x

ನ. 26ರೊಳಗೆ ಬೇಡಿಕೆ ಈಡೇರದಿದ್ದರೆ ಬೃಹತ್ ಹೋರಾಟ; ಕಬ್ಬು ಬೆಳೆಗಾರರ ಎಚ್ಚರಿಕೆ

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಪ್ರತಿ ಟನ್ ಕಬ್ಬಿಗೆ 6,000 ರೂ. ಬೆಲೆ ನಿಗದಿಪಡಿಸಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.


Click the Play button to hear this message in audio format

ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರೈತ ಮುಖಂಡ ಚುಂಗಪ್ಪ ಪೂಜೇರಿ ಗಡುವು ನೀಡಿದ್ದಾರೆ. ನವೆಂಬರ್ 26ರೊಳಗೆ ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸದಿದ್ದರೆ ರಾಜ್ಯಾದ್ಯಂತ ಮತ್ತಷ್ಟು ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಕಬ್ಬು ಬೆಳೆಗಾರರು ಹಲವು ವರ್ಷಗಳಿಂದ ಸೂಕ್ತ ಬೆಲೆ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರೂ ಕಬ್ಬಿನ ಬೆಲೆಯಲ್ಲಿ ಸಮರ್ಪಕ ಏರಿಕೆಯಾಗಿಲ್ಲ ಎಂದು ರೈತ ಮುಖಂಡ ಚುಂಗಪ್ಪ ಪೂಜಾರಿ ಹೇಳಿದ್ದಾರೆ. ಕಬ್ಬಿನ ಬೆಲೆಯನ್ನು ಹೆಚ್ಚಿಸುವುದು, ವಾಣಿಜ್ಯ ಉದ್ದೇಶಗಳಿಗೆ ಬಳಸುವ ಸಕ್ಕರೆಗೆ ಸೂಕ್ತ ದರ ನಿಗದಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಹೋರಾಟ ನಡೆಸುತ್ತಿದ್ದಾರೆ.

ಟನ್‌ಗೆ 6,000 ರೂ. ಬೆಲೆಗೆ ಒತ್ತಾಯ

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಪ್ರತಿ ಟನ್ ಕಬ್ಬಿಗೆ 6,000 ರೂ. ಬೆಲೆ ನಿಗದಿಪಡಿಸಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ. ಕಬ್ಬಿನಿಂದ ತಯಾರಾಗುವ ಸಕ್ಕರೆ, ಎಥನಾಲ್ ಸೇರಿದಂತೆ ಇತರ ಉತ್ಪನ್ನಗಳಿಂದ ಕಾರ್ಖಾನೆಗಳಿಗೆ ಆದಾಯ ಬರುತ್ತಿದ್ದು, ಅದರ ಪ್ರಯೋಜನ ರೈತರಿಗೂ ಸಿಗಬೇಕು ಎಂದು ಚುಂಗಪ್ಪ ಪೂಜೇರಿ ಆಗ್ರಹಿಸಿದ್ದಾರೆ.

ಇದರ ಜೊತೆಗೆ, ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ 1,000 ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕು. ಕಬ್ಬಿನ ತೂಕದಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಡಿಜಿಟಲ್ ತೂಕದ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಅದಕ್ಕಾಗಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂಬ ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ.

ಹೆದ್ದಾರಿ ತಡೆ, ಪಾದಯಾತ್ರೆಯಿಂದ ಸರ್ಕಾರಕ್ಕೆ ಒತ್ತಡ

ಕಬ್ಬು ಬೆಳೆಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ರಾಷ್ಟ್ರೀಯ ಹೆದ್ದಾರಿಗಳನ್ನು ಸುಮಾರು 40 ಗಂಟೆಗಳ ಕಾಲ ತಡೆದು ಪ್ರತಿಭಟನೆ ನಡೆಸಿದ್ದರು. ಬಳಿಕ ಪಾದಯಾತ್ರೆಯ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ರೈತರ ಹೋರಾಟದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಪ್ರತಿನಿಧಿಗಳು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಮಾತುಕತೆ ನಡೆದಿರುವುದಾಗಿ ಸಂದರ್ಶನದಲ್ಲಿ ಚುಂಗಪ್ಪ ಪೂಜಾರಿ ವಿವರಿಸಿದ್ದಾರೆ.

ನವೆಂಬರ್ 26ರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ

ನವೆಂಬರ್ 26ರೊಳಗೆ ಬೇಡಿಕೆಗಳ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ರೈತ ಸಂಘಟನೆ ಸರ್ಕಾರಗಳಿಗೆ ಗಡುವು ನೀಡಿದೆ. ಬೇಡಿಕೆಗಳು ಈಡೇರದಿದ್ದರೆ ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರನ್ನು ಸೇರಿಸಿ ಹೋರಾಟ ನಡೆಸುವುದರ ಜೊತೆಗೆ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡುವ ಎಚ್ಚರಿಕೆಯನ್ನು ನೀಡಿದೆ. ಕಬ್ಬು ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಚುಂಗಪ್ಪ ಪೂಜೇರಿ ಒತ್ತಾಯಿಸಿದ್ದಾರೆ.

Read More
Next Story