
ರಾಜ್ಯದಲ್ಲಿ ಭೀಕರ ದುರಂತ: ಕ್ರಷರ್ ಬಂಡೆ ಕುಸಿದು 7 ಮಂದಿ ಕಾರ್ಮಿಕರು ದಾರುಣ ಸಾವು!
ಬೆಂಗಳೂರು ದಕ್ಷಿಣದ ತಾವರೆಕೆರೆ ಮಾದಪಟ್ಟಣ ಗ್ರಾಮದ ಕಾವೇರಿ ಕ್ರಷರ್‌ನಲ್ಲಿ ಭೀಕರ ದುರಂತ ಸಂಭವಿಸಿದೆ. ಬಂಡೆ ಕುಸಿದು 7 ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಭೀಕರ ದುರಂತವೊಂದು ಸಂಭವಿಸಿದೆ. ಮಾದಪಟ್ಟಣ ಗ್ರಾಮದಲ್ಲಿರುವ ಕಾವೇರಿ ಕಂಪನಿಗೆ ಸೇರಿದ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮೇಲಿಂದ ಬೃಹತ್ ಬಂಡೆ ಕುಸಿದು ಬಿದ್ದ ಪರಿಣಾಮ, ಕನಿಷ್ಠ ಏಳು ಮಂದಿ ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಬಂಡೆಯ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಕಾರ್ಮಿಕರು ಸಿಲುಕಿಕೊಂಡಿರುವ ಭೀತಿ ಎದುರಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.
ಬೆಳ್ಳಂಬೆಳಗ್ಗೆ ಯಮನಾಗಿ ಬಂದ ಕ್ರಷರ್ ಬಂಡೆ!
ಸ್ಥಳೀಯ ಮೂಲಗಳ ಪ್ರಕಾರ, ಈ ಘಟನೆಯು ಇಂದು (ಜುಲೈ 2) ಬೆಳಗ್ಗೆ ಸುಮಾರು 7:30 ರ ಸುಮಾರಿಗೆ ಸಂಭವಿಸಿದೆ. ಕ್ರಷರ್‌ನಲ್ಲಿ ಕಾರ್ಮಿಕರು ಎಂದಿನಂತೆ ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇಟಾಚಿ ಯಂತ್ರದ ಮೂಲಕ ಬಂಡೆ ಕಟಾವು ಮಾಡುವ ಅಥವಾ ಸಾಗಿಸುವ ಕೆಲಸ ನಡೆಯುತ್ತಿದ್ದಾಗ, ಮೇಲ್ಭಾಗದಲ್ಲಿದ್ದ ಬೃಹತ್ ಬಂಡೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆಯೇ ಈ ಬಂಡೆ ಬಿದ್ದಿದ್ದರಿಂದ ಭಾರೀ ದುರಂತ ಸಂಭವಿಸಿದೆ.
ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ
ಘಟನೆಯ ತೀವ್ರತೆಗೆ ಸದ್ಯಕ್ಕೆ 7 ಮಂದಿ ಕಾರ್ಮಿಕರು ಮೃತಪಟ್ಟಿರುವುದು ದೃಢಪಟ್ಟಿದೆ. ಆದರೆ, ಬಂಡೆಯ ಭಾರೀ ಗಾತ್ರದ ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಮೂಡಿದೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆ ತಾವರೆಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಹೊರತೆಗೆಯಲು ಮತ್ತು ಸಿಲುಕಿರುವವರನ್ನು ರಕ್ಷಿಸಲು ತುರ್ತು ರಕ್ಷಣಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದು, ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಸಿಎಂ ಡಿ ಕೆ ಶಿವಕುಮಾರ್ ಸಂತಾಪ
ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕಲ್ಲು ಕ್ವಾರಿಯ ಬಂಡೆ ಕುಸಿದು ಏಳು ಜನ ಕಾರ್ಮಿಕರು ಧಾರುಣ ಸಾವನ್ನಪ್ಪಿರುವ ಘಟನೆ ನನಗೆ ಅತೀವ ನೋವುಂಟು ಮಾಡಿದೆ. ಮೃತಪಟ್ಟ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಹಾಗೂ ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ರಾಜ್ಯ ಸರಕಾರ ನೊಂದ ಕುಟುಂಬ ಕುಟುಂಬಗಳಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡುವುದರ ಜತೆಗೆ ಇನ್ನಿತರ ತುರ್ತು ನೆರವು ಒದಗಿಸಬೇಕು. ಜತೆಗೆ ಕ್ವಾರಿಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ಜಾರಿಗೆ ಕ್ರಮ ವಹಿಸಿ ಸಂಬಂಧಿತ ಇಲಾಖೆ ತೀವ್ರ ನಿಗಾ ಇರಿಸುವಂತೆ ಆದೇಶಿಸಬೇಕು. ಇಂಥ ಕಠಿಣ ಕ್ರಮಗಳು ಆಗದಿರುವ ಕಾರಣಕ್ಕೆ ಈ ರೀತಿಯ ದುರಂತಗಳು ಮರುಕಳಿಸುತ್ತಿವೆ. ರಾಜ್ಯದಲ್ಲಿ ಪದೇಪದೇ ಕ್ವಾರಿ ದುರಂತಗಳು ಸಂಭವಿಸುತ್ತಿದ್ದರೂ ಯಾರ ಮೇಲೆಯೂ ಕ್ರಮ ಆಗಿಲ್ಲ ಎನ್ನುವುದು ಅತ್ಯಂತ ಬೇಸರದ ಸಂಗತಿ. ಕ್ವಾರಿ ಮಾಲೀಕರು ಕೂಡ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

