
ಮಂಡ್ಯ: ಕೆಮಿಕಲ್ ಟ್ಯಾಂಕ್ ಸ್ಫೋಟಕ್ಕೆ ಇಬ್ಬರು ಬಲಿ
ಸ್ಥಳಾಂತರದ ವೇಳೆ ಸರಿಯಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದ ಕಾರಣ ಟ್ಯಾಂಕ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಬಸರಾಳು ಸಮೀಪದ ಕಾರೆಕಟ್ಟೆಯಲ್ಲಿ ಕೆಮಿಕಲ್ ಕಾರ್ಖಾನೆಯ ರಾಸಾಯನಿಕ ಟ್ಯಾಂಕ್ ಸ್ಫೋಟಗೊಂಡು ಬಿಹಾರ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ನಡೆದಿದೆ.
ಕೀರ್ತಿ ಕೆಮಿಕಲ್ ಕಾರ್ಖಾನೆಯನ್ನು ಬೇರೆಡೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿತ್ತು. ಇಂದು ರಾಸಾಯನಿಕ ಟ್ಯಾಂಕ್ ತೆರವುಗೊಳಿಸುವಾಗ ಸ್ಫೋಟ ಸಂಭವಿಸಿದೆ. ನಾಲ್ಕು ವರ್ಷಗಳ ಹಿಂದೆ ಇದೇ ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆಯಾಗಿ ನೂರಾರು ಎಕರೆ ಬೆಳೆ ಹಾನಿಯಾಗಿತ್ತು. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಾರ್ಖಾನೆ ಸ್ಥಳಾಂತರಿಸಲು ಸೂಚಿಸಿತ್ತು.
ಸ್ಥಳಾಂತರದ ವೇಳೆ ಸರಿಯಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದ ಕಾರಣ ಟ್ಯಾಂಕ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಡ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವರ್ಷದ ಜನವರಿಯಲ್ಲಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿರುವ ಇನಾಮದಾರ್ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡು ಏಳು ಮಂದಿ ಮೃತಪಟ್ಟಿದ್ದರು.
2025 ಜನವರಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪದ ಕೆಪಿಟಿಸಿಎಲ್ ಘಟಕದಲ್ಲಿ ಸಂಭವಿಸಿದ್ದ ಬಾಯ್ಲರ್ ಸ್ಫೋಟದಲ್ಲಿ ಒಬ್ಬ ಮೃತಪಟ್ಟು, ಐವರು ಗಂಭೀರ ಗಾಯಗೊಂಡಿದ್ದರು. 2026 ಜನವರಿಯಲ್ಲಿ ಬೀದರ್ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಐವರು ಕಾರ್ಮಿಕರು ಗಾಯಗೊಂಡಿದ್ದರು.
ದಶಕಗಳಷ್ಟು ಹಳೆಯದಾದ ಟ್ಯಾಂಕ್ ಮತ್ತು ಬಾಯ್ಲರ್ ಬಳಕೆ, ಅಸಮರ್ಪಕ ನಿರ್ವಹಣೆ, ಅಪಾಯಕಾರಿ ರಾಸಾಯನಿಕಗಳ ನಿರ್ವಹಣೆಗೆ ಸೂಕ್ತ ತರಬೇತಿ ಪಡೆಯದೇ ಸಿಬ್ಬಂದಿ ಬಳಕೆ ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಇಂತಹ ದುರಂತಗಳಿಗೆ ಕಾರಣ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದರು.

