State political drama: Unopposed election to Rajya Sabha, resort politics and SIT shock for Nalapad!
x

ಸಾಂದರ್ಭಿಕ ಚಿತ್ರ

ರಾಜ್ಯ ರಾಜಕೀಯ ಹೈಡ್ರಾಮಾ: ರಾಜ್ಯಸಭೆ ಅವಿರೋಧ ಆಯ್ಕೆ, ರೆಸಾರ್ಟ್ ಪಾಲಿಟಿಕ್ಸ್ ಹಾಗೂ ನಲಪಾಡ್‌ಗೆ ಎಸ್‌ಐಟಿ ಶಾಕ್!

ಕರ್ನಾಟಕದಿಂದ ತೆರವಾಗಿದ್ದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ ಎಲ್ಲಾ ನಾಲ್ಕೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ಇಂದು ಮೂರು ಪ್ರಮುಖ ವಿದ್ಯಮಾನಗಳು ಭಾರಿ ಸಂಚಲನ ಮೂಡಿಸಿವೆ. ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರೆ, ಇತ್ತ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ ಸೇರಿದ್ದಾರೆ. ಇದೇ ವೇಳೆ, ಬಿಟ್‌ಕಾಯಿನ್ ಹಗರಣದ ತನಿಖೆ ತೀವ್ರಗೊಂಡಿದ್ದು, ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಿದೆ.

ರಾಜ್ಯಸಭೆ ಚುನಾವಣೆ: ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆ

ಕರ್ನಾಟಕದಿಂದ ತೆರವಾಗಿದ್ದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ ಎಲ್ಲಾ ನಾಲ್ಕೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್, ಪವನ್ ಖೇರಾ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಪ್ರೊ. ಎಂ. ನಾಗರಾಜ ಆಯ್ಕೆಯಾಗಿದ್ದಾರೆ.

ದೇವೇಗೌಡರಿಗೆ ಟಿಕೆಟ್ ಮಿಸ್ಸಿಂಗ್: ಹಸ್ತ-ತೆನೆ ನಾಯಕರ ವಾಗ್ದಾಳಿ

ಎನ್‌ಡಿಎ ಅಭ್ಯರ್ಥಿಯಾಗಿ ಹಿಂದುಳಿದ ವರ್ಗಗಳ ನಾಯಕ ಪ್ರೊ. ಎಂ. ನಾಗರಾಜ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, "ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಟಿಕೆಟ್ ನಿರಾಕರಿಸಿ ಅಪಮಾನ ಮಾಡಲಾಗಿದೆ" ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, "ರಾಜ್ಯಸಭೆ ಟಿಕೆಟ್‌ಗೆ ಹೆಚ್.ಡಿ. ದೇವೇಗೌಡರು ಅರ್ಜಿಯನ್ನೇ ಹಾಕಿರಲಿಲ್ಲ. ಮೈತ್ರಿ ಕಂಡು ಕಾಂಗ್ರೆಸ್‌ಗೆ ಭಯ ಶುರುವಾಗಿದೆ," ಎಂದಿದ್ದಾರೆ. ಅಲ್ಲದೆ, "ದೇವೇಗೌಡರನ್ನು ಪ್ರಧಾನಿ ಪದವಿಯಿಂದ ಕೆಳಗಿಳಿಸಿದ ಕುಖ್ಯಾತಿ ಕಾಂಗ್ರೆಸ್‌ನದ್ದು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಅವರು ಹೆಚ್‌ಡಿಕೆ ಸಲಹೆ ಪಡೆಯುವುದಾಗಿ ಹೇಳಿದ್ದಕ್ಕೆ ವ್ಯಂಗ್ಯವಾಡಿರುವ ಕುಮಾರಸ್ವಾಮಿ, "ಅತಿ ವಿನಯಂ ಧೂರ್ತ ಲಕ್ಷಣಂ" ಎಂದು ಕಾಲೆಳೆದಿದ್ದಾರೆ.

ಮತ್ತೆ ಶುರುವಾಯ್ತು ‘ರೆಸಾರ್ಟ್ ರಾಜಕಾರಣ’!

ಜೂ. 18 ರಂದು ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರ ಮತ್ತು ಅಡ್ಡಮತದಾನದ ಭೀತಿ ಎದುರಾಗಿದೆ. ಹೀಗಾಗಿ ಮಧ್ಯಪ್ರದೇಶದ 63 ಕಾಂಗ್ರೆಸ್ ಶಾಸಕರನ್ನು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾಸಕರನ್ನು ಬಿಗಿ ಭದ್ರತೆಯಲ್ಲಿ ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ.

ಸಿಎಂ ಡಿಕೆಶಿಗೆ ಜವಾಬ್ದಾರಿ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಹಾಗೂ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಹೈಕಮಾಂಡ್ ಶಾಸಕರ ಜವಾಬ್ದಾರಿಯನ್ನು ಡಿಕೆಶಿಗೆ ವಹಿಸಿದೆ. ಶಾಸಕರು ಜೂ. 17ರ ರಾತ್ರಿ ಅಥವಾ ಜೂ. 18ರ ಬೆಳಿಗ್ಗೆಯವರೆಗೆ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಈ ಹಿಂದೆ ಗುಜರಾತ್ ಮತ್ತು ಒಡಿಶಾ ಶಾಸಕರನ್ನು ಬೆಂಗಳೂರಿಗೆ ಕರೆತಂದಿದ್ದ ಇತಿಹಾಸವನ್ನು ಈ ಘಟನೆ ನೆನಪಿಸಿದೆ.

ನಲಪಾಡ್ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್

ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT), ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ. ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಕ್ರಮವಾಗಿ ಗಳಿಸಿದ್ದ ಬಿಟ್‌ಕಾಯಿನ್‌ಗಳನ್ನು ನಗದೀಕರಿಸಲು ನಲಪಾಡ್ ನೆರವಾಗಿದ್ದರು. ನಲಪಾಡ್ ತಮ್ಮ ಮುಂಬೈ ಸ್ನೇಹಿತರು ಮತ್ತು ರಾಬಿನ್ ಖಂಡೇವಾಲ ಮೂಲಕ ಬಿಟ್‌ಕಾಯಿನ್‌ಗಳನ್ನು ಹವಾಲಾ ರೂಪದಲ್ಲಿ ಭಾರತೀಯ ರೂಪಾಯಿಗೆ ಬದಲಾಯಿಸಿಕೊಡುತ್ತಿದ್ದರು. ಈ ದಂಧೆಯಲ್ಲಿ ನಲಪಾಡ್ ಅವರಿಗೆ ಕೋಟ್ಯಂತರ ರೂಪಾಯಿ ಕಮಿಷನ್ ಸಂದಾಯವಾಗಿದೆ. ನಲಪಾಡ್ ಖಾತೆಗೆ ಜಮೆಯಾಗಿದ್ದ 10 ಲಕ್ಷ ರೂ. ಶಂಕಾಸ್ಪದ ವ್ಯವಹಾರವೇ ಇಡೀ ಜಾಲ ಬಯಲಾಗಲು ಕಾರಣವಾಯಿತು ಎಂದು ಎಸ್‌ಐಟಿ ಉಲ್ಲೇಖಿಸಿದೆ.

ಡಿಜಿಟಲ್ ಸಾಕ್ಷ್ಯವಶ

ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ (ED) ಶಾಸಕ ಎನ್.ಎ. ಹ್ಯಾರಿಸ್ ಹಾಗೂ ಮೊಹಮ್ಮದ್ ನಲಪಾಡ್ ನಿವಾಸಗಳ ಮೇಲೆ ದಾಳಿ ನಡೆಸಿ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಈ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದು ನಲಪಾಡ್‌ಗೆ ಸಂಕಷ್ಟ ತಂದಿಟ್ಟಿದೆ. ಈ ಹಗರಣದಲ್ಲಿ ಮನಿ ಲಾಂಡರಿಂಗ್ ನಡೆದಿರುವ ಹಿನ್ನೆಲೆಯಲ್ಲಿ ಇಡಿ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿ, ಸುನೀಶ್ ಹೆಗ್ಡೆ ಹಾಗೂ ರಾಬಿನ್ ಖಂಡೇವಾಲ ಅವರನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದ ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

ದಾಳಿಯ ಬಳಿಕ ಇಡಿ ಅಧಿಕಾರಿಗಳು ಮೊಹಮ್ಮದ್ ನಲಪಾಡ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಅಧಿಕೃತ ನೋಟಿಸ್ ಜಾರಿ ಮಾಡಿದ್ದರು. ಆದರೆ ನಲಪಾಡ್ ಸಮರ್ಪಕವಾಗಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಇದೀಗ ಎಸ್ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್‌ ಪ್ರತಿಗಳನ್ನು ಆಧರಿಸಿ ನಲಪಾಡ್ ಅವರಿಗೆ 3ನೇ ಬಾರಿಗೆ ಇಡಿ ನೋಟಿಸ್ ನೀಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ನಲಪಾಡ್‌ಗೆ ಬಂಧನದ ಭೀತಿಯೂ ಎದುರಾಗಬಹುದು ಎಂದು ಮೂಲಗಳು ತಿಳಿಸಿವೆ.

Read More
Next Story