಮರುಕಳಿಸುವುದು ತಪ್ಪುತ್ತದೆ. ಡಾ. ರಮೇಶ್ ಚಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ರಾಜ್ಯ ಸರ್ಕಾರದ ಈ ಸಮಗ್ರ ಮತ್ತು ವಸ್ತುನಿಷ್ಠ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ಸಕಾರಾತ್ಮಕ ಶಿಫಾರಸುಗಳನ್ನು ಶೀಘ್ರವಾಗಿ ಸಲ್ಲಿಸಬೇಕೆಂದು ರಾಜ್ಯ ಸರ್ಕಾರವು ಅತ್ಯಂತ ಬಲವಾಗಿ ಆಗ್ರಹಿಸಿದೆ.

Read More
Next Story