
ಸ್ಟಿಂಗ್ ಆಪರೇಷನ್ ತನಿಖೆ ಸಿಬಿಐಗೆ ನೀಡಲು ಒತ್ತಾಯ: ರಾಜ್ಯಪಾಲರಿಗೆ ದೂರು
ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ. ಇದರ ಹಿಂದೆ ಯಾವ ಜಾಲ ಅಥವಾ ರಾಜಕೀಯ ದುರುದ್ದೇಶವಿದೆಯೇ ಎಂಬುದನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಲಾಗಿದೆ.
ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐ ತನಿಖೆಗೆ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ವ್ಯಕ್ತಪಡಿಸಿದ ಆತಂಕದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸಚಿವರು ಹಾಗೂ ಪ್ರಮುಖ ರಾಜಕೀಯ ನಾಯಕರನ್ನು ಹನಿಟ್ರ್ಯಾಪ್ ಮತ್ತು ಸ್ಟಿಂಗ್ ಆಪರೇಷನ್‌ಗಳ ಮೂಲಕ ವಿವಾದದಲ್ಲಿ ಸಿಲುಕಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಯು ರಾಜ್ಯದ ಆಡಳಿತಾರೂಢ ವಲಯದಲ್ಲಿ ಮಾತ್ರವಲ್ಲದೆ, ಸಾರ್ವಜನಿಕವಾಗಿಯೂ ಗಂಭೀರ ಚರ್ಚೆಗೆ ಗ್ರಾಸವಾಗಿದೆ ಎಂದಿದ್ದಾರೆ.
ಸಚಿವರು ಮತ್ತು ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ಖಾಸಗಿ ಏಜೆನ್ಸಿಗಳ ಮೂಲಕ ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ. ಇದರ ಹಿಂದೆ ಯಾವುದಾದರೂ ಸಂಘಟಿತ ಜಾಲ ಅಥವಾ ರಾಜಕೀಯ ದುರುದ್ದೇಶವಿದೆಯೇ ಎಂಬುದನ್ನು ಪತ್ತೆಹಚ್ಚಬೇಕು. ಇಂತಹ ಕಾರ್ಯಾಚರಣೆಗಳಿಗೆ ಹಣಕಾಸು ಒದಗಿಸುವವರು ಯಾರು? ತಾಂತ್ರಿಕ ನೆರವು ನೀಡುವ ಖಾಸಗಿ ಏಜೆನ್ಸಿಗಳು ಯಾವುವು? ಇವುಗಳ ಮೂಲವನ್ನು ಪತ್ತೆಹಚ್ಚುವ ಅಗತ್ಯವಿದೆ. ರಾಜ್ಯದ ಆಂತರಿಕ ಪೊಲೀಸ್ ವ್ಯವಸ್ಥೆಯ ಮೇಲೆ ರಾಜಕೀಯ ಪ್ರಭಾವವಿರುವ ಸಾಧ್ಯತೆ ಇರುವುದರಿಂದ, ಸತ್ಯಾಂಶ ಹೊರಬರಲು ಸಿಬಿಐ ಮೂಲಕ ಸ್ವತಂತ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಡಿಜಿಟಲ್ ಫಾರೆನ್ಸಿಕ್ ತನಿಖೆಯ ಅಗತ್ಯ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಅಥವಾ ಆಡಿಯೋ ಕ್ಲಿಪ್‌ಗಳ ನೈಜತೆಯನ್ನು ಪ್ರಶ್ನಿಸಿರುವ ಕಲ್ಲಹಳ್ಳಿ, ಪ್ರಸ್ತುತ ಕಾಲದಲ್ಲಿ ವಿಡಿಯೋಗಳನ್ನು ಸಂಪಾದಿಸುವುದು ಮತ್ತು ತಿರುಚುವುದು ಸುಲಭವಾಗಿದೆ. ಆದ್ದರಿಂದ, ವಿಡಿಯೋಗಳ ಮೆಟಾಡೇಟಾ, ಮೂಲ ಧ್ವನಿಮುದ್ರಣಗಳು ಮತ್ತು ಎಡಿಟಿಂಗ್ ಇತಿಹಾಸವನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು. ಸಂದರ್ಭದಿಂದ ಬೇರ್ಪಡಿಸಿ ಪ್ರಸಾರ ಮಾಡಲಾಗುತ್ತಿರುವ ದೃಶ್ಯಗಳ ಸತ್ಯಾಸತ್ಯತೆಯನ್ನು ಡಿಜಿಟಲ್ ಫಾರೆನ್ಸಿಕ್ ಮೂಲಕ ದೃಢೀಕರಿಸಬೇಕು ಎಂದು ಆಗ್ರಹಿಸಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ, ಇದು ಕೇವಲ ವೈಯಕ್ತಿಕ ಘಟನೆಯಲ್ಲ, ಬದಲಾಗಿ ರಾಜ್ಯದ ಆಡಳಿತ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಡೆಯುತ್ತಿರುವ ದಾಳಿಯಾಗಿದೆ. ಚುನಾಯಿತ ಪ್ರತಿನಿಧಿಗಳನ್ನು ಬ್ಲಾಕ್‌ಮೇಲ್ ಮಾಡುವ ಅಥವಾ ವಿವಾದಗಳಲ್ಲಿ ಸಿಲುಕಿಸುವ ಮೂಲಕ ರಾಜಕೀಯ ಅಸ್ಥಿರತೆಯನ್ನು ಉಂಟುಮಾಡುವ ಪ್ರಯತ್ನಗಳು ನಡೆದಿದ್ದರೆ, ಅವು ಕಾನೂನುಬಾಹಿರವಾಗಿವೆ. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಕಾಪಾಡಲು ಈ ಪ್ರಕರಣದ ಆಳವಾದ ತನಿಖೆ ಅನಿವಾರ್ಯವಾಗಿದೆ.
ರಾಜ್ಯಪಾಲರಿಗೆ ದೂರು ಸಲ್ಲಿಕೆ
ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ, "ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿರದೆ, ರಾಜ್ಯದ ಆಡಳಿತ ಮತ್ತು ರಾಜಕೀಯ ಶುದ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು" ಎಂದು ಕೋರಲಾಗಿದೆ. ಮುಖ್ಯಮಂತ್ರಿಗಳ ಹೇಳಿಕೆಯು ಗಂಭೀರವಾಗಿರುವುದರಿಂದ, ಅದನ್ನು ಕೇವಲ ರಾಜಕೀಯ ಆರೋಪ ಎಂದು ಪರಿಗಣಿಸದೆ, ಅದರ ಹಿಂದಿನ ಜಾಲವನ್ನು ಬೇಧಿಸಲು ಸಿಬಿಐಗೆ ಒಪ್ಪಿಗೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
