
ಬೀದಿನಾಯಿಗಳನ್ನು ಕಂಡರೆ ಕಲ್ಲು ಹೊಡೆಯುವುದು ಅಥವಾ ಹಿಂಸಿಸುವುದನ್ನು ಬಿಟ್ಟು, ಅವುಗಳ ಬಗ್ಗೆ ಸಹಾನುಭೂತಿ ತೋರಿಸಬೇಕು ಎಂದು ಸುಧಾಮೂರ್ತಿ ಅವರು ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.
ಬೀದಿನಾಯಿಗಳಿಗೆ ಆಶ್ರಯ ನೀಡುವುದು ಪುಣ್ಯದ ಕೆಲಸ: ಸುಧಾ ಮೂರ್ತಿ ಮನವಿ
ಬೀದಿನಾಯಿಗಳನ್ನು ಕಂಡಾಗ ಹೆದರಿ ಅಥವಾ ಸುಮ್ಮನೆ ಕಲ್ಲು ಹೊಡೆಯುವುದನ್ನು ನಿಲ್ಲಿಸಬೇಕು. ಅವುಗಳಿಗೆ ನಮ್ಮ ಪ್ರೀತಿ ಮತ್ತು ರಕ್ಷಣೆಯ ಅಗತ್ಯವಿದೆ ಎಂದು ಸುಧಾಮೂರ್ತಿ ಅವರು ತಿಳಿಸಿದ್ದಾರೆ.
ದೇಶಾದ್ಯಂತ ಬೀದಿನಾಯಿಗಳ ಸಮಸ್ಯೆ ಹಾಗೂ ಅವುಗಳ ರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಠಿಣ ನಿಲುವು ತಳೆದು, ಪ್ರಾಣಿಗಳಿಗೆ ಪ್ರತ್ಯೇಕ ಶೆಲ್ಟರ್‌ಗಳನ್ನು ನಿರ್ಮಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಬೀದಿನಾಯಿಗಳ ಬಗ್ಗೆ ಸಹಾನುಭೂತಿ ತೋರಬೇಕು ಎಂದು ಕನ್ನಡಿಗರಲ್ಲಿ ವಿಶೇಷ ಮನವಿ ಮಾಡಿದ್ದಾರೆ.
ಬೆಂಗಳೂರು ಪೊಲೀಸ್ ಆಯೋಜಿಸಿದ್ದ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಾಣಿ ದಯೆ ಎಂಬುದು ಕೇವಲ ಮಾತಾಗದೆ ಕೃತಿಯಾಗಬೇಕು ಎಂದು ಪ್ರತಿಪಾದಿಸಿದರು.
ಹಿಂಸೆ ಬಿಟ್ಟು ಹಸಿವು ನೀಗಿಸಿ
"ಬೀದಿನಾಯಿಗಳನ್ನು ಕಂಡ ಕೂಡಲೇ ಕಲ್ಲು ಹೊಡೆಯುವುದು ಅಥವಾ ಹಿಂಸಿಸುವುದನ್ನು ನಿಲ್ಲಿಸಬೇಕು. ನಾವು ನೀಡುವ ಒಂದು ತುತ್ತು ಅನ್ನಕ್ಕೆ ನಮ್ಮ ಮೇಲೆ ಪ್ರಾಣವನ್ನೇ ಇಡುವ ಶಕ್ತಿ ಶ್ವಾನಗಳಿಗಿದೆ. ನಾವು ಸೇವಿಸುವ ಮಸಾಲೆಯುಕ್ತ ಆಹಾರದ ಬದಲು, ಅವುಗಳಿಗಾಗಿ ಸ್ವಲ್ಪ ಹೆಚ್ಚುವರಿ ಅಕ್ಕಿ ಅಥವಾ ರೊಟ್ಟಿಯನ್ನು ಪ್ರತ್ಯೇಕವಾಗಿ ಎತ್ತಿಟ್ಟು ನೀಡುವುದು ಉತ್ತಮ. ಅದರಲ್ಲೂ ಮಳೆಗಾಲದಲ್ಲಿ ಬೀದಿನಾಯಿಗಳಿಗೆ ಆಶ್ರಯ ನೀಡುವುದು ಅತ್ಯಂತ ಪುಣ್ಯದ ಕೆಲಸ," ಎಂದು ಸುಧಾ ಮೂರ್ತಿ ಅಭಿಪ್ರಾಯಪಟ್ಟರು.
ಬೀದಿ ನಾಯಿಗಳ ಬಗ್ಗೆ ಸುಧಾಮೂರ್ತಿ ಮಾತನಾಡಿರುವ ವಿಡಿಯೋ ಇಲ್ಲದೆ..
ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಸಹಕರಿಸಿ
ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಕುರಿತು ಪ್ರಸ್ತಾಪಿಸಿದ ಅವರು, ಇದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ನಾಗರಿಕರ ಕರ್ತವ್ಯವೂ ಹೌದು ಎಂದರು. "ಸ್ಥಳೀಯ ಪ್ರಾಧಿಕಾರಗಳೊಂದಿಗೆ ಕೈಜೋಡಿಸಿ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಕೊಡಿಸಬೇಕು. ಕೇವಲ ಮನೆಯಲ್ಲಿ ಬೆಲೆಬಾಳುವ ನಾಯಿಗಳನ್ನು ಸಾಕುವುದಷ್ಟೇ ಪ್ರಾಣಿಪ್ರೇಮವಲ್ಲ, ಬೀದಿಬದಿಯ ಮೂಕ ಪ್ರಾಣಿಗಳ ಬಗ್ಗೆ ದಯೆ ತೋರುವುದು ನಿಜವಾದ ಮಾನವೀಯತೆ," ಎಂದು ಅವರು ತಿಳಿಸಿದರು. ಪೋಷಕರು ತಮ್ಮ ಮಕ್ಕಳನ್ನು ಪ್ರಾಣಿ ಆಶ್ರಯ ತಾಣಗಳಿಗೆ (Animal Shelters) ಕರೆದುಕೊಂಡು ಹೋಗುವ ಮೂಲಕ ಬಾಲ್ಯದಲ್ಲೇ ಪ್ರಾಣಿ ದಯೆಯನ್ನು ಬೆಳೆಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಮೋದಿ ವರ್ಸಸ್ ಗೋಪಿ: ಸುಧಾ ಮೂರ್ತಿ ಹಾಸ್ಯ ಚಟಾಕಿ
ತಮ್ಮ ಸಾಕುನಾಯಿ 'ಗೋಪಿ'ಯ ಜನಪ್ರಿಯತೆಯ ಬಗ್ಗೆ ಮಾತನಾಡುತ್ತಾ ಅವರು ಹಗುರವಾದ ಕ್ಷಣಗಳನ್ನು ಹಂಚಿಕೊಂಡರು. "ದೆಹಲಿಗೆ ಹೋದರೆ ಜನರು 'ಮೋದಿ ಮೋದಿ' ಎನ್ನುತ್ತಾರೆ, ಆದರೆ ಬೆಂಗಳೂರಿನಲ್ಲಿ 'ಗೋಪಿ ಗೋಪಿ' ಎಂದು ಕೂಗುತ್ತಾರೆ! ನನಗಿಂತ ಗೋಪಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ಚಳಿಗಾಲದಲ್ಲಿ ಮಕ್ಕಳು ಅವನಿಗೆ ಶಾಲುಗಳನ್ನು ಕಳುಹಿಸುತ್ತಾರೆ, ಇನ್ನು ಮೈಸೂರು ದಸರಾ ಸಂದರ್ಭದಲ್ಲಿಯೂ ಅವನಿಗೆ ವಿಶೇಷ ಗೌರವ ನೀಡಲಾಗಿದೆ," ಎಂದು ನಗೆ ಚಟಾಕಿ ಹಾರಿಸಿದರು.
ಬೀದಿನಾಯಿಗಳ ವಿಚಾರದಲ್ಲಿ ಕಾನೂನು ಮತ್ತು ಮಾನವೀಯತೆಯ ನಡುವೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಸುಧಾ ಮೂರ್ತಿ ಅವರ ಈ ಮಾತುಗಳು ಸಮಾಜಕ್ಕೆ ಹೊಸ ದಿಕ್ಕು ತೋರಿಸುವಂತಿದೆ.

