
ಭೂಸ್ವಾಧೀನದ ವಿರುದ್ಧ ರೈತರ ಗೆಲುವು; ಹೋರಾಟಕ್ಕೆ ಮಿಡಿದ ಒಡನಾಡಿಗಳಿಗೆ ಗೌರವ ಸಮರ್ಪಣೆ
ದೇವನಹಳ್ಳಿ ರೈತರ ವಿಜಯವು ಕೇವಲ ಚನ್ನರಾಯಪಟ್ಟಣದ ರೈತರದ್ದಲ್ಲ, ಬದಲಿಗೆ ಭೂಮಿಯನ್ನೇ ಜೀವನಾಧಾರವಾಗಿ ನಂಬಿರುವ ರೈತಕುಲದ ಸ್ವಾಭಿಮಾನದ ಸಂಕೇತದ ಜಯ ಎಂದು ಕಾರಹಳ್ಳಿ ಶ್ರೀನಿವಾಸ್ ಬಣ್ಣಿಸಿದರು.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನದಿಂದ ಉಳಿಸಿಕೊಳ್ಳಲು ರೈತರು ನಡೆಸಿದ ನಾಲ್ಕು ವರ್ಷಗಳ ಧರಣಿಗೆ ಐತಿಹಾಸಿಕ ಜಯ ಲಭಿಸಿದ ಹಿನ್ನಲೆಯಲ್ಲಿ ಭೂಸ್ವಾದೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಚನ್ನರಾಯಪಟ್ಟಣದ ಧರಣಿ ಸ್ಥಳದಲ್ಲಿ ನಡೆದ ‘ಭೂಮಿ ಹಬ್ಬ’ ಸಂಭ್ರಮದಲ್ಲಿ ಐತಿಹಾಸಿಕ ಹೋರಾಟದ ನೆನಪುಗಳನ್ನು ಮೆಲುಕು ಹಾಕುವ ‘ಸಾವಿರಾರು ನದಿಗಳು’ ಲೇಖನ ಸಂಕಲನವನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಾಯಿತು.
ರೈತ ಹೋರಾಟದ ನೇತೃತ್ವ ವಹಿಸಿದ್ದ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ ‘ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಮಣ್ಣಿನ ಮೇಲೆ ಕಣ್ಣಿಟ್ಟಿದ್ದ ವ್ಯವಸ್ಥೆಯ ವಿರುದ್ಧ ರೈತರು ತೋರಿದ ಅಪ್ರತಿಮ ಹೋರಾಟಕ್ಕೆ ಸರ್ಕಾರ ಮಣಿದಿದೆ. ಸುದೀರ್ಘವಾಗಿ ಮಳೆ, ಗಾಳಿಯೆನ್ನದೇ ಧರಣಿ ಕುಳಿತ ರೈತರ ಹೋರಾಟಕ್ಕೆ ಜಯ ಸಂದಿದೆ. ಇದರಿಂದ ಸುಮಾರು 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತೆ ಮಾಡಲಾಗಿದೆ ಎಂದು ಹೇಳಿದರು.
ದೇವನಹಳ್ಳಿ ರೈತರ ವಿಜಯವು ಕೇವಲ ಚನ್ನರಾಯಪಟ್ಟಣದ ರೈತರದ್ದಲ್ಲ, ಬದಲಿಗೆ ಭೂಮಿಯನ್ನೇ ಜೀವನಾಧಾರವಾಗಿ ನಂಬಿರುವ ರೈತಕುಲದ ಸ್ವಾಭಿಮಾನದ ಸಂಕೇತದ ಜಯ ಎಂದು ಬಣ್ಣಿಸಿದರು.
ಸುದೀರ್ಘ ಹೋರಾಟದ ಹಾದಿಯಲ್ಲಿ ಧೈರ್ಯ ತುಂಬಿ ಹೆಗಲಿಗೆ ಹೆಗಲು ಕೊಟ್ಟು ನಿಂತವರು ನಮ್ಮ ಹೋರಾಟದ ಒಡನಾಡಿಗಳು, ವಿವಿಧ ಜನಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ಸಂಘ-ಸಂಸ್ಥೆಗಳು ಮತ್ತು ಮಾಧ್ಯಮ ಮಿತ್ರರು ನೀಡಿದ ಬೆಂಬಲದಿಂದಲೇ ಇಂದು ನಾವು ಈ ಭೂಮಿ ಉಳಿಸಿಕೊಳ್ಳಲು ಸಾಧ್ಯವಾಗಿದೆ. ನಮ್ಮ ನೋವಿಗೆ ದನಿಯಾಗಿ, ಅಧಿಕಾರಶಾಹಿಯ ವಿರುದ್ಧದ ಈ ಸಮರದಲ್ಲಿ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಕಾರಳ್ಳಿ ಶ್ರೀನಿವಾಸ್ ಹೇಳಿದರು.
ರೈತ ನಾಯಕ ಬಡಗಲಪುರ ನಾಗೇಂದ್ರ ಮಾತನಾಡಿ, ‘ಈ ಗೆಲುವಿನ ನಡುವೆಯೇ ಸರ್ಕಾರವು ಭೂ ಸ್ವಾಧೀನ ಕೈ ಬಿಡುವ ನೆಪದಲ್ಲಿ ‘ಶಾಶ್ವತ ವಿಶೇಷ ಕೃಷಿ ವಲಯ’ ಎಂಬ ಅಸಂವಿಧಾನಿಕ ನಿಯಮ ಹೇರಿ, ರೈತರ ಹಕ್ಕನ್ನು ಕಿತ್ತುಕೊಳ್ಳಲು ಮುಂದಾಗಿದೆ. ಸರ್ಕಾರದ ರೈತ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಭೂಮಿ ಉಳಿಸಿಕೊಳ್ಳಲು ಹೋರಾಡಿದ ನಮಗೆ, ಇಂತಹ ಮಾರಕ ಷರತ್ತುಗಳನ್ನು ಎದುರಿಸುವುದು ಹೇಗೆ ಎಂಬುದು ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐತಿಹಾಸಿಕ ವಿಜಯವನ್ನು ಸಂಭ್ರಮಿಸುವ ಜೊತೆಗೆ ಎಲ್ಲರೂ ಒಟ್ಟಾಗಿ ಸೇರಿ ನಮ್ಮೆಲ್ಲರ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು’ ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ಕಾರ್ಯಕ್ರಮದಲ್ಲಿ ಭೂಸ್ವಾದೀನ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳಾದ ರಮೇಶ್ ಚೀಮಾಚನಹಳ್ಳಿ, ಪ್ರಮೋದ್ ಪೋಲನಹಳ್ಳಿ, ಮಾರೇಗೌಡ, ನಂಜಪ್ಪ, ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ನೂರ್ ಶ್ರೀಧರ್, ವರಲಕ್ಷ್ಮಿ, ಯಶವಂತ, ಕೆ.ವಿ.ಭಟ್, ವೀರಸಂಗಯ್ಯ, ಹೋರಾಟಗಾರರಾದ ದು.ಸರಸ್ವತಿ, ದೇವಿ, ಪ್ರಕಾಶ್, ಗೌರಿ, ಗೌರಮ್ಮ, ಆಂಜನೇಯರೆಡ್ಡಿ, ಪತ್ರಕರ್ತರಾದ ರವಿಕುಮಾರ್ ಈಚಲಮರ, ಚಂದ್ರು ತರಹುಣಿಸೆ, ವಿದ್ಯಾರ್ಥಿ ಮುಖಂಡರಾದ ಸರೋವರ್, ಯಮುನಾ, ಕೌಶಲ್ಯ, ಮಮತಾ, ಶರತ್ ಸೇರಿ ಹಲವರು ಭಾಗವಹಿಸಿದ್ದರು.

