
ದೇವನಹಳ್ಳಿ; ಭೂಸ್ವಾಧೀನದ ವಿರುದ್ಧ ಗೆದ್ದ ರೈತರಿಂದ ಫೆ.22ಕ್ಕೆ 'ಭೂಮಿ ಹಬ್ಬ' ಸಂಭ್ರಮ.
ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಸತತ 4 ವರ್ಷಗಳ ಕಾಲ ಹೋರಾಡಿ ಗೆದ್ದ ರೈತರು, ಫೆಬ್ರವರಿ 22 ರಂದು 'ಭೂಮಿ ಹಬ್ಬ' ಆಚರಿಸುವ ಮೂಲಕ ಎರಡನೇ ಹಂತದ ಹೋರಾಟಕ್ಕೆ ಚಾಲನೆ ನೀಡುತ್ತಿದ್ದಾರೆ.
ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕೈಗಾರಿಕಾ ಪ್ರದೇಶಕ್ಕಾಗಿ (KIADB) ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ರೈತರು ನಡೆಸಿದ್ದ ಹೋರಾಟಕ್ಕೆ ಮಣಿದಿದ್ದ ಸರ್ಕಾರ, ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿತ್ತು. ಆದರೆ, ಆ ಪ್ರದೇಶವನ್ನು 'ವಿಶೇಷ ಕೃಷಿ ವಲಯ' ಎಂದು ಘೋಷಿಸಿತ್ತು. ಹೀಗಾಗಿ, ಹೋರಾಟದ ಯಶಸ್ಸಿನ ಸಂಭ್ರಮಾಚರಣೆಯೊಂದಿಗೆ, ಯಾವುದೇ ಷರತ್ತುಗಳಿಲ್ಲದೆ ಭೂಮಿಯನ್ನು ಮರಳಿಸಬೇಕೆಂದು ಒತ್ತಾಯಿಸಿ ಮತ್ತೊಂದು ಸುತ್ತಿನ ಹೋರಾಟ ನಡೆಸಲು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಯೋಜನೆ ರೂಪಿಸಿದೆ. ಈಗಾಗಲೇ ಹೋರಾಟ ನಡೆಯುತ್ತಿರುವ ಸ್ಥಳದಲ್ಲಿಯೇ ಫೆಬ್ರವರಿ 22ರಂದು 'ಭೂಮಿ ಹಬ್ಬ' ಆಚರಿಸಲಾಗುತ್ತಿದೆ.
ಏನಿದು ಹೋರಾಟ?
ದೇವನಹಳ್ಳಿ ಸಮೀಪ ಸುಮಾರು 1,770 ಎಕರೆ ಫಲವತ್ತಾದ ಕೃಷಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿತ್ತು. ಇದನ್ನು ವಿರೋಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಮತ್ತು ಸುತ್ತಮುತ್ತಲಿನ 13 ಹಳ್ಳಿಗಳ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಸತತ 4 ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿದ್ದರು. ಈ ಹೋರಾಟದ ಫಲವಾಗಿ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿತಾದರೂ, ಅದೇ ಜಾಗವನ್ನು 'ವಿಶೇಷ ಕೃಷಿ ವಲಯ' ಎಂದು ಘೋಷಿಸಿತು. ಸರ್ಕಾರದ ಈ ನಿರ್ಧಾರದ ವಿರುದ್ಧವೂ ಈಗ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದರ ಮೊದಲ ಭಾಗವಾಗಿ, ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಬೆಂಬಲ ನೀಡಿದ ಸಂಘಟನೆಗಳು ಹಾಗೂ ಮುಖಂಡರನ್ನು ಆಹ್ವಾನಿಸಿ ಅವರಿಗೆ ಕೃತಜ್ಞತೆ ಸಲ್ಲಿಸಲು ರೈತ ಮುಖಂಡರು 'ಭೂಮಿ ಹಬ್ಬ' ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಮೂಲಕ ಮುಂದಿನ ಹೋರಾಟಗಳಿಗೂ ಬೆಂಬಲ ನೀಡುವಂತೆ ಅವರು ಮನವಿ ಮಾಡುತ್ತಿದ್ದಾರೆ.
ಷರತ್ತುಗಳು ಬೇಡ
ಭೂಸ್ವಾಧೀನ ಕೈಬಿಟ್ಟ ಸರ್ಕಾರ, ಈಗ ಅದೇ ಭೂಮಿಯನ್ನು ವಿಶೇಷ ಕೃಷಿ ವಲಯ ಎಂದು ಘೋಷಿಸಿ ರೈತರ ಭೂಮಿಗೆ ಮತ್ತೊಂದಿಷ್ಟು ಷರತ್ತುಗಳನ್ನು ವಿಧಿಸಿದೆ. ಆದರೆ, ರೈತರು ಇದಕ್ಕೆ ಒಪ್ಪುತ್ತಿಲ್ಲ. ಯಾವುದೇ ಷರತ್ತುಗಳಿಲ್ಲದೆ ಈ ಹಿಂದಿನಂತೆಯೇ ಕೃಷಿ ಭೂಮಿಯನ್ನು ನಮಗೆ ಬಿಟ್ಟುಕೊಡಬೇಕೆಂದು ಅವರು ಆಗ್ರಹಿಸುತ್ತಿದ್ದಾರೆ. ಇದಕ್ಕಾಗಿ 'ಭೂಮಿ ಹಬ್ಬ'ದ ಮೂಲಕ ರಾಜ್ಯದಲ್ಲೇ ಒಂದು ವಿಶೇಷ ಪ್ರಯತ್ನಕ್ಕೆ ರೈತರು ಮುಂದಾಗಿದ್ದಾರೆ.
ಈ ಬಗ್ಗೆ ಚನ್ನರಾಯಪಟ್ಟಣದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಅವರು "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "ಭೂಸ್ವಾಧೀನ ವಿರೋಧಿಸಿ ನಡೆಸಿದ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ಸಂಘ-ಸಂಸ್ಥೆಗಳಿಗೆ ಧನ್ಯವಾದ ತಿಳಿಸಲು 'ಭೂಮಿ ಹಬ್ಬ' ಹಮ್ಮಿಕೊಳ್ಳಲಾಗಿದೆ. ಭೂಸ್ವಾಧೀನ ಕೈಬಿಟ್ಟ ಸರ್ಕಾರವು ಈಗ 'ವಿಶೇಷ ಕೃಷಿ ವಲಯ' ಎಂಬ ಹಣೆಪಟ್ಟಿ ಕಟ್ಟಿದೆ. ಕೃಷಿ ವಲಯ ಘೋಷಣೆಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಇದನ್ನು ಶಾಶ್ವತವಾಗಿ ಕೃಷಿ ವಲಯ ಮಾಡುವ ಮೂಲಕ ಕೈಗಾರಿಕೆಗೆ ಭೂಮಿ ನೀಡದವರ ಮೇಲೆ ಸರ್ಕಾರ ಸವಾರಿ ಮಾಡಲು ಮುಂದಾಗಿದೆ. ರಾಜ್ಯದ ಬೇರೆಲ್ಲಿಯೂ ಇಲ್ಲದ ನಿಯಮ ಚನ್ನರಾಯಪಟ್ಟಣಕ್ಕೆ ಮಾತ್ರ ಏಕೆ? ನಮ್ಮ ಭೂಮಿಯಲ್ಲಿ ನಾವೇ ಸ್ವಂತ ಉದ್ದಿಮೆ ಆರಂಭಿಸಲು ಸಹ ಸರ್ಕಾರ ಬಿಡುತ್ತಿಲ್ಲ. ಸರ್ಕಾರದ ಈ ಬೆದರಿಕೆ ತಂತ್ರದ ವಿರುದ್ಧ ಹೋರಾಟ ನಡೆಸಲು ನಾವು ಭೂಮಿ ಹಬ್ಬ ಆಯೋಜಿಸುತ್ತಿದ್ದೇವೆ" ಎಂದರು.

