
ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು; ಬೆಂಗಳೂರು-ಮೈಸೂರು ರೈಲು ಸಂಚಾರ ವ್ಯತ್ಯಯ
ರೈಲಿನ ಒಂದು ಬೋಗಿಯ ಚಕ್ರ ಹಳಿಯಿಂದ ಕೆಳಗಿಳಿದ ತಕ್ಷಣ ಎಚ್ಚೆತ್ತುಕೊಂಡ ಲೋಕೋ ಪೈಲಟ್, ಕೂಡಲೇ ರೈಲು ನಿಲ್ಲಿಸಿದ್ದರಿಂದ ಅಪಾಯ ತಪ್ಪಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ(ರಾಮನಗರ) ಬಿಡದಿ ಮತ್ತು ರಾಮನಗರ ರೈಲು ನಿಲ್ದಾಣಗಳ ಮಧ್ಯೆ ಮಂಗಳವಾರ ಸಂಜೆ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಬೆಂಗಳೂರು-ಮೈಸೂರು ನಡುವಿನ ರೈಲು ಸಂಚಾರ ಒಂದು ಗಂಟೆಗೂ ಹೆಚ್ಚು ಕಾಲ ವ್ಯತ್ಯಯವಾಯಿತು.
ಬಿಡದಿಯಿಂದ ಮದ್ದೂರಿನ ಕಡೆಗೆ ಸಂಚರಿಸುತ್ತಿದ್ದ ಎನ್ಎಂಜಿ ರೇಕ್ ಮಾದರಿಯ ಖಾಲಿ ಗೂಡ್ಸ್ ರೈಲು ಸಂಜೆ ಸುಮಾರು 4.56ರ ವೇಳೆಗೆ ದಾಸೇಗೌಡನದೊಡ್ಡಿ ಸಮೀಪ ಹಳಿ ತಪ್ಪಿದೆ. ರೈಲಿನ ಒಂದು ಬೋಗಿಯ ಚಕ್ರ ಹಳಿಯಿಂದ ಕೆಳಗಿಳಿದ ತಕ್ಷಣ ಎಚ್ಚೆತ್ತುಕೊಂಡ ಲೋಕೋ ಪೈಲಟ್, ಕೂಡಲೇ ರೈಲು ನಿಲ್ಲಿಸಿದ್ದರಿಂದ ಅಪಾಯ ತಪ್ಪಿದೆ.
ಪ್ರಯಾಣಿಕರ ಪರದಾಟ
ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಇದರಿಂದ ಪ್ರಯಾಣಿಕರು ಪರದಾಡಿದರು.
ಕೆಂಗೇರಿ, ನಾಯಂಡಹಳ್ಳಿ ಹಾಗೂ ಬೆಂಗಳೂರು ನಿಲ್ದಾಣಗಳಲ್ಲಿ ರೈಲುಗಳು ಸ್ಥಗಿತಗೊಂಡಿದ್ದವು. ಚನ್ನಪಟ್ಟಣ ಮತ್ತು ಮಂಡ್ಯ ನಿಲ್ದಾಣಗಳಲ್ಲಿ ರೈಲುಗಳನ್ನು ತಡೆಹಿಡಿಯಲಾಗಿತ್ತು. ಇದರಿಂದಾಗಿ ಸಂಜೆ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ರೈಲಿನಲ್ಲೇ ಕಾಯುವಂತಾಯಿತು.
ತಕ್ಷಣ ಸ್ಥಳಕ್ಕೆ ಧಾವಿಸಿದ ರೈಲ್ವೆ ತಾಂತ್ರಿಕ ಸಿಬ್ಬಂದಿ, ಹಳಿ ತಪ್ಪಿದ ಬೋಗಿಯನ್ನು ಮತ್ತೆ ಹಳಿಯಲ್ಲಿ ನಿಲ್ಲಿಸಿದರು. ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ರೈಲು ಸಂಚಾರದಲ್ಲಿ ವಿಳಂಬವಾಗುವ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

