
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ಕೋಲಾರ-ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನ ಕೊಳಚೆ ನೀರು: ಮಾಜಿ ಪ್ರಧಾನಿ ಎಚ್ಡಿಡಿ ಆಕ್ರೋಶ
ರಾಜ್ಯ ಸರ್ಕಾರ ನದಿಯ ನೀರು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ರಾಜಧಾನಿಯ ಕೊಳಚೆ ನೀರನ್ನು ಆ ಎರಡು ಜಿಲ್ಲೆಗಳ ಜನರಿಗೆ ಕೊಟ್ಟಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆರೋಪಿಸಿದ್ದಾರೆ.
"ಹದಿನಾರು ಬಜೆಟ್‌ಗಳನ್ನು ಮಂಡಿಸಿ, ಇದೀಗ ಹದಿನೇಳನೇ ಬಜೆಟ್ ಮಂಡಿಸಲು ಹೊರಟಿರುವ 'ಭೂಪರು' ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರು ಹರಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಲೂರು ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡ ಹೂಡಿ ವಿಜಯಕುಮಾರ್ ಅವರನ್ನು ಗುರುವಾರ (ಮಾ.5) ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಅವರು ಮಾತನಾಡಿದರು. "ಶುದ್ಧ ನದಿ ನೀರು ಕೊಡುತ್ತೇವೆ ಎಂದು ಭರವಸೆ ನೀಡಿ, ರಾಜಧಾನಿಯ ಕೊಳಚೆ ನೀರನ್ನು ಆ ಎರಡು ಜಿಲ್ಲೆಗಳ ಜನರಿಗೆ ನೀಡಿದ್ದಾರೆ. ಒಂದು ಕಾಲದಲ್ಲಿ ಕೋಲಾರದ ಟೊಮೆಟೊ ಎಂದರೆ ಜಗತ್ಪ್ರಸಿದ್ಧವಾಗಿತ್ತು. ಆದರೆ, ಈಗ ಅದನ್ನು ತಿನ್ನಬೇಡಿ ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಈ ಗಲೀಜು ನೀರು ಹಾಗೂ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ," ಎಂದು ಗುಡುಗಿದರು.
'ದ ಫೆಡರಲ್ ಕರ್ನಾಟಕ'ದ ರಿಯಾಲಿಟಿ ಚೆಕ್
ಇದೇ ವಿಚಾರವಾಗಿ 'ದ ಫೆಡರಲ್ ಕರ್ನಾಟಕ' ತಂಡವು ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಖುದ್ದು ಭೇಟಿ ನೀಡಿ 'ರಿಯಾಲಿಟಿ ಚೆಕ್' ನಡೆಸಿ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಕೆ.ಸಿ. ವ್ಯಾಲಿ ಯೋಜನೆಯ ನೀರಿನಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದರೂ, ಬೆಳೆಯುವ ತರಕಾರಿಯಲ್ಲಿ ಹಿಂದಿನ ಗುಣಮಟ್ಟ ಉಳಿದಿಲ್ಲ. ಬೇರೆ ಜಿಲ್ಲೆಗಳ ತರಕಾರಿಗಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ನಮ್ಮ ತರಕಾರಿಗಳಿಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ ಎಂಬುದು ಸ್ಥಳೀಯರು ಹಾಗೂ ರೈತ ಹೋರಾಟಗಾರರ ಪ್ರಮುಖ ಆರೋಪವಾಗಿತ್ತು.
ಇದೀಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೆ.ಸಿ. ವ್ಯಾಲಿ ಹಾಗೂ ಎಚ್.ಎನ್. ವ್ಯಾಲಿ ಯೋಜನೆಗಳ ಲೋಪಗಳ ಬಗ್ಗೆ ದನಿ ಎತ್ತಿ ಸರ್ಕಾರವನ್ನು ಎಚ್ಚರಿಸಿರುವುದು ಈ ಭಾಗದ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಮುಂದಿನ ದಿನಗಳಲ್ಲಾದರೂ ಈ ಎರಡೂ ಜಿಲ್ಲೆಗಳಿಗೆ ಹರಿಸುವ ನೀರನ್ನು ಮೂರನೇ ಹಂತದಲ್ಲಿ (Tertiary Treatment) ಸಂಪೂರ್ಣ ಶುದ್ಧೀಕರಣ ಮಾಡಿದ ಬಳಿಕವಷ್ಟೇ ಕೆರೆಗಳಿಗೆ ಹರಿಸಬೇಕು ಎಂಬುದು ರೈತ ಹೋರಾಟಗಾರರ ಒಕ್ಕೊರಲ ಆಗ್ರಹವಾಗಿದೆ.

