
ಮೃತ ತಾಯಿ ಆನೆ ಎದುರು ರೋದಸುತ್ತಿರುವ ಮರಿಆನೆ
ತಾಯಾನೆ ಶವದ ಮೇಲೆ ಸೊಂಡಿಲಿಟ್ಟು ರೋದಿಸಿದ ಮರಿ- ಮನಕಲಕುವ ದೃಶ್ಯ!
ಕಾವೇರಿ ವನ್ಯಜೀವಿ ಧಾಮದಲ್ಲಿ ಕಲುಷಿತ ಅರ್ಕಾವತಿ ನದಿ ನೀರು ಸೇವಿಸಿ 40 ವರ್ಷದ ಹೆಣ್ಣಾನೆ ಸಾವು. ನಿಶ್ತೇಜವಾಗಿ ಬಿದ್ದಿರುವ ತಾಯಿಯನ್ನು ಎಬ್ಬಿಸಲು ಮರಿ ಆನೆ ಪಡುತ್ತಿರುವ ಪಾಡು ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ಒಂದೆಡೆ ನಿಶ್ತೇಜವಾಗಿ ಬಿದ್ದಿರುವ ಆನೆ… ಮತ್ತೊಂದೆಡೆ ಅದರ ಮೇಲೆ ಸೊಂಡಿಲನ್ನು ಇಟ್ಟು ರೋದಿಸುತ್ತಿರುವ ಮರಿಯಾನೆ… ಈ ದೃಶ್ಯ ಎಂತಹ ಕಲ್ಲು ಹೃದಯವನ್ನು ಕರಗಿಸುವಂತಿತ್ತು. ಆ ಮರಿ ಆನೆಗೆ ತನ್ನೊಂದಿಗೆ ಕಾಡಿನಲ್ಲಿ ಓಡಾಡುತ್ತಿದ್ದ ತಾಯಿ, ಇಂದು ಇದ್ದಕ್ಕಿದ್ದಂತೆ ಯಾವುದೇ ಚಲನೆಯಿಲ್ಲದೆ ನಿಶ್ತೇಜವಾಗಿ ಬಿದ್ದಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಾವೇರಿ ವನ್ಯಜೀವಿ ಧಾಮದ ಮಗ್ಗೂರು ವಲಯದಲ್ಲಿ ಸಂಭವಿಸಿದ ದಾರುಣ ಘಟನೆಯು ಮೂಕಪ್ರಾಣಿಗಳ ಬವಣೆಯನ್ನು ಎತ್ತಿ ತೋರಿಸಿದೆ. ಕಲುಷಿತ ಅರ್ಕಾವತಿ ನದಿ ನೀರನ್ನು ಸೇವಿಸಿ 40 ವರ್ಷದ ಹೆಣ್ಣಾನೆಯೊಂದು ಮೃತಪಟ್ಟಿರುವ ವರದಿಯಾಗಿದ್ದು, ತಾಯಿಯ ಶವದ ಮುಂದೆ ನಿಂತು ಮರಿ ಆನೆ ರೋದಿಸುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು.
ತನ್ನ ಪ್ರೀತಿಯ ತಾಯಿಯನ್ನು ಕಳೆದುಕೊಂಡ ಮರಿ ಆನೆಯ ಆಕ್ರಂದನ ನೋಡುಗರ ಹೃದಯ ಕಲಕುವಂತಿತ್ತು. ತನ್ನ ತಾಯಿಯ ಶವದ ಬಳಿ ನಿಂತು ಅದು ನಿರಂತರವಾಗಿ ರೋಧಿಸುತ್ತಿತ್ತು, ಬಹುಶಃ ಅದನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿತ್ತು. ಅರಣ್ಯದ ಇತರೆ ಆನೆಗಳು ಬಂದು ಮರಿ ಆನೆಯನ್ನು ಸಮಾಧಾನಪಡಿಸಿ, ಕೊನೆಗೆ ಅದನ್ನು ತಮ್ಮೊಂದಿಗೆ ಕಾಡಿನೊಳಗೆ ಕರೆದುಕೊಂಡು ಹೋದವು. ಈ ದೃಶ್ಯವು ಪ್ರಾಣಿಗಳ ನಡುವಿನ ಬಂಧ ಮತ್ತು ಅವುಗಳ ನೋವಿನ ತೀವ್ರತೆಯನ್ನು ತೋರಿಸುತ್ತದೆ.
ನದಿಯ ಮಾಲಿನ್ಯ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಅರ್ಕಾವತಿ ನದಿಯ ನೀರು ಅತ್ಯಂತ ಕಲುಷಿತವಾಗಿದ್ದು, 'ಇ' ಕೆಟಗರಿಗೆ ಇಳಿದಿದೆ. ಕೈಗಾರಿಕಾ ರಾಸಾಯನಿಕ ತ್ಯಾಜ್ಯಗಳು ಮತ್ತು ನಗರದ ಒಳಚರಂಡಿ ನೀರು ನೇರವಾಗಿ ನದಿಗೆ ಸೇರುತ್ತಿರುವುದರಿಂದ ನೀರಿನಲ್ಲಿ ಆಮ್ಲಜನಕದ ಪ್ರಮಾಣ ತೀವ್ರವಾಗಿ ಕುಸಿದಿದೆ. ಸಂಶೋಧನಾ ವರದಿಗಳ ಪ್ರಕಾರ ನದಿಯ ನೀರಿನಲ್ಲಿ ಕ್ಯಾನ್ಸರ್ ಕಾರಕ ಲೋಹಗಳು, ಪಾದರಸ ಮತ್ತು ನಿಷೇಧಿತ ಕೀಟನಾಶಕವಾದ ಡಿಡಿಟಿ ಪತ್ತೆಯಾಗಿವೆ. ಮೃತ ಆನೆಯ ಮರಣೋತ್ತರ ಪರೀಕ್ಷೆಯಲ್ಲಿ ಅದರ ಹೊಟ್ಟೆಯಲ್ಲಿ ವಿಷಕಾರಿ ಅಂಶಗಳು ಇರುವುದು ದೃಢಪಟ್ಟಿದೆ, ಇದು ನದಿಯ ಮಾಲಿನ್ಯ ಮೂಕಪ್ರಾಣಿಗಳ ಪಾಲಿಗೆ ಎಷ್ಟು ಮಾರಕವಾಗಿದೆ ಎಂಬುದನ್ನು ತೋರಿಸುತ್ತದೆ.
ನದಿ ಪಾತ್ರದಲ್ಲಿನ ದುರಂತಗಳು
ಅರ್ಕಾವತಿ ನದಿ ಪಾತ್ರದಲ್ಲಿ ಈ ರೀತಿಯ ದುರಂತಗಳು ಇದೇ ಮೊದಲಲ್ಲ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಅರಣ್ಯ ವ್ಯಾಪ್ತಿಯ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ನದಿ ದಾಟಲು ಯತ್ನಿಸಿದ ಎರಡು ಕಾಡಾನೆಗಳು ಜಲಸಸ್ಯಗಳ ನಡುವೆ ಸಿಲುಕಿ ಮೃತಪಟ್ಟಿದ್ದವು. ಮಳೆಗಾಲದ ಆರಂಭದಲ್ಲಿ ಕರುಳಿನ ಸೋಂಕುಗಳು ಮತ್ತು ಕಲುಷಿತ ನೀರು ವನ್ಯಜೀವಿಗಳ ಸಾವಿಗೆ ಪ್ರಮುಖ ಕಾರಣವಾಗುತ್ತವೆ ಎಂದು ವನ್ಯಜೀವಿ ತಜ್ಞರು ತಿಳಿಸಿದ್ದಾರೆ.
ಮರಿ ಆನೆಯ ರೋದನೆ ನಮಗೆ ಪ್ರಕೃತಿಯನ್ನು ಸಂರಕ್ಷಿಸುವ ಮತ್ತು ಮೂಕಪ್ರಾಣಿಗಳ ಜೀವವನ್ನು ಉಳಿಸುವ ಮಹತ್ವವನ್ನು ನೆನಪಿಸುತ್ತದೆ. ಅರ್ಕಾವತಿ ನದಿಯ ಮಾಲಿನ್ಯ ತಡೆಗಟ್ಟಲು ಮತ್ತು ವನ್ಯಜೀವಿಗಳ ಸುರಕ್ಷತೆಯನ್ನು ಖಚಿತಪಡಿಸಲು ತುರ್ತು ಕ್ರಮಗಳ ಅಗತ್ಯವಿದೆ. ಪ್ರಕೃತಿಯನ್ನು ರಕ್ಷಿಸುವ ಮೂಲಕ ಮಾತ್ರ ನಾವು ಇಂತಹ ದಾರುಣ ಘಟನೆಗಳನ್ನು ತಡೆಯಬಹುದು.

