ಮದ್ದೂರು ನಗರಸಭೆಗೆ 4 ಗ್ರಾಮಗಳ ಸೇರ್ಪಡೆ ವಿವಾದ; ನಿರ್ಧಾರ ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ
x
ಎಚ್‌.ಡಿ.ಕುಮಾರಸ್ವಾಮಿ

ಮದ್ದೂರು ನಗರಸಭೆಗೆ 4 ಗ್ರಾಮಗಳ ಸೇರ್ಪಡೆ ವಿವಾದ; ನಿರ್ಧಾರ ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯರು, ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.


ಸಾರ್ವಜನಿಕರು ಹಾಗೂ ರೈತರ ಅಭಿಪ್ರಾಯ ಪಡೆಯದೇ ಮದ್ದೂರು ತಾಲೂಕಿನ ವಿವಿಧ ಪಂಚಾಯ್ತಿಗಳ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡುವ ನಿರ್ಣಯಕ್ಕೆ ಸ್ಥಳೀಯರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.

ಯಾವುದೇ ಸೂಚನೆ ನೀಡದೇ ಏಕಪಕ್ಷೀಯವಾಗಿ ಗ್ರಾಮಗಳ ಸೇರ್ಪಡೆಗೆ ಅಧಿಸೂಚನೆ ಹೊರಡಿಸಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಸ್ಥಳೀಯರು ನಡೆಸುತ್ತಿರುವ ಮುಷ್ಕರ 71 ನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಸಮರಕ್ಕೂ ಮುಂದಾಗಿದ್ದಾರೆ.

ಸರ್ಕಾರದಿಂದ ಅಧಿಸೂಚನೆ

2011ರ ಪ್ರಕಾರ ಮದ್ದೂರು ಜನಸಂಖ್ಯೆ 28,754 ಇದೆ. ಮದ್ದೂರನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಸಲುವಾಗಿ ಸುತ್ತಲಿನ 8 ಗ್ರಾಮಗಳನ್ನು ಸೇರಿಸುವ ಅಧಿಸೂಚನೆಯನ್ನು 2025ರ ಆಗಸ್ಟ್‌ನಲ್ಲಿ ಹೊರಡಿಸಲಾಗಿತ್ತು. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಎರಡು ತಿಂಗಳಿಂದ ಪ್ರತಿಭಟನೆ

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವ ಕ್ರಮಕ್ಕೆ ಸ್ಥಳೀಯರು, ರೈತ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕಳೆದ ಎರಡು ತಿಂಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಗ್ರಾಮಸ್ಥರು ಮತ್ತು ರೈತರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅಧಿಸೂಚನೆ ಕೈ ಬಿಡುವಂತೆ ಒತ್ತಾಯಿಸಿದ್ದಾರೆ.

ನಗರಸಭೆಯನ್ನಾಗಿ ಮೇಲ್ದೆರ್ಜೆಗೇರಿಸುವ ಸಂಬಂಧ ಮದ್ದೂರು ಪಟ್ಟಣ ಪಂಚಾಯಿತಿಯಿಂದ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಗೆ ಪತ್ರ ಬಂದಿತ್ತು. ಮರುದಿನವೇ ಪಂಚಾಯಿತಿಯಿಂದ ವಿಶೇಷ ಗ್ರಾಮಸಭೆ ಕರೆದು, ನಗರಸಭೆಗೆ ಸೇರಿಸುವುದನ್ನು ವಿರೋಧಿಸಿದ್ದೆವು. ಆದರೆ, ಕೆಲ ದಿನಗಳ ನಂತರ ಅಭಿವೃದ್ಧಿಯ ನೆಪ ಹೇಳಿ ಏಕಪಕ್ಷಿಯವಾಗಿ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಿದ್ದಾರೆ. ಸರ್ಕಾರದ ಈ ನಿರ್ಣಯ ಖಂಡಿಸಿ 71 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರೈತ ಮುಖಂಡರಾದ ಸುನಂದಾ ಜಯರಾಂ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಏಕಪಕ್ಷೀಯ ನಿರ್ಧಾರದ ಆರೋಪ

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್‌ ಕಾಯ್ದೆ-1993ರ ಪ್ರಕಾರ, ಗ್ರಾಮಗಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಗ್ರಾಮಸಭೆ ನಡೆಸಿ ಸಾರ್ವಜನಿಕರ ಸಲಹೆ, ಅಭಿಪ್ರಾಯ ಪಡೆಯುವುದು ಕಡ್ಡಾಯ. ಆದರೆ, ಮದ್ದೂರು ನಗರಸಭೆಗೆ ಗ್ರಾಮಗಳನ್ನು ಸೇರಿಸುವ ವಿಚಾರದಲ್ಲಿ ಸರ್ಕಾರ ಯಾವುದೇ ಚರ್ಚೆ ನಡೆಸಿಲ್ಲ. ಜತೆಗೆ ಸ್ಥಳೀಯರ ಒಪ್ಪಿಗೆ ಇಲ್ಲದೆಯೇ ರಾಜ್ಯ ಸಚಿವ ಸಂಪುಟವು ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು ನೀಡಿದೆ.

ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಕೆಲವೇ ಸದಸ್ಯರು ಸೇರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇದು ಜನತೆಯ ಆಶಯಕ್ಕೆ ವಿರುದ್ಧವಾಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿ ದ್ದಾರೆ.

“ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಕ್ಕೆ ವಿರುದ್ಧವಾಗಿ ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಕೂಡಲೇ ರಾಜ್ಯ ಸರ್ಕಾರ ತನ್ನ ನಿರ್ಧಾರ ಕೈಬಿಡಬೇಕು”.
-ಹೆಚ್.ಡಿ. ಕುಮಾರಸ್ವಾಮಿ, ಮಂಡ್ಯ ಸಂಸದ, ಕೇಂದ್ರ ಸಚಿವ

ಸಿಎಂಗೆ ಪತ್ರ ಬರೆದ ಕುಮಾರಸ್ವಾಮಿ

ಜನಾಭಿಪ್ರಾಯ ಪರಿಗಣಿಸದೆ ಮದ್ದೂರಿನ ನಾಲ್ಕು ಪಂಚಾಯಿತಿಗಳನ್ನು ನಗರಸಭೆಗೆ ಸೇರಿಸುವ ನಿರ್ಣಯ ಕೈಗೊಂಡಿರುವುದನ್ನು ಪ್ರಶ್ನಿಸಿದ್ದೇನೆ. ರಾಜ್ಯ ಸರ್ಕಾರ ಜನರ ನಿಲುವುಗಳಿಗೆ ವಿರುದ್ಧವಾಗಿ ಹೋಗಬಾರದು. ಯಾವುದೇ ಕಾರಣಕ್ಕೂ ಮದ್ದೂರು ನಗರಸಭೆ ವ್ಯಾಪ್ತಿಗೆ ಈ ಗ್ರಾಮಗಳನ್ನು ಸೇರಿಸಬಾರದು. ಜನವಿರೋಧಿ ನಿರ್ಧಾರವನ್ನು ಹಿಂಪಡೆಯಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಕೃಷಿ ಆಧರಿತ ಪ್ರದೇಶ

ಮದ್ದೂರಿನ ನಾಲ್ಕು ಪಂಚಾಯ್ತಿಗಳ ಗ್ರಾಮಗಳು ಕೃಷಿ ಆಧರಿತವಾಗಿದ್ದು, ಸುಮಾರು 2,000 ಎಕರೆಗೂ ಹೆಚ್ಚು ಭೂಮಿ ನೀರಾವರಿ ಪ್ರದೇಶವಿದೆ. ಭತ್ತ, ಕಬ್ಬು, ಹೂವು, ತರಕಾರಿ ಇನ್ನಿತರ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯಲಾಗುತ್ತಿದೆ. ಹೈನುಗಾರಿಕೆ, ಪಶು ಸಾಕಾಣಿಕೆಯೂ ಇದೆ. ಗೆಜ್ಜಲಗೆರೆ ಗ್ರಾಮದಲ್ಲಿಯೇ ಮಂಡ್ಯ ಜಿಲ್ಲೆಯ ಹಾಲು ಉತ್ಪಾದನಾ ಮಂಡಳಿ (ಮನ್ ಮುಲ್) ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಿ ಆಸ್ಪತ್ರೆ, ವಿದ್ಯಾಸಂಸ್ಥೆಗಳು ಸೇರಿ ಅನೇಕ ಮೂಲಸೌಕರ್ಯಗಳು ಜನರಿಗೆ ಲಭ್ಯವಿವೆ ಎಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

Read More
Next Story