
ನೆಲಮಂಗಲ ನಗರಸಭೆಯ ಏಳು ಸದಸ್ಯರು ಅನರ್ಹ; ಆದೇಶಕ್ಕೆ ಕಾರಣವೇನು?
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಫೆ.13ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಚಿಹ್ನೆಯಡಿ ಸದಸ್ಯರಾಗಿ ಆಯ್ಕೆಯಾಗಿದ್ದ ಸದಸ್ಯರಿಗೆ ಪಕ್ಷದ ವತಿಯಿಂದ ವಿಪ್ ಜಾರಿಗೊಳಿಸಲಾಗಿತ್ತು.
ನೆಲಮಂಗಲ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ ಆರೋಪದ ಮೇಲೆ ಏಳು ಮಂದಿ ನಗರಸಭೆ ಸದಸ್ಯರನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅನರ್ಹಗೊಳಿಸಿದ್ದಾರೆ.
ಫೆ.13 ರಂದು ನೆಲಮಂಗಲ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಪ್ರತಿಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದರಿಂದ ಪಕ್ಷವು ಮನ್ನಿಸದ ಕಾರಣ ಅನರ್ಹಗೊಳಿಸಲಾಗಿದೆ.
ನಗರಸಭಾ ಸದಸ್ಯರಾದ ಆನಂದ ಜಿ, ಶಾರದಾ ಉಮೇಶ್, ದಾಕ್ಷಾಯಿಣಿ ರವಿಕುಮಾರ್, ಬಿ ಪದ್ಮನಾಭ್, ಭಾರತಿ ಬಾಯಿ, ನರಸಿಂಹಮೂರ್ತಿ, ಲತಾ ಹೇಮಂತ್ ಕುಮಾರ್ ಅವರನ್ನು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಆದೇಶಿಸಿದ್ದಾರೆ. ಕರ್ನಾಟಕ ಸ್ಥಳೀಯ ಸಂಸ್ಥೆಗಳ (ಪಕ್ಷಾಂತರ ನಿಷೇಧ) ಅಧಿನಿಯಮದಡಿ 4(2)(---) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಲಾಗಿದೆ.
ಅನರ್ಹತೆಗೆ ಕಾರಣವೇನು?
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಫೆ.13ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಚಿಹ್ನೆಯಡಿ ಸದಸ್ಯರಾಗಿ ಆಯ್ಕೆಯಾಗಿದ್ದ ಸದಸ್ಯರಿಗೆ ಪಕ್ಷದ ವತಿಯಿಂದ ವಿಪ್ ಜಾರಿಗೊಳಿಸಲಾಗಿತ್ತು. ಆದರೆ, ಈ ಸದಸ್ಯರು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸದೇ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದರು. ಸದಸ್ಯರ ಈ ನಡವಳಿಕೆಯಿಂದ ಬೇಸರಗೊಂಡ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರು 2025ರ ಮಾರ್ಚ್ 3ರಂದು ಪಕ್ಷಾಂತರ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿ ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದರು.
ಪೌರಾಯುಕ್ತರಿಂದ ಅರ್ಜಿ ಸ್ವೀಕರಿಸಿದ ಜಿಲ್ಲಾಧಿಕಾರಿ ನ್ಯಾಯಾಲಯವು ವಾದಿ-ಪ್ರತಿವಾದಿಗಳಿಗೆ ವಾದ ಮಂಡಿಸಲು ಅವಕಾಶ ನೀಡಿತ್ತು. ಅಂತಿಮವಾಗಿ ಜೆಡಿಎಸ್ ಪಕ್ಷದ ಏಳೂ ಮಂದಿ ಸದಸ್ಯರನ್ನು ಕರ್ನಾಟಕ ಸ್ಥಳೀಯ ಸಂಸ್ಥೆಗಳ (ಪಕ್ಷಾಂತರ ನಿಷೇಧ) ಕಾಯ್ದೆಯ 1987 ಸೆಕ್ಷನ್ 4(2) (III) ರನ್ವಯ ಅನರ್ಹಗೊಳಿಸಿ ಆದೇಶಿಸಲಾಯಿತು.

