
ಈಶಾ ಫೌಂಡೇಶನ್‌ನಲ್ಲಿ ಶಿವರಾತ್ರಿ ಸಂಭ್ರಮದ ನಡುವೆ ಬೆಂಕಿ ಅವಘಡ
ಚಿಕ್ಕಬಳ್ಳಾಪುರ ಈಶಾ ಫೌಂಡೇಶನ್‌ನಲ್ಲಿ ಶಿವರಾತ್ರಿ ಸಂಭ್ರಮದ ನಡುವೆ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು ಆತಂಕ ಸೃಷ್ಟಿಸಿದೆ. ಲಕ್ಷಾಂತರ ಭಕ್ತರ ಆಗಮನದಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು ಪರಿಸ್ಥಿತಿ ಕೈಮೀರುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಅವಲಗುರ್ಕಿ ಸಮೀಪದ ಈಶಾ ಫೌಂಡೇಶನ್‌ನಲ್ಲಿ ಮಹಾಶಿವರಾತ್ರಿಯ ಸಡಗರ ಮನೆಮಾಡಿದೆ. 112 ಅಡಿಯ ಆದಿಯೋಗಿಯ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಆದರೆ, ಈ ಸಂಭ್ರಮದ ನಡುವೆಯೇ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕ ಸೃಷ್ಟಿಸಿದೆ.
ಬೆಟ್ಟದಲ್ಲಿ ಬೆಂಕಿ-ದುಷ್ಕರ್ಮಿಗಳ ಕೈವಾಡ ಶಂಕೆ?
ಈಶಾ ಫೌಂಡೇಶನ್ ಆವರಣದ ನಾಗಮಂಟಪದ ಎದುರುಗಡೆ ಇರುವ ಅರಣ್ಯ ಪ್ರದೇಶದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಯಾರೋ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ದಟ್ಟವಾದ ಹೊಗೆ ಆವರಿಸಿದೆ. ಈಗಾಗಲೇ ಲಕ್ಷಾಂತರ ಜನ ಸೇರಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಕಿಲೋಮೀಟರ್‌ಗಟ್ಟಲೆ ಕ್ಯೂ!
ಆದಿಯೋಗಿ ದರ್ಶನಕ್ಕೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನ ಲಗ್ಗೆ ಇಟ್ಟಿದ್ದಾರೆ. ಭಕ್ತರ ಅನುಕೂಲಕ್ಕಾಗಿ ನೂರಕ್ಕೂ ಹೆಚ್ಚು ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದರೂ ಸಹ, ಜನಸಂದಣಿ ನಿಯಂತ್ರಣಕ್ಕೆ ಬಂದಿರಿಲ್ಲ. ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲು ನಿಂತಿದ್ದು, ಬಸ್ ಹತ್ತಲು ಜನರು ಪರದಾಡುತ್ತಿದ್ದಾರೆ.
ಟ್ರಾಫಿಕ್ ಜಾಮ್ ಹಾಗೂ ಉದ್ವಿಗ್ನ ಪರಿಸ್ಥಿತಿ
ಈಶಾ ಫೌಂಡೇಶನ್ ಸುತ್ತಮುತ್ತಲಿನ ರಸ್ತೆಗಳೆಲ್ಲವೂ ವಾಹನಗಳಿಂದ ತುಂಬಿ ಹೋಗಿದ್ದು, ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ನೂರಕ್ಕೂ ಹೆಚ್ಚು ಎಕರೆ ಪ್ರದೇಶದ ಪಾರ್ಕಿಂಗ್ ಜಾಗ ಸಂಪೂರ್ಣ ಭರ್ತಿಯಾಗಿತ್ತು. ಜನದಟ್ಟಣೆ ಮಿತಿ ಮೀರಿದ ಕಾರಣ ಪೊಲೀಸರು ಭಕ್ತರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರ ಸೂಚನೆ ಧಿಕ್ಕರಿಸಿ ಒಳನುಗ್ಗಲು ಯತ್ನಿಸಿದ ಭಕ್ತರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿದ್ದು, ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಈಶಾ ಫೌಂಡೇಶನ್‌ನ ಸ್ವಯಂಸೇವಕರು ಹರಸಾಹಸ ಪಡುತ್ತಿದ್ದಾರೆ. ಸದ್ಯಕ್ಕೆ ಪರಿಸ್ಥಿತಿಯನ್ನು ಗಮನಿಸಿ ಈಶಾ ಕಡೆಗೆ ಬರದಂತೆ ಸ್ಥಳೀಯ ಆಡಳಿತ ಮನವಿ ಮಾಡಿದೆ.

