
ಮಾಲೂರಿನ 184 ಗ್ರಾಮಗಳ ದಾಹಕ್ಕೆ ಮುಕ್ತಿ: 18 ವರ್ಷಗಳ ಬಳಿಕ 'ಮಾರ್ಕಂಡಯ್ಯ' ಯೋಜನೆಗೆ ಮರುಜೀವ !
2008 ರಿಂದ ಕುಂಟುತ್ತಾ ಸಾಗಿದ್ದ ಮಾರ್ಕಂಡಯ್ಯ ಜಲಾಶಯ ಯೋಜನೆಯ ಅಡೆತಡೆಗಳನ್ನು ನಿವಾರಿಸಿ ಶೀಘ್ರವಾಗಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಪೈಪ್‌ಲೈನ್ ಮೂಲಕ ನೀರು ಪೂರೈಸುವ ಯೋಜನೆ ಇದಾಗಿದೆ.
ಬಯಲು ಸೀಮೆಯ ಜಿಲ್ಲೆ ಕೋಲಾರದ ಮಾಲೂರು ತಾಲ್ಲೂಕಿನ ಜನತೆಗೆ ಕುಡಿಯುವ ನೀರಿನ ಭರವಸೆ ನೀಡಿದ್ದ 'ಮಾರ್ಕಂಡೇಯ ಜಲಾಶಯ ಯೋಜನೆ' ಈಗ ಅನುಷ್ಠಾನದ ಹಂತಕ್ಕೆ 2008ರಲ್ಲೇ ಚಾಲನೆ ನೀಡಲಾಗಿದ್ದರೂ, ಕಳೆದ 18 ವರ್ಷಗಳಿಂದ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಈ ಮಹತ್ವಾಕಾಂಕ್ಷೆಯ ಯೋಜನೆ ಈಗ ವೇಗ ಪಡೆದುಕೊಳ್ಳುತ್ತಿದೆ.
ಈ ಬಗ್ಗೆ ಬುಧವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಯೋಜನೆಯ ಸ್ಥಿತಿಗತಿಗಳನ್ನು ಅವಲೋಕಿಸಿದ್ದಾರೆ.
"ರಾಜ್ಯದ ಗ್ರಾಮಗಳಿಗೆ ಸುಸ್ಥಿರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ನಮ್ಮ ಸರ್ಕಾರದ ಪ್ರಮುಖ ಧ್ಯೇಯ. 2008ರಲ್ಲೇ ಆರಂಭವಾದ ಈ ಯೋಜನೆಯು ಇಷ್ಟು ವರ್ಷಗಳ ಕಾಲ ವಿಳಂಬವಾಗಿರುವುದು ವಿಷಾದನೀಯ. ಈಗ ಎದುರಾಗಿರುವ ಎಲ್ಲಾ ಸವಾಲುಗಳನ್ನು ಪರಿಹರಿಸಿ ಇದನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವುದು ನಮ್ಮ ಆದ್ಯತೆ," ಎಂದು ಸಚಿವರು ಭರವಸೆ ನೀಡಿದರು.
ಅಧಿಕಾರಿಗಳಿಗೆ ನಿರ್ದೇಶನ
ಸಭೆಯಲ್ಲಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಸಚಿವರು, ಯೋಜನೆ ವಿಳಂಬವಾಗಲು ಕಾರಣವಾದ ತಾಂತ್ರಿಕ ಮತ್ತು ಆಡಳಿತಾತ್ಮಕ ತೊಡಕುಗಳ ಬಗ್ಗೆ ಚರ್ಚಿಸಿದರು. ಮುಂದಿನ ಸಭೆಯೊಳಗೆ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು ಮತ್ತು ಅವುಗಳಿಗೆ ತಕ್ಕ ಪರಿಹಾರಗಳ ಕುರಿತು ಸಮಗ್ರ ವರದಿ (ಡಿಪಿಆರ್) ತಯಾರಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಇಲಾಖೆಯ ಅಧಿಕಾರಿಗಳಾದ ಸಮೀರ್ ಶುಕ್ಲ, ರಣದೀಪ್ ಡಿ, ಡಾ. ಅರುಂಧತಿದೇವಿ ಸೇರಿದಂತೆ ಹಲವರು ಈ ಯೋಜನೆಯ ವೇಗವರ್ಧನೆಗೆ ಸಲಹೆ ನೀಡಿದರು.
ಏನಿದು ಯೋಜನೆ
ಅಂತರ್ಜಲ ಕುಸಿತ ಮತ್ತು ಫ್ಲೋರೈಡ್ ಸಮಸ್ಯೆ ಎದುರಿಸುತ್ತಿರುವ ಕೋಲಾರ ಜಿಲ್ಲೆಯ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಈ ಯೋಜನೆಯು, ಮಾಲೂರು ತಾಲ್ಲೂಕಿನ ನೀರಿನ ಬರ ನೀಗಿಸಲಿದೆ. ಬೂದಿಕೋಟೆ ಸಮೀಪದ ಮಾರ್ಕಂಡಯ್ಯ ಜಲಾಶಯದಿಂದ ಕುಡಿಯುವ ನೀರನ್ನು ಪೈಪ್‌ಲೈನ್ ಮೂಲಕ ಸರಬರಾಜು ಮಾಡಿ, ಮಾಲೂರು ತಾಲ್ಲೂಕಿನ 184 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಇದರಿಂದಾಗಿ ಇಷ್ಟು ಗ್ರಾಮಗಳ ಜನತೆಗೆ ಈ ಯೋಜನೆಯಿಂದ ನೇರ ಪ್ರಯೋಜನವಾಗಲಿದೆ.
ಕೋಲಾರ ಜಿಲ್ಲೆಯಲ್ಲಿ ಮಳೆ ಅಭಾವ ಮತ್ತು ಅಂತರ್ಜಲದ ತೀವ್ರ ಕುಸಿತದಿಂದಾಗಿ ಕುಡಿಯುವ ನೀರು ಚಿನ್ನದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಾರ್ಕಂಡಯ್ಯ ಯೋಜನೆಯ ಅನುಷ್ಠಾನವಾದರೆ, ಮಾಲೂರು ತಾಲ್ಲೂಕಿನ ಬಹುತೇಕ ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಕೆ.ಸಿ. ವ್ಯಾಲಿ ನೀರಿನಿಂದ ಕೆರೆಗಳು ತುಂಬುತ್ತಿದ್ದರೂ, ನೇರ ಕುಡಿಯುವ ನೀರಿನ ವ್ಯವಸ್ಥೆಗೆ ಮಾರ್ಕಂಡಯ್ಯ ಯೋಜನೆಯೇ ಜೀವಾಳ ಎನ್ನಬಹುದು.

