
ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಿತಿ ಮೀರಿದ ಕಿರುಕುಳ; ಕಿರಿಯ ಅಧಿಕಾರಿಗಳಿಗೆ ʼಆತ್ಮಹತ್ಯೆ ಭಾಗ್ಯʼ
ನಿವೃತ್ತಿಯ ಅಂಚಿನಲ್ಲಿದ್ದ ಮಲ್ಲಿಕಾರ್ಜುನ್ ವಿರುದ್ಧ ಮೇಲಾಧಿಕಾರಿಗಳು ಇಲಾಖಾ ವಿಚಾರಣೆ ಆರಂಭಿಸಿದ್ದರು. ಇದರಿಂದ ಪಿಂಚಣಿಗೆ ತೊಂದರೆಯಾಗಲಿದೆ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ಇನ್ನೊಂದು ವಾರದಲ್ಲಿ ನಿವೃತ್ತಿಯಾಗಿ ಕುಟುಂಬದೊಂದಿಗೆ ಕಾಲ ಕಳೆಯಬೇಕಾಗಿದ್ದ ಪಾವಗಡ ತಾಲೂಕಿನ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಅವರು ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ, ಹಿರಿಯ ಅಧಿಕಾರಿಗಳ ಕಿರುಕುಳದಿಂದ ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರವೃತ್ತಿ ಹೆಚ್ಚಿರುವುದಕ್ಕೆ ಇದು ಮತ್ತೊಂದು ಸಾಕ್ಷಿ ಒದಗಿಸಿದಂತಿದೆ.
ಗೌರವಯುತವಾಗಿ ನಿವೃತ್ತಿ ಹೊಂದಬೇಕಿದ್ದ ಮಲ್ಲಿಕಾರ್ಜುನ್ ಅವರು, ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದು ಇಲಾಖೆಯಲ್ಲೂ ಒತ್ತಡ, ಕಿರುಕುಳ ಇರುವುದನ್ನು ಬಿಂಬಿಸುತ್ತಿದೆ.
ಆತ್ಮಹತ್ಯೆಗೆ ಶರಣಾಗಿದ್ದು ಏಕೆ?
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಅವರು ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಜಂಟಿ ನಿರ್ದೇಶಕ ಕೃಷ್ಣಪ್ಪ ಅವರ ಕಿರುಕುಳವೇ ತಮ್ಮ ಸಾವಿಗೆ ಕಾರಣ ಎಂದು ದೂರಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದ ಮಲ್ಲಿಕಾರ್ಜುನ್ ವಿರುದ್ಧ ಮೇಲಾಧಿಕಾರಿಗಳು ಇಲಾಖಾ ವಿಚಾರಣೆ ಆರಂಭಿಸಿದ್ದರು. ಇದರಿಂದ ಪಿಂಚಣಿಗೆ ತೊಂದರೆಯಾಗಲಿದೆ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆರೋಪ ನಿರಾಕರಿಸಿದ ಕೃಷ್ಣಪ್ಪ
ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಅವರು ಆತ್ಮಹತ್ಯೆಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಮೇಲಾಧಿಕಾರಿಗಳ ಕಿರುಕುಳದ ಬಗ್ಗೆ ಆರೋಪಿಸಿರುವ ಕುರಿತು ಖುದ್ದು ಜಂಟಿ ನಿರ್ದೇಶಕ ಕೃಷ್ಣಪ್ಪ ಅವರೇ ಸ್ಪಷ್ಟನೆ ನೀಡಿದ್ದಾರೆ.
ಮಲ್ಲಿಕಾರ್ಜುನಯ್ಯ ಅವರಿಗೆ ನಾನು ಯಾವುದೇ ತೊಂದರೆ ಕೊಟ್ಟಿರುವ ಉದಾಹರಣೆ ಇಲ್ಲ, ಅಕ್ರಮಕ್ಕೆ ಸಂಬಂಧಿಸಿದಂತೆ ದೂರು ಬಂದರೂ ಅವರ ಕಚೇರಿಗೆ ಹೋಗಿ ಪರಿಶೀಲನೆ ಮಾಡಿಲ್ಲ. ಕೇಂದ್ರ ಕಚೇರಿಯಿಂದ ಬಂದ ಆದೇಶದ ಮೇರೆಗೆ ತನಿಖೆಗೆ ಆದೇಶಿಸಿ ಪತ್ರ ಬರೆದಿದ್ದೆ. ನಾನು ಯಾವುದೇ ಮಾನಸಿಕ ಕಿರುಕುಳ ಕೊಟ್ಟಿಲ್ಲ. ಇಷ್ಟೂ ವರ್ಷ ಇಲಾಖೆಯ ಎಲ್ಲರೊಂದಿಗೆ ಆತ್ಮೀಯವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಮಲ್ಲಿಕಾರ್ಜುನಯ್ಯ ಅವರಿಗೆ ತೊಂದರೆ ಕೊಟ್ಟು ಪಿಂಚಣಿ ನಿಲ್ಲಿಸುವ ಅಗತ್ಯ ನನಗೆ ಇರಲಿಲ್ಲ, ಬದಲಿಗೆ ಮೂರು ತಿಂಗಳ ಹಿಂದೆಯೇ ಪಿಂಚಣಿಗೆ ತೃಪ್ತಿದಾಯಕವಾದ ಶಿಫಾರಸು ಮಾಡಿದ್ದೇನೆ. ಈ ಬಗ್ಗೆ ಸತ್ಯಾಸತ್ಯತೆ ಅರಿಯಲು ಯಾವುದೇ ತನಿಖೆಗೆ ಸಿದ್ಧ ಎಂದು ಹೇಳಿದ್ದಾರೆ.
ʼಸಮಾಜ ಕಲ್ಯಾಣʼದಲ್ಲೂ ಆತ್ಮಹತ್ಯೆ ಭಾಗ್ಯ?
ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಳೆದೊಂದು ದಶಕದಿಂದ ಅಧಿಕಾರಿಗಳು, ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಕಳವಳ ಮೂಡಿಸಿವೆ.
2024ರ ಮೇ ತಿಂಗಳಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಧೀಕ್ಷಕ ಪಿ. ಚಂದ್ರಶೇಖರನ್ ಅವರು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ನಿಗಮದಲ್ಲಿ ಸುಮಾರು 187 ಕೋಟಿ ರೂ.ಗಳ ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ 6 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು. ನಿಗಮದ ಅಧೀಕ್ಷಕರ ಆತ್ಮಹತ್ಯೆ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತ್ತು. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಯುವ ಸಬಲೀಕರಣ, ಕ್ರೀಡಾ ಸಚಿವರಾಗಿದ್ದ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕಾಯಿತು.
2025ರ ಆಗಸ್ಟ್ ತಿಂಗಳಲ್ಲಿ ಶಿವಮೊಗ್ಗದ ಗಡಿಕೊಪ್ಪದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಸಿಬ್ಬಂದಿ ಸುರೇಶ್ ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುರೇಶ್ ಅವರು ಅನಾರೋಗ್ಯ ಮತ್ತು ಗೃಹ ಸಾಲದ ಹೊರೆಯಿಂದ ಮಾನಸಿಕವಾಗಿ ಕುಗ್ಗಿದ್ದರು ಎಂದು ಹೇಳಲಾದರೂ, ಮೇಲಾಧಿಕಾರಿಗಳ ಕಿರುಕುಳದ ಬಗ್ಗೆಯೂ ಆರೋಪ ಕೇಳಿಬಂದಿತ್ತು.
2020ರಲ್ಲಿ ದಾವಣಗೆರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕ ಶಿವಕುಮಾರ್ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 2016ರಲ್ಲಿ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯೊಬ್ಬರು ಜಂಟಿ ನಿರ್ದೇಶಕರಿಂದ ಲೈಂಗಿಕ ಕಿರುಕುಳದ ಆರೋಪ ಮಾಡಿ ಕಚೇರಿಯಲ್ಲೇ ಕರವಸ್ತ್ರದಿಂದ ಕುತ್ತಿಗೆ ಬಿಗಿದುಕೊಳ್ಳಲು ಯತ್ನಿಸಿದ್ದರು. ತಕ್ಷಣವೇ ಸಹೋದ್ಯೋಗಿಗಳು ನೆರವಿಗೆ ಧಾವಿಸಿ ಅವರನ್ನು ರಕ್ಷಿಸಿದ್ದರು. ಈ ಪ್ರಕರಣಗಳು ಇಲಾಖೆಯಲ್ಲಿರುವ ಕೆಲಸದ ಒತ್ತಡ, ಅನುದಾನ ಹಂಚಿಕೆಯಲ್ಲಿನ ಅವ್ಯವಹಾರ ಮತ್ತು ಅಧಿಕಾರಿಗಳ ಕಿರುಕುಳಕ್ಕೆ ಸಾಕ್ಷಿ ಎನ್ನಲಾಗಿದೆ.
ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಎಂಬುದು ಪರ್ಯಾಯ ವ್ಯವಸ್ಥೆಯಾಗಿ ಬದಲಾಗಿದೆ. ರಾಜಕಾರಣಿಗಳು ಸೃಷ್ಟಿಸಿರುವ ಈ ವ್ಯವಸ್ಥೆಯಲ್ಲಿ ಎಲ್ಲ ಹಂತದ ಅಧಿಕಾರಿಗಳೂ ಸಿಲುಕಿದ್ದಾರೆ. ಒತ್ತಡ ಹೆಚ್ಚಾದಾಗ ಅನಿವಾರ್ಯವಾಗಿ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಆಡಳಿತದಲ್ಲಿ ಪರ್ಯಾಯ ವ್ಯವಸ್ಥೆಯಾಗಿ ರೂಪುಗೊಂಡಿರುವ ಈ ವ್ಯವಸ್ಥೆಯನ್ನು ಕಿತ್ತೊಗೆದಾಗ ಮಾತ್ರ ಎಲ್ಲ ಅಧಿಕಾರಿಗಳು ಸಂವಿಧಾನಬದ್ಧವಾಗಿ ಪ್ರಾಮಾಣಿಕ ಕೆಲಸ ಮಾಡಲು ಸಾಧ್ಯ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಕೇಶವಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ವಸತಿ ನಿಲಯಗಳಲ್ಲೂ ಆತ್ಮಹತ್ಯೆ ಪ್ರವೃತ್ತಿ
ರಾಜ್ಯದ ವಿವಿಧ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ವತಃ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರು ವಿಧಾನ ಪರಿಷತ್ತಿನಲ್ಲಿ ಮಾಹಿತಿ ನೀಡಿದ್ದರು.
ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರ ಪ್ರಶ್ನೆಗೆ ಉತ್ತರಿಸಿದ್ದ ಅವರು, 3 ವರ್ಷಗಳಲ್ಲಿ ವಸತಿ ನಿಲಯಗಳಲ್ಲಿ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವೈಫಲ್ಯ, ವೈಯಕ್ತಿಕ ಕಾರಣ ಸೇರಿ ಹಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ತಡೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಗೃಹ ಇಲಾಖೆ, ಆರೋಗ್ಯ, ತಹಶೀಲ್ದಾರ್ ಸೇರಿ ಹಲವರನ್ನು ಬಳಸಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ಸಚಿವರು ಹೇಳಿದ್ದರು.

