
Karnataka By-Election| ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ; ಬಿಜೆಪಿಗರ ರಾಜಕೀಯ ಟೀಕೆಗೆ ಸಿಎಂ ಗರಂ
ಜಿಎಸ್ ಟಿ ಸಂಗ್ರಹಣೆಯಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಬಂಡವಾಳ ಹೂಡಿಕೆಯಲ್ಲೂ ರಾಜ್ಯ 2 ನೇ ಸ್ಥಾನದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಮುಂದುವರಿದಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆ ಕಣದಲ್ಲಿ ಉಭಯ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಬಜೆಟ್ ಕೇಂದ್ರದ ಬಜೆಟ್ಗಿಂತಲೂ ಉತ್ತಮವಾಗಿದೆ. ಬಿಜೆಪಿ ನಾಯಕರು ರಾಜಕೀಯವಾಗಿ ಹೇಳಿಕೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಪರ ಪ್ರಚಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಅಧಿವೇಶನದಲ್ಲಿ ಬಜೆಟ್ ಕುರಿತು ವಿಸ್ತೃತ ಚರ್ಚೆಯಾಗಿದೆ. ಅದಕ್ಕೆ ಸುದೀರ್ಘ ಉತ್ತರವನ್ನೂ ನೀಡಲಾಗಿದೆ. ದೇಶದ ಜಿಡಿಪಿಯು ಶೇ 7.14 ರಷ್ಟಿದ್ದರೆ, ರಾಜ್ಯದ ಜಿಡಿಪಿ ಶೇ 8.1 ರಷ್ಟಿದೆ. ರಾಜ್ಯದ ಬಜೆಟ್ ಗಾತ್ರ ಈ ಬಾರಿ ಕಳೆದ ವರ್ಷಕ್ಕಿಂತ ಶೇ 9.4 ರಷ್ಟು ಹೆಚ್ಚಿದೆ. ಕೇಂದ್ರದ ಬಜೆಟ್ ಗಿಂತ ಕರ್ನಾಟಕದ ಬಜೆಟ್ ಉತ್ತಮವಾಗಿದೆ. ಜಿಎಸ್ ಟಿ ಸಂಗ್ರಹಣೆಯಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಬಂಡವಾಳ ಹೂಡಿಕೆಯಲ್ಲೂ ರಾಜ್ಯ 2 ನೇ ಸ್ಥಾನದಲ್ಲಿದೆ. ಆದಾಗ್ಯೂ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಬಿಜೆಪಿಯವರು ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ
ಬಿಜೆಪಿಯವರ ಪ್ರಣಾಳಿಕೆಯಲ್ಲಿ ಸರ್ಕಾರದ ಬೆಲೆ ಏರಿಕೆ ಟೀಕಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯುಪಿಎ ಅವಧಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 414 ರೂ. ಇತ್ತು. ಮೋದಿ ಅವರು ಪ್ರಧಾನಿಯಾಗಿ ಬಂದ ನಂತರ ಸಿಲಿಂಡರ್ ಬೆಲೆ 1 ಸಾವಿರ ರೂ. ಗಡಿ ಮುಟ್ಟಿದೆ. ಅದೇ ರೀತಿ ಪೆಟ್ರೋಲ್, ಡೀಸೆಲ್ ದರವನ್ನೂ ಕೇಂದ್ರ ಸರ್ಕಾರ ಹೆಚ್ಚಿಸಿದೆ. ದೇಶದ ವಿವಿಧ ರಾಜ್ಯಗಳ ಬೆಲೆ ಏರಿಕೆಯನ್ನು ಹೋಲಿಸಿದರೆ, ರಾಜ್ಯದಲ್ಲಿ ಗಣನೀಯವಾಗಿ ಬೆಲೆಗಳು ಕಡಿಮೆ ಇವೆ. ಆದ್ದರಿಂದ ಕರ್ನಾಟಕದ ಹಣಕಾಸಿನ ಸ್ಥಿತಿ ಸುಭದ್ರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರೂಪಾಯಿ ಮೌಲ್ಯ ಕುಸಿತ
ಪ್ರಧಾನಿ ಮೋದಿ ಅವರ ಅಧಿಕಾರಾವಧಿಯಲ್ಲಿ ಡಾಲರ್ ಬೆಲೆ ಹೆಚ್ಚುತ್ತಿದ್ದು, ರೂಪಾಯಿಯ ಮೌಲ್ಯ ಕುಸಿಯುತ್ತಿದೆ. ಎನ್ಡಿಎ ನೇತೃತ್ವದ ಸರ್ಕಾರ ನೀಡಿದ್ದ ಯಾವುದೇ ಭರವಸೆಗಳು ಈಡೇರಿಲ್ಲ. ಅಚ್ಛೇ ದಿನಗಳು ಬರಲೇ ಇಲ್ಲ. ರೈತರ ಆದಾಯ ದುಪ್ಪಟ್ಟಾಗಲಿಲ್ಲ. 2 ಕೋಟಿ ಉದ್ಯೋಗ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಣ ಸಂದಾಯವಾಗಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರು ಹಾಗೂ ಬಾಗಲಕೋಟೆಯಲ್ಲಿ ಹೆಚ್.ವೈ.ಮೇಟಿಯವರು ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ನೆರವಿಗೆ ಬಂದಿವೆ ಎಂದರು.
ಗ್ಯಾರಂಟಿ ಯೋಜನೆ ವಿರೋಧಿಸುವ ಬಿಜೆಪಿಗರು
ಬಿಜೆಪಿಯವರು ಬಡವರ ಯೋಜನೆಗಳಾದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾರೆ. ಈವರೆಗೆ ಗ್ಯಾರಂಟಿ ಯೋಜನೆಗಳಿಗೆ ಸುಮಾರು 1,31,000 ಕೋಟಿ ರೂ. ವ್ಯಯ ಮಾಡಿ ಜನ ಸಾಮಾನ್ಯರ ಬದುಕಿಗೆ ಅರ್ಪಿಸಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರ ಒಂದರಲ್ಲಿ 535 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.
ಕಾಂಗ್ರೆಸ್ ನೇತೃತ್ವದ ಸರ್ಕಾರವು ಸಮಗ್ರ ಮೂಲ ಆದಾಯ (ಯೂನಿವರ್ಸಲ್ ಬೇಸಿಕ್ ಇನ್ಕಂ) ತತ್ವದಡಿ ನಂಬಿಕೆಯಿರಿಸಿ, ತಳಸಮುದಾಯದವರಿಗೆ ಅನುಕೂಲ ಕಲ್ಪಿಸುತ್ತಿದೆ. ಸಮಾಜದ ಕಟ್ಟಕಡೆಯ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯ ಎಂದರು.
ಗ್ಯಾರಂಟಿಗಳ ಮೂಲಕ ಸಮಾಜದ ವಿವಿಧ ಜಾತಿಧರ್ಮ ಭಾಷೆಗಳ ಬಡವರಿಗೆ, ಮಧ್ಯವರ್ತಿಗಳ ಹಾವಳಿಯಿಲ್ಲದೇ, ನೇರವಾಗಿ ಅವರ ಖಾತೆಗೆ ಆರ್ಥಿಕ ಲಾಭ ನೀಡಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಅವಧಿಯಲ್ಲೇ ಹೆಚ್ಚು ಸಾಲ
ಬಿಜೆಪಿಯವರು ಗ್ಯಾರಂಟಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಖಜಾನೆ ಖಾಲಿಯಾಗುತ್ತದೆ ಎಂದೆಲ್ಲಾ ಟೀಕಿಸುತ್ತಿದ್ದಾರೆ. ಆದರೆ ಜನರ ಖಾತೆಗೆ ನೇರವಾಗಿ ಹಣ ತಲುಪುದರಿಂದ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಬಿಜೆಪಿಯವರು 2023ರ ಮಾರ್ಚ್ ವರೆಗೆ 5,30,000 ಕೋಟಿಗೂ ಹೆಚ್ಚು ಸಾಲ ಮಾಡಿದ್ದರೆ, ಕಾಂಗ್ರೆಸ್ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ 2,56,000 ಕೋಟಿ ರೂ. ಸಾಲ ಮಾಡಿದೆ. ಅದೇ ಪ್ರಕಾರ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದಾಗ ದೇಶದ ಮೇಲೆ 53.11 ಲಕ್ಷ ಕೋಟಿ ಸಾಲವಿತ್ತು. ಈಗ 218 ಲಕ್ಷ ಕೋಟಿ ಸಾಲವಿದೆ. ಅಂದರೆ ಪ್ರಧಾನಿ ಮೋದಿಯವರ 12 ವರ್ಷದ ಅಧಿಕಾರಾವಧಿಯಲ್ಲಿ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಸಂಖ್ಯೆಯು ಬಿಜೆಪಿ ಸರ್ಕಾರ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹೆಚ್ಚು ಸಾಲ ಮಾಡಿದೆ ಎಂಬುದನ್ನು ಸೂಚಿಸುತ್ತದೆ ಎಂದರು.
ಅಪಪ್ರಚಾರದ ನಡುವೆಯೂ ಗೆಲುವು
ಬಿಜೆಪಿಯವರು ರಾಜ್ಯದಲ್ಲಿ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ದಾವಣಗೆರೆ, ಬಾಗಲಕೋಟೆಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ಬಿಜೆಪಿಯವರ ಅಪಪ್ರಚಾರದ ನಡುವೆಯೂ ಹಿಂದೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಬಹುಮತ ಸಾಧಿಸಿತ್ತು. ಮಾಜಿ ಮುಖ್ಯಮಂತ್ರಿಗಳ ಪುತ್ರ ನಿಂತಿದ್ದ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು ಎಂದರು.
ಮತಪಟ್ಟಿ ವ್ಯತ್ಯಾಸಗೊಳಿಸುವ ಅಧಿಕಾರ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರ ಚುನಾವಣಾ ಆಯೋಗಕ್ಕೆ ಸೇರಿದೆ. ಇಂತಹ ಕೃತ್ಯಗಳಲ್ಲಿ ಕಾಂಗ್ರೆಸ್ ಎಂದಿಗೂ ಒಳಗೊಂಡಿಲ್ಲ. ಹಿಂದೆ ಎಂದಿಗೂ ಇರದಿದ್ದ ವೋಟ್ ಚೋರಿಯ ವಿಷಯ, ಪ್ರಧಾನಿ ಮೋದಿಯವರ ಅವಧಿಯಲ್ಲಿ ಕೇಳಿಬರುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕಾರ್ಯ ಉತ್ತಮವಾಗಿದೆ. ಜನರು ಬೆಂಬಲಿಸುವ ವಿಶ್ವಾಸವೂ ಇದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇಲ್ಲಿನ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುವ ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಮತ್ತು ದೇವೇಗೌಡರ ಕುಟುಂಬಗಳನ್ನು ಉಲ್ಲೇಖಿಸಿ ಜೆಡಿಎಸ್ ಹಾಗೂ ಬಿಜೆಪಿಯವರು ಕುಟುಂಬ ರಾಜಕಾರಣದಲ್ಲಿ ಭಾಗಿಯಾಗಿದ್ದು, ಅವರ ಕುಟುಂಬದ ಸದಸ್ಯರು ರಾಜಕೀಯದಲ್ಲಿ ಸಕ್ರಿಯವಾಗಿರುವುದನ್ನು ಕಾಣಬಹುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು.

