ಮಲೆನಾಡಿನಲ್ಲಿ  ಆನೆ-ಮಾನವ ಸಂಘರ್ಷ: ಲಾಠಿ ಪ್ರಹಾರ;  ಸೆರೆಹಿಡಿದ ಆನೆಯ ದಂತ ತುಂಡಾಗಿದ್ದು ಯಾಕೆ?
x
ಅರಣ್ಯ ಇಲಾಖೆ ಸೆರೆಹಿಡಿದ ಆನೆಯ ದಂತಗಳು ತುಂಡಾಗಿರುವುದು ಗ್ರಾಮಸ್ಥರ ಶಂಕೆಗೆ ಕಾರಣವಾಗಿದೆ.

ಮಲೆನಾಡಿನಲ್ಲಿ ಆನೆ-ಮಾನವ ಸಂಘರ್ಷ: ಲಾಠಿ ಪ್ರಹಾರ; ಸೆರೆಹಿಡಿದ ಆನೆಯ ದಂತ ತುಂಡಾಗಿದ್ದು ಯಾಕೆ?

ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿಯಾದ ಘಟನೆ ಮಲೆನಾಡಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರ ಶೃಂಗೇರಿ ವ್ಯಾಪ್ತಿ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.


Click the Play button to hear this message in audio format

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮಿತಿಮೀರಿದ್ದು, ಹುಣಸೆಹಳ್ಳಿಯಲ್ಲಿ ಮಹಿಳಾ ಕಾರ್ಮಿಕರೊಬ್ಬರು ಬಲಿಯಾದ ಘಟನೆ ಈಗ ಸರ್ಕಾರ ಮತ್ತು ಗ್ರಾಮಸ್ಥರ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿದೆ.

ಆನೆ ದಾಳಿಯಿಂದಾಗಿ ವಾರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರೆ, ಆನೆ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಶಾಸಕರು ಸಂಭ್ರಮಿಸುತ್ತಿರುವ ರೀಲ್ಸ್‌ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಸೆರೆಹಿಡಿದ ಆನೆಗೂ ಮತ್ತು ದಾಳಿ ನಡೆಸಿದ ಆನೆಯ ಚಹರೆಗೂ ವ್ಯತ್ಯಾಸವಿದೆ ಎಂಬ ಆರೋಪಗಳು ಪ್ರತಿಭಟನಾಕಾರರನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿವೆ.

ಆನೆ ದಾಳಿಯಿಂದ ಮೃತರಾದ ಮಹಿಳೆಯ ಶವವನ್ನಿಟ್ಟು ಸಾರ್ವಜನಿಕರು ಪ್ರತಿಭಟಿಸುತ್ತಿದ್ದರೆ, ಶೃಂಗೇರಿ ಪಕ್ಕದ ಹ್ಯಾರಂಬಿಯಲ್ಲಿ ಸೆರೆಹಿಡಿದ ಕಾಡಾನೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರನ್ನು ಹೋಲುವ ವ್ಯಕ್ತಿ ಸಂಭ್ರಮಿಸಿದ್ದಾರೆ ಎನ್ನಲಾದ ರೀಲ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪ್ರಕರಣ ಗಂಭೀರತೆ ಪಡೆದುಕೊಳ್ಳುತ್ತಿದ್ದಂತೆ ಶಾಸಕರ ಜಾಲತಾಣದಲ್ಲಿದ್ದ ರೀಲ್ಸ್‌ ಕಣ್ಮರೆಯಾಗಿರುವುದು ಇನ್ನಷ್ಟು ವಿವಾದ ಸೃಷ್ಟಿಸಿದೆ.

ಮನುಷ್ಯರನ್ನು ಬಲಿ ತೆಗೆದುಕೊಳ್ಳುತ್ತಿರುವ ಕಾಡಾನೆ ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡು ತಪ್ಪಿಸಿಕೊಂಡಿತ್ತು. ಈ ಆನೆಗೆ ಎರಡು ಉದ್ದದ ದಂತಗಳಿದ್ದವು. ಭಾನುವಾರ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ ಆಕೆ ಮೃತಪಟ್ಟ ಒಂದು ಗಂಟೆಯೊಳಗೆ ಆನೆಯೊಂದನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ. ಆದರೆ, ಸೆರೆಹಿಡಿದ ಕಾಡಾನೆಯ ದಂತಗಳ ತುದಿ ತುಂಡರಿಸಿದಂತೆ ಕಂಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಭಟನಾಕಾರರು ಶಂಕೆ ವ್ಯಕ್ತಪಡಿಸಿದ್ದು, "ಕೇವಲ ಒಂದು ಗಂಟೆಯೊಳಗೆ ಆನೆ ಸೆರೆಹಿಡಿಯಲು ಹೇಗೆ ಸಾಧ್ಯ? ನಮ್ಮನ್ನು ಸಮಾಧಾನಪಡಿಸುವ ಕಾರಣಕ್ಕಾಗಿ ಅರಣ್ಯ ಇಲಾಖೆ ಯಾವುದೋ ಆನೆಯನ್ನು ಸೆರೆಹಿಡಿದಿದೆ" ಎಂದು ಆರೋಪಿಸಿದ್ದಾರೆ.

ಕಡಬಗೆರೆಯಲ್ಲಿ ಪ್ರತಿಭಟನೆ

ರೊಚ್ಚಿಗೆದ್ದ ಜನರು ಕಡಬಗೆರೆಯಲ್ಲಿ ಭಾನುವಾರ ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರ ವಿರೋಧಿಸಿ ಸೋಮವಾರ ಶೃಂಗೇರಿ ವಿಧಾನಸಭಾ ಕ್ಷೇತ್ರದಾದ್ಯಂತ ಕರೆ ನೀಡಲಾಗಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಏನಿದು ಘಟನೆ?

ಹಾವೇರಿ ಮೂಲದ ಕಾರ್ಮಿಕನೊಬ್ಬ ಕಾಡಾನೆ ದಾಳಿಗೆ ಬಲಿಯಾದ ಕೇವಲ ನಾಲ್ಕು ದಿನಗಳಲ್ಲೇ, ಭಾನುವಾರ ಬೆಳಿಗ್ಗೆ ಮತ್ತೊಂದು ದಾರುಣ ಸಾವು ಸಂಭವಿಸಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೋರಮ್ಮ (40) ಎಂಬುವವರು ನಾಗೇಶ್ ಗೌಡ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ ನಡೆಸಿ ತುಳಿದು ಕೊಂದಿದೆ. ಜೊತೆಯಲ್ಲಿದ್ದ ಮೇಸ್ತ್ರಿ ನಾಗರಾಜ್ ಕೂದಲೆಳೆ ಅಂತರದಲ್ಲಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಈ ಭಾಗದಲ್ಲಿ ಆನೆ ಹಾಗೂ ಕಾಡುಕೋಣಗಳ ದಾಳಿಗೆ ಬಲಿಯಾದವರ ಸಂಖ್ಯೆ 13ಕ್ಕೇರಿದೆ.

ಹೈಡ್ರಾಮಾ ಮತ್ತು ಸಂಚಾರ ಅಸ್ತವ್ಯಸ್ತ

ಮಹಿಳೆಯ ಶವವನ್ನಿಟ್ಟು ಕಡಬಗೆರೆಯ ರಾಜ್ಯ ಹೆದ್ದಾರಿಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಮತ್ತು ಗ್ರಾಮಸ್ಥರು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ 9 ಗಂಟೆಯಿಂದಲೇ ರಸ್ತೆ ತಡೆ ನಡೆಸಿದರೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿತ್ತು.

ಅಮಾನವೀಯ ನಡೆ: ಅರಣ್ಯ ಇಲಾಖೆಯು ಮೃತದೇಹ ಸಾಗಿಸಲು ಸೂಕ್ತ ವ್ಯವಸ್ಥೆ ಮಾಡುವ ಬದಲು, ಗೂಡ್ಸ್ ಆಟೋದಲ್ಲಿ ಶವ ಸಾಗಿಸಲು ಮುಂದಾದದ್ದು ಸಾರ್ವಜನಿಕರ ತೀವ್ರ ಪ್ರತಿರೋಧಕ್ಕೆ ಗುರಿಯಾಯಿತು. "ಮನುಷ್ಯನ ಪ್ರಾಣಕ್ಕೆ ಬೆಲೆ ಇಲ್ಲವೇ?" ಎಂದು ಸ್ಥಳೀಯರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದರು.

ಶಾಶ್ವತ ಪರಿಹಾರಕ್ಕೆ ಆಗ್ರಹ: ಮಲೆನಾಡು ಭಾಗದಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮಿತಿಮೀರಿದೆ. ಆನೆಗಳನ್ನು ತಕ್ಷಣವೇ ಸೆರೆಹಿಡಿದು ಸ್ಥಳಾಂತರಿಸಬೇಕು ಹಾಗೂ ತೋಟಗಳ ಸುತ್ತ ರೈಲ್ವೆ ಕಂಬಿಗಳ ತಡೆಗೋಡೆ ಅಥವಾ ಸೋಲಾರ್ ಬೇಲಿ ನಿರ್ಮಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಕಾಡನೆ ದಾಳಿಗೆ ಮಹಿಳೆ ಮೃತ ಪಟ್ಟ ಘಟನೆ ಖಂಡಿಸಿ ವಿವಿಧ ಸಂಘಟನೆಗಳು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದವು

ತತ್ತರಿಸಿದ ಮಲೆನಾಡು

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ ಕೆಲವು ತಿಂಗಳುಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ. ಜೀವಹಾನಿಯ ಜತೆಗೆ ಅಪಾರ ಪ್ರಮಾಣದ ಬೆಳೆ ಹಾನಿಯೂ ಸಂಭವಿಸುತ್ತಿದ್ದು, ಅರಣ್ಯ ಇಲಾಖೆಯು ಕೇವಲ ಸಾಂತ್ವನ ಹೇಳುವುದಕ್ಕೆ ಸೀಮಿತವಾಗದೆ ಕಾರ್ಯಪ್ರವೃತ್ತವಾಗಬೇಕು ಎಂಬ ಕೂಗು ಕೇಳಿಬಂದಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕಾಡಾನೆ ದಾಳಿಗೆ 10 ಮಂದಿ ಮೃತಪಟ್ಟಿದ್ದರೆ, ಕಾಡುಕೋಣ ದಾಳಿಗೆ ಮೂವರು ಮೃತಪಟ್ಟಿದ್ದಾರೆ.

ತಕ್ಷಣ ಕಾಡಾನೆ ಸೆರೆ, ಮೂಡಿದ ಅನುಮಾನ!

ಮೃತ ಮಹಿಳೆಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಅವರ ಪುತ್ರನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜೊತೆಗೆ ಮುಂದೆ ಇಂತಹ ಸಮಸ್ಯೆಗಳು ಮರುಕಳಿಸದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಬಲಿಯಾದ ಒಂದು ಗಂಟೆಯೊಳಗೆ ಕಾಡಾನೆಯನ್ನು ಸೆರೆಹಿಡಿದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಂಚಾರಕ್ಕೆ ಸಂಚಕಾರ

ಬೆಳಿಗ್ಗೆ 9 ಗಂಟೆಯಿಂದಲೇ ಕಡಬಗೆರೆಯಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಚಿಕ್ಕಮಗಳೂರು-ಶೃಂಗೇರಿ ಮಾರ್ಗದ ನೂರಾರು ಬಸ್‌ಗಳು ಸಂಜೆವರೆಗೆ ಸಾಲಾಗಿ ನಿಂತಿದ್ದವು. ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಪ್ರಯಾಣಿಕರು ದಿನವಿಡೀ ಪರದಾಡುವಂತಾಯಿತು.

ಲಾಠಿ ಪ್ರಹಾರ, ಪ್ರತಿಭಟನಾಕಾರರ ಬಂಧನ

ಪ್ರತಿಭಟನಾಕಾರರನ್ನು ಚದುರಿಸಿ ಶವ ಸಾಗಿಸಲು ಪೊಲೀಸರು ಮುಂದಾದಾಗ, ಹೋರಾಟಗಾರರು ಪೊಲೀಸ್ ವಾಹನವನ್ನು ತಡೆದರು. ಈ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದಿಂದಾಗಿ ಮಹಿಳೆ ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ. ಪ್ರತಿಭಟನಾಕಾರರನ್ನು ಎಳೆದು ತಂದು ಜೀಪಿನೊಳಗೆ ತುಂಬಿಸಿದ ಪೊಲೀಸರು, ಒಟ್ಟು 29 ಜನರ ಮೇಲೆ ಎಫ್‌ಐಆರ್ (FIR) ದಾಖಲಿಸಿದ್ದಾರೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದಾದ್ಯಂತ ಸೋಮವಾರ ಕರೆ ನೀಡಿದ್ದ ಬಂದ್ ಗೆ ವರ್ತಕರು ಬೆಂಬಲ ನೀಡಿದ್ದು ಹೀಗೆ

ಬಂದ್ ಸಂಪೂರ್ಣ ಯಶಸ್ವಿ

ಕಾಡಾನೆ ದಾಳಿಗೆ ಬಲಿಯಾದ ಮಹಿಳಾ ಕಾರ್ಮಿಕಳ ಶವವನ್ನಿಟ್ಟು ಪ್ರತಿಭಟನೆ ನಡೆಸುತ್ತಿದ್ದ ರೈತರು ಹಾಗೂ ಸಾರ್ವಜನಿಕರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರವನ್ನು ಖಂಡಿಸಿ, ಶೃಂಗೇರಿ ವಿಧಾನಸಭಾ ಕ್ಷೇತ್ರದಾದ್ಯಂತ (ಶೃಂಗೇರಿ, ಕೊಪ್ಪ, ಎನ್.ಆರ್. ಪುರ) ಸೋಮವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಪೊಲೀಸರು ನಡೆಸಿದ ಲಾಠಿ ಪ್ರಹಾರ ಖಂಡಿಸಿ, ಶೃಂಗೇರಿ ವಿಧಾನಸಭಾ ಕ್ಷೇತ್ರದಾದ್ಯಂತ ಸೋಮವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಮಲೆನಾಡು ನಾಗರಿಕ ಹಿತರಕ್ಷಣಾ ವೇದಿಕೆ, ರೈತ ಸಂಘಟನೆಗಳು ಹಾಗೂ ಬಿಜೆಪಿ-ಜೆಡಿಎಸ್ ಪಕ್ಷಗಳು ನೀಡಿದ ಈ ಬಂದ್ ಕರೆಗೆ ಮಲೆನಾಡಿನ ಜನತೆ ವ್ಯಾಪಕ ಬೆಂಬಲ ಸೂಚಿಸಿದ್ದು, ಇಡೀ ಕ್ಷೇತ್ರ ಸ್ತಬ್ಧಗೊಂಡಿತ್ತು. ಬೆಳಿಗ್ಗೆಯಿಂದಲೇ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು ಹಾಗೂ ನರಸಿಂಹರಾಜಪುರ ಪಟ್ಟಣಗಳಲ್ಲಿ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು, ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ನೀಡಿದರು.

ಖಾಸಗಿ ಬಸ್‌ಗಳು, ಆಟೋ ಮತ್ತು ಟ್ಯಾಕ್ಸಿ ಸಂಚಾರ ವಿರಳವಾಗಿತ್ತು. ಇದರಿಂದಾಗಿ ದೂರದ ಊರುಗಳಿಂದ ಬಂದಿದ್ದ ಪ್ರಯಾಣಿಕರು ಹಾಗೂ ಪ್ರವಾಸಿಗರು ಪರದಾಡುವಂತಾಯಿತು. ಹಾಲು, ಪತ್ರಿಕೆ ಮತ್ತು ಆಸ್ಪತ್ರೆಗಳಂತಹ ತುರ್ತು ಸೇವೆಗಳನ್ನು ಬಂದ್‌ನಿಂದ ಹೊರಗಿಡಲಾಗಿತ್ತು.

ಘಟನೆ ನಡೆದ ಬಾಳೆಹೊನ್ನೂರು ಮತ್ತು ಕಡಬಗೆರೆಯಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಉಳಿದಿದೆ. ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿದೆ.

ಈ ಬಗ್ಗೆ ಮಲೆನಾಡು ನಾಗರಿಕ ಹಿತರಕ್ಷಣಾ ವೇದಿಕೆಯ ಚಂದ್ರಶೇಖರ್ ರೈ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "ದಿನದಿಂದ ದಿನಕ್ಕೆ ವನ್ಯಜೀವಿ ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಆನೆ ದಾಳಿಗೊಳಗಾದ ಮಹಿಳೆಗೆ ನ್ಯಾಯ ಒದಗಿಸಲು ಹೋರಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ. ಇಲ್ಲಿನ ಜನರನ್ನು ಮನುಷ್ಯರಂತೆ ಅರಣ್ಯ ಇಲಾಖೆ ಕಂಡರೆ ಸಾಕು. ಸರ್ಕಾರವು ಮಲೆನಾಡಿನ ಜನರ ಜೀವಕ್ಕೆ ಬೆಲೆ ನೀಡುತ್ತಿಲ್ಲ. ಲಾಠಿ ಪ್ರಹಾರದ ಮೂಲಕ ಜನರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ," ಎಂದರು.

Read More
Next Story